ಪುತ್ತೂರು: ಇಸ್ಲಾಂ ಧರ್ಮದ 5 ಸ್ಥಂಭಗಳಲ್ಲಿ ಒಂದಾಗಿದೆ ಹಜ್ಜ್. ಆರ್ಥಿಕವಾಗಿ ಬಲಶಾಲಿಯಾಗಿರುವವರಿಗೆ ಹಜ್ಜ್ ಕಡ್ಡಾಯ ಎಂದು ಪರಿಗಣಿಸಲಾಗುತ್ತದೆ. ಆದರೆ ಜೀವನದಲ್ಲಿ ಒಮ್ಮೆಯಾದರೂ ಮೆಕ್ಕಾಗೆ ತೆರಳಿ ಹಜ್ಜ್ ನಿರ್ವಹಿಸ ಬೇಕೆಂಬುದು ಪ್ರತಿಯೊಬ್ಬ ಮುಸಲ್ಮಾನನ ಆಸೆ. ಒಂದಾನೊಂದು ಕಾಲದಲ್ಲಿ ದೂರದೂರದ ಊರುಗಳಿಂದ ಕಾಲ್ನಡಿಗೆಯಲ್ಲಿಯೇ ಹಜ್ಜ್ ಯಾತ್ರೆಗೆ ತೆರಳುತ್ತಿದ್ದರು. ಕಾಲದ ಬದಲಾವಣೆಯೊಂದಿಗೆ ಹಡಗು ವಿಮಾನಗಳಲ್ಲಿ ಜನರು ಹಜ್ಜ್ ಗೆ ತೆರಳುತ್ತಿದ್ದರು. ಈಗ ಹೆಚ್ಚಾಗಿ ಎಲ್ಲರೂ ವಿಮಾನವನ್ನೇ ಅವಲಂಬಿಸಿದ್ದಾರೆ. ಆದರೆ ಅಲ್ಲೊಮ್ಮೆ ಇಲ್ಲೊಮ್ಮೆ ಎನ್ನುವಂತೆ ಕೆಲವರು ಸ್ವಂತ ಕಾರು, ಬೈಕ್ , ಸೈಕಲ್ ಗಳಲ್ಲಿ ಹೋಗುವುದುಂಟು. ಇನ್ನು ಕೆಲವರು ಸಾಧನೆಯೆನ್ನುವಂತೆ ನಡೆದೇ ಹಜ್ಜ್ ಯಾತ್ರೆಗೆ ತೆರಳುತ್ತಿದ್ದಾರೆ. ಈಗ ಪುತ್ತೂರು ತಾಲೂಕು ಉಪ್ಪಿನಂಗಡಿಯ ಪೆರಿಯಡ್ಕ ನಿವಾಸಿ 25 ವರ್ಷದ ನೌಷಾದ್ ಎಂಬ ಯುವಕ ಹಜ್ಜ್ ನಿರ್ವಹಿಸಲು ಕಾಲ್ನಡಿಗೆ ಮೂಲಕ ಮೆಕ್ಕಾಗೆ ಹೊರಟಿದ್ದಾರೆ. ಎಲ್ಲಾ ರೀತಿಯ ತಯಾರಿಗಳ ಬಳಿಕ ಜ.30 ರಂದು ಉಪ್ಪಿನಂಗಡಿಯ ತಮ್ಮ ಮನೆಯಿಂದ ಕಾಲ್ನಡಿಗೆಯಲ್ಲಿ ಹಜ್ಜ್ ಯಾತ್ರೆಗೆ ಹೊರಟ ನೌಷಾದ್ 7 ದಿನಗಳ ಬಳಿಕ ಕುಂದಾಪುರದ ಕೋಟ ತಲುಪಿದ್ದು, ಇಂದು ಕೋಟದಿಂದ ಯಾತ್ರೆ ಮುಂದುವರಿಸಿದ್ದಾರೆ.
ಭಾರತದಿಂದ ಅಫ್ಘಾನಿಸ್ತಾನ, ತುರ್ಕುಮೆನಿಸ್ಥಾನ್ , ಉಜ್ಬೇಕಿಸ್ಥಾನ್, ಖಜಾಖಿಸ್ಥಾನ್, ಉಕ್ರೇನ್, ಟರ್ಕಿ, ಇರಾಕ್ ಮೂಲಕ ಸೌದಿ ಅರೇಬಿಯಾ ಪ್ರವೇಶಿಸಲಿರುವ ನೌಷಾದ್ ಸರಿ ಸುಮಾರು 6168 ಕಿ.ಮೀ.ದೂರವನ್ನು ಪಾದಯಾತ್ರೆಯ ಮೂಲಕ ಕ್ರಮಿಸಲಿದ್ದಾರೆ. 18 ತಿಂಗಳ ಯಾತ್ರೆಯ ಬಳಿಕ 2024 ನೇ ವರ್ಷದ ಹಜ್ಜ್ ನಿರ್ವಹಿಸುವುದು ನೌಷಾದ್ ಕನಸು. ಕಳೆದ ಎರಡು ವರ್ಷದಿಂದ ಕಾಲ್ನಡಿಗೆ ಮೂಲಕ ಮೆಕ್ಕಾ ಗೆ ತೆರಳಿ ಹಜ್ಜ್ ನಿರ್ವಹಿಸಬೇಕೆಂಬ ನೌಷಾದ್ ಕನಸಿಗೆ ಊರವರು ಮನ್ನಣೆ ನೀಡಿ ಯಾತ್ರೆಗೆ ಸಹಕರಿಸಿದ್ದಾರೆ.