ವಿವೇಕಾನಂದ ಐಎಎಸ್ ಅಧ್ಯಯನ ಕೇಂದ್ರದ ನೂತನ ಯೋಜನೆಯ ಉದ್ಘಾಟನಾ ಸಮಾರಂಭ

0

ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಐ.ಎ.ಎಸ್ ಪರೀಕ್ಷೆ ಬರೆದು ದೇಶ ಸೇವೆಗೆ ಬರಬೇಕು . ಗಿರೀಶ್ ನಂದನ್

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸನ್ನು ಪಡೆಯಲು ನಿರಂತರ ಪ್ರಯತ್ನ ಅಗತ್ಯ ..  ಹರ್ಷ ಬಾಳಿಲ

 

ಪುತ್ತೂರು: ವಿವೇಕಾನಂದ ಐ.ಎ.ಎಸ್ ಅಧ್ಯಯನ ಕೇಂದ್ರ ಯಶಸ್ ಇದರ ನೂತನ ಶಿಕ್ಷಣ ಯೋಜನೆ ಯಶಸ್ 100 ಇದರ ಉದ್ಘಾಟನಾ ಸಮಾರಂಭವು ನೆಹರು ನಗರದಲ್ಲಿ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಐ.ಎ.ಎಸ್, ಐ.ಪಿ.ಎಸ್ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತಾಗಿ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಅರಿವಿನ ಕೊರತೆ ಇದೆ. ಈ ನಿಟ್ಟಿನಲ್ಲಿ ವಿವೇಕಾನಂದ ಐ.ಎ.ಎಸ್ ಅಧ್ಯಯನ ಕೇಂದ್ರ ಇದರ ನೂತನ ಶಿಕ್ಷಣ ಯೋಜನೆಯು ಬಹಳಷ್ಟು ಉಪಯುಕ್ತವಾಗಲಿದೆ ಎಂದು 2018ರಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 721 ಶ್ರೇಯಾಂಕ ಪಡೆದು ಉತ್ತೀರ್ಣರಾಗಿ ಪ್ರಸ್ತುತ ಮಂಗಳೂರಿನಲ್ಲಿ ಅಂಚೆ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಹರ್ಷ ಬಾಳಿಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಕರಾವಳಿ ಭಾಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ತರಗತಿಗಳನ್ನು ನಡೆಸುವ ಶಿಕ್ಷಣ ಸಂಸ್ಥೆಗಳ ಕೊರತೆ ಇದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಐಎಎಸ್,ಐಪಿಎಸ್ ಅಧಿಕಾರಿಯಾಗಲು ಈ ನೂತನ ಯೋಜನೆಯ ಬಹಳ ಉಪಯುಕ್ತವಾಗಿದೆ. ಈ ನಿಟ್ಟಿನಲ್ಲಿ ಯುವಜನತೆ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಐ. ಪಿ.ಎಸ್, ಐ.ಎ.ಎಸ್ ಅಧಿಕಾರಿಗಳಾಗಿ ಹೊರಹೊಮ್ಮಿ ದೇಶ ಸೇವೆ ಮಾಡಬೇಕು ಎಂದು 15 ವರ್ಷಗಳಿಂದ ಭಾರತೀಯ ನೌಕಾ ಸೇನೆಯಲ್ಲಿ ಸೇವೆಯನ್ನು ಸಲ್ಲಿಸಿ 214ರಲ್ಲಿ ಕೆ.ಎ. ಎಸ್ ಪರೀಕ್ಷೆಯನ್ನು ಬರೆದು ಉತ್ತೀರ್ಣರಾಗಿ ಪುತ್ತೂರಿನ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಗಿರೀಶ್ ನಂದನ್ ಅವರು ಶುಭ ಹಾರೈಸಿದರು.

ಯಶಸ್ಸನ್ನು ಪಡೆಯಲು ಪರಿಶ್ರಮದ ಅಗತ್ಯ ಜೊತೆಗೆ ಅನೇಕ ಬಾರಿ ಅಪಮಾನ, ತಿರಸ್ಕಾರ, ತಪ್ಪುಗಳು ಆಗುವುದು ಸಹಜ ಅದಕ್ಕೆಲ್ಲ ಎದೆಗುಂದದೆ ವಿದ್ಯಾರ್ಥಿಗಳು ನಿರಂತರ ಪ್ರಯತ್ನ ಮಾಡಿ ಯಶಸ್ಸನ್ನು ಸಾಧಿಸಬೇಕೆಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ. ಕೃಷ್ಣ ಭಟ್ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ದಕ್ಷ ಪ್ರಾಮಾಣಿಕ ಅಧಿಕಾರಿಗಳನ್ನು ರೂಪಿಸುವಲ್ಲಿ ವಿವೇಕಾನಂದ ಐ.ಎ.ಎಸ್ ಅಧ್ಯಯನ ಕೇಂದ್ರ ಯಶಸ್ ಕಳೆದ ಎಂಟು ವರ್ಷಗಳಿಂದ ಶುಲ್ಕ ರಹಿತ ಶಿಕ್ಷಣವನ್ನು ನೀಡುತ್ತಿದ್ದು, ಪ್ರಸ್ತುತ ನೂತನ ಶಿಕ್ಷಣ ಯೋಜನೆ ಯಶಸ್ 100 ಪ್ರಾರಂಭಿಸಿದೆ. ಈ ಯೋಜನೆಯು ಐದು ತಿಂಗಳ ಅವಧಿಗೆ ವಾರಂತ್ಯದಲ್ಲಿ ಮಾತ್ರ ನಡೆಯಲಿದೆ. ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿವೇಕಾನಂದ ಐ.ಎ.ಎಸ್ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಶ್ರೀ ಕೃಷ್ಣ ನಾರಾಯಣ ಮುಳಿಯ ಪ್ರಾಸ್ತಾವಿಕವಾಗಿ ನುಡಿದರು

ನಗರಸಭಾ ಉಪಾಧ್ಯಕ್ಷರಾದ  ವಿದ್ಯಾ ಗೌರಿ, ವಿ ವಿ ಎಸ್ ಸದಸ್ಯರಾದ ಮುರಳಿಧರ್, ಸಂಸ್ಥೆಯ ಕೋಶಾಧಿಕಾರಿ  ಮೂಲ ಚಂದ್ರ, ಸದಸ್ಯ ನವೀನ್ ಕುಮಾರ್, ವಿವೇಕಾನಂದ ಸಿಬಿಎಸ್ಸಿ ಶಾಲೆಯ ಸಂಚಾಲಕ  ಭರತ್ ಪೈ ಮುಂತಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಂಸ್ಥೆಯ ಸಂಚಾಲಕರಾದ ಪುತ್ತೂರು ಉಮೇಶ್ ನಾಯಕ್ ಅವರು ಅತಿಥಿಗಳನ್ನು ಸ್ವಾಗತಿಸಿದರು, ವಿದ್ಯಾರ್ಥಿನಿ ಸುಮನ ಕಾರ್ಯಕ್ರಮ ನಿರೂಪಿಸಿದರು, ಮಂಜುಶ್ರೀ ಧನ್ಯವಾದ ಸಮರ್ಪಣೆಗೈದರು.

LEAVE A REPLY

Please enter your comment!
Please enter your name here