ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಲಿದೆ ಅಮಿತ್ ಷಾ ಭೇಟಿ

0
-ಆದರ್ಶ್ ಶೆಟ್ಟಿ ಉಪ್ಪಿನಂಗಡಿ

ಏಷ್ಯಾದಲ್ಲೇ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಹಾಗೂ ಹನುಮಗಿರಿ ದೇವಾಲಯದ ಅಮರಗಿರಿ ಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಕರಾವಳಿ ಭಾಗಕ್ಕೆ ಪ್ರವಾಸ ಕೈಗೊಂಡಿರುವ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಷಾ ಭೇಟಿ ಸಹಕಾರಿ ಕ್ಷೇತ್ರ ಮತ್ತು ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ವಾರಣಾಸಿ ಸುಬ್ರಾಯ ಭಟ್ಟರ ಕನಸಿನ ಕೂಸಾದ ಕ್ಯಾಂಪ್ಕೋ ಸಂಸ್ಥೆಯ ಕಾರ್ಯಕ್ರಮದಲ್ಲಿ ಕರಾವಳಿಯ ರೈತಾಪಿ ವರ್ಗದಲ್ಲಿ ಹೊಸ ಭರವಸೆ ಮೂಡಿರುವುದಲ್ಲದೆ ಮುಂಬರುವ ಚುನಾವಣಾ ಹಿನ್ನೆಲೆಯಲ್ಲೂ ಈ ಸಮಾವೇಶ ದಿಕ್ಸೂಚಿಯೆಂದೇ ಅಂದಾಜಿಸಲಾಗಿದೆ.
ಈ ಹಿಂದೆ ಪಕ್ಷದ ರಾಷ್ಟ್ರಾದ್ಯಕ್ಷರಾಗಿದ್ದ ವೇಳೆ ಪುತ್ತೂರು ವಿವೇಕಾನಂದ ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಮಿತ್ ಷಾರ ಪುತ್ತೂರು ಭೇಟಿ ಇದು ಎರಡನೇ ಬಾರಿಯದ್ದಾಗಿದ್ದು, ರಾಜಕೀಯ ಚಾಣಕ್ಯನೆಂದೇ ಕರೆಯಲ್ಪಡುವ ಅಮಿತ್ ಷಾ ಅವರ ತಂತ್ರಗಾರಿಕೆಯಲ್ಲೇ ಕಳೆದ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ದೊಡ್ಡ ಪಕ್ಷವಾಗಿ ಭಾಜಪ ಹೊರಹೊಮ್ಮಿತು. ಪೇಜ್ ಪ್ರಮುಖ್ ಪರಿಕಲ್ಪನೆ, ಬೂತ್ ಸಶಕ್ತೀಕರಣದ ಸೂತ್ರದಾರರಾಗಿರುವ ಷಾರ ಇಂದಿನ ಭೇಟಿ ಪುತ್ತೂರು ಮಾತ್ರವಲ್ಲದೆ ಕರಾವಳಿಯ 7 ವಿಧಾನಸಭಾ ಕ್ಷೇತ್ರವನ್ನು ಕೇಂದ್ರೀಕರಿಸಿದೆ.

ಕರಾವಳಿಯ ಮೂಲ ಬೆಳೆಯಾದ ಅಡಿಕೆ ಕೃಷಿಯ ಮೇಲಿನ ಸಾಧಕ-ಬಾಧಕದ ಕುರಿತಾದ ಚರ್ಚೆಯ ಮಧ್ಯೆ ಅಡಿಕೆ ಬೆಳೆಗಾರರಿಗೆ ಧರ್ಯ ತುಂಬುವ,ಕಾಂಪ್ಕೋ ಮತ್ತು ಅಡಿಕೆ ಬೆಳೆಗಾರರ ನಡುವಣ ಸುದೀರ್ಘ ವರ್ಷಗಳ ಸಂಬಂಧ ಈ ಎಲ್ಲಾ ವಿಚಾರಗಳ ಬಗ್ಗೆ ಸಮಾವೇಶದಲ್ಲಿ ಪ್ರಸ್ತಾಪಗೊಳ್ಳುವ ಸಾಧ್ಯತೆಗಳಿವೆ.

ಅಮಿತ್ ಷಾ ಗುಜರಾತಿನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ನಷ್ಟದಲ್ಲಿದ್ದ ಸಹಕಾರಿ ಬ್ಯಾಂಕ್ ಗಳನ್ನು ಲಾಭದಾಯಕವಾಗಿ ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿರುವುದಲ್ಲದೆ ಸಹಕಾರ ಕ್ಷೇತ್ರದ ಆಳ ಅಗಲವನ್ನು ಚೆನ್ನಾಗಿ ಬಲ್ಲವರು. ದೇಶದ ಆರ್ಥಿಕತೆ ಬಲಿಷ್ಠಗೊಳ್ಳಲು, ಗ್ರಾಮೀಣಾಭಿವೃದ್ಧಿ ಯ ಬೆಳವಣಿಗೆಗೆ ಸಹಕಾರ ಕ್ಷೇತ್ರದ ಪಾತ್ರ ಪ್ರಧಾನವಾದುದು.

ದೇಶದ ವಿವಿಧ ರಾಜ್ಯಗಳ ಪೈಕಿ ಎಲ್ಲಾ ರಾಜ್ಯಗಳಲ್ಲಿ ಸಹಕಾರ ಇಲಾಖೆಯ ಪ್ರಗತಿ ಅಷ್ಟಾಗಿ ಹೊಂದಿಲ್ಲದ ಕಾಲಘಟ್ಟದಲ್ಲಿ ಕೇಂದ್ರ ಸರಕಾರದಲ್ಲಿ ಅಮಿತ್ ಷಾ ಸಹಕಾರ ಸಚಿವರಾದ ಬಳಿಕ ಸಾಕಷ್ಟು ಬದಲಾವಣೆಗೆ ನಾಂದಿ ಹಾಡಿರುವುದಂತೂ ಸತ್ಯ. ಇಂತಹ ಒಂದು ಕಾರ್ಯಕ್ರಮಕ್ಕೆ ಪುತ್ತೂರು ಕ್ಷೇತ್ರದ ಸಂಘ ಮತ್ತು ಪರಿವಾರ ಹಾಗೂ ಬಾಜಾಪದ ಹಿರಿಯ ಕಿರಿಯ ಕಾರ್ಯಕರ್ತ ವರ್ಗ ಅಹರ್ನಿಶಿಯಾಗಿ ದುಡಿಯುತ್ತಿದ್ದು,ಪುತ್ತೂರು ಕ್ಷೇತ್ರದ ನಗರ ಹಾಗೂ ಗ್ರಾಮೀಣ ಭಾಗಗಳು ಭಾಜಪದ ಧ್ವಜ, ಬ್ಯಾನರ್,ಬಂಟಿಂಗ್ಸ್ ಗಳಿಂದ ಕಂಗೊಳಿಸುತ್ತಿದೆ.ಕಾರ್ಯಕ್ರಮದ ಆರಂಭದಿಂದ ಸಮಾರೋಪದವೆರೆಗೂ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಲಾಗಿದೆ.ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರ, ಸಹಕಾರ ಕ್ಷೇತ್ರ, ಪಕ್ಷ ಪರಿವಾರ ಸೇರಿದಂತೆ ವಿವಿಧ ವರ್ಗಗಳ ಸುಮಾರು 50,೦೦೦ ಕ್ಕೂ ಮಿಕ್ಕಿ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು,ಇದಕ್ಕೆ ಬೇಕಾದ ಸಕಲ ವ್ಯವಸ್ಥೆಗಳು ಸಜ್ಜುಗೊಂಡಿದೆ.

LEAVE A REPLY

Please enter your comment!
Please enter your name here