ನೆಲ್ಯಾಡಿ: ಜಾಗತಿಕ ವರ್ಲ್ಡ್ ಬಂಟ್ಸ್ ಫೌಂಡೇಶನ್ ಮಂಗಳೂರು ಇದರ ವತಿಯಿಂದ ಶಶಿಕಿರಣ್ ಶೆಟ್ಟಿಯವರ ನೇತೃತ್ವದಲ್ಲಿ ಸುಮಾರು 7 ಲಕ್ಷ ರೂ.ವೆಚ್ಚದಲ್ಲಿ ನೆಲ್ಯಾಡಿ ವಲಯ ಬಂಟರ ಸಂಘದ ವ್ಯಾಪ್ತಿಗೆ ಒಳಪಟ್ಟ ಗೋಳಿತ್ತೊಟ್ಟು ಗ್ರಾಮದ ಪುರ ನಿವಾಸಿ ಬಂಟ ಸಮುದಾಯದ ಜಯಕ್ಕ ಎಂಬವರಿಗಾಗಿ ನಿರ್ಮಾಣ ಮಾಡಿದ್ದ ಮನೆಯ ಹಸ್ತಾಂತರ ಕಾರ್ಯಕ್ರಮ ಹಾಗೂ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಂಗಾಧರ ಶೆಟ್ಟಿಯವರಿಗೆ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಪುತ್ತೂರು ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈಯವರು ಮನೆಯ ಕೀ ಹಸ್ತಾಂತರ ಮಾಡಿ ಮಾತನಾಡಿ, ಜಾಗತಿಕ ವರ್ಲ್ಡ್ ಬಂಟ್ಸ್ ಪೌಂಡೇಶನ್ ವತಿಯಿಂದ ಶಶಿಕಿರಣ್ ಶೆಟ್ಟಿಯವರ ನೇತೃತ್ವದಲ್ಲಿ ಪುತ್ತೂರು ತಾಲೂಕಿಗೆ 7 ಮನೆಗಳು ನಿರ್ಮಾಣಗೊಂಡಿವೆ. ನೆಲ್ಯಾಡಿ ವಲಯ ಬಂಟರ ಸಂಘದ ಮನವಿ ಮೇರೆಗೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಪುರ ನಿವಾಸಿ ಜಯಕ್ಕ ಅವರಿಗೆ ಮನೆ ಹಸ್ತಾಂತರ ಮಾಡಲು ಬಹಳಷ ಸಂತೋಷವಾಗುತ್ತದೆ ಎಂದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಂಗಾಧರ ಶೆಟ್ಟಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸುತ್ತಿರುವುದು ಅತ್ಯಂತ ಯೋಗ್ಯವಾಗಿದೆ. ಅವರ ನಿಸ್ವಾರ್ಥ ಸೇವೆಗೆ ರಾಜ್ಯ, ರಾಷ್ಟ್ರಪ್ರಶಸ್ತಿ ಲಭಿಸಲಿ ಎಂದು ಬೂಡಿಯಾರ್ ರಾಧಾಕೃಷ್ಣ ರೈಯವರು ಹೇಳಿದರು. ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ತಾಲೂಕು ಬಂಟರ ಸಂಘವು ಬಂಟ ಸಮುದಾಯದ ಏಳಿಗೆಗೆ ಅಹರ್ನಿಶಿ ದುಡಿಯತ್ತಿದೆ. ಆರ್ಥಿಕವಾಗಿ ಹಿಂದುಳಿದ ಬಂಟ ಸಮಾಜದ ಮಕ್ಕಳಿಗೆ ವಿದ್ಯಾರ್ಥಿ ವೇತನ, ಮದುವೆ, ಮನೆ ನಿರ್ಮಾಣಕ್ಕೆ ಸಹಾಯ ಹಸ್ತ ನೀಡುತ್ತಿದ್ದೇವೆ ಎಂದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಡೆದುಕೊಂಡಿರುವ ಗಂಗಾಧರ ಶೆಟ್ಟಿಯವರ ಸೇವೆ ಅನುಪಮವಾದದ್ದು ಎಂದು ಶಶಿಕುಮಾರ್ ರೈ ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗಂಗಾಧರ ಶೆಟ್ಟಿಯವರು, ತಾಲೂಕು ಬಂಟರ ಸಂಘದ ವತಿಯಿಂದ ನೀಡಿದ ಸನ್ಮಾನ ನನ್ನ ಕುಟುಂಬದಲ್ಲಿ ಮಾಡಿದ ಸನ್ಮಾನವಾಗಿದೆ. ನನ್ನ ಸೇವೆಯನ್ನು ಗುರುತಿಸಿ ಮಾಡಿದ ಸನ್ಮಾನ ಮುಂದಿನ ದಿನಗಳಲ್ಲಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು, ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಕೋಶಾಧಿಕಾರಿ ರಮೇಶ ರೈ ಡಿಂಬ್ರಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಬಂಟರ ಸಂಘದ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ, ಜಗಜೀವನ್‌ದಾಸ್ ರೈ ಚಿಲ್ಮೆತ್ತಾರು, ನೆಲ್ಯಾಡಿ ವಲಯ ಬಂಟರ ಸಂಘದ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಮನವಳಿಕೆಗುತ್ತು, ಸಹ ಸಂಚಾಲಕ ಜಯಾನಂದ ಬಂಟ್ರಿಯಾಲ್, ಪದಾಧಿಕಾರಿಗಳಾದ ಸುಂದರ ಶೆಟ್ಟಿ ಪುರ, ಪ್ರವೀಣ್ ಭಂಡಾರಿ, ಪ್ರತಾಪ್‌ಚಂದ್ರ ರೈ ಕುದ್ಮಾರುಗುತ್ತು, ಭಾಸ್ಕರ ರೈ ತೋಟ ಸೇರಿದಂತೆ ತಾಲೂಕು ಘಟಕದ ಪದಾಧಿಕಾರಿಗಳು, ನೆಲ್ಯಾಡಿ ವಲಯದ ಸದಸ್ಯರು, ಜಯಕ್ಕ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು. ನಿತ್ಯಾನಂದ ಶೆಟ್ಟಿ ಮನವಳಿಕೆಗುತ್ತು ಸ್ವಾಗತಿಸಿದರು. ಜಯಾನಂದ ಬಂಟ್ರಿಯಾಲ್ ಕಾರ್ಯಕ್ರಮ ನಿರೂಪಿಸಿದರು.