ಬನ್ನೂರು ಸ್ಫೂರ್ತಿ ಮೈದಾನದಲ್ಲಿ ಸಾಮೂಹಿಕ ಶನೀಶ್ವರ ಪೂಜೆ
ಸ್ಫೂರ್ತಿ ಯುವ ಸಂಸ್ಥೆಗಳ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ

0

ಪುತ್ತೂರು:ಬನ್ನೂರು ಸ್ಫೂರ್ತಿ ಮೈದಾನದಲ್ಲಿರುವ ಶ್ರೀ ಶನೀಶ್ವರ ದೇವರ ಸನ್ನಿಧಿಯಲ್ಲಿ ೧೮ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ ಹಾಗೂ ಸ್ಫೂರ್ತಿ ಯುವಕ ಮಂಡಲ, ಯುವತಿ ಮಂಡಲ, ಮಹಿಳಾ ಮಂಡಲ ಹಾಗೂ ಬಾಲಸಭಾದ ೩೩ನೇ ವರ್ಷದ ವಾರ್ಷಿಕೋತ್ಸವವು ಫೆ.೧೧ರಂದು ನಡೆಯಿತು.


ಕೆಮ್ಮಿಂಜೆ ವೇ.ಮೂ ಬ್ರಹ್ಮಶ್ರೀ ಲಕ್ಷ್ಮೀಶ ತಂತ್ರಿಗಳ ಮಾರ್ಗದರ್ಶನದಲ್ಲಿ ನಡೆದ ಸಾಮೂಹಿಕ ಶನೀಶ್ವರ ಪೂಜೆಯಲ್ಲಿ ಬೆಳಿಗ್ಗೆ ಗಣಪತಿ ಹೋಮ, ಶನೀಶ್ವರ ಪೂಜೆ ಪ್ರಾರಂಭಗೊಂಡು ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ಮಧ್ಯಾಹ್ನ ಶ್ರೀ ಮಹಿಷಮರ್ದಿನಿ ಮಹಿಳಾ ಕುಣಿತ ಭಜನಾ ಮಂಡಳಿಯವರಿಂದ ಕುಣಿತ ಭಜನೆ ನಡೆಯಿತು. ಸಂಜೆ ಅಂಗನವಾಡಿ ಪುಟಾಣಿಗಳು, ಶಾಲಾ ಮಕ್ಕಳು ಹಾಗೂ ಸಂಘ-ಸಂಸ್ಥೆಗಳ ಸದಸ್ಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆಯಿತು.


ಸ್ಫೂರ್ತಿ ಯುವ ಸಂಸ್ಥೆಗಳ ವಾರ್ಷಿಕೋತ್ಸವ:
ಸಂಜೆ ನಡೆದ ಸ್ಫೂರ್ತಿ ಯುವಕ ಮಂಡಲ, ಯುವತಿ ಮಂಡಲ, ಮಹಿಳಾ ಮಂಡಲ ಹಾಗೂ ಬಾಲ ಸಭಾದ ೩೩ನೇ ವಾರ್ಷಿಕೋತ್ಸವನ್ನು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನ್ಯಾಯವಾದಿ ಮನೋಹರ ಆರುವಾರ ಮಾತನಾಡಿ, ಸ್ಫೂರ್ತಿ ಯುವ ಸಂಸ್ಥೆಯ ಧಾರ್ಮಿಕ ಹಾಗೂ ಸಾಮಾಜಿಕವಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದು ಹೆಸರಿನಂತೆ ಎಲ್ಲರಿಗೂ ಸ್ಪೂರ್ತಿಯಾಗಿದೆ. ಎಲ್ಲೂ ಕಾಣದ ಶನೀಶ್ವರ ದೇವರ ಸಾನಿಧ್ಯವೂ ಇಲ್ಲಿದೆ. ಇಲ್ಲಿ ನಿರಂತರ ದೇವರ ಸೇವೆ ನಡೆಯುತ್ತಿದೆ. ಇಲ್ಲಿ ದೈವೀ ಸಾನಿಧ್ಯ ಸೃಷ್ಠಿಯಾಗಿದೆ. ಕಾರಣಿಕ ಕ್ಷೇತ್ರವಾಗಿ ಇಲ್ಲಿದೆ ಬರುವ ಭಕ್ತರ ಸಂಖ್ಯೆ ವೃದ್ಧಿಯಾಗುತ್ತಿದೆ. ಶನಿದೇವರ ಆರಧಾನೆಯೊಂದಿಗೆ ಈ ಭಾಗದ, ಜನರ ಅಭಿವೃದ್ಧಿಯಾಗಿದೆ ಎಂದರು.


ಮುಖ್ಯ ಅತಿಥಿ ನಗರ ಸಭಾ ಸದಸ್ಯೆ ಗೌರಿ ಬನ್ನೂರು ಮಾತನಾಡಿ, ನಗರ ಸಭೆಯ ೩೧ ವಾರ್ಡ್‌ಗಳಲ್ಲಿ ಬನ್ನೂರು ಅತೀ ದೊಡ್ಡ ವಾರ್ಡ್. ಶಾಸಕರು ಹಾಗೂ ನಗರ ಸಭಾ ಅಧ್ಯಕ್ಷರ ಮೂಲಕ ಸರಕಾರದಿಂದ ಬರುವ ಅನುದಾನ ಸಮಾನವಾಗಿ ಹಂಚಲಾಗಿದೆ. ಈ ವಾರ್ಡ್‌ನಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಯಾವುದೇ ರಾಜಕೀಯವಿಲ್ಲದೆ ವಾರ್ಡ್‌ನ ಅಭಿವೃದ್ಧಿಯಲ್ಲಿ ಶ್ರಮಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನಗಳನ್ನು ನೀಡಲಾಗುವುದು ಎಂದರು.


ರೈ ಎಸ್ಟೇಟ್ ಎಜ್ಯುಕೇಶನಲ್& ಚಾರಿಟೇಬಲ್ ಟ್ರಸ್ಟ್‌ನ ಪ್ರವರ್ತಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಮಾತನಾಡಿ, ಟ್ರಸ್ಟ್‌ನ ವತಿಯಿಂದ ನೀಡಲಾಗುತ್ತಿರುವ ಸಾಮಾಜಿಕ ಸೇವಾ ಕಾರ್ಯಗಳ ಬಗ್ಗೆ ವಿವರಿಸಿದರು. ಬನ್ನೂರಿನಲ್ಲಿ ದುಸ್ಥಿತಿಯಲ್ಲಿರುವ ನಾಲ್ಕು ಮನೆಗಳ ದುರಸ್ಥಿಗೆ ಸಂಘ- ಸಂಸ್ಥೆಗಳ ಜೊತೆಗೆ ಕೈಜೋಡಿಸುವುದಾಗಿ ಅವರು ಭರವಸೆ ನೀಡಿದರು.
ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷರು, ಸ್ಫೂರ್ತಿ ಯುವ ಸಂಸ್ಥೆಗಳ ಸಂಚಾಲಕ ದಿನೇಶ್ ಸಾಲಿಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ೧೮ ವರ್ಷಗಳಿಂದ ನಿರಂತರವಾಗಿ ದೇವರ ಸೇವೆ. ಇಲ್ಲಿ ಬಂದು ಪ್ರಾರ್ಥಿಸಿದವರಿಗೆ ಸೂಕ್ತ ಪ್ರತಿಫಲ ಲಭಿಸಿದ ನಿದರ್ಶನಗಳಿವೆ. ಯುವ ಸಂಸ್ಥೆಗಳು ಪ್ರತಿಯೊಬ್ಬರ ಸಹಕಾರದಿಂದ ಬೆಳೆಯುತ್ತಿದೆ. ರಾಜಕೀಯ, ಜಾತಿ, ಧರ್ಮ, ಬೇಧ ರಹಿತವಾಗಿ ಸಂಸ್ಥೆ ಸಾಮಾಜಿಕವಾಗಿ ತೊಡಗಿಸಿಕೊಂಡಿದೆ. ಮುಂದೆ ಕ್ಷೇತ್ರದಲ್ಲಿ ಮಕ್ಕಳನ್ನು ಕುಣಿತ ಭಜನೆ ತರಬೇತಿ ನೀಡಲಾಗುತ್ತಿದ್ದು ಮಕ್ಕಳನ್ನು ಕಳುಹಿಸುವಂತೆ ಪೋಷಕರಿಲ್ಲಿ ಮನವಿ ಮಾಡಿದ ಅವರು, ಪೋಷಕರಿಲ್ಲದ ಹುಡುಗನ ದತ್ತು ಸ್ವೀಕಾರ, ದುಸ್ತಿತಿಯಲ್ಲಿರುವ ಮನೆ ದುರಸ್ಥಿಗೆ ದಾನಿಗಳ ಮೂಲಕ ಸಹಕಾರ, ವಿದ್ಯಾ ನಿಧಿಯ ಮೂಲಕ ಸಹಕಾರ ನೀಡುವುದಲ್ಲದೆ ಗ್ರಾಮದ ಅಭಿವೃದ್ದಿಗೆ ಹೋರಾಡುವ ನಿಟ್ಟಿನಲ್ಲಿ ಸಹಕರಿಸಲು ಯುವ ಸಂಸ್ಥೆಯ ಸದಸ್ಯತ್ವ ಅಭಿಯಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸ್ಫೂರ್ತಿ ಯುವತಿ ಮಂಡಲದ ಅಧ್ಯಕ್ಷೆ ಲಾವಣ್ಯ ಅಧ್ಯಕ್ಷತೆ ವಹಿಸಿದ್ದರು. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯೋಜಕ ಶ್ರೀಕಾಂತ್ ಪೂಜಾರಿ ಬಿರಾವು, ಸ್ಫೂರ್ತಿ ಯುವಕ ಮಂಡಲದ ಅಧ್ಯಕ್ಷ ಸೂರ್ಯ ಕೋಟ್ಯಾನ್, ಸ್ಫೂರ್ತಿ ಬಾಲ ಸಭಾದ ಅಧ್ಯಕ್ಷ ಗಣೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸ್ಫೂರ್ತಿಶ್ರೀ ಪ್ರಶಸ್ತಿ ಪ್ರದಾನ:
ಕಾರ್ಯಕ್ರಮದಲ್ಲಿ ಸ್ಫೂರ್ತಿ ಯುವ ಸಂಸ್ಥೆಯಿಂದ ನೀಡುವ ಸ್ಫೂರ್ತಿಶ್ರೀ' ಪ್ರಶಸ್ತಿಯನ್ನು ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಸೇರ ಕೋಟಿಯಪ್ಪ ಪೂಜಾರಿಯವರಿಗೆ ನೀಡಿ ಗೌರವಿಸಲಾಯಿತು. ನಿವೃತ್ತ ಯೋಧ ವಸಂತ ಗೌಡ ದೇವಸ್ಯ, ನಾಟಿ ವೈದ್ಯೆ ಸುಂದರಿ ಭಟ್‌ವರರಿಗೆ ಸನ್ಮಾನ, ಆರೋಗ್ಯ ಸಹಾಯಕಿ ಜಯಂತಿ ಆಶಾ ಕಾರ್ಯಕರ್ತೆ ಕುಸುಮಾರವರಿಗೆ ಗೌರವಾರ್ಪಣೆ ಹಾಗೂ ಬನ್ನೂರು ಹಿ.ಪ್ರಾ ಶಾಲೆಯಲ್ಲಿ ಡಿಸ್ಟಿಂಕ್ಷನ್ ಪಡೆದ ಲಿಖಿತಾ ಹಾಗೂ ವಂದನಾರವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರತಿವರ್ಷದಂತೆ ಯುವ ಸಂಸ್ಥೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಕೃಷ್ಣ ನಾಯ್ಕರವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಸಾನ್ವಿ, ಲಿಖಿತಾ, ಯಜ್ಞ ಪ್ರಾರ್ಥಿಸಿದರು. ಭಕ್ತಿ ಡಿ.ಎಸ್ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕರು, ಯುವ ಸಂಸ್ಥೆಯ ಗೌರವ ಸಲಹೆಗಾರರಾದ ದೇವಿಕ ಹಾಗೂ ಅಮರನಾಥ ಕಾರ್ಯಕ್ರಮ ನಿರೂಪಿಸಿ, ಯುವಕ ಮಂಡಲದ ಕಾರ್ಯದರ್ಶಿ ಆದರ್ಶ ಸಾಲಿಯಾನ್ ವಂದಿಸಿದರು. ಯುವ ಸಂಸ್ಥೆಗಳ ಸದಸ್ಯರಾದ ಜ್ಯೋತಿ, ಗೋಪಾಲ, ಬೇಬಿ ಶೋಭಾನ, ಕುಶಲ ಗೌಡ, ಹೇಮಚಂದ್ರ, ನಾಗೇಶ್, ಉದಯ ಕುಮಾರ್, ನವೀನ್ ರೈ, ದೀಪಕ್, ಆದರ್ಶ ಸಾಲಿಯಾನ್ ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ಬಳಿಕ ಉಬಾರ್ ಗಯಾಪದ ಕಲಾವಿದರಿಂದಏತ್ ಪಂಡಲ ಆತೆ’ ಎಂಬ ತುಳು ನಾಟಕ ಪ್ರದರ್ಶನಗೊಂಡಿತು.

LEAVE A REPLY

Please enter your comment!
Please enter your name here