ನಿಡ್ಪಳ್ಳಿಯ ‘ಮರೆಯಾದ ಮಾಣಿಕ್ಯ’ ಮುರಳೀಕೃಷ್ಣ ಭಟ್
ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ

0

ಬೆಟ್ಟಂಪಾಡಿ: ನಿಡ್ಪಳ್ಳಿಯ ’ಮರೆಯಾದ ಮಾಣಿಕ್ಯ’ ಮುರಳೀಕೃಷ್ಣ ಭಟ್ ರವರು ಕಿರಿಯ ವಯಸ್ಸಿನಲ್ಲಿಯೇ ಉತ್ಕಟ ಸಮಾಜ ಸೇವೆಯ ನಿಷ್ಟಾವಂತ ಕಾರ್ಯಕರ್ತನಾಗಿ ಮೆರೆದು, ಸರ್ವರೊಂದಿಗೂ ಬೆರೆತು ಸಮಾಜಕ್ಕೆ ಓರ್ವ ನಾಯಕನಾಗಿ ಬೆಳೆಯಬೇಕಾದವರು ದೇವರ ಪಾದ ಸೇರಿದರು’ ಎಂದು, ಇತ್ತೀಚೆಗೆ ಕಾರು ಅಪಘಾತದಲ್ಲಿ ಮೃತಪಟ್ಟ ಮುರಳೀಕೃಷ್ಣ ಭಟ್ ಮುಂಡೂರುರವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಕೆಯಾಯಿತು.

ಫೆ.19 ರಂದು ನಿಡ್ಪಳ್ಳಿಯ ವಿಜಯನಗರ ಸಿ.ಎ. ಬ್ಯಾಂಕ್ ಆವರಣದಲ್ಲಿ ನಡೆದ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ನೂರಾರು ನಾಗರಿಕರು, ಕಾರ್ಯಕರ್ತರು, ಬಿಜೆಪಿ ಪಕ್ಷದ ಪ್ರಮುಖರು ಸೇರಿ ನುಡಿನಮನ, ಪುಷ್ಪಾರ್ಚನೆ ಸಲ್ಲಿಸಿದರು.

ಅವರ ಆದರ್ಶ ನಾವು ಮುಂದುವರಿಸಬೇಕಾಗಿದೆ – ಸಾಜ ರಾಧಾಕೃಷ್ಣ ಆಳ್ವ:

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವರವರು ಮಾತನಾಡಿ ’ಮುರಳೀಕೃಷ್ಣರವರು ಮತ್ತೆ ಹುಟ್ಟಿ ಬರಬೇಕನ್ನುವ ಭಾವನೆ ನಮ್ಮೆಲ್ಲರಲ್ಲಿದೆ ಎಂದರೆ ಅವರ ವ್ಯಕ್ತಿತ್ವ ಆದರ್ಶ ಎಂತಹುದೆಂದು ತಿಳಿಯುತ್ತದೆ. ಪಕ್ಷದ ಸಕ್ರಿಯ ಕಾರ್ಯಕರ್ತ, ಸಾಮಾಜಿಕ ಕಾರ್ಯದಲ್ಲಿಯೂ ಅವರ ಕೆಲಸ ಕಾರ್ಯಗಳನ್ನು ನೆನಪಿಸಿಕೊಂಡಾಗ ಅವರು ನಮ್ಮನ್ಮಗಲಿದ್ದಾರೆ ಎಂಬುದನ್ನು ನಂಬಲೂ ಸಾಧ್ಯವಾಗುತ್ತಿಲ್ಲ. ಅವರ ಜೀವನ ಆದರ್ಶವನ್ನು ನಾವೆಲ್ಲಾ ಮುಂದುವರಿಸಿ ಸಮಾಜಕ್ಕೆ ನೀಡಬೇಕಾಗಿದೆ’ ಎಂದರು.

ಉತ್ತಮ ನಾಯಕನಾಗಿ ಮೂಡಿಬರುವ ವ್ಯಕ್ತಿತ್ವ -ಬೂಡಿಯಾರ್ ರಾಧಾಕೃಷ್ಣ ರೈ: ಮುರಳೀ ಭಟ್‌ರವರ ಅಗಲುವಿಕೆ ಭಾಜಪದ ನಾಯಕರು, ಕಾರ್ಯಕರ್ತರು ದುಃಖಪಡುವ ವಿಚಾರವಾಗಿದೆ. ದೇಶಕ್ಕೆ ನಾಯಕನಾಗಿ ಬೆಳೆಯುವ ಎಲ್ಲಾ ಗುಣಗಳು, ವ್ಯಕ್ತಿತ್ವ ಅವರಲ್ಲಿತ್ತು. ಪಕ್ಷದಲ್ಲಿಯೂ ಸಂಘಟನೆ ಮಾಡುವ ನಿಟ್ಟಿನಲ್ಲಿ ಅವರ ಸ್ಪಂದನೆಗೆ ಜಿಲ್ಲೆಯಲ್ಲಿಯೇ ಶ್ಲಾಘನೆ ಇತ್ತು. ಅವರಂತಹ ವ್ಯಕ್ತಿತ್ವದ ವ್ಯಕ್ತಿ ನಿಡ್ಪಳ್ಳಿಯ ಮಣ್ಣಿನಲ್ಲಿ ಹುಟ್ಟಿ ಬರಲಿ’ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಹೇಳಿದರು.

ಬದ್ದತೆಗೆ ಸರಿಸಾಟಿಯಾದ ಮತ್ತೊಬ್ಬ ಕಾರ್ಯಕರ್ತನಿಲ್ಲ – ಮುರಳೀಕೃಷ್ಣ ಹಸಂತಡ್ಕ: ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತೀಯ ಸಹಸಂಯೋಜಕ್ ಮುರಳೀಕೃಷ್ಣ ಭಟ್ ಹಸಂತಡ್ಕ ಮಾತನಾಡಿ ’ಮರೆಯಾದ ಮಾಣಿಕ್ಯ’ ಕ್ಕೆ ಅನ್ವರ್ಥನಾಮ ಮುರಳೀ ಭಟ್‌ರವರು ಆಂಜನೇಯನ ಸ್ವರೂಪದಲ್ಲಿ ಅವರು ಸಮಾಜದಲ್ಲಿ ಕೆಲಸ ನಡೆಸಿದವರು. ಸೃಜನಶೀಲತೆ, ಸಮಾಜಕ್ಕೆ ಏನಾದರೂ ಸೇವೆ ಮಾಡಬೇಕೆಂಬ ಮಾನಸಿಕತೆಯ ವ್ಯಕ್ತಿತ್ವ ಅವರದ್ದಾಗಿತ್ತು. ಅವರಲ್ಲಿದ್ದ ಬದ್ದತೆಗೆ ಸರಿಸಾಟಿಯಾದ ಕಾರ್ಯಕರ್ತ ಬೇರೊಬ್ಬನಿಲ್ಲ. ರಾಜಕೀಯದಲ್ಲಿಯೂ ಧರ್ಮವನ್ನು ಅಳವಡಿಸಿಕೊಂಡವರು. ಅವರಲ್ಲಿದ್ದ ಆದರ್ಶ ಶಾಶ್ವತ. ಅವರ ಕನಸು ಸಾರ್ಥಕತೆ ಮಾಡುವ ಸಂಕಲ್ಪ ಮಾಡಿಕೊಂಡರೆ ಅದು ಅವರಿಗೆ ನಾವು ಸಲ್ಲಿಸುವ ಶ್ರದ್ದಾಂಜಲಿಯಾಗಲಿದೆ.

ಪಂಚಾಯತ್ ಗೆ ಬರಲು ಮನಸ್ಸು ಬರುತ್ತಿಲ್ಲ – ವೆಂಕಟ್ರಮಣ ಬೋರ್ಕರ್: ನಿಡ್ಪಳ್ಳಿ ಗ್ರಾ.ಪಂ. ಉಪಾಧ್ಯಕ್ಷ ವೆಂಕಟ್ರಮಣ ಬೋರ್ಕರ್ ರವರು ಮಾತನಾಡಿ ’ಪಂಚಾಯತ್ ನಲ್ಲಿ ಏನೇ ಸಮಸ್ಯೆ ಇದ್ದರೂ ಅವರನ್ನು ಕರೆದು ಸರಿಪಡಿಸುತ್ತಿದ್ದೆವು. ಸಾವು ಸಹಜವಾದರೂ ಸಣ್ಣ ಪ್ರಾಯದಲ್ಲಿ, ಸಮಾಜ ಸೇವೆ ಆರಂಭಿಸುವ ಸಮಯದಲ್ಲಿಯೇ ಸಾವು ಬಂದಿರುವುದು ಅತೀವ ನೋವು ತಂದಿದೆ. ಕೋಪ ಮಾಡಿಕೊಂಡವರೇ ಅಲ್ಲ. ಅವರು ಹೋದ ಬಳಿಕ ಪಂಚಾಯತ್ ಗೆ ಬರಲು ಮನಸ್ಸು ಬರುತ್ತಿಲ್ಲ. ಎಲ್ಲರೊಳಗೊಂದಾಗಿ ಬದುಕಿದವರು ಮುರಳೀ ಭಟ್ ರವರು’ ಎಂದು ಹೇಳಿ ದುಃಖತಪ್ತರಾದರು.

ಭವಿಷ್ಯದ ನಿರೀಕ್ಷೆಯನ್ನು ದೇವರು ಹುಸಿಗೊಳಿಸಿದರು – ಪದ್ಮನಾಭ ಬೋರ್ಕರ್: ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್ ಮಾತನಾಡಿ ’ಮುಟ್ಟಿದ ಕೆಲಸದಲ್ಲಿ ಅತೀವ ನಿಷ್ಠೆ ಹೊಂದಿದವರು. ಸಕ್ರಿಯ ಮತ್ತು ನಿರಂತರ ಚಟುವಟಿಕೆಯಿಂದ ಇದ್ದ ವ್ಯಕ್ತಿ. ಶ್ರಮಜೀವಿಯಾಗಿ ಇತರ ಯುವಕರಿಗೆ ಮಾದರಿಯಾಗಿದ್ದವರು. ಪಂಚಾಯತ್ ಸದಸ್ಯನಾಗಿ, ಸಾಮರ್ಥ್ಯ, ಪ್ರಭಾವ ಬಳಸಿ ವಾರ್ಡ್ ಗೆ ಅನೇಕ ಅನುದಾನ ತರಿಸಿಕೊಂಡವರು. ಅನೇಕ ವರ್ಷಗಳಿಂದ ಸಮಸ್ಯೆಯಾಗಿ ಉಳಿದಿದ್ದ ಕೂಟೇಲು – ನಿಡ್ಪಳ್ಳಿ ಸಂಪರ್ಕ ರಸ್ತೆಯನ್ನು ತನ್ನ ಅವಿರತ ಪ್ರಯತ್ನದಿಂದ ಮಾಡಿಕೊಟ್ಟವರು. ಅನೇಕ ಸಾಮಾಜಿಕ ಬದ್ದತೆಯ ಕಾರ್ಯ ನಡೆಸುತ್ತಿದ್ದವರು. ಅವರಿಂದ ಸಮಾಜಕ್ಕೆ ನಾವು ಇಟ್ಟುಕೊಂಡಿದ್ದ ಭವಿಷ್ಯದ ನಿರೀಕ್ಷೆಯನ್ನು ದೇವರು ಹುಸಿಗೊಳಿಸಿದರು’ ಎಂದರು.

ಮುರಳೀ ಮರಳಿ ಬನ್ನಿ – ನಾಗೇಶ್ ಗೌಡ ಪುಳಿತ್ತಡಿ: ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ನಾಗೇಶ್ ಗೌಡ ಪುಳಿತ್ತಡಿಯವರು ಮಾತನಾಡಿ ’ನಿಡ್ಪಳ್ಳಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಅತ್ಯಂತ ಸಕ್ರಿಯವಾಗಿ ಹಗಲಿರುಳು ತೊಡಗಿಸಿಕೊಂಡು ಧಾರ್ಮಿಕ ಕ್ಷೇತ್ರದಲ್ಲಿ ಅತೀವ ನಿಷ್ಠೆಯನ್ನು ಹೊಂದಿದ್ದರು. ಬಿಜೆಪಿಯ ಕಾರ್ಯಕರ್ತನಾದರೂ ಎಲ್ಲಾ ಪಕ್ಷದವರೂ ಅವರೊಡನೆ ಉತ್ತಮ ಬಾಂಧವ್ಯ ಹೊಂದಿದ್ದರು. ಎಲ್ಲರೊಡನೆ ಬೆರೆತು ಬಾಳುವ ವಿಶೇಷ ವ್ಯಕ್ತಿತ್ವ ಅವರಲ್ಲಿತ್ತು. ಮುರಳಿ ಮರಳಿ ಹುಟ್ಟಿ ಬನ್ನಿ’ ಎಂದು ಹೇಳಿದರು.

ಕಿರಿಯನಾದರೂ ಮಾದರಿಯಾಗಿದ್ದವರು – ಆರ್.ಸಿ. ನಾರಾಯಣ್: ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್. ಸಿ. ನಾರಾಯಣ ರೆಂಜ ಮಾತನಾಡಿ ’ಬಿಜೆಪಿಯಲ್ಲಿ ಮುರಳೀಯವರಂತಹ ಕಾರ್ಯಕರ್ತರಿದ್ದು ಕೆಲಸ ಮಾಡಬೇಕೆಂಬ ಅಪೇಕ್ಷೆ ಇಟ್ಟುಕೊಂಡಿದ್ದೆವು. ಓರ್ವ ಕಿರಿಯ ಕಾರ್ಯಕರ್ತನಾದರೂ ಪಕ್ಷದಲ್ಲಿರುವ ಹಿರಿಯರಿಗೂ ಮಾದರಿಯಾಗಿದ್ದವರು. ಜಿಲ್ಲೆಯ ಓರ್ವ ಒಳ್ಳೆಯ ಕಾರ್ಯಕರ್ತ ಎನಿಸಿಕೊಂಡವರು. ಸಂಘಟನೆಯಲ್ಲಿಯೂ ಎಲ್ಲರೊಡನೆ ಪ್ರೀತಿಯಿಂದ ಕಂಡವರು. ಕಿರಿಯನಾದರೂ ಸಮಾಜದ ಹಿತ ಕಾಪಾಡುವ ಅವರ ವ್ಯಕ್ತಿತ್ವಕ್ಕೆ ನಮ್ಮ ಗೌರವ ಹಿರಿಯ ಸ್ಥಾನದಲ್ಲಿತ್ತು. ದೇವರ ಪಾದಕ್ಕೆ ಸೇರುವ ಹೂವಾಗಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದರು.

ಸಂಘದ ’ದಕ್ಷ’ ಸ್ವಯಂಸೇವಕ – ಡಾ. ಅಖಿಲೇಶ್ ಪಾಣಾಜೆ: ಆರ್‌ಎಸ್‌ಎಸ್ ಸ್ವಯಂಸೇವಕನಾಗಿ ಅನೇಕ ಯುವಕರನ್ನು ಸಂಘ ಪರಿವಾರದಲ್ಲಿ ತೊಡಗಿಸಿಕೊಳ್ಳುವಲ್ಲಿ ಪ್ರೇರಕ ಶಕ್ತಿಯಾಗಿದ್ದರು. ಸಂಘ ಎಂದಾಕ್ಷಣ ’ದಕ್ಷ’ ಸ್ಥಿತಿಯಲ್ಲಿರುತ್ತಿದ್ದರು. ಕಾರ್ಯಕರ್ತರನ್ನು ಜೋಡಿಸುವಲ್ಲಿ ಅವರದ್ದು ಎತ್ತಿದ ಕೈ. ಸಂಘದ ಬೈಠಕ್ ನಲ್ಲಿ ನಿಡ್ಪಳ್ಳಿಯ ಹೆಸರು ಹೇಳಿದಾಕ್ಷಣ ಮುರಳೀ ಭಟ್ ರವರ ಹೆಸರು ಬರುತ್ತಿತ್ತು. ಸಂಘ ಕಾರ್ಯದಲ್ಲಿ ನಿರೀಕ್ಷೆಗಿಂತ ಹೆಚ್ಚು ಅವರ ಸ್ಪಂದನೆ ಇತ್ತು. ಹಾಗಾಗಿ ಸಂಘವೂ ಓರ್ವ ’ದಕ್ಷ’ ಸ್ವಯಂಸೇವಕನನ್ನು ಕಳೆದುಕೊಂಡಿದೆ’ ಎಂದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ನಿಡ್ಪಳ್ಳಿ ಗ್ರಾ.ಪಂ. ಅಧ್ಯಕ್ಷೆ ಗೀತಾ, ಸದಸ್ಯರುಗಳು, ಬೆಟ್ಟಂಪಾಡಿ ಗ್ರಾ.ಪಂ. ಉಪಾಧ್ಯಕ್ಷ ವಿನೋದ್ ಕುಮಾರ್ ರೈ, ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ರೈ ಕೊಪ್ಪಳ, ಪ್ರಕಾಶ್ ಬೋರ್ಕರ್ ಸೇರಿದಂತೆ ಊರಿನ ಹಲವು ಸಂಘ ಸಂಸ್ಥೆಗಳ ಪ್ರಮುಖರು, ಬಿಜೆಪಿ ಗ್ರಾಮಾಂತರ ಮಂಡಲ ಪ್ರ.ಕಾರ್ಯದರ್ಶಿ ನಿತೀಶ್ ಶಾಂತಿವನ, ಹರೀಶ್ ಬಿಜತ್ರೆ ಸೇರಿದಂತೆ ಪಕ್ಷದ ಪ್ರಮುಖರು, ಗ್ರಾಮ ಸಮಿತಿ, ಬೂತ್ ಸಮಿತಿ ಮುಖ್ಯಸ್ಥರು, ಮಹಿಳೆಯರೂ ಸೇರಿದಂತೆ ಮುರಳೀ ಭಟ್ ರವರ ಅಪಾರ ಅಭಿಮಾನಿ ಬಳಗ, ಮುರಳೀ ಭಟ್ ಸಹೋದರ ಕೃಷ್ಣಕುಮಾರ್ ಮತ್ತು ಬಂಧುಗಳು, ಪಂಚಾಯತ್ ಪಿಡಿಒ ಸಂಧ್ಯಾಲಕ್ಷ್ಮಿ, ಸಿಬಂದಿಗಳು, ಸಂಜೀವಿನಿ ಒಕ್ಕೂಟದ ಸದಸ್ಯರು ಸಭೆಯಲ್ಲಿ ಪಾಲ್ಗೊಂಡು ಬಳಿಕ ಮುರಳೀಕೃಷ್ಣರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಮುಖ್ಯಗುರು ರಾಜೇಶ್ ನೆಲ್ಲಿತ್ತಡ್ಕ ನಿರೂಪಿಸಿದರು.

LEAVE A REPLY

Please enter your comment!
Please enter your name here