Saturday, February 4, 2023

Homeಚಿತ್ರ ವರದಿವೀರಮಂಗಲ ಶಾಲಾ ವಾರ್ಷಿಕೋತ್ಸವ

ವೀರಮಂಗಲ ಶಾಲಾ ವಾರ್ಷಿಕೋತ್ಸವ

ಪ್ರಗತಿಯ ಪಥದಲ್ಲಿ ವೀರಮಂಗಲ ಶಾಲೆ- ಸಂಜೀವ ಮಠಂದೂರು

ಪುತ್ತೂರು: ಶಾಲೆ ಎಂಬುದು, ಪರಿಪೂರ್ಣ ಶಿಕ್ಷಣವನ್ನು ನೀಡುವ ಜ್ಞಾನ ದೇಗುಲವಾಗಿದ್ದು, 60 ವರ್ಷಗಳನ್ನು ಪೂರೈಸಿರುವ ವೀರಮಂಗಲ ಶಾಲೆಯು ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿರುವುದು ಶಿಕ್ಷಣ ಕ್ಷೇತ್ರಕ್ಕೆ ಹೆಮ್ಮೆ ತರುವ ವಿಷಯವಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.


ಅವರು ದ. 31 ರಂದು ವೀರಮಂಗಲ ಶಾಲಾ ವಾರ್ಷಿಕೋತ್ಸವ ಕಾರ್‍ಯಕ್ರಮದಲ್ಲಿ ಸ್ಮಾರ್ಟ್ ಕ್ಲಾಸ್ ಮತ್ತು ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ, ಬಳಿಕ ಜರಗಿದ ಸಭಾ ಕಾರ್‍ಯಕ್ರಮದಲ್ಲಿ ಮಾತನಾಡಿ ತಾರಾನಾಥ ಸವಣೂರುರವರು ಒರ್ವ ಕ್ರಿಯಾಶೀಲ ಶಿಕ್ಷಕ, ಅವರಂಥ ಮುಖ್ಯ ಶಿಕ್ಷಕರು ಈ ಶಾಲೆಗೆ ಬಂದ ಬಳಿಕ ಎಲ್ಲರನ್ನು ಒಂದುಗೂಡಿಸಿ, ಹತ್ತುಹಲವು ಅಭಿವೃದ್ಧಿಪರ ಕೆಲಸವನ್ನು ಈ ಶಾಲೆಯಲ್ಲಿ ಮಾಡಿ ತೋರಿಸಿದ್ದಾರೆ. ಇಂಥ ಶಿಕ್ಷಕರು ಪ್ರತಿ ಶಾಲೆಯಲ್ಲಿ ಇದ್ದಾಗ ಮಾತ್ರ ಸರಕಾರಿ ಶಾಲೆಯ ಕೀರ್ತಿ ಹೆಚ್ಚುತ್ತದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.


ಭಾರತ ದೇಶದಲ್ಲಿ ಅತೀ ಹೆಚ್ಚು ಮಾನವ ಸಂಪನ್ನೂಲ ಇದೆ. ಐಟಿ,ಬಿಟಿ ಕ್ಷೇತ್ರದಲ್ಲಿ ನಮ್ಮ ಯುವ ಸಮುದಾಯ ಹೆಚ್ಚಾಗಿ ದುಡಿಯುತ್ತಿದ್ದಾರೆ. ನಮ್ಮ ಶಾಲೆ ನಮ್ಮದ್ದು ಎಂಬ ಭಾವನೆ ಊರವರಲ್ಲಿ ಬೆಳೆಯಬೇಕು, ಈ ನಿಟ್ಟಿನಲ್ಲಿ ವೀರಮಂಗಲ ಶಾಲೆಯು ಮತ್ತಷ್ಟು ಪ್ರಗತಿಯನ್ನು ಕಾಣಲಿ ಎಂದು ಶುಭಹಾರೈಸಿದರು.

ಸಾಧನೆಯ ಹಾದಿಯಲ್ಲಿ – ವಿದ್ಯಾ
ಅಧ್ಯಕ್ಷತೆ ವಹಿಸಿದ್ದ ನರಿಮೊಗರು ಗ್ರಾ.ಪಂ. ಅಧ್ಯಕ್ಷೆ ವಿದ್ಯಾರವರು ಮಾತನಾಡಿ ವೀರಮಂಗಲ ಶಾಲೆಯು ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿದ್ದು, ಇಲ್ಲಿನ ವಿದ್ಯಾರ್ಥಿಗಳ ಪ್ರಗತಿಯಲ್ಲಿ ನಿರಂತರ ಶ್ರಮವಹಿಸುತ್ತಿರುವ ಶಿಕ್ಷಕರು ಅಭಿನಂದನೆಗೆ ಪಾತ್ರಾಗಿದ್ದಾರೆ ಎಂದರು.

ತಾರಾನಾಥ ಸವಣೂರು ಅಪ್ರತಿಮ ಸಂಘಟಕ- ಸುಂದರ ಗೌಡ
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡರವರು ಮಾತನಾಡಿ ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ನಂಥ ಸ್ವರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಬೇಕು ಎಂದು ಹೇಳಿ, ಈ ಶಾಲಾ ಮುಖ್ಯ ಶಿಕ್ಷಕ ತಾರಾನಾಥ ಸವಣೂರು ಒರ್ವ ಅಪ್ರತಿಮ ಸಂಘಟಕರಾಗಿದ್ದು, ಸಂಸ್ಥೆಯ ಅಭಿವೃದ್ಧಿಯಲ್ಲಿ ಸರಕಾರ ಹಾಗೂ ಊರವರ ಸಹಕಾರದಿಂದ ವೀರಮಂಗಲ ಶಾಲೆಯನ್ನು ಮಾದರಿ ಶಾಲೆಯಾಗಿ ಪರಿವರ್ತನೆ ಮಾಡಿದ್ದಾರೆ. ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಪ್ರತಿ ವರ್ಷ ಕಳೆದಂತೆ ಹೆಚ್ಚಾಗುತ್ತಿರುವುದು ಇಲ್ಲಿನ ಗುಣ ಮಟ್ಟ ಶಿಕ್ಷಣವೇ ಕಾರಣ ಎಂದರು.


ಹೆಚ್ಚಿನ ಸಹಕಾರ- ಉಮಾನಾಥ
ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಉಮಾನಾಥ ಪಿ.ಬಿ, ರವರು ಮಾತನಾಡಿ ವೀರಮಂಗಲ ಶಾಲೆಗೆ ಮುಂದೆಯೂ ರೋಟರಿ ಕ್ಲಬ್‌ನಿಂದ ಹೆಚ್ಚಿನ ಸಹಕಾರವನ್ನು ನೀಡುವುದಾಗಿ ತಿಳಿಸಿದರು.

ಶಾಲೆಯ ಸರ್ವಪ್ರಗತಿ- ತಾರಾನಾಥ ಸವಣೂರು
ಶಾಲಾ ಮುಖ್ಯಗುರು ತಾರಾನಾಥ ಸವಣೂರುರವರು ಸ್ವಾಗತಿಸಿ, ಮಾತನಾಡಿ ಶಾಲಾ 60 ನೇ ವರ್ಷದ ಆಚರಣೆಯು ಅಧ್ಯಕ್ಷ ವಿದ್ವಾನ್ ಗೋಪಾಲಕೃಷ್ಣರವರ ನೇತ್ರತ್ವದಲ್ಲಿ ಊರವರಿಂದ ಸಂಗ್ರಹಿಸಿ, 10 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಜ್ಞಾನ ರಂಗಮಮಂದಿರವನ್ನು ಕಟ್ಟಲಾಗಿದೆ. ಇದಕ್ಕೆ ಶಾಸಕರು ಅನುದಾನವನ್ನು ನೀಡಿದ್ದಾರೆ. ಶಾಲೆಯ ಸರ್ವಪ್ರಗತಿಯಲ್ಲಿ ದುಡಿಯುತ್ತಿರುವ ಶಿಕ್ಷಕ ವೃಂದ, ಎಸ್‌ಡಿಎಂಸಿ, ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಊರವರ ಶ್ರಮವನ್ನು ಪ್ರಶಂಶಿಸಿದರು.

ವೇದಿಕೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷೆ ಅನುಪಮಾ, ಹಿರಿಯ ವಿದ್ಯಾರ್ಥಿಸಂಘದ ಅಧ್ಯಕ್ಷ ಮಹಾಬಲ ಶೆಟ್ಟಿ, ವಾರ್ಷಿಕೋತ್ಸ ಸಮಿತಿ ಅಧ್ಯಕ್ಷ ಆನಂದ ಗೌಡ ಗುತ್ತುರವರುಗಳು ಉಪಸ್ಥಿತರಿದ್ದರು.


ಸನ್ಮಾನ
ಸ್ಮಾರ್ಟ್ ಕ್ಲಾಸ್ ಕೋಣೆಗೆ ಟೈಲ್ಸ್ ಖರೀದಿಸಲು ಆರ್ಥಿಕ ನೆರವು ನೀಡಿದ ರೈಲ್ವೇ ಇಂಜಿನೀಯರ್ ಗೋಪಕುಮಾರ್, ನಲಿಕಲಿ ತರಗತಿಗೆ ಟೈಲ್ಸ್‌ಗೆ ಧನ ಸಹಾಯ ನೀಡಿದ ವೀರಮಂಗಲ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ರಜಾಕ್ ವಿ.ಎಸ್, ಹೈಟೆಕ್ ಶೌಚಾಲಯಕ್ಕೆ ಸಾಮಾಗ್ರಿ ನೀಡಿದ ರೋಟರಿ ಕ್ಲಬ್‌ನ ಪರವಾಗಿ ಅಧ್ಯಕ್ಷ ಉಮಾನಾಥ ಪಿ.ಬಿ,ಗಣೇಶ್ ಸಾಲಿಯಾನ್ ಹಾಗೂ ಶಾಲರು ಇತರ ಅಭಿವೃದ್ಧಿ ಪರ ಕೆಲಸಕ್ಕೆ ಸಹಕಾರವನ್ನು ನೀಡಿದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹಾಬಲ ಶೆಟ್ಟಿ, ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ಆನಂದ ಗೌಡ ಗುತ್ತು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿಯೇ 4 ಸ್ಥಾನ ಪಡೆದ ವೀರಮಂಗಲ ಶಾಲಾ ಹಿರಿಯ ವಿದ್ಯಾರ್ಥಿ ಯಜ್ಞಾ, ಸನ್ಮಾನಿಸಲಾಯಿತು.


ಗೌರವರ್ಪಣೆ
ಮೂಡಬಿದಿರೆಯಲ್ಲಿ ಜರಗಿದ ಜಾಂಬೂರಿ ಉತ್ಸವದಲ್ಲಿ ಭಾಗವಹಿಸಿದ 17ವಿದ್ಯಾರ್ಥಿಗಳಿಗೆ, ಯೋಗಾಸನದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ, ಶಾಲೆಗೆ ಕೊಡುಗೆ ನೀಡಿದ ಬಾಲಚಂದ್ರ ಗೌಡ, ಜತ್ತಪ್ಪ ಗೌಡ ಬೆಂಗಳೂರು, ಸುಬ್ರಹ್ಮಣ್ಯ ಕರಂಬಾರು, ಅರವಿಂದಕೃಷ, ಸುಹಾಸ್ ಹೆಬ್ಬಾರ್, ಅಚ್ಚುತ ಆಚಾರ್, ದಾಮೋದರ್ ಕುಲಾಲ್, ಎಸ್‌ಡಿಎಂಸಿ ಅಧ್ಯಕ್ಷೆ ಅನುಪಮಾ, ಶಾಲಾ ಶಿಕ್ಷಕ ವೃಂದ, ಅಕ್ಷರಾದಾಸೋಹ ಸಿಬ್ಬಂಧಿಗಳಿಗೆ ಗೌರವರ್ಪಣೆ ಮಾಡಲಾಯಿತು.

ಶಿಕ್ಷಕಿ ಶೋಭಾ ಕಾರ್‍ಯಕ್ರಮ ನಿರೂಪಸಿ, ಶಿಕ್ಷಕಿ ಹರಿಣಾಕ್ಷಿ ವಂದಿಸಿದರು. ಶಿಕ್ಷಕಿಯರಾದ ಶ್ರೀಲತ, ಕವಿತಾ, ಹೇಮವತಿ, ಗಾಯತ್ರಿರವರುಗಳು ವಿವಿಧ ಕಾರ್‍ಯಕ್ರಮದಲ್ಲಿ ಸಹಕರಿಸಿದರು. ಸಭಾ ಕಾರ್‍ಯಕ್ರಮದ ಬಳಿಕ ಸಾಂಸ್ಕೃತಿಕ ವೈಭವ ನಡೆಯಿತು.

ಪೂರ್ವಾಹ್ನ ಧ್ವಜಾರೋಹಣವನ್ನು ನರಿಮೊಗರು ಗ್ರಾ.ಪಂ. ಉಪಾಧ್ಯಕ್ಷ ಸುಧಾಕರ್ ಕುಲಾಲ್ ನೇರವೇರಿಸಿದರು.ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಅನುಪಮಾ ಅಧ್ಯಕ್ಷತೆ ವಹಿಸಿದ್ದರು. ನರಿಮೊಗರು ಗ್ರಾ.ಪಂ. ಸದಸ್ಯ ಬಾಬು ಶೆಟ್ಟಿರವರು ಬಹಮಾನ ವಿತರಿಸಿದರು.ಅತಿಥಿಗಲಾಗಿ ನರಿಮೊಗರು ಗ್ರಾ.ಪಂ. ಸದಸ್ಯರುಗಳಾದ ವಸಂತಿ, ಪದ್ಮಾವತಿ, ಅಕ್ಷರದಾಸೋಹದ ಸಹಾಯಕ ನಿರ್ದೇಶಕ ವಿಷ್ಣು ಪ್ರಸಾದ್, ಬಿಆರ್‌ಸಿ ಸಮನ್ವಯಾಧಿಕಾರಿ ನವೀನ್ ಸ್ಟೀಫನ್ ವೇಗಸ್, ನರಿಮೊಗರು ಕ್ಲಸ್ಟರ್ ಸಿಆರ್‌ಪಿ ಪರಮೇಶ್ವರಿರವರುಗಳು ಉಪಸ್ಥಿತರಿದ್ದರು.

ಎಲ್ಲರಿಗೂ ಅಚ್ಚು ಮೆಚ್ಚು ವೀರಮಂಗಲ ಶಾಲೆ
ಗ್ರಾಮೀಣ ಪ್ರದೇಶದಲ್ಲಿ ಅತ್ಯಂತ ಸುವ್ಯವಸ್ಥೆಯಿಂದ ಕೂಡಿದ ವೀರಮಂಗಲ ಶಾಲೆಯ ಸಾಧನೆಯ ಬಗ್ಗೆ ಶಾಸಕರು ಸಹಿತ ಅತಿಥಿಗಳು ಮುಕ್ತಕಂಠದಿಂದ ಪ್ರಶಂಶಿಸಿದರು. ಶಾಲೆಯ ಹಿರಿಯ ವಿದ್ಯಾರ್ಥಿಗಳ ಅವಿರತ ಶ್ರಮದಿಂದ ಈ ಬಾರಿ ಸುಮಾರು 25 ಸಾವಿರ ರೂ, ಅಂದಾಜಿನಲ್ಲಿ ಬಯಲು ರಂಗ ಮಂದಿರವನ್ನು ನಿರ್ಮಿಸಿದ್ದಾರೆ. ಕುಮಾರಧಾರಾ ನದಿ ತಟದಲ್ಲಿ ಶೋಭಿಸುತ್ತಿರುವ ವೀರಮಂಗಲ ಶಾಲೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಸಾಧಿಸಲಿದೆ ಎಂಬುದು ಊರವರ ಅಭಿಪ್ರಾಯವಾಗಿದೆ.

LEAVE A REPLY

Please enter your comment!
Please enter your name here

Must Read

spot_img
error: Content is protected !!