ಕಳೆಂಜ- ದೇಂತಡ್ಕದ ಶ್ರೀ ವಿಷ್ಣುಮೂರ್ತಿ ದೇವಾಲಯದ ಬ್ರಹ್ಮಕಲಶೋತ್ಸವ

0

ದೇವಾಲಯಗಳ ಮೂಲಕ ಸಮಾಜ ಕಟ್ಟುವ ಕೆಲಸವಾಗಬೇಕು: ಕಶೆಕೋಡಿ ಸೂರ್ಯನಾರಾಯಣ ಭಟ್

ಉಪ್ಪಿನಂಗಡಿ: ದೇವಾಲಯದೊಳಗೆ ಜಾತಿ, ರಾಜಕೀಯವಿರದೇ ಎಲ್ಲರೂ ನಾವೆಲ್ಲಾ ಒಂದೇ ಎಂಬ ಭಾವನೆಯಿಂದಿರಬೇಕು. ಜಾತಿ- ರಾಜಕೀಯವನ್ನು ಮೀರಿ ಸಮಾಜ ಕಟ್ಟುವ ಕೆಲಸ ದೇವಾಲಯಗಳ ಮೂಲಕ ನಡೆಯಬೇಕು ಎಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ತಿಳಿಸಿದರು.

15 ನೇ ಶತಮಾನದಲ್ಲಿ ಸೋದೆ ಮಠಾಧೀಶರಾದ ಶ್ರೀ ವಾದಿರಾಜರಿಂದ ಪ್ರತಿಷ್ಠಾಪಿಸಲ್ಪಟ್ಟ ಕಳೆಂಜ- ದೇಂತಡ್ಕದ ಶ್ರೀ ವಿಷ್ಣುಮೂರ್ತಿ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯುತ್ತಿದ್ದು, ನಾಲ್ಕನೇ ದಿನವಾದ ಬುಧವಾರ ರಾತ್ರಿ ಅತ್ರಬೈಲು ಬೆಳ್ಳಿಪ್ಪಾಡಿ ರಾಮದಾಸ ರೈ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡುತ್ತಿದ್ದರು.

ದೇವರ ಪೂಜೆಯ ಜೊತೆಜೊತೆಗೆ ಪ್ರಕೃತಿಯಲ್ಲೂ ಪೂಜ್ಯ ಭಾವನೆಯನ್ನು ನಾವು ಹೊಂದಿರಬೇಕು. ಪ್ರಕೃತಿ ಜೊತೆಗೆ ಬದುಕುವುದು ಹಿಂದಿನವರ ಕಲ್ಪನೆಯಾಗಿತ್ತು. ಇದರಿಂದ ನೆಮ್ಮದಿಯ ಬದುಕು ಅವರದ್ದಾಗಿತ್ತು. ಆದರೆ ಈಗ ಅಭಿವೃದ್ಧಿ, ಆಧುನಿಕತೆಯ ನೆಪದಲ್ಲಿ ನಾವು ಪ್ರಕೃತಿಯನ್ನು ಇನ್ನಿಲ್ಲದಂತೆ ಅಪೋಶನ ತೆಗೆದುಕೊಳ್ಳುತ್ತಿದ್ದೇವೆ. ಇದೇ ರೀತಿ ಮುಂದುವರಿದರೆ ನಮ್ಮ ಭವಿಷ್ಯದ ಬದುಕಿಗಾಗಿ ನಾವು ಇನ್ನೊಂದು ಲೋಕವನ್ನು ಹುಡುಕಬೇಕಾದ ಅನಿವಾರ್ಯತೆ ಎದುರಾಗಬಹುದು ಎಂದರು.
ಆರ್ಶೀವಚನ ನೀಡಿದ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ದೇಹ ಹಾಗೂ ದೇವಸ್ಥಾನಕ್ಕೆ ಅವಿನಾಭವ ಸಂಬಂಧವಿದ್ದು, ಮನ ಶುದ್ಧಿ, ಕರ್ಮ ಶುದ್ಧಿ, ಭಾವ ಶುದ್ಧಿ ಭಜನೆಯಿಂದ ಸಾಧ್ಯವಾಗುತ್ತಿದೆ. ಇಂದಿನ ದಿನಗಳಲ್ಲಿ ನಮ್ಮ ಬದುಕಿನ ಚಕ್ರವೂ, ಕಾಲ ಚಕ್ರವೂ ತಪ್ಪಿಹೋಗಿದ್ದು, ನಮ್ಮ ಸನಾತನ ಸಂಸ್ಕೃತಿಯೊಂದಿಗೆ ಬೆರೆತು ಮಂಗಳಕರವಾಗಬೇಕಾದ ನಮ್ಮ ಮನೆಯ ಕಾರ್ಯಕ್ರಮಗಳು ಆಡಂಬರ, ಆಧುನಿಕತೆ ನುಸುಳಿಕೊಂಡು ಅಮಂಗಳಕರವಾಗುತ್ತಿದೆ. ಲವ್ ಜಿಹಾದ್, ಮತಾಂತರ, ಮೊಬೈಲ್‌ನ ಹಿಂದೆ ಹೋಗಿ ಯುವ ಜನತೆ ದಾರಿ ತಪ್ಪುತ್ತಿದೆ. ಆದ್ದರಿಂದ ದೇವಾಲಯಕ್ಕೆ ಬಂದು ಅಲ್ಲಿನ ಸಂಸ್ಕಾರ, ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಗುಣ ನಮ್ಮದಾಗಬೇಕಿದೆ. ದೇವಸ್ಥಾನ ಜೀರ್ಣೋದ್ಧಾರಗೊಳ್ಳಲು ಪರಿಸರದ ಜನತೆ ಎಷ್ಟು ಕಾರಣವೋ? ಅದೇ ಜನತೆಗಾಗಿ ದೇವಸ್ಥಾನದಿಂದೇನು ಅನ್ನೋ ಬಗ್ಗೆನೂ ಚಿಂತನೆ ನಡೆಯಬೇಕು. ಒಂದೆಡೆ ಅಲ್ಲಿನವರ ಪ್ರತಿಭೆ ಅನಾವರಣಕ್ಕೆ ದೇವಸ್ಥಾನಗಳು ವೇದಿಕೆಯಾದರೆ, ಬಡವರ ಅಸ್ತಿತ್ವದ ಬಗ್ಗೆನೂ ಚಿಂತಿಸುವ ಕೆಲಸ ದೇವಾಲಯಗಳಿಂದಾಗಬೇಕು. ಸಂಗ್ರಹ ಮನೋಭಾವಕ್ಕಿಂತ ಸಮರ್ಪಣಾ ಮನೋಭಾವ ನಮ್ಮದಾಗಬೇಕು. ದೇವಾಲಯಗಳ ಪಾವಿತ್ರ್ಯತೆ ಹೆಚ್ಚಾದಂತೆಲ್ಲ ನಮ್ಮೊಳಗಿನ ಪಾವಿತ್ರ್ಯತೆಯೂ ಹೆಚ್ಚಾಗುತ್ತದೆ ಎಂದರು.

ಅತಿಥಿಗಳಾಗಿದ್ದ ಶಾಸಕ ಹರೀಶ್ ಪೂಂಜಾ, ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ವೈದ್ಯಕೀಯ ಅಧೀಕ್ಷಕಿ ಡಾ. ಅನನ್ಯಲಕ್ಷ್ಮೀ ಸಂದೀಪ್, ಬನ್ನೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಪುಷ್ಪರಾಜ ಹೆಗ್ಡೆ ಸತ್ತಿಕಲ್ಲು ಹಾಗೂ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿದರು. ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಬಿ. ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಆಡಳಿತ ಸಮಿತಿ ಅಧ್ಯಕ್ಷ ರೋಹಿತಾಕ್ಷ ಬಾಣಬೆಟ್ಟು, ಧನಂಜಯ ಕಳೆಂಜ ಕೆಳಗಿನ ಮನೆ, ರಾಜೀವ ಶೆಟ್ಟಿ ಕೇದಗೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಭರತ್ ಕುಮಾರ್ ಅರಿಗ ಪಟ್ಟೆಗುತ್ತು, ಶ್ರೀಮತಿ ಪದ್ಮಾಸಿನಿ ಎನ್. ಜೈನ್ ಕಳೆಂಜಗುತ್ತು, ಕಾರ್ಯದರ್ಶಿ ಉಮಾನಾಥ ಶೆಟ್ಟಿ ಸಂಪಿಗೆಕೋಡಿ, ಆಡಳಿತ ಸಮಿತಿಯ ಕಾರ್ಯದರ್ಶಿ ಗೋಪಾಲ ಶೆಟ್ಟಿ ಎಸ್., ಅಧ್ಯಕ್ಷ ಶಂಭು ಭಟ್ ಬಡಕೋಡಿ, ಕಾರ್ಯದರ್ಶಿ ರಮೇಶ್ ತೋಟ, ಅಭಿವೃದ್ಧಿ ಸಮಿತಿಯ ಕೋಶಾಧಿಕಾರಿ ಪದ್ಮನಾಭ ಸಾಮಾನಿ ಹಿರುಬೈಲು, ಹೊರೆಕಾಣಿಕೆ ಸಮಿತಿಯ ಸಂಚಾಲಕ ನವೀನ್ ಕುಮಾರ್ ಪದಬರಿ, ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಸಂಚಾಲಕ ಮೋಹನ್ ಶೆಟ್ಟಿ, ಸಹ ಸಂಚಾಲಕ ಹರೀಶ್, ಸ್ವಾಗತ ಸಮಿತಿಯ ಸಂಚಾಲಕ ಕಿರಣ್ ಶೆಟ್ಟಿ ಮುಂಡೇವಿನಕೋಡಿ, ಐತ್ತಪ್ಪ ಭಂಡಾರಿ ಮೇಗಿನಮನೆ, ಗಂಗಾಧರ ರೈ, ಶ್ರೀಧರ ಗೌಡ, ಸುರೇಶ್ ಆಚಾರ್ಯ ಬಿಳಿಯೂರು, ಮಹೇಶ್ ಪಡಿವಾಳ್ ಬಿಳಿಯೂರುಗುತ್ತು, ಮುತ್ತಪ್ಪ ಸಾಲ್ಯಾನ್ ಹನುಮಾಜೆ, ರಾಜಶೇಖರ ಶೆಟ್ಟಿ ಹಿರುಬೈಲು, ವಿಜೇತ್ ರೈ ಪಟ್ಟೆಜಾಲು, ವೇಣುಗೋಪಾಲ ಶೆಟ್ಟಿ ಪಟ್ಟೆಜಾಲು, ಸದಾಶಿವ ಶೆಟ್ಟಿ ವಂಜನಪಳಿಕೆ ಮತ್ತಿತರರು ಉಪಸ್ಥಿತರಿದ್ದರು.

ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧಿಕಾರಿ ಅಶೋಕ ಕುಮಾರ್ ಮುಳಿಪಡ್ಪು ಸ್ವಾಗತಿಸಿದರು. ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರಾದ ಅವಿನಾಶ್ ಜೈನ್ ಪರಂಗಾಜೆ ವಂದಿಸಿದರು. ವೇದಿಕೆ ಮತ್ತು ಸಾಂಸ್ಕೃತಿಕ ಸಮಿತಿಯ ಹರೀಶ್ ರೈ ಬಿಳಿಯೂರು ಹಾಗೂ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ ವಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here