ಮುಂಡೂರು: ಮನೆಗೆ ನುಗ್ಗಿ ಚೂರಿಯಿಂದ ತಿವಿದು ಯುವತಿಯ ಕೊಲೆ : ಸಹೋದರಿ ಅಜ್ಜಿ ಮನೆಯಲ್ಲಿ, ತಮ್ಮ ಮಂಗಳೂರಿನಲ್ಲಿ, ತಾಯಿ ತೋಟದಲ್ಲಿ  ಜಯಶ್ರೀ ಒಬ್ಬರೇ ಇರುವಾಗ ನಡೆದ ಕೃತ್ಯ

  • 3 ಬಾರಿ ಚೂರಿಯಿಂದ ತಿವಿದು ಗಂಭೀರ ಗಾಯ
  • ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ಸಾವು
  • ಸ್ವಾಭಿಮಾನಿಯಾಗಿ ಬದುಕುತ್ತಿದ್ದ ಬಿಎಸ್ಸಿ ಪದವೀಧರೆ

ಮಗಳು ದೂರ ಮಾಡಿದ್ದಕ್ಕೆ ಅಸಮಾಧಾನ ಕನಕಮಜಲು ಉಮೇಶನ ಕೃತ್ಯ ಶಂಕೆ ಮೃತರ ತಾಯಿಯಿಂದ ಪೊಲೀಸ್ ದೂರು
ಕನಕಮಜಲಿನ ಯುವಕ ಉಮೇಶ ಈ ಕೃತ್ಯ ಎಸಗಿರುವ ಸಂಶಯ ಇರುವುದಾಗಿ ಮೃತ ಜಯಶ್ರೀ ಅವರ ತಾಯಿ ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನನ್ನ ಮಗಳು ಮನೆಯಲ್ಲಿದ್ದಾಗ ಬೆಳಿಗ್ಗೆ ಸಮಯ ಸುಮಾರು 11.30 ಗಂಟೆಯ ವೇಳೆಗೆ ಅಮ್ಮಾ ಎಂದು ಕೂಗಿಕೊಂಡು ನನ್ನ ಬಳಿಗೆ ಓಡಿ ಬಂದಿರುತ್ತಾಳೆ.ಆಗ ಅವಳ ಹೊಟ್ಟೆಯಲ್ಲಿ ಗಾಯವಾಗಿ ರಕ್ತಸ್ರಾವವಾಗುತ್ತಿರುವುದು ಕಂಡು ಬಂದಿದ್ದು, ಅವಳನ್ನು ಆಟೋ ರಿಕ್ಷಾದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತಂದಾಗ ವೈದ್ಯರು ಮಧ್ಯಾಹ್ನ 12.15 ಗಂಟೆಗೆ ಪರೀಕ್ಷಿಸಿ ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದರು. ಕನಕಮಜಲಿನ ಉಮೇಶ್ ಎಂಬವನು ಜಯಶ್ರೀಯನ್ನು ಕೆಲವು ಸಮಯದಿಂದ ಪ್ರೀತಿಸುತ್ತಿದ್ದು ಮನೆಗೂ ಬರುತ್ತಿದ್ದ.ಆದರೆ ಇತ್ತೀಚೆಗೆ, ಅವನ ಗುಣನಡತೆ ಮಗಳು ಜಯಶ್ರೀಗೆ ಇಷ್ಟವಾಗದ ಕಾರಣ ಕಳೆದ ನವೆಂಬರ್ ವೇಳೆಗೆ ಜಯಶ್ರೀಯು ಉಮೇಶನನ್ನು ದೂರ ಮಾಡಿರುತ್ತಾಳೆ.ಈ ವಿಷಯದಲ್ಲಿ ಉಮೇಶನು ಅಸಮಾಧಾನದಿಂದ ಇರುತ್ತಾನೆ.ಮಗಳು ಜಯಶ್ರೀ ಜ.17ರಂದು ಬೆಳಿಗ್ಗೆ 11.30 ಗಂಟೆಗೆ ಮನೆಯಲ್ಲಿದ್ದಾಗ ಯಾರೋ ಅಪರಿಚಿತರು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಮನೆಯೊಳಗಿದ್ದ
ಜಯಶ್ರೀಯನ್ನು ಯಾವುದೋ ಆಯುಧದಿಂದ ತಿವಿದು ಕೊಲೆ ಮಾಡಿದ್ದು ಈ ಕೃತ್ಯವನ್ನು ಸದ್ರಿ ಉಮೇಶನೇ ಮಾಡಿರುವ ಸಾಧ್ಯತೆ ಇದೆ ಎಂದು ಗಿರಿಜಾರವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.ಅವರ ದೂರಿನ ಮೇರೆಗೆ ಪೊಲೀಸರು ಕಲಂ 448, 302 ಐಪಿಸಿಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪುತ್ತೂರು: ಹಾಡಹಗಲೇ ಮನೆಗೆ ನುಗ್ಗಿ ಯುವತಿಗೆ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಮುಂಡೂರು ಗ್ರಾಮದ ಕಂಪ ಬದಿಯಡ್ಕದಲ್ಲಿ ಜ.17ರಂದು ನಡೆದಿದೆ.ಕನಕಮಜಲು ನಿವಾಸಿ ಉಮೇಶ ಎಂಬಾತ ಈ ಕೃತ್ಯ ಎಸಗಿರುವ ಕುರಿತು ಸಂಶಯ ವ್ಯಕ್ತಪಡಿಸಿ ಮೃತರ ತಾಯಿ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಮುಂಡೂರು ಗ್ರಾಮದ ಕಂಪ ಬದಿಯಡ್ಕ ದಿ.ಗುರುವ ಎಂಬವರ ಪುತ್ರಿ ಜಯಶ್ರೀ(23ವ.)ಕೊಲೆಯಾದವರು ಮೃತಪಟ್ಟವರು.ಬೆಳಿಗ್ಗೆ 10.30ರಿಂದ 11ರ ಸುಮಾರಿಗೆ ಅವರು ಮನೆಯೊಳಗೆ ಇದ್ದ ವೇಳೆ ಯಾರೋ ಅಪರಿಚಿತರು ಮನೆಯೊಳಗೆ ಬಂದು ಜಯಶ್ರೀ ಅವರ ಹೊಟ್ಟೆಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ.ಚೂರಿ ಇರಿತದಿಂದಾಗಿ ಗಂಭೀರ ಗಾಯಗೊಂಡಿದ್ದ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆ ತರುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ.

ಘಟನೆ ವಿವರ: ಜಯಶ್ರೀ ಅವರು ಬಿಎಸ್ಸಿ ಪದವೀಧರೆಯಾಗಿ ಮನೆಯಲ್ಲೇ ಇದ್ದರು.ಜ.17ರಂದು ಬೆಳಿಗ್ಗೆ ಜಯಶ್ರೀ ಅವರ ತಾಯಿ ಗಿರಿಜಾ ಅವರು ತೋಟಕ್ಕೆ ಹೋಗಿದ್ದರು.ಚಿತ್ರಕಲಾವಿದನೂ ಆಗಿರುವ ತಮ್ಮ ಯತೀಶ್ ಮಂಗಳೂರಿಗೆ ಫ್ಯಾಶನ್ ಡಿಸೈನ್ ತರಗತಿಗೆ ತೆರಳಿದ್ದರು.ಸಹೋದರಿ ಪೂಜಾ ಅವರು ಅಜ್ಜಿ ಮನೆಯಲ್ಲಿದ್ದುದರಿಂದ ಮನೆಯಲ್ಲಿ ಜಯಶ್ರೀಯವರು ಮಾತ್ರ ಇದ್ದರು.ಇದೇ ವೇಳೆ ಅವರಿಗೆ ಚೂರಿ ಇರಿತ ಆಗಿದೆ.ಚೂರಿ ಇರಿತಕ್ಕೊಳಗಾದ ಜಯಶ್ರೀಯವರು ಹೊಟ್ಟೆಯಲ್ಲಿ ಚುಚ್ಚಿದ್ದ ಚೂರಿ ಸಹಿತ ಕಿರುಚಾಡಿಕೊಂಡು ಅಮ್ಮಾ ಎನ್ನುತ್ತಾ ತೋಟದ ಕಡೆ ಬಂದಿದ್ದರು.ಮಗಳ ಕಿರುಚಾಟವನ್ನು ಕೇಳಿ ತೋಟದಲ್ಲಿದ್ದ ಗಿರಿಜಾ ಅವರು ಕೂಡಲೇ ಮನೆ ಕಡೆಗೆ ಓಡಿ ಬಂದಿದ್ದಾರೆ.ಆ ವೇಳೆಗಾಗಲೇ ಸ್ಥಳೀಯ ಕೆಲವರು ಅಲ್ಲಿಗೆ ಬಂದಿದ್ದು ಚೂರಿಯಿರಿತಕ್ಕೊಳಗಾಗಿದ್ದ ಜಯಶ್ರೀಯವರನ್ನು ಮನೆಯ ಜಗಲಿಯಲ್ಲಿ ಮಲಗಿಸಿದ್ದರು. ಗಿರಿಜಾರವರು ತೋಟದಿಂದ ಮನೆಗೆ ಬಂದ ಬಳಿಕ ಜಯಶ್ರೀಯವರನ್ನು ರಿಕ್ಷಾವೊಂದರಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದಾರೆ.ಆದರೆ ದಾರಿ ಮಧ್ಯೆಯೇ ಜಯಶ್ರೀಯವರ ಪ್ರಾಣಪಕ್ಷಿ ಹಾರಿಹೋಗಿದೆ.ಪುತ್ತೂರು ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ್, ಸಂಪ್ಯ ಪೊಲೀಸ್ ಠಾಣೆಯ ಎಸ್‌ಐ ಉದಯರವಿ ಆಸ್ಪತ್ರೆಗೆ ತೆರಳಿ ಮೃತ ಜಯಶ್ರೀಯವರ ತಾಯಿಯಿಂದ ಹೇಳಿಕೆ ಪಡೆದು ಕೊಂಡಿದ್ದಾರೆ. ಮೃತರ ತಂದೆ ಗುರುವರವರು ಕಳೆದ ಕೊರೊನಾ ಸಂದರ್ಭ ಸಾವಿಗೀಡಾಗಿದ್ದರು. ಮೃತರು ತಾಯಿ ಗಿರಿಜಾ, ಸಹೋದರ ಯತೀಶ್, ಸಹೋದರಿ ಪೂಜಾ ಅವರನ್ನು ಅಗಲಿದ್ದಾರೆ.ಗ್ರಾ.ಪಂ.ಸದಸ್ಯ ಅಶೋಕ್ ಕುಮಾರ್ ಪುತ್ತಿಲ, ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಸಹಿತ ಅನೇಕರು ಪುತ್ತೂರು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದರು.

3 ಬಾರಿ ಚುಚ್ಚಿದ ಗುರುತು!: ಮೃತ ಜಯಶ್ರೀಯವರ ಹೊಟ್ಟೆಯಲ್ಲಿ ಮೂರು ಬಾರಿ ಚೂರಿಯಿಂದ ಚುಚ್ಚಿದ ಗುರುತು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ.ಹೊಟ್ಟೆಯ ಚುಚ್ಚಿದ ಭಾಗದ ಪಕ್ಕದಲ್ಲೇ ಇನ್ನೆರಡು ಚುಚ್ಚಿದ ಗಾಯವಿತ್ತೆನ್ನಲಾಗಿದೆ.

2 ತಿಂಗಳ ಹಿಂದೆ ಕೆಲಸ ಬಿಟ್ಟಿದ್ದರು: ಬಿಎಸ್ಸಿ ಪದವೀಧರೆಯಾಗಿದ್ದ ಜಯಶ್ರೀ ಆರಂಭದಲ್ಲಿ ಮುಂಡೂರುನಲ್ಲಿ ಗ್ರಾಮಾಭಿವೃದ್ಧಿ ಯೋಜನೆಯವರ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.ಬಳಿಕ ಕೆಲಸ ಕಷ್ಟವಾಗುತ್ತದೆಯೆಂದು ಅಲ್ಲಿಂದ ಬಿಟ್ಟು ಕುರಿಯದಲ್ಲಿ ಕೆಲಸಕ್ಕೆ ಸೇರಿದ್ದರು.ಎರಡು ತಿಂಗಳ ಹಿಂದೆ ಅಲ್ಲಿಯೂ ಕೆಲಸ ಬಿಟ್ಟು ಮನೆಯಲ್ಲಿಯೇ ಇರುತ್ತಿದ್ದರು.ಮನೆಯವರಿಗೆ ಸಣ್ಣಮಟ್ಟಿನ ತೋಟ ಹಾಗೂ ಹೈನುಗಾರಿಕೆ ವೃತ್ತಿಯನ್ನೂ ಮಾಡುತ್ತಿದ್ದು ಜಯಶ್ರೀಯವರು ಈ ಕೆಲಸಗಳಲ್ಲಿ ತಾಯಿಗೆ ನೆರವಾಗುತ್ತಿದ್ದರು.ಮನೆಯಿಂದ ಹಾಲು ಸೊಸೈಟಿಗೆ ಹಾಲು ಕೊಂಡೊಯ್ಯುವ ಕೆಲಸವನ್ನು ಮಾಡಿ ಬಳಿಕ ಮನೆ ಕೆಲಸ ಮಾಡಿಕೊಂಡಿರುತ್ತಿದ್ದರು ಎಂದು ತಿಳಿದು ಬಂದಿದೆ.

ಮೃತ ದೇಹದ ಮರಣೋತ್ತರ ಪರೀಕ್ಷೆ ದೇರಳಕಟ್ಟೆಯಲ್ಲಿ: ಚೂರಿ ಇರಿತಕ್ಕೊಳಗಾಗಿ ಮೃತಪಟ್ಟ ಜಯಶ್ರೀ ಅವರ ಮರಣೋತ್ತರ ಪರೀಕ್ಷೆಯನ್ನು ದೇರಳಕಟ್ಟೆ ವಿಽವಿಜ್ಞಾನ ಪ್ರಯೋಗಾಲಯದಲ್ಲಿ ಮಾಡುವ ನಿಟ್ಟಿನಲ್ಲಿ ಸಂಜೆ ವೇಳೆ ಮೃತ ದೇಹವನ್ನು ದೇರಳಕಟ್ಟೆಗೆ ಕೊಂಡೊಯ್ಯಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಮಾಹಿತಿಗಾಗಿ ಜಯಶ್ರೀ ಮೊಬೈಲ್‌ಗೇ ವಾಟ್ಸಪ್ ಮಾಡಿದ್ದ ರವಿ ರಾಮಕುಂಜ: ಚೂರಿಯಿರಿತಕ್ಕೊಳಗಾಗಿ ಮೃತಪಟ್ಟ ಜಯಶ್ರೀಯವರು ಕಲಾವಿದ ರವಿ ರಾಮಕುಂಜ ಅವರ ಅತ್ತೆಯ ಮಗಳು.ಮಧ್ಯಾಹ್ನದ ವೇಳೆ, ಮುಂಡೂರಿನಲ್ಲಿ ಚೂರಿ ಇರಿತ ನಡೆದಿರುವ ಕುರಿತ ಸುದ್ದಿಯನ್ನು ವೆಬ್‌ನ್ಯೂಸ್‌ನಲ್ಲಿ ನೋಡಿದ್ದ ಕಲಾವಿದ ರವಿ ರಾಮಕುಂಜ ಅವರು ಚೂರಿಯಿರಿತಕ್ಕೊಳಗಾದವರು ಯಾರೆಂದು ಮಾಹಿತಿ ಪಡೆಯಲು ಜಯಶ್ರೀಯವರ ಮೊಬೈಲ್‌ಗೇ ವಾಟ್ಸಪ್ ಮೆಸೇಜ್ ಮಾಡಿದ್ದರು.ತನ್ನ ಅತ್ತೆ ಮಗಳೇ ಕೊಲೆಯಾಗಿರುವುದು ಎನ್ನುವುದನ್ನು ತಿಳಿದು ಅವರು ಆಘಾತಕ್ಕೆಗೊಳಗಾದರು.ಸರಕಾರಿ ಆಸ್ಪತ್ರೆಗೆ ಬಂದಿದ್ದ ಅವರು ಈ ವಿಚಾರವನ್ನು ಪತ್ರಕರ್ತರ ಮುಂದಿಟ್ಟರು.

ಜೀವ ತೆಗೆಯಬೇಕೆಂದಿರಲಿಲ್ಲ:ತಾಯಿಯ ಕಣ್ಣೀರು

ಮನೆಯಲ್ಲೇ ಇದ್ದಳು.ಮೊಬೈಲ್ ವಿಷಯದಲ್ಲಿ ಏನೂ ಗೊತ್ತಿಲ್ಲ. ಫ್ರೆಂಡ್ಸ್‌ಗಳ ಜೊತೆ ಫೋನ್‌ನಲ್ಲಿ ಮಾತನಾಡುತ್ತಿದ್ದಳು.ಅದರ ಬಗ್ಗೆ ನಾವೇನೂ ಹೇಳುತ್ತಿರಲಿಲ್ಲ.ಹೊರಗಿನವರು ಯಾರೂ ಮನೆಗೆ ಬರುತ್ತಿರಲಿಲ್ಲ.ನಾವ್ಯಾರೂ ಮನೆಯಲ್ಲಿ ಇಲ್ಲದೇ ಇದ್ದರೂ ಒಂಟಿಯಾಗಿ ಮನೆಯಲ್ಲಿ ಧೈರ್ಯವಾಗಿ ಇರುತ್ತಿದ್ದಳು.ಬೆಳಗ್ಗೆ 11.30ರ ವೇಳೆಗೆ ಘಟನೆ ನಡೆದಿದೆ.ನಾನು ತರಗೆಲೆ ಸಂಗ್ರಹ ಮಾಡುತ್ತಿದ್ದೆ.ಮತ್ತೆ ತೋಟದಲ್ಲಿ ಹುಲ್ಲು ಕತ್ತರಿಸುತ್ತಿದ್ದೆವು.ಮಗಳು ಮನೆಯಲ್ಲಿ ಒಬ್ಬಳೇ ಇದ್ದು ಪಾತ್ರೆ ತೊಳೆಯುತ್ತಿದ್ದಳು.ಸ್ವಲ್ಪ ಹೊತ್ತಿನಲ್ಲಿ ಅಮ್ಮಾ ಎನ್ನುತ್ತಾ ಮನೆಯಿಂದ ಓಡಿಬಂದಳು. ಏನೋ ಕಚ್ಚಿರಬಹುದು ಎಂದುಕೊಂಡು ನಾವು ಕೂಡ ಓಡಿಬಂದೆವು.ನೋಡಿದಾಗ ಹೊಟ್ಟೆಯಲ್ಲಿ ಚೂರಿ ಇತ್ತು.ಜನ ಯಾರೆಂದು ಗೊತ್ತಾಗಿಲ್ಲ.ನಮ್ಮ ಬೊಬ್ಬೆ ಕೇಳಿ ಅಕ್ಕಪಕ್ಕದವರೆಲ್ಲಾ ಓಡಿಕೊಂಡು ಬಂದರು.ಅಲ್ಲಿಂದ ಆಟೋ ಮೂಲಕ ಆಸ್ಪತ್ರೆಗೆ ಕರೆತಂದೆವು.ಆಕೆಗೆ ಇರಿದ ಚೂರಿ ಕೂಡ ನಮ್ಮ ಮನೆಯದ್ದಲ್ಲ.ನನ್ನ ಗಂಡ ಒಂದೂವರೆ ವರ್ಷದ ಹಿಂದೆ ತೀರಿಹೋಗಿದ್ದಾರೆ. ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದೆವು.ಅವಳು ಕೆಲಸಕ್ಕಾಗಿ ಅರ್ಜಿಯನ್ನೂ ಸಲ್ಲಿಸಿದ್ದಳು.ಅವಳೆಲ್ಲಾದರೂ ಹೊರಗಡೆ ಹೋಗಿ ಈ ರೀತಿ ಆಗಿದ್ದರೆ ಅವಳು ಹೋಗಿ ಈ ರೀತಿ ಆಯ್ತು ಎನ್ನಬಹುದು, ಆದರೆ ಇದು ಮನೆಗೇ ಬಂದು ಮಾಡಿರುವ ಕೃತ್ಯ.ಏನಿದ್ದರೂ ಅವಳ ಜೀವ ತೆಗೆಯಬೇಕೆಂದಿರಲಿಲ್ಲ- ಗಿರಿಜಾ, ಮೃತ ಜಯಶ್ರೀಯವರ ತಾಯಿ

ಅಕ್ಕ ಕೆಲವೊಂದು ವಿಚಾರ ಹಂಚಿಕೊAಡಿದ್ದಳು
ಅಕ್ಕ ಬಿಎಸ್ಸಿ ಪದವಿ ಪಡೆದಿದ್ದಳು.ನನ್ನ ಜೊತೆ ತುಂಬಾ ಕ್ಲೋಸ್ ಇದ್ದಳು.ವಿದ್ಯಾಭ್ಯಾಸದ ಬಳಿಕ ಧರ್ಮಸ್ಥಳದ ಕೆಲಸವೊಂದಕ್ಕೆ ತೆರಳುತ್ತಿದ್ದಳು.ಅದಾದ ಬಳಿಕ ಇನ್ನೊಂದು ಕೆಲಸಕ್ಕೆ ಸೇರಿದ್ದಳು.ಬಳಿಕ ಅದನ್ನೂ ಬಿಟ್ಟು ಇತ್ತೀಚಿನ 5-6 ತಿಂಗಳುಗಳಿಂದ ಮನೆಯಲ್ಲೇ ಇದ್ದಳು.ಅವಳ ಫ್ರೆಂಡ್ಸ್ ಸರ್ಕಲ್‌ನ ಪರಿಚಯ ಇದೆ.ನಾನು ಕಾಲೇಜಿಗೆ ಹೋಗಿದ್ದೆ.ನನಗೆ ಕೆಲವೊಂದು ಸಂಶಯವಿತ್ತು.ಅಕ್ಕ ಕೂಡ ಕೆಲವೊಂದು ವಿಚಾರಗಳನ್ನು ನನ್ನ ಜೊತೆಗೆ ಹಂಚಿಕೊಂಡಿದ್ದಳು.ಅದನ್ನು ಪೊಲೀಸರ ಬಳಿ ಹೇಳಿದ್ದೇನೆ-  ಯತೀಶ್, ಮೃತ ಜಯಶ್ರೀಯ ತಮ್ಮ

ಒಂದೆರಡು ಪೆಟ್ಟು ನೀಡಿದ್ದರೂ ಸಮಸ್ಯೆ ಇರಲಿಲ್ಲ
ಬಾವ ಕಳೆದ ವರ್ಷ ತೀರಿಹೋಗಿದ್ದಾರೆ.ಮನೆಯಲ್ಲಿ ನನ್ನ ಸಹೋದರಿ ಮತ್ತು ಅವರ ಇಬ್ಬರು ಮಕ್ಕಳಿದ್ದರು.ನನ್ನ ಮೇಲೆ ಆಕೆಗೆ ತುಂಬಾ ಪ್ರೀತಿಯಿತ್ತು.ನನಗೆ ತುಂಬಾ ಗೌರವ ನೀಡುತ್ತಿದ್ದಳು. ಹೇಳಿದ್ದನ್ನು ಕೇಳುತ್ತಿದ್ದಳು.ಯಾವಾಗಲೂ ಕರೆಮಾಡಿ ಮಾತನಾಡುತ್ತಿದ್ದಳು.ಏನೇ ಸಮಸ್ಯೆ ಇದ್ದರೂ ಒಂದೆರಡು ಪೆಟ್ಟು ನೀಡಿದ್ದರೂ ಸಮಸ್ಯೆ ಇರಲಿಲ್ಲ.ಮಾತನಾಡಿ ಸರಿಪಡಿಸಿಕೊಳ್ಳಬಹುದಿತ್ತು. ಆದರೆ ಜೀವ ತೆಗೆಯಬಾರದಿತ್ತು- ಬಾಬು ನೆಕ್ಕರೆ, ಮೃತ ಜಯಶ್ರೀಯ ಮಾವ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.