ನದಿಯಲ್ಲಿ ಡ್ರಿಜ್ಜಿಂಗ್ ಯಂತ್ರ, ಹಿಟಾಚಿ ಬಳಕೆ – ಉಪ್ಪಿನಂಗಡಿಯ ಕುಮಾರಧಾರ ನದಿಯಲ್ಲಿ ಅಕ್ರಮ ಮರಳುಗಾರಿಕೆಯ ಮಹಾಪೂರ!

0

  • 3 ಕಡೆಯಲ್ಲಿ ಅಡ್ಡೆ ನಿರ್ಮಿಸಲಾಗಿ ಮರಳುಗಾರಿಕೆ
  • 2 ಕಡೆಯಲ್ಲಿ ಗ್ರಾಮಸ್ಥರಿಂದ ಆಕ್ಷೇಪ, ತಡೆ
  • ಗೋಣಿ ಚೀಲದಲ್ಲಿ ತುಂಬಿಸಿಯೂ ಸಾಗಾಟ
  • ಮರಳು ಲಾರಿಯಿಂದಾಗಿ ರಸ್ತೆಗಳು
  • ಕುಲಗೆಟ್ಟಿದೆ-ಧನಂಜಯ ಕುಮಾರ್

ಉಪ್ಪಿನಂಗಡಿ: ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಟ್ಟಿಬೈಲ್-ಕುರ್ಪೇಲು ಎಂಬಲ್ಲಿ ಕುಮಾರಧಾರ ನದಿಯಿಂದ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ವ್ಯಾಪಕ ದೂರು ವ್ಯಕ್ತವಾಗಿದೆ. ಕುಂತೂರು, ಕೊಲ ಕಡೆಯಿಂದ ಹರಿದು ಬರುವ ಕುಮಾರಧಾರ ನದಿಯಲ್ಲಿ ನಟ್ಟಿಬೈಲ್-ಕುರ್ಪೇಲು ಪರಿಸರದಲ್ಲಿ 3ಕಡೆಯಲ್ಲಿ ನದಿಯಿಂದ ಮರಳು ಸಂಗ್ರಹಿಸಿ ಹಿಟಾಚಿ ಮೂಲಕ ಲಾರಿಗಳಿಗೆ ಹಾಕಿ ಸಾಗಿಸಲಾಗುತ್ತಿದೆ. ಹಗಲು ಮತ್ತು ರಾತ್ರಿಯಲ್ಲಿಯೂ ಮರಳು ತೆಗೆಯಲಾಗುತ್ತಿದ್ದು, ದಿನನಿತ್ಯ 40ರಿಂದ 50 ಲಾರಿ ಮರಳು ಅಕ್ರಮವಾಗಿ ಸಾಗಾಟ ನಡೆಯುತ್ತಿದ್ದು, ಸರ್ಕಾರದ ಬೊಕ್ಕಸಕ್ಕೆ ದಿನಂಪ್ರತಿ ಲಕ್ಷಾಂತರ ರೂಪಾಯಿ ವಂಚನೆ ಆಗುತ್ತಿರುವುದರ ಬಗ್ಗೆ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗಿದೆ.

ಉಪ್ಪಿನಂಗಡಿ ಕುಮಾರಧಾರ ಸೇತುವೆ ಬಳಿ ಚತುಷ್ಪಥ ಕಾಮಗಾರಿ ನಡೆಯುವ ಸಲುವಾಗಿ ಹಾಕಲಾಗಿರುವ ಶೆಡ್ ಬಳಿಯಿಂದ ಖಾಸಗಿ ವ್ಯಕ್ತಿಯೋರ್ವರ ಜಾಗದ ಮೂಲಕ ನದಿಗೆ ಸಂಪರ್ಕ ಕಲ್ಪಿಸಿ ರಸ್ತೆ ನಿರ್ಮಿಸಲಾಗಿದೆ. ಆ ಮೂಲಕ ಅಕ್ರಮ ಮರಳು ಸಾಗಾಟದ ಲಾರಿಗಳು ಹೆದ್ದಾರಿಯನ್ನು ಸಂಪರ್ಕಿಸಿ ಯಥೇಚ್ಛವಾಗಿ ಮರಳು ಸಾಗಾಟ ನಡೆಯುತ್ತಿರುವುದು ಕಂಡು ಬಂದಿದೆ.

ನದಿಯಲ್ಲಿ ಡ್ರಿಜ್ಜಿಂಗ್ ಯಂತ್ರ ಬಳಕೆ: ಮರಳುಗಾರಿಕೆಗಾಗಿ 3 ಕಡೆಯಲ್ಲಿ ಅಡ್ಡೆ ನಿರ್ಮಿಸಲಾಗಿದೆ. ಕುಮಾರಧಾರಾ ನದಿಯಲ್ಲಿ ಉಪ್ಪಿನಂಗಡಿ ಗ್ರಾಮದ ಕುರ್ಪೇಲು ಮತ್ತು ಕುಮಾರಧಾರ ಸೇತುವೆಯಿಂದ ಕೇವಲ ೧೦೦ ಮೀಟರ್ ಅಂತರದಲ್ಲಿ ಪುತ್ತೂರುಗೆ ಕುಡಿಯುವ ನೀರು ಸರಬರಾಜು ಆಗುವ ಡ್ಯಾಂ ಬಳಿಯಲ್ಲಿ, ಇನ್ನೊಂದು ಅಡ್ಡೆ ಡ್ಯಾಂನಲ್ಲಿ ನಿಂತಿರುವ ನೀರಿನಿಂದ ಬೋಟ್ ಮೂಲಕ ಉತ್ತರ ಪ್ರದೇಶ ಮೂಲದ ಕೆಲಸಗಾರರು ನದಿಯಲ್ಲಿ ಮುಳುಗಿ ಮರಳು ಸಂಗ್ರಹಿಸುತ್ತಿರುವುದು ಕಂಡು ಬಂದಿದೆ.

 


ಇದೇ ರೀತಿಯಲ್ಲಿ ಡ್ಯಾಂನಲ್ಲಿ ಶೇಖರಣೆಗೊಂಡಿರುವ ನೀರಿನಲ್ಲಿ ಉಪ್ಪಿನಂಗಡಿ ಗ್ರಾಮದ ಕುರ್ಪೇಲು ಎಂಬಲ್ಲಿ ಡ್ರಿಜ್ಜಿಂಗ್ ಯಂತ್ರ ಅಳವಡಿಸಿ ಮರಳು ತೆಗೆಯಲಾಗುತ್ತಿರುವುದು ಕಂಡು ಬಂದಿದೆ. ಈ ರೀತಿಯಾಗಿ 3 ಕಡೆಯಲ್ಲಿ ಅಕ್ರಮ ಮರಳುಗಾರಿಕೆಯ ಮಹಾಪೂರವೇ ನಡೆಯುತ್ತಿದೆ. ಒಟ್ಟಿನಲ್ಲಿ ನದಿಯಲ್ಲಿ ಇರುವ ಸಂಪತ್ತು ಈ ರೀತಿಯಾಗಿ ಲೂಟಿ ಆಗುತ್ತಿದ್ದರೂ ಯಾವೊಬ್ಬ ಅಧಿಕಾರಿಗಳೂ ಇತ್ತ ಗಮನ ಹರಿಸದೇ ಇರುವುದು ನಮ್ಮ ಮುಂದಿರುವ ವ್ಯವಸ್ಥೆಯ ದುರಂತ ಎಂಬ ಮಾರ್ಮಿಕವಾದ ಮಾತುಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಸಾರ್ವಜನಿಕರಿಂದ ತಡೆ: ರಾತ್ರಿ ಹಗಲೆನ್ನದೆ ನೂರಾರು ಲಾರಿಗಳು ಭಾರೀ ಮರಳು ಹೇರಿಕೊಂಡು ನದಿಯಿಂದ ಮೇಲೆ ಬಂದು ನಟ್ಟಿಬೈಲ್ ಶ್ರೀರಾಮ ಶಾಲೆಯ ಎದುರಿನ ರಸ್ತೆ ಮೂಲಕ ಬಂದು ಹೆದ್ದಾರಿ ಸಂಪರ್ಕ ಮಾಡುವುದನ್ನು ಗಮನಿಸಿದ ಸ್ಥಳೀಯ ಗ್ರಾಮಸ್ಥರು ಮರಳು ಸಾಗಾಟದ ಲಾರಿಯಿಂದಾಗಿ ರಸ್ತೆ ಸಂಪೂರ್ಣವಾಗಿ ಕುಲಗೆಟ್ಟು ಹೋಗುತ್ತಿದೆ ಎಂದು ಅಕ್ರಮ ಮರಳು ಸಾಗಾಟಕ್ಕೆ ತಡೆ ಒಡ್ಡಿದ್ದರು. ಆ ಬಳಿಕ ನಂದಿನಿನಗರದ ಮೂಲಕ ರಾಮನಗರ ರಸ್ತೆಯಾಗಿ ಬಂದು ಹೆದ್ದಾರಿ ಸಂಪರ್ಕ ಮಾಡಿಕೊಂಡು ಹೋಗಲಾರಂಭಿಸಿದ್ದು, ಈ ಭಾಗದಿಂದಲೂ ಆಕ್ಷೇಪ ವ್ಯಕ್ತವಾಗಿದೆ. ಹೀಗಾಗಿ ಇದೀಗ ಕುರ್ಪೇಲು ಎಂಬಲ್ಲಿಂದ ಖಾಸಗಿ ಜಾಗವೊಂದರ ಮೂಲಕ ಮರಳು ಸಾಗಾಟದ ಲಾರಿಗಳು ನೇರವಾಗಿ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸಿ ಸಾಗಾಟ ನಡೆಸುತ್ತಿರುವುದಾಗಿ ದೂರು ವ್ಯಕ್ತವಾಗಿದೆ.

ಗೋಣಿ ಚೀಲದಲ್ಲಿ ತುಂಬಿಸಿಯೂ ಸಾಗಾಟ…!: ಈ ೩ ಅಡ್ಡೆಗಳ ಮಧ್ಯೆ ಪ್ರತ್ಯೇಕವಾಗಿ ಇನ್ನೊಂದು ಶೆಡ್ ನಿರ್ಮಿಸಲಾಗಿದ್ದು, ಇಲ್ಲಿ ಮರಳು ರಾಶಿ ಹಾಕಲಾಗಿ ಗೋಣಿ ಚೀಲದಲ್ಲಿ ತುಂಬಿಸಲಾಗಿ ಪ್ಯಾಕಿಂಗ್ ಮಾಡಲಾಗುವುದು. ಇದು ರಾತ್ರಿ ಹೊತ್ತಿನಲ್ಲಿ ಕಂಟೈನರ್ ಮತ್ತು ಲಾರಿಯ ಮೂಲಕ ನೇರವಾಗಿ ಬೆಂಗಳೂರು, ಮೈಸೂರು ಮೊದಲಾದ ಕಡೆಗೆ ಸಾಗಾಟ ಆಗುತ್ತಿರುವುದಾಗಿ ಹೇಳಲಾಗುತ್ತಿದೆ. ಇಲ್ಲಿ ಸುಮಾರು 15 ಜನ ನಿರಂತರವಾಗಿ ಕೆಲಸ ನಿರ್ವಹಿಸುತ್ತಿದ್ದು, ರಾತ್ರಿ, ಹಗಲಿನಲ್ಲಿ ಸುಮಾರು 5 ಲಾರಿ ಮರಳು ಈ ರೀತಿಯಾಗಿ ಪ್ಯಾಕಿಂಗ್ ಆಗಿ ಸಾಗಾಟ ಆಗುತ್ತಿರುವುದಾಗಿ ದೂರು ವ್ಯಕ್ತವಾಗಿದೆ.

ಮರಳು ಲಾರಿಯಿಂದಾಗಿ ರಸ್ತೆಗಳು ಕುಲಗೆಟ್ಟಿದೆ-ಧನಂಜಯ ಕುಮಾರ್: ಗ್ರಾಮದ ಒಳಗಿನ ರಸ್ತೆಯಲ್ಲಿ ಭಾರೀ ಮರಳು ಹೇರಿಕೊಂಡು ಹೋಗುವ ಲಾರಿಯಿಂದಾಗಿ ರಸ್ತೆಗಳು ಕುಲಗೆಡುತ್ತಿದೆ. ಈಗಾಗಲೇ 2 ಕಡೆಯಲ್ಲಿ ಸ್ಥಳೀಯರು ತಡೆ ಒಡ್ಡಿದ್ದಾರೆ. ಆದರೂ ಬೇರೊಂದು ರಸ್ತೆಯ ಮೂಲಕ ನಿರಂತರವಾಗಿ ಅಕ್ರಮ ಮರಳು ಸಾಗಾಟ ನಡೆಯುತ್ತಲೇ ಇದೆ. ಈ ರೀತಿಯಲ್ಲಿ ಹಲವು ಕಡೆಯಲ್ಲಿ ನಡೆಯುತ್ತಿದ್ದು, ಮರಳು ಸಾಗಾಟ ಮಾಡುತ್ತಾ ಸರ್ಕಾರದ ಸಂಪತ್ತು ಲೂಟಿ ಮಾಡುತ್ತಿದ್ದರೂ ಪೊಲೀಸ್ ಇಲಾಖೆಯಿಂದ ಹಿಡಿದು ಯಾವೊಬ್ಬ ಅಽಕಾರಿಗಳೂ ಇತ್ತ ತಿರುಗಿಯೂ ನೋಡುವುದಿಲ್ಲ, ಇದರ ಮರ್ಮ ಏನು ಎಂದು ಅರ್ಥವಾಗುವುದಿಲ್ಲ, ಗಣಿ ಇಲಾಖೆ ಮತ್ತು ಜಿಲ್ಲಾಽಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳುವಂತೆ ಆಗ್ರಹಿಸುತ್ತೇನೆ ಎಂದು ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ಧನಂಜಯ ಕುಮಾರ್ ಆಗಹಿಸಿದ್ದಾರೆ.

ಅನುಮತಿ ದುರುಪಯೋಗ ಆಗುತ್ತಿದೆಯೇ..?: ಪುತ್ತೂರು ನಗರಕ್ಕೆ ನೀರು ಸರಬರಾಜು ಆಗುವ ಅಣೆಕಟ್ಟು ಪ್ರದೇಶದಲ್ಲಿ ಪ್ರವಾಹದಿಂದಾಗಿ ಹೂಳು ತುಂಬಿ ನೀರು ಸಂಗ್ರಹಣೆಗೆ ಕಷ್ಟವಾಗಿರುತ್ತದೆ. ಇದರ ಸಲುವಾಗಿ ಪುತ್ತೂರು ನಗರಸಭೆ, ಭೂ ವಿಜ್ಞಾನ ಇಲಾಖೆಗೆ ಮನವಿ ಸಲ್ಲಿಸಿ ಹೂಳು ತೆಗೆಯುವುದಕ್ಕೆ ಅನುಮತಿ ಕೇಳಿದ್ದು, ಅದರ ಸಲುವಾಗಿ ಭೂ ವಿಜ್ಞಾನ ಇಲಾಖೆ 34-ನೆಕ್ಕಿಲಾಡಿ ಗ್ರಾಮ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಕುಮಾರಧಾರ ನದಿ ಸ. ನಂ. ೬೮ರಲ್ಲಿ ನೆಕ್ಕಿಲಾಡಿ ಎಂಬಲ್ಲಿ ನಿರ್ಮಿಸಿರುವ ಅಣೆಕಟ್ಟಿನ ಹಿನ್ನೀರಿನ 1.25 ಎಕರೆ ಪ್ರದೇಶದಲ್ಲಿ ಹೂಳನ್ನು ಸದರಿ ಅಣೆಕಟ್ಟೆಗೆ ಯಾವುದೇ ರೀತಿಯ ಹಾನಿಯಾಗದಂತೆ ಮಾನವ ಶಕ್ತಿಯಿಂದ ಸಾಂಪ್ರದಾಯಿಕವಾಗಿ ಮರಳು ತೆಗೆದು ಸೂಕ್ತವಾದ ಪ್ರದೇಶದಲ್ಲಿ ದಾಸ್ತಾನು ಮಾಡಲು ಕಾರ್‍ಯಾದೇಶ ನೀಡಲಾಗಿದೆ. ಆದರೆ ಇಲ್ಲಿ ಇದೇ ಅನುಮತಿಯನ್ನು ಮುಂದಿಟ್ಟುಕೊಂಡು ಅದನ್ನು ದುರುಪಯೋಗಪಡಿಸಿಕೊಂಡು ಅಕ್ರಮವಾಗಿ ಮರಳು ತೆಗೆದು ಹೊರಗೆ ಸಾಗಿಸಲಾಗುತ್ತಿರುವುದು ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here