ದೇಗುಲ ಅಭಿವೃದ್ಧಿಯಾದರೆ ಜನತೆಗೆ ನೆಮ್ಮದಿ, ಕ್ಷೇಮ: ಒಡಿಯೂರು ಶ್ರೀ
ಪ್ರತೀ ದಿನ ದೇವಾಲಯಗಳಿಗೆ ಬರುವ ರೂಢಿ ಮಾಡಿಕೊಳ್ಳಿ: ಮಾಣಿಲ ಶ್ರೀ
ದೇವಸ್ಥಾನಗಳು ಶ್ರದ್ಧಾ ಭಕ್ತಿಯ ಕೇಂದ್ರವಾಗಬೇಕು: ಕಣಿಯೂರು ಶ್ರೀ
ವಿಟ್ಲ : ದೇಗುಲ ಜೀರ್ಣೋದ್ಧಾರ, ಬ್ರಹ್ಮಕಲಶ ಯಶಸ್ವಿಯಾಗಿ ನಡೆದಿದೆ. ಗ್ರಾಮಸ್ಥರಿಗೆ ಜವಾಬ್ದಾರಿ ಜಾಸ್ತಿಯಾಗಿದೆ. ದೇಗುಲ ಅಭಿವೃದ್ಧಿಯಾದರೆ ಜನತೆಗೆ ನೆಮ್ಮದಿ, ಕ್ಷೇಮ ಉಂಟಾಗುತ್ತದೆ. ಭಾವನಾತ್ಮಕವಾಗಿ ಜೀವ ದೇವ ಸಂಬಂಧ ಸಂಪನ್ನಗೊಂಡಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಅವರು ಕನ್ಯಾನ ಗ್ರಾಮದ ದೇಲಂತಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ದೇವರ ಪುನಃಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ದೇಗುಲದೊಳಗೆ ಕೆಟ್ಟ ಮಾತುಗಳನ್ನಾಡಬಾರದು. ದೇಗುಲಕ್ಕೆ ಭಕ್ತರು ಪ್ರತಿದಿನವೂ ಬರಬೇಕು. ತಪ್ಪಿದಲ್ಲಿ ವಾರಕ್ಕೊಮ್ಮೆಯಾದರೂ ಬಂದು ಪ್ರಾರ್ಥಿಸಬೇಕು. ನಮ್ಮ ಮಕ್ಕಳಿಗೆ ನಮ್ಮ ಆಚಾರ ವಿಚಾರವನ್ನು ತಿಳಿಸುವ ಪ್ರಯತ್ನ ಆಗಬೇಕಿದೆ ಎಂದು ಹೇಳಿದರು.
ಕಣಿಯೂರು ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ತಪಸ್ಸು, ನಿಯಮ ಪಾಲನೆ, ಉತ್ಸವ, ಅನ್ನದಾನ ದೇಗುಲದಲ್ಲಿ ನಿರಂತರವಾಗಿ ನಡೆಯಬೇಕು. ದೇವಸ್ಥಾನಗಳು ಶ್ರದ್ಧಾ ಭಕ್ತಿಯ ಕೇಂದ್ರವಾಗಬೇಕು ಎಂದು ಹೇಳಿದರು.
ವಿಟ್ಲ ಅರಮನೆಯ ಬಂಗಾರು ಅರಸರು ಅಧ್ಯಕ್ಷತೆ ವಹಿಸಿದ್ದರು. ಬನಾರಿ ಶ್ರೀ ಗುರುಶಿವಕ್ಷೇತ್ರದ ದಾಮೋದರ ಸ್ವಾಮೀಜಿ, ಮಾಜಿ ಸಚಿವ ಬಿ.ರಮಾನಾಥ ರೈ, ವಿಟ್ಲ ಶ್ರವಣ ಜ್ಯುವೆಲ್ಲರ್‍ಸ್ ಮಾಲಕ ಸದಾಶಿವ ಆಚಾರ್ಯ ಕೈಂತಿಲ, ನ್ಯಾಯವಾದಿ ರವೀಂದ್ರನಾಥ್ ಪಿ.ಎಸ್., ಶ್ರೀಧರ ಶೆಟ್ಟಿ ಗುಬ್ಯ ಮೇಗಿನಗುತ್ತು, ಜೆ.ಎನ್.ಕುಲಾಲ್ ಬೆಂಗಳೂರು, ಡಾ.ಶಿವಶಂಕರ ಭಟ್ ಅಂಗ್ರಿ, ನ್ಯಾಯವಾದಿ ಜಯರಾಮ ರೈ ವಿಟ್ಲ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಟ್ಲ ಅರಮನೆಯ ಪರವಾಗಿ ರಾಜಾರಾಮ ವರ್ಮ ಮಾತನಾಡಿದರು. ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಡಿ.ಚಂದಪ್ಪ ಮೂಲ್ಯ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ರಾವ್ ಎಂ., ಕಾರ್ಯಾಧ್ಯಕ್ಷ ಕೆ.ಆರ್.ಕುಮಾರ್, ಕೋಶಾಧಿಕಾರಿ ಗೋಪಾಲಕೃಷ್ಣ ಶರ್ಮ ದೇಲಂತಬೆಟ್ಟು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಿ.ರಾಮ ದೇಲಂತಬೆಟ್ಟು, ಕೋಶಾಧಿಕಾರಿ ಎ.ಆರ್.ಗಣೇಶ ಶಂಕರ ಅಂಗ್ರಿ, ಪವಿತ್ರಪಾಣಿ ಸುಬ್ಬಾರಾಂ ಪಿಲಿಂಗುಳಿ, ಅರ್ಚಕ ಪ್ರತಿನಿಧಿ ಮಹಾಬಲೇಶ್ವರ ಭಟ್ ದೇಲಂತಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಣ್ಣನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೆ.ಗಿರೀಶ ಶಾಸ್ತ್ರಿ, ಎಂಜಿನಿಯರ್ ಪ್ರಸನ್ನ, ಗುತ್ತಿಗೆದಾರ ನಾಗರಾಜ್, ಹಾಜಿ ಎ.ಉಸ್ಮಾನ್ ಕರೋಪಾಡಿ, ಸಲೀಂ ಮಾಣಿಪ್ಪಾಡಿ ರವರನ್ನು ಗೌರವಿಸಲಾಯಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಜ್ ಕುಮಾರ್ ಬನಾರಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸಂತೋಷ್ ಸಿದ್ಧಕಟ್ಟೆ ಕಾರ್ಯಕ್ರಮ ನಿರೂಪಿಸಿ, ಸಾಂಸ್ಕೃತಿಕ ಸಮಿತಿ ಸಂಚಾಲಕ ಮಾತೇಶ್ ಭಂಡಾರಿ ವಂದಿಸಿದರು.