ಎ.8: ಮಾಂಗಲ್ಯ ಹರಪ್ರದಾಯಕ ಮಜಲುಮಾರು ಉಮಾಮಹೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವದ ಸಂಭ್ರಮ

0

ಪುತ್ತೂರು: ಮಾಂಗಲ್ಯ ಹರಪ್ರದಾಯಕ, ಸಂತಾನಪ್ರದಾಯಕ ಕ್ಷೇತ್ರ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವವು ಎ.8 ಹಾಗೂ9 ರಂದು ವಿವಿಧ ವೈದಿಕ, ತಾಂತ್ರಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

 

ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ನಡೆಯುವ ಜಾತ್ರೋತ್ಸವದಲ್ಲಿ ಎ.೮ರಂದು ಬೆಳಿಗ್ಗೆ ನಾಗನ ಕಟ್ಟೆಯಲ್ಲಿ ಆಶ್ಲೇಷ ಬಲಿ, ನಾಗತಂಬಿಲ, ಅಭಿಷೇಕ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಕೆಮ್ಮಿಂಜೆ ಉಪ್ಪಳ ಬ್ರಹ್ಮಶ್ರೀ ಲಕ್ಷ್ಮೀ ತಂತ್ರಿಯವರ ಮನೆಯಿಂದ ಭಜನಾ ಮಂಗಲೋತ್ಸವದ ಮೆರವಣಿಗೆಯು ದೇವಸ್ಥಾನಕ್ಕೆ ಆಗಮಿಸಲಿದೆ. ರಾತ್ರಿ ಕ್ಷೇತ್ರದಲ್ಲಿ ಪಾರ್ವತಿ ಸ್ವಯಂವರ ಪೂಜೆ, ರಂಗಪೂಜೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ಎ.೯ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಮಹಾಗಣಪತಿ ಹೋಮ, ಪಂಚವಿಂಶತಿ ಕಲಶಪೂಜೆ, ಏಕದಶರುದ್ರಾಭಿಷೇಕ, ದೈವಗಳಿಗೆ ತಂಬಿಲ, ದೇವರಿಗೆ ಮಹಾಪೂಜೆ, ರಾತ್ರಿ ದೈವಗಳ ಭಂಡಾರ ತೆಗೆಯುವುದು, ಬಳಿಕ ದೇವರ ಬಲಿ ಉತ್ಸವ, ವಸಂತಕಟ್ಟೆ ಪೂಜೆ, ದರ್ಶನ ಬಲಿ, ಬಟ್ಟಲುಕಾಣಿಕೆ, ಪ್ರಸಾದ ವಿತರಣೆ, ವೈದಿಕ ಮಂತ್ರಾಕ್ಷತೆ, ಸಾರ್ವಜನಿಕ ಅನ್ನಸಂತರ್ಪಣೆ, ಕ್ಷೇತ್ರದ ದೈವಗಳ ನೇಮ ನಡೆಯಲಿದೆ.

ಮಾಂಗಲ್ಯ ಹರಪ್ರದಾಯಕ ಉಮಾಮಹೇಶ್ವರ:
ಮಜಲುಮಾರು ಕ್ಷೇತ್ರ ಉಮಾ ಹಾಗೂ ಮಹೇಶ್ವರರು ಜತೆಯಾಗಿ ಅನುಗ್ರಹಿಸುವ ಅಪೂರ್ವ ಕ್ಷೇತ್ರವಾಗಿದೆ. ಇಲ್ಲಿ ಪಾರ್ವತಿ ಸ್ವಯಂವರ ಪೂಜೆ ದೇವರಿಗೆ ವಿಶೇಷ ಸೇವೆಯಾಗಿದೆ. ಕ್ಷೇತ್ರದಲ್ಲಿ ಸ್ವಯಂವರ ಪೂಜೆ ಮಾಡಿಸಿದ ಭಕ್ತಾದಿಗಳಿಗೆ ಮಾಂಗಲ್ಯ ಭಾಗ್ಯ ಲಭಿಸಿದ ಹಲವು ಸಾಕ್ಷಿಗಳಿವೆ. ಮಾಂಗಲ್ಯ ಭಾಗ್ಯ ಕರುಣಿಸುವ ಪಾರ್ವತಿ ಸ್ವಯಂವರ ಪೂಜೆಗೆ ಮಜಲುಮಾರು ಕ್ಷೇತ್ರವು ದ.ಕ ಜಿಲ್ಲೆಯಲ್ಲಿಯೇ ಪ್ರಸಿದ್ಧಿ ಪಡೆದಿದೆ. ಜೊತೆಗೆ ಸಂತಾನವಿಲ್ಲದವರು ಕ್ಷೇತ್ರದಲ್ಲಿ ಬಂದು ಪ್ರಾರ್ಥಿಸಿದರೆ ಸಂತಾನ ಪ್ರಾಪ್ತಿಯಾದ ನಿದರ್ಶನಗಳೂ ಇದೆ. ಕ್ಷೇತ್ರದಲ್ಲಿ ಜಾತ್ರೋತ್ಸವದ ಪ್ರಥಮ ದಿನ ಸಂಜೆ ಪಾರ್ವತಿ ಸ್ವಯಂವರ ಪೂಜೆ ನಡೆಯುತ್ತಿದೆ. ಇದಲ್ಲದೆ ವಸಂತ ಕಟ್ಟೆ ಪೂಜೆ, ರಂಗಪೂಜೆ, ದುರ್ಗಾನಮಸ್ಕಾರ ಪೂಜೆ, ಮೃತ್ಯುಂಜಯ ಹೋಮ, ಏಕಾದಶ ರುದ್ರಾಭಿಷೇಕ ಮೊದಲಾದ ವಿಶೇಷ ಸೇವೆಗಳು ಕ್ಷೇತ್ರದಲ್ಲಿ ನಡೆಯುತ್ತಿದೆ.

ಭಜನೆ ಸಂಕೀರ್ತನೆ ಮೂಲಕ ಪ್ರತಿ ಮನೆಗೆ ಆಮಂತ್ರಣ:
ಮಜಲುಮಾರು ಕ್ಷೇತ್ರದ ಜಾತ್ರೋತ್ಸವದ ಆಮಂತ್ರಣವನ್ನು ಗ್ರಾಮದ ಪ್ರತಿ ಮನೆಗಳನ್ನು ತಲುಪಿಸುವುದು ಈ ಕ್ಷೇತ್ರದ ವಿಶೇಷತೆಯಾಗಿದೆ. ಕ್ಷೇತ್ರದ ಶ್ರೀ ಉಮಾಮಹೇಶ್ವರ ಭಜನ ಮಂಡಳಿಯ ಮುಖಾಂತರ ಜ.14ರ ಮಕರ ಸಂಕ್ರಮಣದ ದಿನ ಭಜನಾ ಸಂಕೀರ್ಥನೆ ಚಾಲನೆ ನೀಡಿದ ಬಳಿಕ ನಿರಂತರವಾಗಿ ೮೩ ದಿನಗಳ ಕಾಲ ಗ್ರಾಮ ಪ್ರತಿ ಮನೆಗಳಿಗೆ ತೆರಳಿ ಅಲ್ಲಿ ಭಜನೆ ಮಾಡಿ ಆಮಂತ್ರಣ ನೀಡಲಾಗುತ್ತಿದೆ. ಗ್ರಾಮದ ಸುಮಾರು 1500 ಮನೆಗಳಲ್ಲಿ ಸಂಕೀರ್ಥನೆ ನಡೆದು ಎ.೮ರಂದು ಭಜನೆ ಸಂಕೀರ್ಥನೆಯ ಮಂಗಳೋತ್ಸವವು ದೇವಸ್ಥಾನದಲ್ಲಿ ಪ್ರತಿವರ್ಷವೂ ನಡೆಯುತ್ತಿರುವುದು ಇಲ್ಲಿನ ವಿಶೇಷತೆಯಾಗಿದೆ.

ಮಹಾಲಿಂಗೇಶ್ವರನ ಭೇಟಿ:
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜಾತ್ರೋತ್ಸವದ ಅವಭೃತ ಸವಾರಿಯ ದಿನ ಮಜಲುಮಾರು ಶ್ರೀ ಉಮಾಮಹೇಶ್ವರ ಕ್ಷೇತ್ರಕ್ಕೆ ಭೇಟಿ ನೀಡಿ ಕಟ್ಟೆಪೂಜೆ ಸ್ವೀಕರಿಸುತ್ತಾರೆ.

ಎ.7 ನಾಗಪ್ರತಿಷ್ಠೆ;
ಕ್ಷೇತ್ರದಲ್ಲಿ ನಿರ್ಮಾಣಗೊಂಡಿರು ನಾಗನಕಟ್ಟೆಯಲ್ಲಿ ನಾಗಪ್ರತಿಷ್ಠೆಯು ಎ.೭ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here