ಪುತ್ತೂರು: 11 ವರ್ಷಗಳ ಹಿಂದೆ ಪುತ್ತೂರಿನಲ್ಲಿ ಮದವೇರಿ ಮಾವುತನನ್ನೇ ಕೊಂದ ಲಕ್ಷ್ಮೀಶ ಎಂಬ ಹೆಸರಿನ ಆನೆಯನ್ನು ನಿಗ್ರಹಿಸಿ ಬಂಧಿಸುವಲ್ಲಿ ದುಬಾರೆಯ ಪಳಗಿದ ಅಭಿಮನ್ಯು ಹೆಸರಿನ ಆನೆ ಯಶಸ್ವಿಯಾಗಿತ್ತು.
ಇದೀಗ ಮರ್ದಾಳ ಸಮೀಪದ ನೈಲ ಎಂಬಲ್ಲಿ ಫೆ.20ರಂದು ಎರಡು ಜೀವಗಳನ್ನು ಬಲಿ ಪಡೆದ ಕೊಬ್ಬಿದ ಕಾಡಾನೆಯನ್ನು ಬಂಧಿಸಲು ಇದೇ ಅಭಿಮನ್ಯುವನ್ನು ದುಬಾರೆಯಿಂದ ಕೆರತರಲಾಗಿದೆ. ಮರ್ದಾಳದಲ್ಲಿ ಕಾಡಾನೆಗಾಗಿ ಕಾರ್ಯಾಚರಣೆ ನಡೆಸಲು ಮೈಸೂರು ಮತ್ತು ದುಬಾರೆಯಿಂದ 5 ಆನೆಗಳನ್ನು ತರಲಾಗಿದೆ. ಈ ಪೈಕಿ ಅಭಿಮನ್ಯು ಈ ಗಜಗಳ ತಂಡದ ನಾಯಕನಾಗಿದ್ದಾನೆ. ಮೈಸೂರ್ ದಸರಾ ವೇಳೆ ಅಂಬಾರಿ ಹೊರುವ ಅಭಿಮನ್ಯು, 2012 ಡಿಸೆಂಬರ್ ಕೊನೆಯಲ್ಲಿ ಪುತ್ತೂರಿನಲ್ಲಿ ಮಾವುತನನ್ನೇ ಕೊಂದ ಲಕ್ಷ್ಮೀಶ ಎಂಬ ಆನೆಯನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಇದೀಗ ಮತ್ತೆ ಪುತ್ತೂರಿಗೆ ಬಂದಿರುವ ಅಭಿಮನ್ಯು ಮರ್ದಾಳದ ಕಾಡಾನೆಯ ಹೆಡೆಮುರಿ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾನೆ.