ಪುತ್ತೂರು: ವಿಧಾನಸಭೆಯ ಅಧಿವೇಶನದಲ್ಲಿ ಅಡಿಕೆ ಬೆಳೆಗಾರರಿಗೆ ಭವಿಷ್ಯವಿಲ್ಲ, ಅಡಿಕೆ ಬೀದಿ ಪಾಲಾಗುತ್ತದೆ ಎಂಬ ಮಾರಕ ಹೇಳಿಕೆ ನೀಡಿ ಬೆಳೆಗಾರರನ್ನು ಸಂದಿಗ್ಧ ಪರಿಸ್ಥಿತಿಗೆ ತಂದೊಡ್ಡಿದ್ದಾರೆಂದು ಆರೋಪಿಸಿದಲ್ಲದೆ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ತತ್‌ಕ್ಷಣವೆ ಸಚಿವ ಸ್ಥಾನದಿಂದ ಕೈ ಬಿಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ವತಿಯಿಂದ ಪುತ್ತೂರು ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗೆ ಜ.2ರಂದು ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಅಡಿಕೆಗೆ ಮೊದಲ ಪ್ರಾಶಸ್ತ್ಯ ನೀಡಿ ಅದನ್ನು ಸಾಂಪ್ರದಾಯಿಕ ಬೆಳೆಯಾಗಿ ಶತಮಾನಗಳಿಂದಲೂ ಬೆಳೆಯಲಾಗುತ್ತಿದೆ. ರಾಜ್ಯ ಗೃಹ ಸಚಿವ ಅರಜ ಜ್ಞಾನೇಂದ್ರ ಅವರು ಅಧಿವೇಶನದಲ್ಲಿ ಅಡಿಕೆ ಬೆಳೆಗೆ ಪ್ರೋತ್ಸಾಹ ನೀಡಬಾರದು. ಅಡಿಕೆ ಬೆಳೆಯುವುದನ್ನು ನಿಲ್ಲಿಸಬೇಕು ಎಂಬ ಹೇಳಿಕೆ ನೀಡಿ ಅಡಕೆ ಬೆಳಗಾರರಿಗೆ ದೊಡ್ಡ ಅಘಾತ ನೀಡಿದ್ದಾರೆ.
ಅವರ ಬೇಜವಾಬ್ದಾರಿ ಹೇಳಿಕೆಯಿಂದ ಅಡಕೆ ಧಾರಣೆ ಕುಸಿಯುವ ಸಾಧ್ಯತೆಯಿದ್ದು, ಈ ಹೇಳಿಕೆಯಿಂದ ರೈತರಿಗೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತಾಗಿದೆ ಎಂದು ರೈತ ಸಂಘ ಆರೋಪಿಸಿದೆ. ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀಧರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಹೊನ್ನಪ್ಪ ಗೌಡ ಪರಣೆ, ಈಶ್ವರ ಗೌಡ ಬಡಿಲ, ಕುಂಬ್ರ ವಲಯ ಅಧ್ಯಕ್ಷ ಶೇಖರ್ ರೈ, ಆಲಂಗಾರು ವಲಯ ಅಧ್ಯಕ್ಷ ಈಶ್ವರ ಗೌಡ, ಈಶ್ವರಮಂಗಲ ವಲಯ ಅಧ್ಯಕ್ಷ ಶಿವಚಂದ್ರ ಪಿ, ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.