ಲೋಕಪಯೋಗಿ ಪುತ್ತೂರು ಉಪವಿಭಾಗದ ಅಧಿಕಾರಿಗಳೇ ಗಮನಿಸಿ: ಸವಣೂರು- ಬೆಳ್ಳಾರೆ ರಸ್ತೆಯಲ್ಲಿ ಎರಡು ಕಿ.ಮೀ ದೂರ ಹೊಂಡ ಗುಂಡಿ, ಸಂಚಾರಕ್ಕೆ ಅಡ್ಡಿ

0

ಪುತ್ತೂರು: ಪ್ರಸಿದ್ಧ ಯಾತ್ರಾಸ್ಥಳ ಧರ್ಮಸ್ಥಳವನ್ನು ಕಡಿಮೆ ಕಾಲಾವಧಿಯಲ್ಲಿ ಸಂಪರ್ಕಿಸಬಲ್ಲ ಬೆಳ್ಳಾರೆ-ಪುದ್ಧೊಟ್ಟು-ಸವಣೂರು ರಸ್ತೆಯ ನಡುವೆ ಎರಡು ಕಿ.ಮೀ.ದೂರ ಹೊಂಡ ಗುಂಡಿ ತುಂಬಿ ಸಂಚಾರಕ್ಕೆ ಅಡ್ಡಿ ಉಂಟಾಗಿದೆ..!

ಲೋಕೋಪಯೋಗಿ ಇಲಾಖೆಯ ಪುತ್ತೂರು ಉಪವಿಭಾಗ ವ್ಯಾಪ್ತಿಗೆ ಒಳಪಟ್ಟಿರುವ ರಸ್ತೆಯಲ್ಲಿ ಈ ಸಮಸ್ಯೆ ಇದೆ. ಸಂಚಾರ-ಸಂಪರ್ಕದ ದೃಷ್ಟಿಯಿಂದ ಮಹತ್ವದ ರಸ್ತೆಯಾಗಿದ್ದರೂ ದುರಸ್ತಿಯ ಬಗ್ಗೆ ಇಲಾಖೆ ಕೂಡಲೇ ಗಮನಹರಿಸುವುದು ಅಗತ್ಯವಿದೆ.

ಎರಡು ಕಿ.ಮೀ. ಅಗೆದದ್ದೆ ಬಂತು..!
ಪುತ್ತೂರು, ಸುಳ್ಯ ಎರಡು ಉಪವಿಭಾಗ ವ್ಯಾಪ್ತಿಯಲ್ಲಿ ೭ ಕಿ.ಮೀ. ರಸ್ತೆ ಒಟ್ಟು ೭.೫ ಕೋ.ರೂ. ವೆಚ್ಚದಲ್ಲಿ ೫.೫ ಮೀ.ಅಗಲದ ಸುಸಜ್ಜಿತ ರಸ್ತೆಯಾಗಿ ಪರಿವರ್ತನೆಗೊಳ್ಳಲಿದೆ ಎಂದು ಒಂದುವರೆ ವರ್ಷದ ಹಿಂದೆ ಶಿಲಾನ್ಯಾಸ ನೆರವೇರಿಸಲಾಗಿತ್ತು, ಇದರಲ್ಲಿ ಸುಳ್ಯ ಉಪವಿಭಾಗಕ್ಕೆ ಸೇರಿರುವ ಮಾಸ್ತಿಕಟ್ಟೆಯಿಂದ-ಕಾಪುಕಾಡು ತನಕ ೩.೫ ರೂ.ವೆಚ್ಚದಲ್ಲಿ ರಸ್ತೆ ನಿರ್ಮಾಣವಾಗಿದೆ. ಪುತ್ತೂರು ಉಪವಿಭಾಗಕ್ಕೆ ಸೇರಿರುವ ಕನ್ನಡಕುಮೇರಿನಿಂದ ಕಾಪುಕಾಡು ತನಕದ ವ್ತಾಪ್ತಿಯಲ್ಲಿ ೪ ಕೋ.ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಯಲ್ಲಿ ಬೊಬ್ಬೆರೆಕಾಡು ತನಕ ಮಾತ್ರ ಕಾಮಗಾರಿ ಆಗಿದೆ. ಮುಕ್ಕೂರು -ಕುಂಡಡ್ಕ-ಕಾಪುಕಾಡು ತನಕ ರಸ್ತೆಯ ಇಕ್ಕೆಲೆಗಳಲ್ಲಿ ವಿಸ್ತರಣೆ ಮಾಡಿ ವರ್ಷ ಕಳೆದಿದ್ದರೂ ಕಾಮಗಾರಿ ಪ್ರಾರಂಭಗೊಂಡಿಲ್ಲ.


ಹೊಂಡ ತುಂಬಿದೆ..!
ಶಾಂತಿಮೊಗರು ಬಳಿ ಕುಮಾರಧಾರಾ ನದಿಗೆ ಸೇತುವೆ ನಿರ್ಮಾಣಗೊಂಡ ಬಳಿಕ ಯಾತ್ರಾರ್ಥಿಗಳಿಗೆ ಕಡಿಮೆ ಅವಧಿಯಲ್ಲಿ ಬೆಳ್ಳಾರೆ-ಪೆರುವಾಜೆ-ಸವಣೂರು ಸಂಪರ್ಕ ರಸ್ತೆ ಮೂಲಕ ಶಾಂತಿಮೊಗರು, ಅಲಂಕಾರು, ನೆಲ್ಯಾಡಿ ಮಾರ್ಗವಾಗಿ ಧರ್ಮಸ್ಥಳಕ್ಕೆ ತೆರಳಲು ಅನುಕೂಲಕರವೆನಿಸಿದೆ. ಈ ರಸ್ತೆಯ ಎರಡು ಕಿ.ಮೀ.ವ್ಯಾಪ್ತಿಯಲ್ಲಿ ಅಲ್ಲಲ್ಲಿ ಹೊಂಡ ತುಂಬಿದೆ. ಇಲ್ಲಿ ವಾಹನ ಚಲಾಯಿಸುವುದೇ ದುಸ್ತರವೆನಿಸಿದೆ.

ಬಸ್ ಸಂಚಾರ ರಸ್ತೆ
ಬೆಳ್ಳಾರೆ-ಸವಣೂರು ಮೂಲಕ ಸುಳ್ಯ, ಪುತ್ತೂರು, ಕಾಣಿಯೂರು, ಕಡಬಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಇದೆ. ಬೆಳಗ್ಗೆ, ಮಧ್ಯಾಹ್ನ, ಸಂಜೆ ಹೀಗೆ ಎರಡು ಗಂಟೆಗೊಮ್ಮೆ ಇಲ್ಲಿ ಬಸ್ ಸಂಚರಿಸುತ್ತಿವೆ. ನೂರಾರು ವಿದ್ಯಾರ್ಥಿಗಳು, ಸಾವಿರಾರು ಸಾರ್ವಜನಿಕರು ಕಚೇರಿ ಕೆಲಸಕ್ಕೆ ತೆರಳುವವರು ಈ ರಸ್ತೆಯನ್ನು ಅವಲಂಬಿಸಿದ್ದಾರೆ. ಮೈಸೂರು, ಮಡಿಕೇರಿ, ಕಾಸರಗೋಡು, ಸುಳ್ಯ ಸೇರಿದಂತೆ ತಾಲೂಕು, ಹೊರ ಜಿಲ್ಲೆಯ ಜನರು ಧರ್ಮಸ್ಥಳ ಕ್ಷೇತ್ರಕ್ಕೆ ತೆರಳಲು ಈ ರಸ್ತೆಯನ್ನು ಬಳಸುತ್ತಾರೆ. ಸೇತುವೆ ನಿರ್ಮಾಣಕ್ಕೆ ಮೊದಲು ಯಾತ್ರಾರ್ಥಿಗಳು ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿ ಸುತ್ತು ಬಳಸಿ ಧರ್ಮಸ್ಥಳಕ್ಕೆ ತೆರಳಬೇಕಿತ್ತು. ಸೇತುವೆಯಾದ ಅನಂತರ ಇಲ್ಲಿ ವಾಹನ ಓಡಾಟ ಹೆಚ್ಚಾಗಿದೆ. ಜತೆಗೆ ಪೆರುವಾಜೆ, ಸವಣೂರು, ಬೆಳಂದೂರಿನಲ್ಲಿ ಪ್ರಥಮ ದರ್ಜೆ ಕಾಲೇಜು, ಕಡಬ ತಾಲೂಕು ಕೇಂದ್ರ, ಆಲಂಕಾರು, ನೆಲ್ಯಾಡಿ ಮೊದಲಾದೆಡೆ ತೆರಳಲು ಈ ರಸ್ತೆಯೇ ಉಪಯುಕ್ತವೆನಿಸಿದ್ದು ಹಾಗಾಗಿ ತತ್‌ಕ್ಷಣ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

ಕೂಡಲೇ ಕಾಮಗಾರಿ ಆರಂಭ
ಕಾಪುಕಾಡಿನಿಂದ ಬೊಬ್ಬೆರೆಕಾಡು ತನಕದ ರಸ್ತೆ ಅಲ್ಲಲ್ಲಿ ಹೊಂಡ ಗುಂಡಿಗಳಿಂದ ತುಂಬಿ ಸಂಚಾರಕ್ಕೆ ತೊಂದರೆ ಆಗುತ್ತಿರುವ ಬಗ್ಗೆ ಇಲಾಖೆ ಗಮನಿಸಿದ್ದು, ಪ್ರಸ್ತುತ ಡಾಮರೀಕರಣಕ್ಕೆ ಜಲ್ಲಿಯ ತೊಂದರೆ ಇದ್ದು, ಜಲ್ಲಿ ಬಂದ ಕೂಡಲೇ ಡಾಮರೀಕರಣವನ್ನು ಮಾಡಲಾಗುವುದು- ರಾಜಾರಾಮ್ ಎಇಇ. ಲೋಕಪಯೋಗಿ ಇಲಾಖೆ ಪುತ್ತೂರು.

LEAVE A REPLY

Please enter your comment!
Please enter your name here