ಫಿಲೋಮಿನಾ ಕಾಲೇಜಿನಲ್ಲಿ 1998ರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ ನೆನಪಿನಂಗಳ-98 ಕಾರ್ಯಕ್ರಮ

0

ಪುತ್ತೂರು:ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಉನ್ನತ ದಾಖಲೆಗಳನ್ನು ಬರೆದು ಮುಖ್ಯವಾಹಿನಿಯಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ಕೂಡ ಒಂದು. ಹಲವು ದಶಕಗಳಿಂದ ಈ ವಿದ್ಯಾ ಸಂಸ್ಥೆಯ ಮೂಲಕ ಶಿಕ್ಷಣವನ್ನು ಪಡೆದು ಅದೆಷ್ಟೋ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.ಹಿಂದಿನ ಕಾಲದ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪೂರ್ತಿಗೊಳಿಸಿದ ಬಳಿಕ ಒಬ್ಬರನ್ನೊಬ್ಬರು ಭೇಟಿಯಾಗುವುದು ಮತ್ತು ಸಂಪರ್ಕದಲ್ಲಿರುವುದು ಕಷ್ಟಸಾಧ್ಯವಾಗಿತ್ತು.ಕೇವಲ ಶಿಕ್ಷಣ ಸಂಸ್ಥೆಯ ಆಸುಪಾಸಿನಲ್ಲಿ ನೆಲೆಸಿರುವವರು ಹಳೆ ವಿದ್ಯಾರ್ಥಿ ಸಂಘದ ಮೂಲಕ ಕೆಲವೊಮ್ಮೆ ಒಟ್ಟುಗೂಡುತ್ತಿದ್ದರು.ಇದೀಗ ಸಾಮಾಜಿಕ ಜಾಲತಾಣದ ಮೂಲಕ, ದೇಶ ವಿದೇಶಗಳಲ್ಲಿ ನೆಲೆಸಿರುವ ತಮ್ಮ ಸಹಪಾಠಿಗಳನ್ನು ಸಂಪರ್ಕಿಸುವುದು ಸುಲಭ ಸಾಧ್ಯವಾಗಿದೆ.
ಫಿಲೋಮಿನಾ ಕಾಲೇಜಿನ 1998ನೇ ವರ್ಷದ ಬಿ.ಕಾಂ.ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳನ್ನು ಮತ್ತೊಮ್ಮೆ ಒಟ್ಟುಗೂಡಿಸುವ ಪ್ರಯತ್ನದಲ್ಲಿ ಸಫಲರಾಗಿದ್ದಾರೆ.ಇವರು ಕೇವಲ ವಾಟ್ಸ್ಆ್ಯಪ್ ಗ್ರೂಪ್‌ಗೆ ತಮ್ಮ ಸಂಪರ್ಕವನ್ನು ಸೀಮಿತಗೊಳಿಸದೆ ಕೆಲವೊಂದು ವಿದ್ಯಾರ್ಥಿಗಳ ಮುತುವರ್ಜಿಯಿಂದ 25 ವರ್ಷಗಳ ಬಳಿಕ ತಾವು ಕಲಿತ ಕಾಲೇಜಿನಲ್ಲಿ ಅಂದಿನ ಶಿಕ್ಷಕರನ್ನೂ ಆಹ್ವಾನಿಸಿ ನೆನಪಿನಲ್ಲಿ ಉಳಿಯುವಂತಹ ಒಂದು ದಿನದ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿ ಎಲ್ಲರ ಶ್ಲಾಘನೆಗೆ ಪಾತ್ರರಾದರು.ದ.26ರಂದು ಈ ಕಾರ್ಯಕ್ರಮ ನಡೆಯಿತು.1995ರಿಂದ 1998ರ ಅವಧಿಯಲ್ಲಿ ಬಿ.ಕಾಮ್ ಶಿಕ್ಷಣ ಪಡೆದ ಸುಮಾರು 35 ವಿದ್ಯಾಥಿ9ಗಳು ಈ ಪುನರ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಇವರಲ್ಲಿ ಕೆಲವರು ಸ್ವ-ಉದ್ಯೋಗಿಗಳಾಗಿ, ಕೆಲವರು ಬೇರೆ ಬೇರೆ ಸಂಸ್ಥೆಗಳಲ್ಲಿ ದುಡಿಯುತ್ತಿದ್ದು ಮತ್ತೆ ಕೆಲವರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರೆ, ಇನ್ನು ಕೆಲವರು ಗೃಹಿಣಿಯರಾಗಿ,ಸಮಾಜ ಸೇವಕರಾಗಿ ತಮ್ಮನ್ನು ತೊಡಗಿಸಿಕೊಂಡು ದೇಶ ವಿದೇಶಗಳಲ್ಲಿ ನೆಲೆಸಿದವರಿದ್ದರು.
ಈ ಕಾರ್ಯಕ್ರಮಕ್ಕೆ ಅಂದಿನ ಶಿಕ್ಷಕರನ್ನೂ ಆಹ್ವಾನಿಸಲಾಗಿತ್ತು.ಹೆಚ್ಚಿನ ಉಪನ್ಯಾಸಕರುಗಳು ತಮ್ಮ ನಿವೃತ್ತ ಜೀವನದಲ್ಲಿದ್ದರೂ ಕಾರ್ಯಕ್ರಮಕ್ಕೆ ಆಗಮಿಸಿದ್ದರು.ಸಂಸ್ಥೆಯ ಅಂದಿನ ಗುರುಗಳಾದ ಪ್ರೊ|ರವೀಂದ್ರ ರಾವ್ ಅವರು ಸದ್ಯ ಅಸೌಖ್ಯದಿಂದಿದ್ದರೂ ಗಾಲಿಕುರ್ಚಿಯ ಆಧಾರದಲ್ಲಿ ಕುಟುಂಬ ಸಮೇತರಾಗಿ ಆಗಮಿಸಿದ್ದು ವಿಶೇಷವಾಗಿತ್ತು.ವಿದ್ಯಾರ್ಥಿ ಸಮೂಹದ ವತಿಯಿಂದ ಎಲ್ಲಾ ಅತಿಥಿ ಅಭ್ಯಾಗತರನ್ನು ಹೂಹಾರ, ಶಾಲು, ಹಣ್ಣು ಹಂಪಲು ಮತ್ತು 25ನೇ ವರ್ಷದ ನೆನಪಿನ ಕಾಣಿಕೆಯಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಬೆಳ್ಳಿಯ ನಾಣ್ಯಗಳನ್ನು ನೀಡಿ ಗೌರವಿಸಲಾಯಿತು.ದಿ|ಗೋವಿಂದ ಭಂಡಾರಿಯವರ ಕುಟುಂಬದವರನ್ನು ಮತ್ತು ಫಿಲೊಮಿನಾ ಕ್ಯಾಂಟೀನ್ ನ ಮಾಲಕರಾದ ಆನಂದ ಶೆಟ್ಟಿಯವರನ್ನು ವಿಶೇಷವಾಗಿ ಆಮಂತ್ರಿಸಿ ಗೌರವಿಸಲಾಯಿತು.
ಸೇರಿದ ಪ್ರತಿಯೊಬ್ಬ ಹಿರಿಯ ವಿದ್ಯಾರ್ಥಿಯೂ ಪರಿಚಯದ ಜೊತೆಗೆ, ತಮ್ಮ ವೃತ್ತಿ, ಪ್ರವೃತ್ತಿ, ಕುಟುಂಬ ಮತ್ತು ಜೀವನ ಶೈಲಿಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.ಅಂದಿನ ಪ್ರಾಂಶುಪಾಲರಾಗಿದ್ದ ರೆ| ಫಾ| ಫೆಡ್ರಿಕ್ ಮಸ್ಕರೇನ್ಹಸ್, 1998ರ ಬ್ಯಾಚಿನ ವಿದ್ಯಾರ್ಥಿಯಾಗಿದ್ದ ಪ್ರಸ್ತುತ ಪ್ರಾಂಶುಪಾಲರಾಗಿರುವ ರೆ| ಫಾ| ಆ್ಯಂಟನಿ ಪ್ರಕಾಶ್, ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜ್‌ನ ಪ್ರಾಂಶುಪಾಲರಾದ ಪ್ರೊ|ಜೋಸೆಫ್‌, ಪ್ರೊ|ಗುಣಕರ್, ಪ್ರೊ| ವಸಂತಿ, ಪ್ರೊ| ವಿಷ್ಣು ಭಟ್, ಪ್ರೊ| ಈಶ್ವರ ಶಾಸ್ತ್ರಿ, ಪ್ರೊ| ರವೀಂದ್ರ ರಾವ್, ಪ್ರೊ| ವಿಜಯಕುಮಾರ್ ಮೊಳೆಯಾರ್ ಇವರುಗಳು ಈ ಬ್ಯಾಚ್‌ನ ವಿದ್ಯಾರ್ಥಿಗಳೊಂದಿಗಿನ ತಮ್ಮ ಒಡನಾಟವನ್ನು ನೆನಪಿಸುವುದರೊಂದಿಗೆ ವಿದ್ಯಾರ್ಥಿ ಜೀವನದ ಬಳಿಕವೂ ತಮ್ಮ ವಿದ್ಯಾರ್ಥಿಗಳೊಂದಿಗಿನ ಸಂಪರ್ಕ ಸಂಬಂಧಗಳನ್ನು ನೆನಪಿಸಿಕೊಂಡು ಕಾರ್ಯಕ್ರಮದ ಆಯೋಜನೆ ಮತ್ತು ಆಮಂತ್ರಣಕ್ಕೆ ಅಭಿನಂದಿಸಿ ಶುಭಹಾರೈಸಿದರು.

ವಿದ್ಯಾರ್ಥಿಗಳ ಪರವಾಗಿ ಹರಿಪ್ರಸಾದ್ ಮತ್ತು ಸಂತೋಷ್ ರೈಯವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.ಹಿರಿಯ ವಿದ್ಯಾರ್ಥಿಗಳಾದ ಶ್ರೀಮತಿ ಪ್ರಸನ್ನ ಕುಮಾರಿಯವರ ಪುತ್ರಿ ಕುಮಾರಿ ಪ್ರಜ್ಞಾ ಮತ್ತು ಶ್ರೀಮತಿ ಪ್ರನೀತಾ ರೈಯವರ ಪುತ್ರಿ ಕುಮಾರಿ ಸಾಯಿ ಮಹಿತಾ ನೃತ್ಯ ಪ್ರದರ್ಶನ ನೀಡಿ ರಂಜಿಸಿದರು.ಆಟೋಟದ ಜೊತೆಗೆ ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನದ ಭೋಜನವನ್ನೂ ವ್ಯವಸ್ಥೆ ಮಾಡಲಾಗಿತ್ತು.
ವಿದ್ಯಾರ್ಥಿಗಳ ತಂಡದ ವತಿಯಿಂದ ಕಾಲೇಜ್‌ನ ಕಂಪ್ಯೂಟರ್ ವಿಭಾಗಕ್ಕೆ ಒಂದು ಲಕ್ಷ ರೂಪಾಯಿ ಮತ್ತು ಬೀರಮಲೆ ಬೆಟ್ಟದಲ್ಲಿರುವ ವಿಶೇಷ ಚೇತನ ಆಶ್ರಮದ ಬಂಧುಗಳಿಗೆ ಒಂದು ದಿನದ ಭೋಜನದ ಸಲುವಾಗಿ ಧನಸಹಾಯ ನೀಡಲಾಯಿತು.ಪ್ರಾಂಶುಪಾಲ ರೆ| ಫಾ| ಆಂಟನಿ ಪ್ರಕಾಶ್‌ರವರು ಮುಂದೆಯೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದಕ್ಕೆ ತಮ್ಮ ಸಂಪೂರ್ಣ ಸಹಕಾರವಿರುವುದಾಗಿ ತಿಳಿಸಿ, ಈ ದಿನದ ಸಮ್ಮಿಲನ ಕಾರ್ಯಕ್ರಮ ಎಲ್ಲಾ ಹಳೆವಿದ್ಯಾರ್ಥಿಗಳಿಗೆ ಮಾದರಿಯೆಂದು ಶ್ಲಾಘಿಸಿದರು.
1998ರ ವಾಣಿಜ್ಯ ವಿಭಾಗದಲ್ಲಿ ವಿಶ್ವವಿದ್ಯಾನಿಲಯ ಮಟ್ಟದಲ್ಲಿ 3ನೇ ರಾಂಕ್ ಪಡೆದು ಬೆಂಗಳೂರಿನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ವೃತ್ತಿನಿರತರಾಗಿದ್ದು ಕೆಲದಿನಗಳ ಹಿಂದೆ ವಿಽವಶರಾದ ಗೋವಿಂದ ಭಂಡಾರಿಯವರನ್ನು ಸ್ಮರಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಹಿರಿಯ ವಿದ್ಯಾರ್ಥಿಗಳಾದ ವೈ.ಕೆ.ಪ್ರಸನ್ನ ಮತ್ತು ಜಗದೀಶ್‌ರವರು ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಂಡು ಸಭಾಕಾರ್ಯಕ್ರಮ ನಿರ್ವಹಣೆ ಮಾಡಿದರು.ದೇವಿಪ್ರಸಾದ್ ಶೆಣೈ, ಜಗದೀಶ್, ಜಯಕುಮಾರ್, ಶಾಫಿ ಬಂಡಸಾಲ, ವೈ.ಕೆ.ಪ್ರಸನ್ನ, ಪ್ರತಿಭಾ, ಸಹನಾ, ಯೂಸುಫ್ ಶಬೀರ್ ಮತ್ತು ವಿನೋದ್ ರೈಯವರು ಕಾರ್ಯಕ್ರಮ ಆಯೋಜನೆಯಲ್ಲಿ ಮುತುವರ್ಜಿ ವಹಿಸಿದ್ದರು.ಹಿರಿಯ ವಿದ್ಯಾರ್ಥಿ ವಿನೋದ್ ರೈ ಸ್ವಾಗತಿಸಿ, ಹಿರಿಯ ವಿದ್ಯಾರ್ಥಿನಿ ಶ್ರೀಮತಿ ಸಹನಾ ಭಟ್ ವಂದನಾರ್ಪಣೆಗೈದರು.

LEAVE A REPLY

Please enter your comment!
Please enter your name here