ಕೊಂಬೆಟ್ಟು ನಿವಾಸಿಯಾಗಿದ್ದ ವಿದುಷಿ ಮಾರ್ಪಳ್ಳಿ ಪದ್ಮಾವತಿ ಎಸ್ ರಾವ್ ಜನ್ಮಶತಾಬ್ದಿಗೆ ಅಂಚೆ ಮುದ್ರೆಯ ವಿಶೇಷ ಲಕೋಟೆ ಬಿಡುಗಡೆ

0

ಪುತ್ತೂರು: ಕೊಂಬೆಟ್ಟು ನಿವಾಸಿಯಾಗಿದ್ದ ಬಾಲಭಾರತಿ, ಹರಿಕೀರ್ತನಾ ವಿದುಷಿ ಮಾರ್ಪಳ್ಳಿ ಪದ್ಮಾವತಿ ಎಸ್.ರಾವ್ ಅವರ ಜನ್ಮಶತಾಬ್ದಿಯ ಅಂಗವಾಗಿ ತನ್ನದೇ ವೈಶಿಷ್ಟವುಳ್ಳ ಅಂಚೆ ಮುದ್ರೆಯೊಂದಿಗೆ ವಿಶೇಷ ಲಕೋಟೆಯನ್ನು ಪುತ್ತೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಡಾ. ಏಂಜಲ್ ರಾಜ್ (ಐಪಿಒಎಸ್) ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಮಾರ್ಪಳ್ಳಿ ಪದ್ಮಾವತಿ ಎಸ್ ರಾವ್ ರವರ ಭಾವಚಿತ್ರವುಳ್ಳ ವಿಶೇಷ ಅಂಚೆ ಚೀಟಿಯನ್ನೂ ಅನಾವರಣಗೊಳಿಸಲಾಯಿತು.


ವಿಶೇಷ ವ್ಯಕ್ತಿಗಳ / ಮರೆಯಲಾಗದ ಕ್ಷಣಗಳ / ಹಾಗೆಯೇ ವಿರಳಾತಿವಿರಳ ಪ್ರದೇಶಗಳ ಸವಿನೆನಪಿಗಾಗಿ ಸ್ಮರಣೀಯ ಅಂಚೆ ಚೀಟಿಯನ್ನು ಮುದ್ರಿಸುವ ಮೂಲಕ, ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸುವ ಮೂಲಕ, ನನ್ನ ಅಂಚೆ ಚೀಟಿ ಎಂಬ ವಿಶೇಷ ಪರಿಕಲ್ಪನೆಯ ಮೂಲಕ ತನ್ನದೇ ಅಂಚೆ ಚೀಟಿಯನ್ನು ಮುದ್ರಿಸುವ ಮೂಲಕ, ಚಿತ್ರೀಕೃತ ಅಂಚೆ ಕಾರ್ಡುಬಿಡುಗಡೆಗೊಳಿಸುವ ಮೂಲಕ, ಶಾಶ್ವತ ಚಿತ್ರೀಕೃತ ಅಂಚೆ ಅಚ್ಚು ಪರಿಚಯಿಸುವ ಮೂಲಕ ಭಾರತೀಯ ಅಂಚೆ ಇಲಾಖೆಯು ತನ್ನ ಸೇವೆಯನ್ನು ಜನಮಾನಸದಲ್ಲಿ ಹರ್ಷವನ್ನು ವರ್ಧಿಸುತ್ತಿರುವುದಕ್ಕೆ ಜ.30ರಂದು ನಡೆದ ಕಾರ್ಯಕ್ರಮ ಸಾಕ್ಷಿಯಾಗಿದೆ.

ಬಾಲಭಾರತಿ ಎಂದು ಬಿರುದಾಂಕಿತರಾದ ಶ್ರೀಮತಿ ಮಾರ್ಪಳ್ಳಿ ಪದ್ಮಾವತಿ ಎಸ್ ರಾವ್ ಅವರು ಹರಿಕಥಾ ವಿದುಷಿಯಾಗಿ ಜನಮನವನ್ನು ಸೆಳೆದವರು. ತನ್ನ ಒಂಭತ್ತನೆಯೆ ವಯಸ್ಸಿನಿಂದಲೇ ಹರಿಕಥೆಯನ್ನು ಆರಂಭಿಸಿ ನಾಡಿನ ಮೂಲೆ ಮೂಲೆಯಲ್ಲೂ ಕೂಡಾ ಹರಿಕಥಾಮೃತವನ್ನು ವಿತರಿಸಿದರು. ಇವರ ಜನ್ಮ ಶತಮಾನೋತ್ಸವದ ಸ್ಮರಣೆಗಾಗಿ ಈ ವಿಶೇಷ ಲಕೋಟೆಯನ್ನು ಬಿಡುಗಡೆಗೊಳಿಸಲಾಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ನಗರಸಭೆ ಅಧ್ಯಕ್ಷ ಕೆ..ಜೀವಂಧರ್ ಜೈನ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ್ ರಾವ್, ಪದ್ಯಾಣ ಶಂಕರನಾರಾಯಣ ಭಟ್ ಉಪಸ್ಥಿತರಿದ್ದರು.

ಕೊಂಬೆಟ್ಟು ರಸ್ತೆಯೊಂದಕ್ಕೆ ಪದ್ಮಾವತಿ ಎಸ್ ರಾವ್ ನಾಮಕರಣ:

ಕಾರ್ಯಕ್ರಮದಲ್ಲಿ ಶ್ರೀಮತಿ ಎನ್. ವಿಜಯಲಕ್ಷ್ಮಿ ಬಿ ರಾವ್ ರಿಂದ ವಿರಚಿತ ’ಶತದಳ ಪದ್ಮ’ ಎಂಬ ಪುಸ್ತಕವನ್ನು ಕೇಶವಪ್ರಸಾದ್ ಮುಳಿಯ ಬಿಡುಗಡೆಗೊಳಿಸಿದರು. ವಿದುಷಿಯವರ ಭಾವಚಿತ್ರವಿರುವ ರಜತನಾಣ್ಯವನ್ನು ನಗರಸಭೆ ಅಧ್ಯಕ್ಷ ಕೆ. ಜೀವಂಧರ್ ಜೈನ್ ಬಿಡುಗಡೆಗೊಳಿಸಿದರು. ವಿದುಷಿಯವರು ವಾಸಿಸುತ್ತಿದ್ದಕೊಂಬೆಟ್ಟು ಪ್ರದೇಶದಲ್ಲಿರುವ ರಸ್ತೆಗೆ ’ಹರಿಕೀರ್ತನಾ ವಿದುಷಿ ಎಮ್ ಪದ್ಮಾವತಿ ಎಸ್ ರಾವ್ ಮಾರ್ಗ’ ಎಂದು ನಗರಸಭಾ ಸದಸ್ಯ. ಪಿ.ಜಿ ಜಗನ್ನಿವಾಸ್ ರಾವ್ ರವರು ನಾಮಕರಣ ಮಾಡಿದರು. ವಿದುಷಿ ಮಾರ್ಪಳ್ಳಿ ಪದ್ಮಾವತಿ ಎಸ್.ರಾವ್ ಕುಟುಂಬ ಬಾಂಧವರು ತಮ್ಮ ಮಾತೃಶ್ರೀಯ ಸವಿನೆನಪಿಗೋಸ್ಕರ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಿದರು. ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಡಾ. ಏಂಜಲ್ ರಾಜ್ ಅವರನ್ನು ಮಾರ್ಪಳ್ಳಿ ಗಂಗಾಧರ್ ರಾವ್ ರವರು ಸನ್ಮಾನಿಸಿದರು. 

ಎನ್. ವಿಜಯಲಕ್ಷ್ಮಿ ಬಿ ರಾವ್ ಮತ್ತು ಸೌಜನ್ಯರವರ ಹರಿಕಥಾ ಶೈಲಿಯ ಪ್ರಾರ್ಥಿಸಿದರು. ನಂದಳಿಕೆ ಬಾಲಚಂದ್ರ ರಾವ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪದ್ಯಾಣ ಶಂಕರನಾರಾಯಣ ಭಟ್, ಪಿ.ಜಿ ಜಗನ್ನಿವಾಸ್ ರಾವ್ ಹಾಗೂ ಎಮ್. ಶಾಂತಾರಾಮ ರಾವ್ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಿದುಷಿಯವರ ಪುತ್ರ ಎಂ. ಚಂದ್ರಶೇಖರ್ ರಾವ್ ರವರು ಶೃಂಗೇರಿ ಜಗದ್ಗುರು, ಡಾ. ಡಿ ವೀರೇಂದ್ರ ಹೆಗ್ಗಡೆಯವರಿಂದ ಹಾಗೂ ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್ ರವರಿಂದ ನೀಡಲ್ಪಟ್ಟ ಸಂದೇಶವನ್ನು ವಾಚಿಸಿದರು. ಮೊಮ್ಮಗಳಾದ ಸೌಜನ್ಯ ನಂದಳಿಕೆ ಅತಿಥಿಗಳನ್ನು ಗೌರವಿಸಿದರು. ಪುತ್ರರಾದ ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಂ ರಾಮಕೃಷ್ಣರಾವ್ ರವರು ವಂದಿಸಿದರು. ಇನ್ನೋರ್ವ ಪುತ್ರ ಗಂಗಾಧರ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here