ಸುಧಾಕರ ದರ್ಬೆ, ಪಿ.ಬಿ.ಹರೀಶ್ ರೈ, ಜೋಗಿ, ಶ್ರೀನಿವಾಸ ನಾಯಕ್ ಇಂದಾಜೆಯವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ

0

ಪುತ್ತೂರು:ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ನೀಡಲಾಗುವ 2019, 2020, 2021 ಮತ್ತು 2022ನೇ ಸಾಲಿನ ಮಾಧ್ಯಮ ವಾರ್ಷಿಕ ಪ್ರಶಸ್ತಿ ಮತ್ತು ದತ್ತಿ ಪ್ರಶಸ್ತಿಗೆ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ. 2019ನೇ ಸಾಲಿನ ಪ್ರಶಸ್ತಿಗೆ ಕನ್ನಡಪ್ರಭದ ಸುಧಾಕರ ದರ್ಬೆ, 2020ನೇ ಸಾಲಿನ ಪ್ರಶಸ್ತಿಗೆ ವಿಜಯವಾಣಿ ದ.ಕ.ಜಿಲ್ಲಾ ವರದಿಗಾರ ಪಿ.ಬಿ.ಹರೀಶ್ ರೈ, ಹಿರಿಯ ಪತ್ರಕರ್ತ ಶ್ರೀನಿವಾಸ ನಾಯಕ್ ಇಂದಾಜೆ ಹಾಗೂ 2019ನೇ ಸಾಲಿನ ಪ್ರಶಸ್ತಿಗೆ ಗಿರೀಶ್ ರಾವ್ (ಜೋಗಿ) ಆಯ್ಕೆಯಾಗಿದ್ದಾರೆ.

ಪಿ.ಬಿ.ಹರೀಶ್ ರೈ: ವಿಜಯವಾಣಿ ಪತ್ರಿಕೆಯ ಹಿರಿಯ ವರದಿಗಾರರಾಗಿರುವ, ಕಡಬ ತಾಲೂಕು ಕುಕ್ಕೆ ಸುಬ್ರಹ್ಮಣ್ಯದ ಪಿ.ಬಿ.ಹರೀಶ್ ರೈ (ಪಿ.ಬಿ.ಹರಿಪ್ರಸಾದ್ ರೈ) ಅವರು 2020ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ (2020ನೇ ಸಾಲಿನ)ಗೆ ಆಯ್ಕೆಯಾಗಿದ್ದಾರೆ. ಪಿ.ಬಿ.ಹರೀಶ್ ರೈ ಅವರು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿದ್ದು, ಪ್ರಸ್ತುತ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಹಾಗೂ ಮಂಗಳೂರು ಪ್ರೆಸ್ ಕ್ಲಬ್‌ನ ಉಪಾಧ್ಯಕ್ಷರಾಗಿದ್ದಾರೆ.

ಸುಧಾಕರ್ ದರ್ಬೆ: ಪುತ್ತೂರು ದರ್ಬೆ ಮೂಲದವರಾಗಿದ್ದು ಬೆಂಗಳೂರು ನಿವಾಸಿಯಾಗಿರುವ ಸುಧಾಕರ ದರ್ಬೆ ಅವರು ದಿ|ಕೆ.ಗೋಪಾಲ ಆಚಾರ್ಯ-ದಿ|ಮೀನಾಕ್ಷಿ ದಂಪತಿಯ ಮಗ. 1991ರಲ್ಲಿ ‘ಇಂಡಿಯನ್ ಎಕ್ಸ್‌ಪ್ರೆಸ್’ ಸಮೂಹದ ಕನ್ನಡಪ್ರಭ ದಿನಪತ್ರಿಕೆ ಬಳಗಕ್ಕೆ ಸೇರ್ಪಡೆ. ಕಳೆದ 32 ವರ್ಷಗಳಿಂದ ಕಲಾವಿದನಾಗಿ, ಪ್ರಸ್ತುತ ಮುಖ್ಯ ಕಲಾವಿದನಾಗಿ ಕನ್ನಡಪ್ರಭದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕನ್ನಡಪ್ರಭ ದಿನಪತ್ರಿಕೆ, ಪುರವಣಿಯಲ್ಲಿ ಸುದ್ದಿ, ಕಥೆ, ಕವನ, ವಿಶೇಷಾಂಕಗಳಿಗೆ ಹಲವಾರು ಸಂದರ್ಭಚಿತ್ರ ಮತ್ತು ವ್ಯಕ್ತಿ ಚಿತ್ರ, ವ್ಯಂಗ್ಯ ಚಿತ್ರಗಳ ಹಾಗೂ ವಿನ್ಯಾಸ ರಚನೆ, ಪತ್ರಿಕೆಯ ಅಂಕಣಗಳಿಗೆ ಹಾಗೂ ವಿಶೇಷ ಪುರವಣಿಗಳಲ್ಲಿ ಮುಖಪುಟ, ಸಂದರ್ಭ ಚಿತ್ರಗಳ ರಚನೆ. ವಿಶೇಷ ಸಂದರ್ಭಗಳಲ್ಲಿ ಕನ್ನಡಪ್ರಭ ದಿನಪತ್ರಿಕೆಯ ಮುಖಪುಟ ರಚನೆ. ಇಂಡಿಯನ್ ಎಕ್ಸ್‌ಪ್ರೆಸ್ ಪುರವಣಿ ಹಾಗೂ ಮುಂಬೈನಿಂದ ಪ್ರಕಟವಾಗುತ್ತಿದ್ದ ಇಂಗ್ಲಿಷ್ ಮಾಸಿಕ ಜೆಂಟ್ಸ್‌ಮನ್ ಪತ್ರಿಕೆಗಳಿಗೂ ಇಲಸ್ಟೇಷನ್ ರಚನೆ ಮಾಡಿರುವ ಇವರು ಕನ್ನಡದ ಹಲವಾರು ಶ್ರೇಷ್ಠ ಸಾಹಿತಿಗಳ ಸಾಹಿತ್ಯ ಕೃತಿಗಳಿಗೆ ಮುಖಪುಟ ಚಿತ್ರ ವಿನ್ಯಾಸ ರಚನೆ. ಅಲ್ಲದೆ ಹಲವಾರು ಖ್ಯಾತನಾಮ ಪ್ರಕಾಶನ ಸಂಸ್ಥೆಗಳ ಕನ್ನಡ, ಇಂಗ್ಲಿಷ್, ಸಂಸ್ಕೃತ ಸೇರಿದಂತೆ ಸಾವಿರಾರು ಸಾಹಿತ್ಯ ಕೃತಿಗಳಿಗೆ ಮುಖಪುಟ ರಚನೆ. ಕಲಾತ್ಮಕ ಹಾಗೂ ಪ್ರಶಸ್ತಿ ವಿಜೇತ ಚಿತ್ರಗಳಿಗೆ ಶೀರ್ಷಿಕೆ ವಿನ್ಯಾಸ ಹಾಗೂ ಪ್ರಚಾರ ಕಲೆ ರಚನೆ.ಜನಪ್ರಿಯ ಟಿ.ವಿ. ಧಾರಾವಾಹಿಗಳಿಗೆ ಶೀರ್ಷಿಕೆ ವಿನ್ಯಾಸ ರಚನೆ ಮಾಡಿದ್ದಾರೆ.ಇವರಿಗೆ ಈಗಾಗಲೇ ಹಲವು ಪ್ರಶಸ್ತಿ, ಬಹುಮಾನಗಳು ಲಭಿಸಿವೆ.

ಜೋಗಿ: ಮೂಲತಃ ಉಪ್ಪಿನಂಗಡಿಯವರಾದ ಖ್ಯಾತ ಪತ್ರಕರ್ತ ಗಿರೀಶ್ ರಾವ್ ಹತ್ವಾರ್ ಅವರು ಪ್ರಸ್ತುತ ಬೆಂಗಳೂರಿನಲ್ಲಿ ಕನ್ನಡಪ್ರಭದ ಪುರವಣಿಯ ಪ್ರಧಾನ ಸಂಪಾದಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಲೇಖಕರಾಗಿ, ಕಾದಂಬರಿಕಾರನಾಗಿ, ಅಂಕಣಗಾರರಾಗಿ, ವಿಮರ್ಶಕರಾಗಿ, ಧಾರಾವಾಹಿ ಸಂಭಾಷಣೆಕಾರರಾಗಿ ಗುರುತಿಸಿಕೊಂಡ ಇವರು ಬೆಂಗಳೂರಿನಲ್ಲಿ ಪತ್ನಿ ಜ್ಯೋತಿ, ತಾಯಿ ಶಾರದಾ, ಮಗಳು ಖುಷಿಯೊಂದಿಗೆ ವಾಸವಾಗಿದ್ದಾರೆ. ಇವರ ತಂದೆ ಹತ್ವಾರ ನಾರಾಯಣ ರಾವ್. ಮಂಗಳೂರಿನ ಸುರತ್ಕಲ್ ಹೊಸಬೆಟ್ಟು ಜೋಗಿ ಅವರ ಹುಟ್ಟೂರು. ಉಪ್ಪಿನಂಗಡಿ ಚರ್ಚ್ ಸ್ಕೂಲ್‌ನಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ.ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದ ಇವರು ತನ್ನ 18ನೇ ವಯಸ್ಸಿಗೆ ಬರಹ ಲೋಕಕ್ಕೆ ಕಾಲಿಟ್ಟವರು. ಜತೆಜತೆಗೇ ಮಾತುಗಾರಿಕೆಯ ಕಲೆಯನ್ನು ಮೈಗೂಡಿಸಿಕೊಂಡರು. ರವಿ ಬೆಳಗೆರೆ ಸಾರಥ್ಯದ ಹಾಯ್ ಬೆಂಗಳೂರು ಪತ್ರಿಕೆಯ ಸಹಾಯಕ ಸಂಪಾದಕರಾಗಿ, ಅಚ್ಚರಿ ಮಾಸಪತ್ರಿಕೆಯ ಸಂಪಾದಕರಾಗಿ, ಕನ್ನಡ ಪ್ರಭ ಪತ್ರಿಕೆಯ ಪುರವಣಿ ಸಹ ಸಂಪಾದಕರಾಗಿ, ಇದೀಗ ಕನ್ನಡಪ್ರಭ ಪತ್ರಿಕೆಯ ಪುರವಣಿ ಪ್ರಧಾನ ಸಂಪಾದಕರಾಗಿದ್ದಾರೆ. ಜಾನಕಿ, ಗಿರೀಶ್ ರಾವ್ ಹತ್ವಾರ್, ಎಚ್. ಗಿರೀಶ್ ರಾವ್, ಸತ್ಯವ್ರತ ಹೊಸಬೆಟ್ಟು ಕಾವ್ಯನಾಮದಲ್ಲಿ ಸಾಹಿತ್ಯ ರಚಿಸಿದ್ದಾರೆ. ಕನ್ನಡ ಪ್ರಭ ಪತ್ರಿಕೆಯ ಬಾಲಿವುಡ್ ಗಾಸಿಪ್, ಹಾಯ್ ಬೆಂಗಳೂರು ಪತ್ರಿಕೆಯ ರವಿ ಕಾಣದ್ದು, ರವಿ ಕಾಣದ್ದು ರವಿ ಕಂಡದ್ದು, ಜಾನಕಿ ಕಾಲಂ, ಜಾನಕಿ ಕಾಲಂ 1, ಜಾನಕಿ ಕಾಲಂ 2, ಜೋಗಿಮನೆ, ಜೋಗಿ ಕಾಲಂ, ರೂಪರೇಖೆ, ಸೀಕ್ರೆಟ್ ಡೈರಿ, ಮಹಾನಗರ, ನೋಟ್‌ಬುಕ್, ಅರೆಬೆಳಕು, ಅಂಕಣ ಗಾಳಿಯಾಟ ಇವರ ಅಂಕಣಗಳು. ಹಲವು ಕೃತಿಗಳನ್ನೂ ಇವರು ಬರೆದಿದ್ದಾರೆ.ಈಗಾಗಲೇ ಇವರಿಗೆ ಹಲವು ಪ್ರಶಸ್ತಿಗಳು ಲಭಿಸಿವೆ.

ಶ್ರೀನಿವಾಸ ನಾಯಕ್ ಇಂದಾಜೆ: ಹಿರಿಯ ಪತ್ರಕರ್ತರಾಗಿರುವ ಶ್ರೀನಿವಾಸ ನಾಯಕ್ ಇಂದಾಜೆ ಅವರು ಪಡುವನ್ನೂರು ಗ್ರಾಮದ ಇಂದಾಜೆ ನಿವಾಸಿ. ಎರಡನೇ ಅವಧಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಇವರು ಈ ಮೊದಲು ಉದಯ ಟಿವಿ ಸಹಿತ ವಿವಿಧ ಚಾನೆಲ್‌ಗಳಲ್ಲಿ ಕೆಲಸ ಮಾಡಿದ್ದರು.ಇವರ ಸೇವೆಯನ್ನು ಗುರುತಿಸಿ ಈಗಾಗಲೇ ಹಲವು ಕಡೆಗಳಲ್ಲಿ ಇವರನ್ನು ಸನ್ಮಾನಿಸಲಾಗಿದೆ.

LEAVE A REPLY

Please enter your comment!
Please enter your name here