ನೆಲ್ಯಾಡಿ: ಪೆರಾಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂತೂರು ಗ್ರಾಮದ ಒಂದನೇ ವಾರ್ಡ್‌ನಲ್ಲಿ ಬರುವ ಮಾಪಲ-ಬೋಳ್ತಿಮಾರು-ಪುಳಿತ್ತಡಿ ರಸ್ತೆಯ ಕಾಂಕ್ರಿಟೀಕರಣ ಇಲ್ಲವೇ ಡಾಮರೀಕರಣಗೊಳಿಸಬೇಕು ಎಂದು ಒತ್ತಾಯಿಸಿ ಡಿ.22 ರಂದು ಬೆಳಿಗ್ಗೆ ಮಾಪಲದಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ರಸ್ತೆ ಅಭಿವೃದ್ಧಿಗೆ ಮುಂದಾಗದೇ ಇದ್ದಲ್ಲಿ ಮುಂಬರುವ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿ ಬ್ಯಾನರ್ ಅಳವಡಿಸಿದ್ದಾರೆ.
ಮಾಪಲದಲ್ಲಿ ಜಮಾಯಿಸಿದ 50 ಕ್ಕೂ ಹೆಚ್ಚು ಮಂದಿ ರಸ್ತೆ ಫಲಾನುಭವಿಗಳು ಪ್ರತಿಭಟನೆ ನಡೆಸಿ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿದರು.
ಮಾಪಲ-ಬೋಳ್ತಿಮಾರು-ಪುಳಿತ್ತಡಿ ರಸ್ತೆಯು ತೀರಾ ಹದಗೆಟ್ಟಿದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣಗೊಂಡಿದೆ. ಮಳೆ ನೀರು ರಸ್ತೆಯಲ್ಲಿಯೇ ಹರಿದು ಹೋಗುತ್ತಿದೆ. ರಸ್ತೆ ಸಂಪೂರ್ಣ ಹೊಂಡ ಗುಂಡಿಗಳಿಂದ ತುಂಬಿರುವುದರಿಂದ ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ. ಮಳೆಗಾಲದಲ್ಲಿ ರಸ್ತೆಯಲ್ಲಿ ನಡೆದಾಡಲೂ ಸಾಧ್ಯವಾಗುತ್ತಿಲ್ಲ. ಈ ಎಲ್ಲಾ ಸಮಸ್ಯೆ ಹಿನ್ನೆಲೆಯಲ್ಲಿ ಸದ್ರಿ ರಸ್ತೆ ಕಾಂಕ್ರಿಟೀಕರಣ ಇಲ್ಲವೇ ಡಾಮರೀಕರಣಕ್ಕೆ ಸುಮಾರು 20 ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರೂ ಈ ತನಕ ಯಾವುದೇ ಪ್ರಯೋಜನವಾಗಿಲ್ಲ. ಬದಲಿ ರಸ್ತೆ ವ್ಯವಸ್ಥೆಯೂ ಇಲ್ಲದೇ ಇರುವುದರಿಂದ ಈ ಭಾಗದ ಕೃಷಿಕರು, ಶಾಲಾ ಮಕ್ಕಳು, ಹೈನುಗಾರರು ಇದೇ ರಸ್ತೆಯಲ್ಲಿ ಬಿದ್ದು ಎದ್ದು ಹೋಗಬೇಕಾದ ಅನಿವಾರ್‍ಯ ಪರಿಸ್ಥಿತಿ ಉಂಟಾಗಿದೆ.
ಮನವಿಗೆ ಸ್ಪಂದನೆ ಇಲ್ಲ:
ಆಲಂಕಾರಿನಲ್ಲಿ ನಡೆದ ದ.ಕ.ಜಿಲ್ಲಾಧಿಕಾರಿಯವರ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಸದ್ರಿ ರಸ್ತೆಯ ದುರವಸ್ಥೆ ಬಗ್ಗೆ ಮನವಿ ಮಾಡಲಾಗಿತ್ತು. ಈ ವೇಳೆ ಜಿಲ್ಲಾಧಿಕಾರಿಯವರ ಸೂಚನೆಯಂತೆ ಪಿಡಬ್ಲ್ಯುಡಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ರಸ್ತೆ ವೀಕ್ಷಣೆ ಮಾಡಿದರಾದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಸಚಿವರು, ಶಾಸಕರು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಸದಸ್ಯರಿಗೆ ಮನವಿ ಮಾಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಸುಮಾರು 30 ಕ್ಕೂ ಹೆಚ್ಚು ಮನೆಯವರು ಸದ್ರಿ ರಸ್ತೆ ಬಳಕೆ ಮಾಡುತ್ತಿದ್ದಾರೆ. ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತುಕೊಂಡು ಸದ್ರಿ ರಸ್ತೆಗೆ ಡಾಮರೀಕರಣ ಇಲ್ಲವೇ ಕಾಂಕ್ರಿಟೀಕರಣಕ್ಕೆ ಮುಂದಾಗಬೇಕು. ಇಲ್ಲದೇ ಇದ್ದಲ್ಲಿ ಮುಂಬರುವ ಮತದಾನ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿರುವ ಗ್ರಾಮಸ್ಥರು ಈ ಬಗ್ಗೆ ಮಾಪಲದಲ್ಲಿ ಬ್ಯಾನರ್ ಅಳವಡಿಸಿದ್ದಾರೆ.
ಪ್ರಭಾಕರ ಶೆಟ್ಟಿಯವರು ಮಾತನಾಡಿ, ಮಾಪಲ-ಬೋಳ್ತಿಮಾರು-ಪುಳಿತ್ತಡಿ ರಸ್ತೆಗೆ ಈ ತನಕ ಯಾವುದೇ ಅನುದಾನ ನೀಡಿಲ್ಲ. ಬೇಸಿಗೆ ಕಾಲದಲ್ಲಿ 3-4 ತಿಂಗಳು ಮಾತ್ರ ರಸ್ತೆಯಲ್ಲಿ ಸಂಚಾರ ಸಾಧ್ಯವಾಗಿದೆ. ಮಳೆಗಾಲದಲ್ಲಿ ರಸ್ತೆಯಲ್ಲಿಯೇ ನೀರು ಹರಿದು ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಗ್ರಾಮ ಪಂಚಾಯತ್‌ನಿಂದ ಕಳೆದ ಸಲ 5 ಸಾವಿರ ಹಾಗೂ ಈ ಸಲ 15 ಸಾವಿರ ರೂ., ಅನುದಾನ ಇಟ್ಟು ದುರಸ್ತಿ ಮಾಡಲಾಗಿದೆ. ರಸ್ತೆ ಕಾಂಕ್ರಿಟೀಕರಣ ಇಲ್ಲವೇ ಡಾಮರೀಕರಣಗೊಳಿಸುವಂತೆ ಒತ್ತಾಯಿಸುತ್ತಲೇ ಇದ್ದೇವೆ. ಆದರೆ ನಮ್ಮ ಮಾತಿಗೆ ಯಾವುದೇ ಬೆಲೆ ಇಲ್ಲ. ಆದ್ದರಿಂದ ರಸ್ತೆ ಸರಿಯಾಗುವ ತನಕ ಮತದಾನ ಮಾಡದೇ ಇರುವ ನಿರ್ಧಾರಕ್ಕೆ ಬಂದಿದ್ದೇವೆ. ನಮಗೂ ಬದುಕುವ ಹಕ್ಕು ನೀಡಿ ಎಂದು ಹೇಳಿದರು.
ಇನ್ನೊರ್ವ ಗ್ರಾಮಸ್ಥ ಶಿವಕುಮಾರ್ ಭಟ್‌ರವರು ಮಾತನಾಡಿ, ಸಮರ್ಪಕ ರಸ್ತೆ ಆಗುವ ತನಕ ಮತದಾನ ಮಾಡದೇ ಇರುವ ನಿರ್ಧಾರಕ್ಕೆ ಬಂದಿದ್ದೇವೆ. ಜನಪ್ರತಿನಿಧಿಗಳು, ಅಧಿಕಾರಿಗಳು ಗ್ರಾಮಸ್ಥರ ಮನವಿಗೆ ತಕ್ಷಣ ಸ್ಪಂದಿಸಬೇಕೆಂದು ಹೇಳಿದರು.
ಗ್ರಾಮಸ್ಥರಾದ ಪ್ರಭಾಕರ ಗೌಡ, ಚೋಮನಾಯ್ಕ್, ರಾಜೇಶ್ ಶೆಟ್ಟಿ, ಶಂಕರ, ಚಂದ್ರಶೇಖರ, ಗಣೇಶ್ ಶೆಟ್ಟಿ, ಲಲಿತ, ಶೋಭಾ, ರಮಾನಂದ ರೈ, ಬಾಲಕೃಷ್ಣ ರೈ, ಮಹಾಬಲ ರೈ, ದಿನೇಶ್, ಯೋಗೀಶ್, ಕಮಲ್ ಮಾಪಲ, ಗೋಪಾಲಕೃಷ್ಣ ರೈ, ರಾಧಕೃಷ್ಣ, ಲಕ್ಷ್ಮೀಶ ಶೆಟ್ಟಿ, ಕಮಲಾಕ್ಷ ಶೆಟ್ಟಿ, ಸುರೇಶ್, ಬಾಲಕ, ಸುಶೀಲ, ಜತ್ತಪ್ಪ ರೈ, ಅಕ್ಷತಾ, ದಾಮೋದರ, ಸರಸ್ವತಿ, ಉಮಾವತಿ ಮತ್ತಿತತರು ಉಪಸ್ಥಿತರಿದ್ದರು.