ಎಲಿಯ ಶ್ರೀ ವಿಷ್ಣುಮೂರ್ತಿ ದೇವರ ಬ್ರಹ್ಮಕಲಶೋತ್ಸವ, ಧಾರ್ಮಿಕ ಸಭೆ

0

  • ದಾನ ಬುದ್ದಿ ನಮ್ಮದಾಗಬೇಕು: ಒಡಿಯೂರು ಗುರುದೇವಾನಂದ ಶ್ರೀ
  • ಹಿಂದೂ ಧರ್ಮ ಸನಾತನ ಧರ್ಮ ಆಗಿದೆ: ಸಂಜೀವ ಮಠಂದೂರು
  • ಹಣ ಇದ್ದರೆ ಸಾಲದು, ಜನ ಬಲವೂ ಬೇಕು: ಬಲರಾಮ ಆಚಾರ್ಯ
  • ಗಳಿಸಿದ ಸಂಪತ್ತಿನಲ್ಲಿ ಒಂದಂಶ ಸಮಾಜಕ್ಕೆ ಕೊಡಿ: ಜಯರಾಮ ರೈ ಅಬುದಾಬಿ
  • ಹಿಂದೂ ಧರ್ಮದ ಅನಾವರಣ ಎಲಿಯದಲ್ಲಿ ಆಗಿದೆ: ಜಯಂತ ನಡುಬೈಲ್

 

ಪುತ್ತೂರು: ಸಂಪತ್ತನ್ನು ಭೋಗಿಸಬೇಕು ಇಲ್ಲವೇ ದಾನ ಮಾಡಬೇಕು ಇದು ಎರಡೂ ಮಾಡಲು ಸಾಧ್ಯವಾಗದೇ ಇದ್ದಾಗ ಸಂಪತ್ತು ತನ್ನಿಂದ ತಾನೆ ನಾಶವಾಗುತ್ತದೆ ಆದ್ದರಿಂದ ನಮ್ಮಲ್ಲಿ ದಾನ ಬುದ್ದಿ ಬರಬೇಕು, ಸಂಪತ್ತಿನ ಒಂದಂಶವನ್ನು ಸಮಾಜಕ್ಕೆ ದಾನ ಮಾಡುವ ಬುದ್ದಿ ನಮ್ಮಲ್ಲಿ ಬಂದಾಗ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಫೆ.4 ರಂದು ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ದೇವರ ಪುನಃ ಪ್ರತಿಷ್ಠೆ, ಅಷ್ಠಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಬದುಕಿನಲ್ಲಿ ಧರ್ಮ ಬೇಕು, ಧರ್ಮದೊಂದಿಗೆ ಬದುಕುವುದನ್ನು ನಾವು ಕಲಿಯಬೇಕು ಆಗ ಮಾತ್ರ ಬದುಕು ಸುಂದರವಾಗಿರಲು ಸಾಧ್ಯ ಎಂದ ಸ್ವಾಮೀಜಿಯವರು, ಜೀವನದಲ್ಲಿ ಏನೂ ಸಾಧನೆ ಮಾಡದೇ ಸತ್ತರೆ ಬದುಕಿಗೆ ಅರ್ಥವಿಲ್ಲ, ಬದುಕು ಒಂದು ಪಾಠಶಾಲೆ ಇದ್ದಂತೆ ಬೇರೆ ಬೇರೆ ವಿಚಾರಗಳು ಬದುಕಿನಲ್ಲಿ ಬರುತ್ತದೆ ಅವುಗಳಲ್ಲಿ ಯಾವುದು ಬೇಕೋ ಅದನ್ನು ತೆಗೆದುಕೊಂಡು ತಿಳಿದುಕೊಂಡು ಬದುಕಿದಾಗ ಬದುಕು ಆದರ್ಶಯುತ ಬದುಕಾಗಲು ಸಾಧ್ಯವಿದೆ ಎಂದರು.

ದೇವಸ್ಥಾನ ಊರಿನ ಬೆಳಕು
ಒಂದು ದೇವಸ್ಥಾನ ಆ ಊರಿನ ಬೆಳಕು ಆಗಿದೆ ಆದ್ದರಿಂದ ದೇವಸ್ಥಾನ ಕಟ್ಟುವುದು ಮುಖ್ಯವಲ್ಲ, ಆ ದೇವಸ್ಥಾನದಲ್ಲಿ ಮುಂದಿನ ದಿನಗಳಲ್ಲಿ ನಿತ್ಯ ಉತ್ಸವಾಧಿಗಳು ನಡೆಯುವಂತೆ ನೋಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ, ಈ ನಿಟ್ಟಿನಲ್ಲಿ ಊರಿನ ಗ್ರಾಮಸ್ಥರು, ಭಕ್ತಾಧಿಗಳು ಚಿಂತನೆ ಮಾಡಬೇಕು ಎಂದು ಗುರುದೇವಾನಂದ ಸ್ವಾಮೀಜಿ ಹೇಳಿದರು.

ಹಿಂದೂ ಧರ್ಮ ಸನಾತನ ಧರ್ಮ ಆಗಿದೆ: ಸಂಜೀವ ಮಠಂದೂರು
ಸಭಾಧ್ಯಕ್ಷತೆ ವಹಿಸಿದ್ದ ಶಾಸಕ, ಎಲಿಯ ದೇವಾಲಯದ ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಸಂಜೀವ ಮಠಂದೂರು ಮಾತನಾಡಿ, ಹಿಂದೂ ಧರ್ಮದ ಪುನರುತ್ಥಾನವೇ ದೇವಸ್ಥಾನ ನಿರ್ಮಾಣ ಆಗಿದೆ. ಸನಾತನ ಧರ್ಮ ಇದ್ದರೆ ಅದು ಹಿಂದೂ ಧರ್ಮ ಆಗಿದೆ. ಪ್ರೀತಿ, ವಿಶ್ವಾಸ, ಮಾನವೀಯತೆಯನ್ನು ಸಾರುವ ಧರ್ಮವೇ ಹಿಂದೂ ಧರ್ಮ ಆಗಿದೆ ಎಂದರು. ನೂರಾರು ಕೈಗಳು ಒಂದುಗೂಡಿ ಭಗವಂತನ ಸೇವೆ ಮಾಡಿ ಸಾಕ್ಷಾತ್ಕಾರವನ್ನು ಪಡೆಯುವುದೇ ಬ್ರಹ್ಮಕಲಶೋತ್ಸವ ಆಗಿದೆ ಎಂದ ಅವರು ಅದು ಎಲಿಯದಲ್ಲಿ ಆಗಿದೆ ಎಂದರು. ನಾವು ಸ್ವಾಭಿಮಾನಿ, ಸ್ವಾವಲಂಭಿಗಳಾಗುವ ಮೂಲಕ ಸಮಾಜ, ದೇಶವನ್ನು ಸ್ವಾವಲಂಭಿ ದೇಶವನ್ನಾಗಿ ಮಾಡೋಣ ಎಂದು ಹೇಳಿ ಶುಭ ಹಾರೈಸಿದರು.

ಹಣ ಇದ್ದರೆ ಸಾಲದು, ಜನ ಬಲವೂ ಬೇಕು: ಬಲರಾಮ ಆಚಾರ್ಯ
ಪುತ್ತೂರಿನ ಸ್ವರ್ಣ ಉದ್ಯಮಿ ಬಲರಾಮ ಆಚಾರ್ಯರವರು ಮಾತನಾಡಿ, ಯಾವುದೇ ಕಾರ್ಯ ಆಗಬೇಕಾದರೆ ಕೇವಲ ಹಣ ಒಂದಿದ್ದರೆ ಸಾಲದು, ಜನ ಬಲವೂ ಬೇಕು ಇದು ಎಲಿಯದಲ್ಲಿ ಸಿಕ್ಕಿದೆ. ಸಾವಿರಾರು ಕರಸೇವಕರ ಶ್ರಮ ಇಲ್ಲಿ ಎದ್ದು ಕಾಣುತ್ತಿದೆ. ಕರಸೇವಕರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಎಲ್ಲರ ಶ್ರಮದಿಂದಾಗಿ ಸುಂದರ ದೇವಾಲಯ ನಿರ್ಮಾಣವಾಗಿದೆ ಎಂದರು.
ಗಳಿಸಿದ ಸಂಪತ್ತಿನಲ್ಲಿ ಒಂದಂಶ ಸಮಾಜಕ್ಕೆ ಕೊಡಿ: ಜಯರಾಮ ರೈ ಅಬುದಾಬಿ

ಉದ್ಯಮಿ ಮಿತ್ರಂಪಾಡಿ ಜಯರಾಮ ರೈ ಅಬುದಾಬಿಯವರು ಮಾತನಾಡಿ, ಶ್ರದ್ಧೆ, ಶ್ರಮ ಮತ್ತು ಭಕ್ತಿಯಿಂದ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದಾಗ ಯಾವುದೇ ಕಾರ್ಯ ಸಾಧ್ಯ ಎಂಬುದಕ್ಕೆ ಎಲಿಯ ಸಾಕ್ಷಿಯಾಗಿದೆ, ದುಡ್ಡು, ಅಂತಸ್ತು, ಆಸ್ತಿ ಇದ್ಯಾವುದು ಮುಖ್ಯವಲ್ಲ, ಬಂಗಲೆ ಇದ್ದರೂ ಪ್ರಾಯ ಬಂದಾಗ ಒಂದು ರೂಮ್ ಸಾಕಾಗುತ್ತದೆ, ಆಸ್ತಿ ಇದ್ದರೂ ಅದು ಸಿಸಿ ಕ್ಯಾಮರಕ್ಕೆ ಮಾತ್ರ ಸೀಮಿತವಾಗುತ್ತದೆ. ಆದ್ದರಿಂದ ನಾವು ಜೀವನದಲ್ಲಿ ಗಳಿಸಿದ ಸಂಪತ್ತಿನಲ್ಲಿ ಒಂದಂಶವನ್ನು ಸಮಾಜಕ್ಕೆ, ದೇವರ ಕಾರ್ಯಕ್ಕೆ ವಿನಿಯೋಗಿಸಿದಾಗ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದರು .

ಹಿಂದೂ ಧರ್ಮದ ಅನಾವರಣ ಎಲಿಯದಲ್ಲಿ ಆಗಿದೆ: ಜಯಂತ ನಡುಬೈಲ್
ಉದ್ಯಮಿ, ಅಕ್ಷಯ ಗ್ರೂಪ್ಸ್ ಮಾಲಕ ಜಯಂತ ನಡುಬೈಲ್ ಮಾತನಾಡಿ, 11 ತಿಂಗಳು12 ಸಾವಿರಕ್ಕೂ ಅಧಿಕ ಕರಸೇವಕರ ಶ್ರಮ ಎಲಿಯದಲ್ಲಿ ಶ್ರೀ ವಿಷ್ಣುಮೂರ್ತಿ ದೇವರ ಸುಂದರ ಶಿಲಾಮಯ ದೇವಸ್ಥಾನ ಎದ್ದು ನಿಂತಿದ್ದು ಆ ಮೂಲಕ ಹಿಂದೂ ಧರ್ಮದ ಅನಾವರಣ ಎಲಿಯದಲ್ಲಿ ಆಗಿದೆ ಎಂದರು. ನಾವೆಲ್ಲರೂ ವಾರದಲ್ಲಿ ಒಂದು ದಿನ ದೇವಸ್ಥಾನಕ್ಕೆ ಹೋಗುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ಆ ಮೂಲಕ ದೇವಸ್ಥಾನಗಳಲ್ಲಿ ನಿತ್ಯ ಉತ್ಸವ ನಡೆಯುವಂತೆ ನೋಡಿಕೊಳ್ಳಬೇಕು ಎಂದರು.

ವೇದಿಕೆಯಲ್ಲಿ ಅಡ್ಯಾರು ಸಹ್ಯಾದ್ರಿ ಕಾಲೇಜು ಆಫ್ ಇಂಜಿನಿಯರಿಂಗ್ ಎಂಡ್ ಮ್ಯಾನೇಜ್‌ಮೆಂಟ್ ಟ್ರಸ್ಟಿ ಬಿ.ಜಗನ್ನಾಥ ಚೌಟ, ಪ್ರಗತಪರ ಕೃಷಿಕ ಜಯರಾಮ ರೈ ಪರನೀರು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ಪುತ್ತೂರು ಎನ್.ಆರ್.ಸಿ.ಸಿ ನಿವೃತ್ತಿ ವಿಜ್ಞಾನಿ ಯದುಕುಮಾರ್ ಕೊಳತ್ತಾಯ ಎನ್, ಸುಳ್ಯ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ, ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಸಾದ್ ರೈ ಸೊರಕೆ, ಕೇಂದ್ರ ಸರಕಾರದ ನಿವೃತ್ತ ಉದ್ಯೋಗಿ ವೈ.ನಾರಾಯಣ ನಾಯ್ಕ, ಮುಂಡೂರು ಗ್ರಾಮ ಕರಣಿಕರು, ದೇವಸ್ಥಾನದ ಮಾಜಿ ಆಡಳಿತಾಧಿಕಾರಿ ತುಳಸಿ ಜಿ, ಎಲಿಯತ್ತಾಯ ಕುಟುಂಬದ ವಸಂತಿ ಎಲಿಯತ್ತಾಯ ಬೆಂಗಳೂರು, ಆದಿತ್ಯ ಎಲಿಯತ್ತಾಯ, ಸರ್ವೆ ಶ್ರೀ ಕಟೀಲೇಶ್ವರಿ ಯಕ್ಷಗಾನ ಸೇವಾ ಸಮಿತಿಯ ಸಂಚಾಲಕ ಶಿವರಾಮ ಭಟ್ ಬರಮೇಲು, ಮಂಗಳೂರು ಅಟೋಮೇಷನ್ ಸಾಪ್ಟ್‌ಟೆಕ್‌ನ ಬೆದ್ರುಮಾರು ಬಾಲಚಂದ್ರ ರೈ ಕೇಕನಾಜೆ, ಪ್ರಗತಿಪರ ಕೃಷಿಕ ತಾರಾನಾಥ ರೈ ಬಾಕುಡ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರಾಜಾರಾವ್ ಮುಡಂಬಡಿತ್ತಾಯ, ಕಾರ್ಯಾಧ್ಯಕ್ಷ ಭಾಸ್ಕರ ರೈ ಮಾದೋಡಿ, ಗೌರವ ಸಲಹೆಗಾರ ವೈ.ಹರೀಶ್ ಎಲಿಯತ್ತಾಯ, ಪವಿತ್ರಪಾಣಿ ಬಾಲಕೃಷ್ಣ ಮುಡಂಬಡಿತ್ತಾಯ ಸೊರಕೆ, ಆರ್ಥಿಕ ಸಮಿತಿ ಸಂಚಾಲಕ ಲಕ್ಷ್ಮೀನಾರಾಯಣ ಕಡಂಬಳಿತ್ತಾಯ ಪಿ, ಪ್ರಧಾನ ಕಾರ್ಯದರ್ಶಿ ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು, ಸಂಘಟನಾ ಸಂಚಾಲಕ ಉಮೇಶ್ ಸುವರ್ಣ ಸೊರಕೆ, ಕೋಶಾಧಿಕಾರಿ ಪ್ರಸನ್ನ ರೈ ಮಜಲುಗದ್ದೆ, ಸದಸ್ಯರಾದ ಉದಯಕುಮಾರ್ ರೈ ಬಾಕುಡ, ರಾಮಚಂದ್ರ ಸೊರಕೆ, ಪದ್ಮಯ್ಯ ನಾಯ್ಕ ನೆಕ್ಕಿಲು ಉಪಸ್ಥಿತರಿದ್ದರು. ರೂಪಿಕಾ ಸತೀಶ್ ಪ್ರಾರ್ಥಿಸಿದರು.ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಬೂಡಿಯಾರ್ ರಾಧಕೃಷ್ಣ ರೈ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ವೈ.ಹರೀಶ್ ಎಲಿಯತ್ತಾಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಜಾರಾವ್ ಮುಡಂಬಡಿತ್ತಾಯ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕರುಣಾಕರ ಗೌಡ ಎಲಿಯ ಅತಿಥಿಗಳಿಗೆ ಶಾಲು ಹಾಕಿ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಪ್ರಸನ್ನ ರೈ ಮಜಲುಗದ್ದೆ, ಜೀರ್ಣೋದ್ದಾರ ಸಮಿತಿ ಸದಸ್ಯ ಉದಯ ಕುಮಾರ್ ರೈ ಬಾಕುಡ, ಸಂಘಟಕ ಸಂಚಾಲಕ ಉಮೇಶ್ ಸುವರ್ಣ ಸೊರಕೆ ಸ್ಮರಣಿಕೆ ನೀಡಿದರು. ವ್ಯವಸ್ಥಾಪನ ಸಮಿತಿ ಸದಸ್ಯ ರವಿಕುಮಾರ್ ರೈ ಕೆದಂಬಾಡಿಮಠ ವಂದಿಸಿದರು. ಹೇಮಾ ಜೆ.ರೈ ಕುರಿಯ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸಮಿತಿಯ ಸದಸ್ಯರುಗಳು ಸಹಕರಿಸಿದ್ದರು.

ಗೌರವಾರ್ಪಣೆ
ದೇವಸ್ಥಾನದ ಶಿಲೆ ಕಲ್ಲಿನ ಕೆಲಸ ನಿರ್ವಹಿಸಿದ ನಾಗರಾಜ್ ವೀರಕಂಭ ಬಂಟ್ವಾಳ, ಪದ್ಮನಾಭ ಪಿಲಿಗೂಡು ಕಲ್ಲೇರಿ, ಕಾಷ್ಠಶಿಲ್ಪಿ ಡಾ.ಪುಷ್ಪರಾಜ್ ಆಚಾರ್ಯ ಉದುಮ ಕಾಸರಗೋಡು, ಪ್ರಸಾದ್ ಆಚಾರ್ಯ ಮೈಕೆ, ಮೇಸ್ತ್ರೀ ತಳಿಪರಂಬ ಕರೋತ್ ನಾರಾಯಣ ನಂಬಿಯಾರ್ ಕಲ್ಲೇರಿ, ಶಿಲ್ಪಿ ಪ್ರಶಾಂತ್ ಆಚಾರ್ಯ ಮುಂಡೂರುರವರುಗಳನ್ನು ಶಾಲು,ಪೇಟಾ ತೊಡಿಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಮನರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ
ಸಭಾ ಕಾರ್ಯಕ್ರಮದ ಬಳಿಕ ಝೀ ವಾಹಿನಿಯ ಸರಿಗಮಪ, ಕಲರ್ಸ್ ಕನ್ನಡ ವಾಹಿನಿಯ ಕನ್ನಡ ಕೋಗಿಲೆ ಖ್ಯಾತಿ ಅಖಿಲಾ ಪಜಿಮಣ್ಣು ಹಾಗೂ ಬಳಗದವರಿಂದ ಭಕ್ತಿ ಭಾವ ಸಂಗಮ ನಡೆಯಿತು ಬಳಿಕ ತುಳು ನಾಟಕ ರಂಗಭೂಮಿಯಲ್ಲಿ ಹೊಸ ಸಂಚಲನ ಮೂಡಿಸಿದ ವಿಜಯಕುಮಾರ್ ಕೋಡಿಯಾಲ್‌ಬೈಲ್ ನಿರ್ದೇಶನದ ಶಿವಧೂತೆ ಗುಳಿಗೆ ತುಳು ಪೌರಾಣಿಕ ನಾಟಕ ನಡೆಯಿತು. ಸಾವಿರಾರು ಮಂದಿ ವೀಕ್ಷಿಸಿದರು.

ಹರಿದು ಬಂದ ಜನಸಾಗರ
ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತಾಧಿಗಳು ಕ್ಷೇತ್ರಕ್ಕೆ ಆಗಮಿಸಿದ್ದು ಎಲಿಯದ ಇತಿಹಾಸದಲ್ಲೇ ಹೊಸ ದಾಖಲೆಯನ್ನು ನಿರ್ಮಿಸಿದೆ. ಬೆಳಗ್ಗೆಯಿಂದಲೇ ಕ್ಷೇತ್ರಕ್ಕೆ ಭಕ್ತಾಧಿಗಳು ತಂಡತಂಡವಾಗಿ ಆಗಮಿಸುತ್ತಿದ್ದರು. ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಸಾವಿರಾರು ಮಂದಿ ಆಗಮಿಸಿದ್ದು ಸರತಿ ಸಾಲಿನಲ್ಲಿ ನಿಂತು ಅನ್ನಪ್ರಸಾದ ಸ್ವೀಕರಿಸಿದರು. ಪ್ರತಿದಿನದ ಅನ್ನಸಂತರ್ಪಣೆಯ ವ್ಯವಸ್ಥೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸರ್ವೆ ಎ ಒಕ್ಕೂಟದ ಅಧ್ಯಕ್ಷ ರಾಧಾಕೃಷ್ಣ ರೈ ರೆಂಜಲಾಡಿಯವರ ನೇತೃತ್ವದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕೆದಂಬಾಡಿ ವಲಯದ ಸಂಘಗಳ ಸದಸ್ಯರುಗಳು ಸ್ವಯಂ ಸೇವಕರಾಗಿ ಸೇವೆ ಮಾಡುತ್ತಿದ್ದಾರೆ.

ನಾಳೆ (ಫೆ.6) ದೇವರ ಪುನಃ ಪ್ರತಿಷ್ಠೆ,ಬ್ರಹ್ಮಕಲಶೋತ್ಸವ
ನಿಲೇಶ್ವರ ಉಚ್ಚಿಲತ್ತಾಯ ಬ್ರಹ್ಮಶ್ರೀ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಫೆ.6ರಂದು ಬೆಳಿಗ್ಗೆ ಗಣಪತಿ ಹೋಮ, 8.20 ರ ಕುಂಭ ಲಗ್ನದಲ್ಲಿ ಶ್ರೀ ವಿಷ್ಣುಮೂರ್ತಿ ದೇವರ ಬಿಂಬ ಪ್ರತಿಷ್ಠೆ, ಜೀವಕಲಶಾಭಿಷೇಕ, ಜೀವಾವಾಹನೆ, ಶಿಖರ ಪ್ರತಿಷ್ಠೆ, ಪಿಲಿಭೂತ, ರಕ್ತೇಶ್ವರಿ, ಶಿರಾಡಿ, ಪಂಜುರ್ಲಿ ದೈವಗಳ ಪ್ರತಿಷ್ಠೆ, ಪರಿಕಲಶ ಅಭಿಷೇಕ, ಬ್ರಹ್ಮಕಲಶ ಅಭಿಷೇಕ, ಪರಿವಾರ ಪ್ರತಿಷ್ಠೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಪಿಲಿಭೂತ, ಶಿರಾಡಿ ಪಂಜುರ್ಲಿ ದೈವಗಳ ಪ್ರತಿಷ್ಠೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ರಾತ್ರಿಪೂಜೆ, ಶ್ರೀಭೂತಬಲಿ ಸೇವಾ ಸುತ್ತುಗಳು, ರಾಜಾಂಗಣ ಪ್ರಸಾದ ಮಂತ್ರಾಕ್ಷತೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

LEAVE A REPLY

Please enter your comment!
Please enter your name here