- ಪುಣ್ಯದ ಫಲಕ್ಕಾಗಿ ಧರ್ಮ ಕಾರ್ಯ ಮಾಡಬೇಕು -ಎಸ್ ಅಂಗಾರ
ಕಾಣಿಯೂರು: ಕಾರ್ಯಗಳು ಅನುಷ್ಠಾನವಾದಾಗ ವಿಶ್ವಾಸ ವೃದ್ದಿಯಾಗುತ್ತದೆ. ಪರಸ್ಪರ ನಂಬಿಕೆ ಕಳೆದುಕೊಳ್ಳದೆ ಮುಂದುವರಿದಾಗ ಯಶಸ್ಸು ದೊರೆಯುತ್ತದೆ. ನಮ್ಮ ಪೂರ್ವಜರು ಮಾಡಿದ ಪುಣ್ಯದ ಫಲವನ್ನು ಇವತ್ತು ಅನುಭವಿಸುತ್ತಿದ್ದೇವೆ, ಆದರೆ ನಾವು ಮುಂದಿನ ಪೀಳಿಗೆಗೆ ಪುಣ್ಯವನ್ನು ಸಂಪಾದಿಸಬೇಕು ಅದಕ್ಕಾಗಿ ಧರ್ಮದ ಕಾರ್ಯವನ್ನು ಹೆಚ್ಚು ಹೆಚ್ಚಾಗಿ ಮಾಡಬೇಕು ಎಂದು ಮೀನುಗಾರಿಕೆ ಬಂದರು ಮತ್ತು ಓಳನಾಡು ಜಲಸಾರಿಗೆ ಇಲಾಖಾ ಸಚಿವ ಎಸ್ ಅಂಗಾರ ಹೇಳಿದರು.
ಅವರು ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಅಷ್ಠಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಎ.೮ ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು. ದೇವರ ಮೇಲೆ ನಂಬಿಕೆ ಇದ್ದರೆ ಮಾತ್ರ ದೇವರು ಮನುಷ್ಯನ ಸಂಬಂಧ ಶಾಶ್ವತವಾಗಿರುತ್ತದೆ. ಹಿಂದೂ ಧಾರ್ಮಿಕ ಆಚರಣೆಗಳು ಮೂಢನಂಬಿಕೆಯಲ್ಲ. ಧರ್ಮಾಚರಣೆಯಲ್ಲಿ ವಿಜ್ಞಾನದ ಸಾರವಿದೆ. ನಮಗೆ ದೇವರ ಮೇಲೆ ಭಕ್ತಿ ಮೂಡಿದಾಗ ಮಾತ್ರ ನಮ್ಮ ಸಂಪಾದನೆಯನ್ನು ಸಮಾಜಕ್ಕೆ ನೀಡಲು ಸಾಧ್ಯವಾಗುತ್ತದೆ ಧರ್ಮಾಚರಣೆಗಳು, ದೇವಸ್ಥಾನದ ರೀತಿ ನೀತಿಗಳ ಬಗ್ಗೆ ಹಿರಿಯರು ಅದರದ್ದೇ ಆದ ಪರಿಕಲ್ಪನೆಗಳೊಂದಿಗೆ ರೂಪುರೇಷೆಗಳನ್ನು ನೀಡಿದ್ದಾರೆ, ಎಷ್ಟೋ ವರ್ಷಗಳ ಹಿಂದೆ ಮಾಡಿದ ಶಾಸ್ತ್ರಗಳು ವೈಜ್ಞಾನಿಕತೆಯಿಂದ ಕೂಡಿದೆ. ಆದರೆ ನಮಗೆ ಅದನ್ನು ಅಳವಡಿಸಿಕೊಳ್ಳಲು ಆಗುತ್ತಿಲ್ಲ. ಈ ಪ್ರಪಂಚದ ಪ್ರತಿಯೊಂದು ಆಗುಹೋಗುಗಳಿಗೆ ಒಂದು ಶಕ್ತಿಯು ಕಾರಣಿಕರ್ತವಾಗಿದೆ ಎಂದ ಸಚಿವರು ದೇವಸ್ಥಾನದ ತಡೆಗೋಡೆ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿಯ ಅನುದಾನದ ಭರವಸೆ ನೀಡಿದರು.
ಪ್ರತಿಯೊಬ್ಬ ಜನತೆಯ ಅಭಿಮಾನದಿಂದ ಕಾರ್ಯಕ್ರಮ ಯಶಸ್ವಿ- ಸವಣೂರು ಸೀತಾರಾಮ ರೈ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು, ೨೦೦೨ರಲ್ಲಿ ಕಷ್ಟದ ಸಮಯದಲ್ಲಿಯೂ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವವು ಯಶಸ್ವಿಯಾಗಿ ನಡೆದಿತ್ತು. ಕುದ್ಮಾರು ಗ್ರಾಮದ ಯುವಕರ ಮತ್ತು ಇಲ್ಲಿನ ಪ್ರತಿಯೊಬ್ಬ ಜನತೆಯ ಅಭಿಮಾನದಿಂದ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿದೆ. ಇಲ್ಲಿನ ಸೇತುವೆ ನಿರ್ಮಾಣದ ಬಳಿಕ ಗ್ರಾಮವು ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ ಎಂದರು.
ಸಂಪ್ಯ ಅಕ್ಷಯ ಕಾಲೇಜು ಸಂಚಾಲಕ ಜಯಂತ ನಡುಬೈಲು, ಸವಣೂರು ಮುಗೇರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಕಿನಾರ, ಕುಂಬ್ಲಾಡಿ ಶ್ರೀ ಕುಕ್ಕೆನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನೇಮಣ್ಣ ಗೌಡ ಅಂಬುಲ, ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಅನುವಂಶೀಯ ಮೊಕ್ತೇಸರರಾದ ಪ್ರವೀಣ್ ಕುಮಾರ್ ಕೆಡೆಂಜಿ ಶುಭಹಾರೈಸಿದರು. ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಸ್ವಾಗತದೊಂದಿಗೆ ಪ್ರಾಸ್ತಾವಿಕ ಮಾತನಾಡಿ, ಕುಮಾರಧಾರ ನದಿತಟದಲ್ಲಿರುವ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವವು ಊರವರ ಶಕ್ತಿಮೀರಿದ ಪರಿಶ್ರಮದಿಂದ ಯಶಸ್ವಿಯಾಗಿ ಸಂಭ್ರಮದಿಂದ ನಡೆಯುತ್ತಿದೆ. ದೇವಸ್ಥಾನದ ಸಮೀಪದಲ್ಲಿಯೇ ಇರುವ ಧರೆಯು ಮಳೆಗಾಲದಲ್ಲಿ ಕೊಚ್ಚಿಕೊಂಡು ಹೋಗುವುದರಂದ ಅಪಾಯದ ಸನ್ನಿವೇಶದಲ್ಲಿzವೆ. ಈ ನಿಟ್ಟಿನಲ್ಲಿ ಧರೆಗೆ ತಡೆಗೋಡೆ ನಿರ್ಮಾಣದ ಅಗತ್ಯವಿದೆ ಎಂದರು. ಜ್ಞಾನೇಶ್ವರಿ ಬರೆಪ್ಪಾಡಿ, ಅಂಚನ್ ಡೆಬ್ಬೆಲಿ, ರಾಧಾ ಟೈಲರ್, ನವ್ಯ ಅನ್ಯಾಡಿ, ಪುರುಷೋತ್ತಮ ಬರೆಪ್ಪಾಡಿ, ಚಿದಾನಂದ ಕೆರೆನಾರು, ಪದ್ಮನಾಭ ದೋಳ, ವಿಶ್ವನಾಥ ಮಡಿವಾಳ ಅತಿಥಿಗಳಿಗೆ ತಾಂಬೂಲ ನೀಡಿ ಗೌರವಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಯಶೋಧರ್ ಕೆಡೆಂಜಿಕಟ್ಟ ವಂದಿಸಿದರು. ಶಿಕ್ಷಕ ಗಣೇಶ್ ನಡುವಾಲ್ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ: ಕಾರ್ಯಕ್ರಮದಲ್ಲಿ ಚಂದ್ರಶೇಖರ್ ಬರೆಪ್ಪಾಡಿ, ಜನಾರ್ದನ ಗೌಡ ಕೂರ, ಸತ್ಯನಾರಾಯಣ ಗೌಡ, ಕುಶಾಲಪ್ಪ ಗೌಡ ಕಾರ್ಲಾಡಿ, ವಿಠಲ ಗೌಡ ಕಾಪೆಜಾಲು, ಪ್ರಕಾಶ್ ಭಟ್ ಬರೆಪ್ಪಾಡಿ, ಲೋಕನಾಥ ವಜ್ರಗಿರಿ, ಸೋಮಪ್ಪ ಗೌಡ ಅನ್ಯಾಡಿ ಇವರನ್ನು ಸನ್ಮಾನಿಸಲಾಯಿತು.
ಇಂದು ದೇವಸ್ಥಾನದಲ್ಲಿ
ಎ 9ರಂದು ಬೆಳಿಗ್ಗೆಯಿಂದ ಸಂಜೆ ತನತ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಸಂಜೆ ಶಾಂತಿಮೊಗರು ಶ್ರಿ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಬಳಿಕ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರಿ ಧರ್ಮಪಾಲ ನಾಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ರಾಜ್ಯ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖಾ ಸಚಿವ ಸುನಿಲ್ ಕುಮಾರ್ ವಿ, ಸಂಸದ, ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ರಾಜ್ಯ ಒಕ್ಕಲಿಗ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಡಾ. ರೇಣುಕಾ ಪ್ರಸಾದ್ ಕೆ.ವಿ, ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಕಾರ್ಕಳ ಅಜೆಕಾರು ಮದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ| ಸುಧಾಕರ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ಧಾರೆ. ರಾತ್ರಿ ಮನೋರಂಜನಾ ಕಾರ್ಯಕ್ರಮದಲ್ಲಿ ಮಜಾ ಟಾಕೀಸ್ ಖ್ಯಾತಿಯ ಮೋಹನ್ ರೈ ಕಾರ್ಕಳ ಮತ್ತು ಬಳಗದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.