ಜ.28ಕ್ಕೆ 30ನೇ ವರ್ಷದ ಪುತ್ತೂರಿನ ಇತಿಹಾಸ ಪ್ರಸಿದ್ಧ ಕೋಟಿ-ಚೆನ್ನಯ ಜೋಡುಕರೆ ಕಂಬಳ

0

ಸುಮಾರು 200 ಜೊತೆ ಕೋಣಗಳು ಭಾಗವಹಿಸುವ ನೀರಿಕ್ಷೆ – 24 ಗಂಟೆಯೊಳಗೆ ಮುಗಿಸುವ ಚಿಂತನೆ

* ವಿಶೇಷ ಆಕರ್ಷಣೆ: ಖ್ಯಾತ ಸಂಗೀತ ನಿರ್ದೇಶಕರು, ನಟ ನಟಿಯರು
* ಸನ್ಮಾನ: ಧಾರ್ಮಿಕ, ಕಂಬಳ, ಕ್ರೀಡಾ, ಓಟಗಾರರಿಗೆ ಸನ್ಮಾನ
* ಮಿಂಚಿನ ಓಟದ ಕೋಣ ‘ಚೆನ್ನ’ ನಿಗೆ ಸನ್ಮಾನ
* 30ನೇ ವರ್ಷಕ್ಕೆ ಸ್ಮರಣ ಸಂಚಿಕೆ ಬಿಡುಗಡೆ
* ಆಕರ್ಷ ವೇದಿಕೆ, ಮನಮೆಚ್ಚುವ ವೀಕ್ಷಕ ವಿವರಣೆ
* ಕೋಣಗಳಿಗೆ ಸುಸಜ್ಜಿತ ಟ್ಯಾಂಕ್‌ನೊಂದಿಗೆ ನೀರಿನ ವ್ಯವಸ್ಥೆ
* ವೀಕ್ಷಕ ಮಹಿಳೆಯರಿಗೆ ಪ್ರತ್ಯೇಕ ಗ್ಯಾಲರಿ
* ಕೋಣಗಳ ಯಜಮಾನರಿಗೆ ಪ್ರತ್ಯೇಕ ಚಪ್ಪರದ ವ್ಯವಸ್ಥೆ

ಪುತ್ತೂರು: ಜ.28 ರಂದು ಇತಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ಗದ್ದೆಯಲ್ಲಿ ಪುತ್ತೂರಿನ ಇತಿಹಾಸ ಪ್ರಸಿದ್ಧ 30 ನೇ ವರ್ಷದ ಕೋಟಿಚೆನ್ನಯ ಜೋಡುಕರೆ ಕಂಬಳ ಜರುಗಲಿದ್ದು, ಸುಮಾರು 200 ಜೊತೆ ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಒಟ್ಟು ಕಾರ್ಯಕ್ರಮವನ್ನು ಜಿಲ್ಲಾ ಕಂಬಳ ಸಮಿತಿ ನಿರ್ಣಯದಂತೆ 24 ಗಂಟೆಯೊಳಗೆ ಮುಗಿಸುವ ಚಿಂತನೆ ಕಂಬಳ ಸಮಿತಿ ಮುಂದಿದೆ ಎಂದು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.


ಕೋಟಿ ಚೆನ್ನಯ ಕಂಬಳದ ಮಾರ್ಗದರ್ಶಕರಾಗಿರುವ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕರಾವಳಿ ಕರ್ನಾಟಕದ ರೈತಾಪಿ ವರ್ಗದ ಅವಿಭಾಜ್ಯ ಅಂಗ ಕಂಬಳವಾಗಿದ್ದು, ಸುಮಾರು 800 ವರ್ಷಗಳಿಂದಲೂ ಕಂಬಳ ಎನ್ನುವ ಕೋಣಗಳ ಓಟದ ಕ್ರೀಡೆಯು ಮೂಲತಃ ಒಂದು ಜಾನಪದ ಕಲೆ, ಅದು ಬೆಳೆದಂತೆ ದೇವರ ಕಂಬಳ, ರಾಜರ ಕಂಬಳ, ಗುತ್ತು, ಭಾವಗಳ ಕಂಬಳ ನವೀನ ರೂಪ ಪಡೆದು ಸಾರ್ವಜನಿಕ ಕಂಬಳವಾಗಿ ರೂಪುಗೊಳ್ಳುತ್ತಿದೆ. ದಿ.ಜಯಂತ ರೈ ಮತ್ತು ಆಗಿನ ಶಾಸಕರಾಗಿದ್ದ ವಿನಯ ಕುಮಾರ್ ಸೊರಕೆ ಮತ್ತು ಸರ್ವ ಕಂಬಳಾಭಿಮಾನಿಗಳ ಸಹಕಾರ ಪಡೆದು ಪ್ರಾರಂಭಿಸಿದ ಈ ಕಂಬಳವನ್ನು ಮತ್ತೆ ಎನ್.ಮುತ್ತಪ್ಪ ರೈ ಅವರು ಮುಂದುವರಿಸಿದರು. ಇದೀಗ ಅವರ ಬಳಿಕ ಚಂದ್ರಹಾಸ ಶೆಟ್ಟಿಯವರು ಮುಂದುವರಿಸಿಕೊಂಡು 29 ವರ್ಷಗಳನ್ನು ಪೂರೈಸಿ 30 ನೇ ವರ್ಷದಲ್ಲಿ ನಡೆಯುತ್ತಿರುವುದು ಸಂತೋಷದ ವಿಚಾರ. ಇದೀಗ ಈ ವರ್ಷದ ಕಂಬಳವನ್ನು ಜ.28 ರಂದು ಬೆಳಿಗ್ಗೆ ಗಂಟೆ 10.35 ರ ಶುಭಮುರ್ಹೂತದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಉದ್ಘಾಟಿಸಲಿದ್ದಾರೆ. ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ಅವರು ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ವಿಶೇಷ ಆಕರ್ಷಣೆ: ಖ್ಯಾತ ಸಂಗೀತ ನಿರ್ದೇಶಕರು, ನಟ ನಟಿಯರು
ಕೋಟಿ ಚೆನ್ನಯ ಜೋಡು ಕರೆ ಕಂಬಳ ಇತಿಹಾಸವುಳ್ಳ ಕಂಬಳವಾಗಿದೆ. ಸಂಜೆ ಗಂಟೆ 6ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೀರ್ತಿಶೇಷ ಎನ್.ಮುತ್ತಪ್ಪ ರೈ ಅವರ ಸ್ಮರಣೆಯೊಂದಿಗೆ ಕೀರ್ತಿಶೇಷ ಜಯಂತ ರೈ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಜಾರ ಗ್ರೂಪ್ಸ್ ಬೆಂಗಳೂರು ಇದರ ಚೇರ್‌ಮೆನ್ ಪ್ರಕಾಶ್ ಶೆಟ್ಟಿ ವಹಿಸಲಿದ್ದು, 30ನೇ ವರ್ಷಕ್ಕೆ ವಿಶೇಷ ಸ್ಮರಣ ಸಂಚಿಕೆಯನ್ನು ರಾಜ್ಯ ಸಹಕಾರ ಮಂಡಲದ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಬಿಡುಗಡೆಗೊಳಿಸಲಿದ್ದಾರೆ.

ಅತಿಥಿಗಳಾಗಿ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್, ಎಐಸಿಸಿ ಕಾರ್ಯದರ್ಶಿ ರೋಝಿ ಜೋನ್, ವಿಧಾನಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಂಜುನಾಥ್ ಭಂಡಾರಿ, ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ಮಧು ಬಂಗಾರಪ್ಪ, ಮಾಜಿ ಸಚಿವ ಬಿ.ರಮಾನಾಥ ರೈ ಸಹಿತ ಹಲವಾರು ಮಂದಿ ಗಣ್ಯರು ಭಾಗವಹಿಸಲಿದ್ದಾರೆ ಎಂದು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅದ್ಯಕ್ಷ ಎನ್ ಚಂದ್ರಹಾಸ ಶೆಟ್ಟಿ ಅವರು ಹೇಳಿದರು.

ಸನ್ಮಾನ:
ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರನ್ನು ಸಭಾ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು. ಧಾರ್ಮಿಕ ಕ್ಷೇತ್ರಕ್ಕೆ ಸಂಬಂಧಿಸಿ ಕಿಲ್ಲೆ ಮೈದಾನದ ಮಹಾಗಣೇಶೋತ್ಸವ ಸಮಿತಿ ಅಧ್ಯಕ್ಷ ಎನ್.ಸುಧಾಕರ್ ಶೆಟ್ಟಿ, ಕಂಬಳ ಕ್ಷೇತ್ರದಲ್ಲಿ ಗುರುತಿಸಿಕೊಂಡ ಅಪ್ಪು ಯಾನೆ ವಲೇರಿಯನ್ ಡೇಸಾ ಅಲ್ಲಿಪಾದೆ, ಕ್ರೀಡಾ ಕ್ಷೇತ್ರದಲ್ಲಿ ಆಕಾಶ್ ಐತಾಳ್, ಹಿರಿಯ ಕಂಬಳ ಓಟಗಾರ ಸತೀಶ್ ದೇವಾಡಿಗ ಅಳದಂಗಡಿ, ಕಂಬಳ ಓಟಗಾರ ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಶ್ರೀಧರ್ ಮಾರೋಡಿ ಅವರನ್ನು ಸನ್ಮಾನಿಸಲಾಗುವುದು. ಕೊಳಚೂರು ಕೊಂಡೊಟ್ಟು ಸುಕುಮಾರ್ ಶೆಟ್ಟಿಯವರ ಪ್ರಸಸ್ತಿ ಪುರಸ್ಕೃತ ಮಿಂಚಿನ ಓಟದ ಕೋಣ ‘ಚೆನ್ನ’ ನಿಗೆ ವಿಶೇವಾಗಿ ಸನ್ಮಾನಿಸಲಾಗುವುದು ಎಂದು ಚಂದ್ರಹಾಸ ಶೆಟ್ಟಿಯವರು ಹೇಳಿದರು.

ಜ.29 ಕ್ಕೆ ಬಹುಮಾನ ವಿತರಣಾ ಸಮಾರಂಭ:
ಜ.29 ಕ್ಕೆ ಕಂಬಳ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ. ಸಮಾರೋಪ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಸಂಸದ ನಳಿನ್ ಕಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಸಹಾಯಕ ಆಯುಕ್ತ ಗಿರೀಶ್ ನಂದನ್ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಚಂದ್ರಹಾಸ ಶೆಟ್ಟಿಯವರು ಹೇಳಿದರು.

ಜಾತಿ ಧರ್ಮಗಳ ಬೇಧವಿಲ್ಲದೆ ಲಕ್ಷಾಂತರ ಮಂದಿ ಭಾಗವಹಿಸುವ ಏಕೈಕ ಕಂಬಳ:
ಕಂಬಳದ ಬಗ್ಗೆ ವಿನೂತನವಾಗಿ ಆಧುನಿಕ ತಂತ್ರಜ್ಞಾನದೊಂದಿಗೆ ‘ಲೇಸರ್ ಫಿನಿಶಿಂಗ್’ ವ್ಯವಸ್ಥೆ ಶೀಘ್ರ ತೀರ್ಪು ನೀಡುವುದಕ್ಕಾಗಿ ಮಾಡಲಾಗುತ್ತಿದೆ. ಅದೇ ರೀತಿ ಸ್ಪರ್ಧೆಯಲ್ಲಿ ಭಾಗವಹಿಸುವ ಕೋಣಗಳಿಗೆ ಸುಸಜ್ಜಿತ ಟ್ಯಾಂಕ್ ನೊಂದಿಗೆ ನೀರಿನ ವ್ಯವಸ್ಥೆ, ಹೊನಲು ಬೆಳಕಿನ ವ್ಯವಸ್ಥೆ, ಸುಸಜ್ಜಿತ ಪ್ರೇಕ್ಷಕರ ಚಪ್ಪರ, ವೀಕ್ಷಕ ಮಹಿಳೆಯರಿಗೆ ಪ್ರತ್ಯೇಕ ಗ್ಯಾಲರಿ, ಆಕರ್ಷಕ ವೇದಿಕೆ, ಮನಮೆಚ್ಚುವ ವೀಕ್ಷಕ ವಿವರಣೆ, ಉತ್ತಮ ಕರೆ ನಿರ್ಮಾಣ, ಕರೆಗೆ ಶುದ್ದ ನೀರಿನ ವ್ಯವಸ್ಥೆ, ಸುಸಜ್ಜಿತ ಸ್ಟಾಲ್‌ಗಳು, ಕೋಣಗಳ ಯಜಮಾನರಿಗೆ ಪ್ರತ್ಯೇಕ ಚಪ್ಪರದ ವ್ಯವಸ್ಥೆ ಸೇರಿದಂತೆ ವರ್ಷಕ್ಕೊಂದು ಹೊಸತನದ ಸೇರ್ಪಡೆಯೊಂದಿಗೆ ಕಂಬಳ ಕ್ಷೇತ್ರದಲ್ಲೇ ಶ್ರೇಷ್ಠ ಕಂಬಳ ಎಂಬ ಹೆಸರನ್ನು ಪಡೆದಿದ್ದು, ಜಾತಿ, ಧರ್ಮಗಳ ಬೇಧವಿಲ್ಲದೆ ಲಕ್ಷಾಂತರ ಜನರು ಭಾಗವಹಿಸುವ ಏಕೈಕ ಕ್ರೀಡೆ ಪುತ್ತೂರು ಕಂಬಳ ಎಂದ ಅವರು ಪುತ್ತೂರಿನ ಕಂಬಳಕ್ಕೆ ಲಕ್ಷಾಂತರ ಮಂದಿ ಪ್ರೇಕ್ಷಕರೂ ಹಲವಾರು ವಿದೇಶಿಯರು ಕೂಡಾ ಭಾಗವಹಿಸುತ್ತಿರುವುದು ಕಂಬಳಕ್ಕೆ ಪ್ರತಿಷ್ಠೆ ತಂದಿದೆ ಎಂದು ಚಂದ್ರಹಾಸ ಶೆಟ್ಟಿಯವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ, ಕೋಶಾಧಿಕಾರಿ ಈಶ್ವ ಭಟ್ ಪಂಜಿಗುಡ್ಡೆ, ತೀರ್ಪುಗಾರ ನಿರಂಜನ ರೈ ಮಠಂತಬೆಟ್ಟು, ಕೃಷ್ಣಪ್ರಸಾದ ಆಳ್ವ ಸಹಿತ ಪ್ರಮುಖರು ಉಪಸ್ಥಿತರಿದ್ದರು.

ವಿಶೇಷ ಆಕರ್ಷಣೆ
ಜ.28ರಂದು ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ಬಿಗ್‌ಬಾಸ್ ವಿಜೇತ ಚಿತ್ರನಟ ರೂಪೇಶ್ ಶೆಟ್ಟಿ, ನಿರ್ಮಾಪಕ ರವಿ ರೈ ಕಳಸ, ವಿಕ್ರಾಂತ್ ರೋಣ ಖ್ಯಾತಿಯ ನಟ ವಜ್ರದೀರ್ ಜೈನ್, ಡೈಜಿ ವರ್ಲ್ಡ್‌ನ ವಾಲ್ಟರ್ ನಂದಳಿಕೆ, ಖ್ಯಾತ ನಟಿ ಅದಿತಿ ಪ್ರಭುದೇವ, 777 ಚಾರ್ಲಿ ಚಿತ್ರ ನಟಿ ಸಂಗೀತ ಶೃಂಗೇರಿ, ನಟಿ ಸಾನಿಯ ಅಯ್ಯರ್, ನಟ ದೀಪಕ್ ರೈ ಪಾಣಾಜೆ ಅವರು ವಿಶೇಷ ಆಕರ್ಷಣೆಯಾಗಿ ಸಮಾರಂಭದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಂದ್ರಹಾಸ ಶೆಟ್ಟಿಯವರು ಹೇಳಿದರು.

ಬಹುಮಾನಗಳು
ಕಂಬಳಕ್ಕೆ ಆರು ವಿಭಾಗಗಳ ಕೋಣಗಳು ಭಾಗವಹಿಸಲಿದ್ದು, ಕನೆಹಲಗೆ, ಅಡ್ಡಹಲಗೆ, ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ ವಿಭಾಗದ ಸ್ಪರ್ಧೆಗಳಿವೆ. ಪ್ರಧಾನ ತೀರ್ಪುಗಾರರಾಗಿ ಕೆ.ಗುಣಪಾಲ ಕಡಂಬ ಮೂಡಬಿದ್ರೆ ಮತ್ತು ಯಂ.ರಾಜೀವ ಶೆಟ್ಟಿ ಎಡ್ತೂರು ಅವರು ಭಾಗವಹಿಸಲಿದ್ದಾರೆ. ಕನೆಹಲಗೆ, ಹಗ್ಗ ಹಿರಿಯ, ನೇಗಿಲು ಹಿರಯ ಪ್ರಥಮ ಬಹುಮಾನವಾಗಿ 2 ಪವನ್ ಚಿನ್ನ, ದ್ವಿತೀಯ 1 ಪವನ್ ಚಿನ್ನ, ಅಡ್ಡಹಲಗೆ, ಹಗ್ಗ ಕಿರಿಯ, ನೇಗಿಲು ಕಿರಿಯ ಕ್ಕೆ ಪ್ರಥಮ ಬಹುಮಾನವಾಗಿ 1 ಪವನ್ ಚಿನ್ನ, ದ್ವಿತೀಯ ಬಹುಮಾನವಾಗಿ ಅರ್ಧಪವನ್ ಚಿನ್ನ, ಹಾಗು ವಿಜೇತರಿಗೆ ‘ಕೋಟಿ ಚೆನ್ನಯ ಟ್ರೋಪಿ’ ನೀಡಲಾಗುವುದು. ವಿಜೇತ ಕೋಣಗಳ ಓಟಗಾರಿಗೂ ಬಹುಮಾನವಿದೆ. ಈ ಹಿಂದಿನ ಕಾಲದಲ್ಲಿ ದೇವರಮಾರು ಗದ್ದೆಯಲ್ಲಿ ಕಂಬಳ ನಡೆಯುತ್ತಿದ್ದ ಸಂದರ್ಭದಲ್ಲಿ ಬಹುಮಾನವಾಗಿ ಬಾಳೆಗೊನೆ, ಸೀಯಾಳ ಗೊನೆ ಇತ್ಯಾದಿ ನೀಡುತ್ತಿರುವ ಕುರಿತು ಹಿರಿಯರಿಂದ ತಿಳಿದು ಕೊಂಡಿದ್ದೇವೆ.
ಚಂದ್ರಹಾಸ ಶೆಟ್ಟಿ ಅಧ್ಯಕ್ಷರು ಕೋಟಿಚೆನ್ನಯ ಕಂಬಳ ಸಮಿತಿ

LEAVE A REPLY

Please enter your comment!
Please enter your name here