ಬಡಗನ್ನೂರುಃ ಐತಿಹಾಸಿಕ ಕ್ಷೇತ್ರ ಪಡುಮಲೆ ಶ್ರೀ ಕೂವೆಶಾಸ್ತರ ವಿಷ್ಣಮೂರ್ತಿ ದೇವಾಲಯದ ಬ್ರಹ್ಮಕಲಶೋತ್ಸವವು ಫೆ.25 ರಿಂದ ಆರಂಭಗೊಳ್ಳಲಿದ್ದು, ಕ್ಷೇತ್ರ ಸರ್ವ ಸಜ್ಜುಗೊಂಡಿದೆ. ಅಂತಿಮ ಹಂತದ ಸಿದ್ಧತಾ ಕಾರ್ಯಗಳು ಭರದಿಂದ ನಡೆಯುತ್ತಿವೆ.
ಕ್ಷೇತ್ರದ ಸುತ್ತಲಿನ ಕೌಡಿಚ್ಚಾರು, ಪೆರಿಗೇರಿ, ಪಟ್ಟೆ, ನೆಕ್ಕರೆ, ಮುಡುಪಿನಡ್ಕ, ಕೊಯಿಲ, ಮೈಂದನಡ್ಕ, ನಿಡ್ಪಳ್ಳಿ, ಸುಳ್ಯಪದವು ಭಾಗಗಳಿಂದ ಕೇಸರಿ ಬಂಟಿಂಗ್ಸ್, ಶುಭಕೋರುವ ಕಟೌಟ್, ಆಕರ್ಷಕ ದ್ವಾರಗಳನ್ನು ಆಳವಡಿಸುವ ಮೂಲಕ ಭಕ್ತರು ಸಿದ್ಧತಾ ಕಾರ್ಯಗಳನ್ನು ನಡೆಸಿದ್ದಾರೆ. ಕ್ಷೇತ್ರಕ್ಕೆ ಆಗಮಿಸುವ ಸರ್ವ ದಿಕ್ಕಿನ ರಸ್ತೆಗಳಲ್ಲಿ ತಳಿರು ತೋರಣಗಳಿಂದ ಸಿಂಗರಗೂಂಡು ಊರ ಪರವೂರ ಭಕ್ತಾಧಿಗಳನ್ನು ಸ್ವಾಗತಿಸಲು ಕಾಯುತ್ತಿದೆ.
ಕ್ಷೇತ್ರದಲ್ಲಿ ವೇದಿಕೆ, ಸಭಾಂಗಣ, ಹೊರೆಕಾಣಿಕೆ ಶೇಖರಣೆ ವಿಭಾಗ, ಅಡುಗೆ ಜಾಗಳಲ್ಲಿ ಶೀಟ್ ಅಳವಡಿಸಿ ವ್ಯವಸ್ಥೆ ಮಾಡಲಾಗಿದೆ. ದೇವಾಲಯದ ಸುತ್ತಲೂ ವಿದ್ಯುತ್ ಅಲಂಕಾರದ ವ್ಯವಸ್ಥೆ ಮಾಡಲಾಗಿದೆ.
ವಿಶೇಷತೆ
ದೇವಾಲಯದ ಒಳಭಾಗದಲ್ಲಿ ಹಾಗೂ ರಾಜಗೋಪುರದ ಭಾಗಗಳಲ್ಲಿ ಸಂಪೂರ್ಣ ಸಾಂಪ್ರದಾಯಿಕ ತೆಂಗಿನ ಗರಿಯ ತಟ್ಟಿ ಅಳವಡಿಸುವ ಸಮಿತಿಯ ಕಲ್ಪನೆ ಈಡೇರಿದೆ. ಭಕ್ತರ ಮನೆಗಳಲ್ಲಿ ತೆಂಗಿನ ಗರಿ ತಟ್ಟಿ ರಚಿಸಿ ದೇವಾಲಯಕ್ಕೆ ನೀಡಿದ್ದಾರೆ. ದೇವಾಲಯದಲ್ಲೂ ತಟ್ಟಿ ಹೆಣೆಯುವವರಿಗೆ ತರಬೇತಿಯನ್ನು ನೀಡಿ ಅವಕಾಶ ಕಲ್ಪಿಸಲಾಗಿತ್ತು. ಸುಮಾರು 10 ಸಾವಿರಕ್ಕೂ ಮಿಕ್ಕಿ ತಟ್ಟಿಗಳನ್ನು ಭಕ್ತರು ಕ್ಷೇತ್ರಕ್ಕೆ ಒದಗಿಸುವ ಮೂಲಕ ಕ್ಷೇತ್ರ ಸಾಂಪ್ರದಾಯಿಕ ರಂಗಿನಲ್ಲಿ ಕಂಗೊಳಿಸಲು ಸಹಕಾರ ನೀಡಿದ್ದಾರೆ.
ಬ್ರಹ್ಮಕಲಶಕ್ಕಾಗಿ ತರಕಾರಿ
ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಬಳಕೆಗಾಗಿ ದೇವಾಲಯ ಸಮೀಪದ ಗದ್ದೆಯಲ್ಲಿ ಭಕ್ತರ ಸಹಕಾರದೊಂದಿಗೆ ತರಕಾರಿ ಕೃಷಿಯನ್ನು ಮಾಡಲಾಗಿತ್ತು. ಅನ್ನ ಪ್ರಸಾದಕ್ಕೆ ಸಂಬಂಧಿಸಿದಂತೆ ಬಳಕೆಗೆ ಇಲ್ಲಿಂದ ಒಂದಷ್ಟು ತರಕಾರಿಗಳು ಲಭಿಸಿವೆ.
ಫೆ. 28 ರಂದು ಕ್ಷೇತ್ರಕ್ಕೆ ಪೂಜ್ಯ ಹೆಗ್ಗಡೆಯವರ ಆಗಮನ
ಧರ್ಮಸ್ಥಳ ಧರ್ಮಾಧಿಕಾರಿ ಪದ್ಮವಿಭೂಷಣ ರಾಜರ್ಷಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಪಡುಮಲೆಗೆ ಪಾದಸ್ಪರ್ಷ ಮಾಡಿ ಬಳಿಕ ಬೆಳಗ್ಗೆ ಗಂ 10 ಕ್ಕೆ ನಡೆಯುವ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಬ್ರಹ್ಮಕಲಶೋತ್ವವ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು ತಿಳಿಸಿರುತ್ತಾರೆ.