ಕಾಣಿಯೂರು ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬಕ್ಕೆ ಚಾಲನೆ

0

ಕಾಣಿಯೂರು: ಮಕ್ಕಳನ್ನು ಹಲವು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ ಅವರ ಕಲಿಕಾ ಆಸಕ್ತಿಯನ್ನು ಹೆಚ್ಚಿಸುವುದು ಕಲಿಕಾ ಹಬ್ಬದ ಮುಖ್ಯ ಉದ್ಧೇಶವಾಗಿದೆ. ಕಲಿಕಾ ಚೇತರಿಕೆ ಪೂರಕವಾಗಿ ಮಕ್ಕಳು ಚಟುವಟಿಕೆ ಮೂಲಕ ಸಂತೋಷದಾಯಕ ಕಲಿಕೆಯನ್ನು ಮಕ್ಕಳು ಹೊಂದಬೇಕು ಎನ್ನುವುದು ಈ ಕಾರ್ಯಕ್ರಮದ್ದಾಗಿದೆ ಎಂದು ಕಾಣಿಯೂರು ಸರಕಾರಿ ಪ್ರೌಢ ಶಾಲೆಯ ಮುಖ್ಯಗುರು, ಕಲಿಕಾ ಹಬ್ಬದ ನೋಡೆಲ್ ಅಧಿಕಾರಿ ಉಷಾಕಿರಣ ಹೇಳಿದರು.

ಅವರು ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ದ.ಕ ಜಿಲ್ಲಾ ಪಂಚಾಯತ್ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ಕಾಣಿಯೂರು, ಸ.ಉ.ಹಿ.ಪ್ರಾ.ಶಾಲೆ ಕಾಣಿಯೂರು ಇದರ ಆಶ್ರಯದಲ್ಲಿ ಫೆ.1 ರಂದು ಕಾಣಿಯೂರು ಸ.ಉ.ಹಿ.ಪ್ರಾ. ಶಾಲೆಯಲ್ಲಿ ನಡೆದ ಕಾಣಿಯೂರು ಕ್ಲಸ್ಟರ್ ಮಟ್ಟದ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾಣಿಯೂರು ಗ್ರಾ.ಪಂ.ಅಧ್ಯಕ್ಷೆ ಲಲಿತಾ ದರ್ಖಾಸು ಅಧ್ಯಕ್ಷತೆ ವಹಿಸಿದ್ದರು. ಕಾಣಿಯೂರು ಗ್ರಾ.ಪಂ. ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ವಸಂತ ಪೆರ್ಲೋಡಿ, ಬೆಳಂದೂರು ಗ್ರಾ.ಪಂ.ಸದಸ್ಯೆ ಗೌರಿ ಮಾದೋಡಿ, ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ, ದೋಳ್ಪಾಡಿ ಸರಕಾರಿ ಪ್ರೌಢ ಶಾಲೆಯ ಮುಖ್ಯಗುರು ಶಶಿಧರ್, ಕಾಣಿಯೂರು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ, ಕಾಣಿಯೂರು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಪರಮೇಶ್ವರ ಗೌಡ ಅನಿಲ ಉಪಸ್ಥಿತರಿದ್ದರು.

ಎಸ್‌ಡಿಎಂಸಿ ಉಪಾಧ್ಯಕ್ಷೆ ಯಶೋದ ನೇರೋಳ್ತಡ್ಕ, ಸದಸ್ಯರಾದ ಯಶಕಲಾ ಮುಗರಂಜ, ಬಾಲಕೃಷ್ಣ ಕರಂದ್ಲಾಜೆ, ಗೌರಿ ಮಾದೋಡಿ, ಭಾರತಿ ಕಟ್ಟತ್ತಾರು, ನಾಣಿಲ ಶಾಲಾ ಮುಖ್ಯಶಿಕ್ಷಕ ಪದ್ಮಯ್ಯ ಗೌಡ, ಚಾರ್ವಾಕ ಶಾಲಾ ಮುಖ್ಯಶಿಕ್ಷಕಿ ಪಾರ್ವತಿ, ಬೊಬ್ಬೆಕೇರಿ ಶಾಲಾ ಶಿಕ್ಷಕ ಜನಾರ್ದನ, ಕಾಣಿಯೂರು ಶಾಲಾ ಶಿಕ್ಷಕಿ ಮೋಹಿನಿ ಅತಿಥಿಗಳಿಗೆ ತಾಂಬೂಲ ನೀಡಿ ಗೌರವಿಸಿದರು. ಕಾಣಿಯೂರು ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಚಾರ್ವಾಕ ಶಾಲಾ ಶಿಕ್ಷಕಿ ನಯನಾ ಕಲಿಕಾ ಹಬ್ಬದ ರೂಪುರೇಷೆಯನ್ನು ವಿವರಿಸಿದರು. ಕಾಣಿಯೂರು ಕ್ಲಸ್ಟರ್ ಸಿಆರ್‌ಪಿ ಯಶೋದ ಸ್ವಾಗತಿಸಿ, ಕಾಣಿಯೂರು ಶಾಲಾ ಮುಖ್ಯಗುರು ಪುಂಡಲಿಕ ಪೂಜಾರ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ರೇವತಿ ಕಾರ್ಯಕ್ರಮ ನಿರೂಪಿಸಿದರು.

ಹಬ್ಬಕ್ಕೆ ಮೆರುಗು ನೀಡಿದ ಮೆರವಣಿಗೆ:
ಕಾರ್ಯಕ್ರಮದ ಆರಂಭವಾಗಿ ಕಾಣಿಯೂರು ಶಾಲಾ ಬಳಿಯಿಂದ ಮುಖ್ಯರಸ್ತೆಯಲ್ಲಿ ಆಕರ್ಷಕ ಮೆರವಣಿಗೆ ನಡೆಯಿತು. ವಿವಿಧ ಕಲಿಕಾ ಫಲಕಗಳು ಹಿಡಿದುಕೊಂಡು, ಹುಲಿ ವೇಷ ಕುಣಿತದೊಂದಿಗೆ, ಬ್ಯಾಂಡ್ ವಾದನಕ್ಕೆ ಮಕ್ಕಳು ಹೆಜ್ಜೆ ಹಾಕಿ ಮೆರವಣಿಗೆಗೆ ಮೆರುಗು ನೀಡಿದರು.

ಕಲಿಕಾ ಹಬ್ಬ ಮಕ್ಕಳಲ್ಲಿ ಹೆಚ್ಚಿನ ಉತ್ಸಾಹ ತಂದಿತ್ತು. ತಳಿರು ತೋರಣಗಳಿಂದ ಶಾಲೆಯು ಕಂಗೊಳಿಸುತ್ತಿದ್ದು, ಸಂಭ್ರಮದ ವಾತಾವರಣ ಶಾಲೆಗಳಲ್ಲಿ ಮನೆ ಮಾಡಿತ್ತು. ಎರಡು ದಿನಗಳಲ್ಲಿ ನಡೆಯುವ ಕಲಿಕಾ ಹಬ್ಬದಲ್ಲಿ ನಾಲ್ಕು ಕಾರ್ನರ್‌ಗಳ ಮೂಲಕ ಕ್ಲಸ್ಟರ್‌ನ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ವಿಭಾಗದಲ್ಲಿ 10 ಶಾಲೆಗಳ 120ವಿದ್ಯಾರ್ಥಿಗಳಿಗೆ ಹಾಡು- ಆಡು, ಮಾಡು- ಆಡು, ಕಾಗದ – ಕತ್ತರಿ ಮತ್ತು ಊರು ತಿಳಿಯೋಣ ಎಂಬ ಹೆಸರಿನೊಂದಿಗೆ ಕಲಿಕಾ ಹಬ್ಬವನ್ನು ಆಯೋಜಿಸಲಾಗಿತ್ತು.

LEAVE A REPLY

Please enter your comment!
Please enter your name here