ಕಡಬ: ಪಶ್ಚಿಮಘಟ್ಟದ ತಪ್ಪಲಿನ ಕೊಂಬಾರು ಗ್ರಾ.ಪಂ. ವ್ಯಾಪ್ತಿಯ ಕೊಂಬಾರು ಹಾಗೂ ಸಿರಿಬಾಗಿಲು ಗ್ರಾಮಗಳಲ್ಲಿ ಹಲವು ವರ್ಷಗಳಿಂದ ಆನೆ ಹಾವಳಿ ಮಿತಿಮೀರಿದ್ದು, ಇಲ್ಲಿ ಆನೆಗಳಿಂದ ಜನ ಪ್ರಾಣ ಕಳೆದುಕೊಳ್ಳುವ ಮುನ್ನ ಆನೆಗಳನ್ನು ಸೆರೆಹಿಡಿದು ಸ್ಥಳಾಂತರಿಸುವ ಕಾರ್ಯ ನಡೆಯಬೇಕೆಂದು ಕೊಂಬಾರು ಗ್ರಾ.ಪಂ. ಅಧ್ಯಕ್ಷೆ ಜಯಶ್ರೀ ರಾಮಚಂದ್ರ ಗೌಡ ಅಗ್ರಹಿಸಿದ್ದಾರೆ.
ಅವರು ಗುರುವಾರ ಕಡಬದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಕೊಂಬಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಆನೆಗಳ ಉಪಟಳ ಜಾಸ್ತಿಯಾಗುತ್ತಿದೆ. ಇಲ್ಲಿನ ಜನ ಪ್ರಾಣ ಭಯದಿಂದಲೇ ಓಡಾಡುವಂತಾಗಿದೆ. ಕೊಂಬಾರು ಹಾಗೂ ಸಿರಿಬಾಗಿಲು ಗ್ರಾಮಗಳ ಸುಮಾರು 17-19 ಸಾವಿರ ಎಕ್ರೆ ಭೂಮಿಯಲ್ಲಿ ಹೆಚ್ಚಿನ ಪ್ರದೇಶ ಅರಣ್ಯದಿಂದ ಕೂಡಿದ್ದು, 3-5 ಸಾವಿರ ಎಕ್ರೆ ಪ್ರದೇಶದಲ್ಲಿ ಮಾತ್ರ ಕೃಷಿ ಚಟುವಟಿಕೆ ನಡೆಯುತ್ತಿದೆ. ಈ ಪ್ರದೇಶ ಹೊಂದಿರುವ ಶೇ. 89 ರಷ್ಟು ಕೃಷಿಕರೇ ವಾಸಿಸುತ್ತಿರುವ ಕುಗ್ರಾಮವಾಗಿದೆ. ಹೈನುಗಾರಿಕೆ ಕೂಡಾ ಇಲ್ಲಿನ ಜನರ ಉಪ ಕಸುಬಾಗಿದೆ. ಇಲ್ಲಿ ಹೆಚ್ಚಿನ ಅರಣ್ಯ ಪ್ರದೇಶದಿಂದಾಗಿ ಕಾಡುಪ್ರಾಣಿಗಳ ಹಾವಳಿ ಬಹಳ ಹಿಂದಿನಿಂದಲೂ ಇದೆ. ತಾಲೂಕು ಕೇಂದ್ರ ಮತ್ತು ಶಾಲಾ ಕಾಲೇಜುಗಳಿಗೆ ಸಂಪರ್ಕಿಸುವ ರಸ್ತೆಗಳು ಅರಣ್ಯ ಭಾಗದ ಮಧ್ಯದಲ್ಲಿ ಹಾದು ಹೋಗುತ್ತಿದ್ದು, ಈ ರಸ್ತೆಗಳನ್ನು ಅಂಗನವಾಡಿ ಕೇಂದ್ರದ ಪುಟಾಣಿಗಳು, ಪ್ರಾಥಮಿಕ ಮತ್ತು ಪ್ರೌಢಶಾಲಾ, ಕಾಲೇಜು ವಿದ್ಯಾರ್ಥಿಗಳು ಅವಲಂಬಿಸಿರುತ್ತಾರೆ. ಸಾರ್ವಜನಿಕರು ತಾಲೂಕು ಕೇಂದ್ರಗಳಿಗೆ, ಗ್ರಾ.ಪಂ. ಕೆಲಸ ಕಾರ್ಯಗಳಿಗೆ ಇದೇ ಅರಣ್ಯ ಭಾಗದಲ್ಲಿ ಹಾದು ಹೋಗುವ ರಸ್ತೆಗಳನ್ನೇ ಬಳಸಬೇಕಿದೆ.
ಇತ್ತೀಚಿನ ವರ್ಷಗಳಲ್ಲಿ ಆನೆಗಳ ಹಾವಳಿಯಿಂದ ಇಲ್ಲಿ ಅಪಾರ ಪ್ರಮಾಣದ ಕೃಷಿ ನಾಶವಾಗುತ್ತಿರುವುದು ಸಾಮಾನ್ಯವಾಗಿದೆ. ಈ ಬಗ್ಗೆ ಇಲಾಖೆಗಳಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾ.ಪಂ.ನಿಂದ ಮನವಿ ಮಾಡಿಕೊಳ್ಳಲಾಗಿದೆ. ಆದರೆ ಇಲಾಖೆಯವರು ಕೃಷಿ ಹಾನಿಗೆ ಅಲ್ಪ ಪ್ರಮಾಣದ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಾರೆ. ನಮ್ಮಲ್ಲಿ ಆನೆ ಹಾವಳಿಗೆ ಶಾಶ್ವತ ಪರಿಹಾರ ಸಿಕ್ಕಿಯೇ ಇಲ್ಲ. ಇತ್ತೀಚೆಗಂತೂ ಆನೆಗಳ ಅಟ್ಟಹಾಸ ವಿಪರೀತವಾಗಿದೆ. ಗ್ರಾಮದ ಕಮರ್ಕಜೆಯಲ್ಲಿ ಇತ್ತೀಚೆಗೆ ಚಿರತೆಯೊಂದು ಕಾಣಿಸಿಕೊಂಡು ಅದನ್ನು ಸ್ಥಳಾಂತರಿಸಿದ್ದರೂ ಜನರಲ್ಲಿನ ಭೀತಿ ಕಡಿಮೆಯಾಗಿಲ್ಲ. ಇಲ್ಲಿ ಹೈನುಗಾರಿಕೆ ಮಾಡುವ ರೈತರು ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಬೆಳಗಿನ ಜಾವ ಮತ್ತು ಸಂಜೆಯ ವೇಳೆ ಹಾಲು ಹಾಕಲು ತೆರಳುವಾಗ ಆನೆಗಳು ಕಾಣಿಸಿಕೊಳ್ಳುವುದರಿಂದ ಹೆಚ್ಚಿನ ಜನರು ಹೈನುಗಾರಿಕೆಯನ್ನೇ ತ್ಯಜಿಸಿದ್ದಾರೆ. ಆನೆ ಹಾವಳಿಯಿಂದ ಮಹಿಳೆಯವರು, ಮಕ್ಕಳು ಮನೆಯಿಂದ ಹೊರ ನಡೆಯಲು ಭಯಪಡುವಂತಾಗಿದೆ. ರೈತರು ತಮ್ಮ ತೋಟಗಳಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಿಲ್ಲದಂತಾಗಿದೆ. ಇಲ್ಲಿರುವ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ರಬ್ಬರ್ ತೋಟದಲ್ಲಿನ ಕಾರ್ಮಿಕರು ಮುಂಜಾವಿನ ವೇಳೆ ಟ್ಯಾಪಿಂಗ್‌ಗೆ ತೆರಳಲು ಭಯಪಡುತ್ತಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಯಾವುದೇ ಪ್ರಾಣ ಹಾನಿಯಾಗುವ ಮುನ್ನ ಆನೆಗಳ ಹಾವಳಿಗೆ ಶಾಶ್ವತ ಪರಿಹರ ಒದಗಿಸಬೇಕು. ಆನೆ ಕಂದಕಗಳನ್ನು ವ್ಯವಸ್ಥಿತವಾಗಿ ನಿರ್ಮಾಣ ಮಾಡಬೇಕು. ಈಗ ನಡೆಯುತ್ತಿರುವ ಆನೆಗಳ ಸ್ಥಳಾಂತರ ಕಾರ್ಯಾಚರಣೆಯನ್ನು ಕೊಂಬಾರು ಮತ್ತು ಸಿರಿಬಾಗಿಲು ಪ್ರದೇಶಕ್ಕೂ ವಿಸ್ತರಿಸಿ ಜನರು ನೆಮ್ಮದಿಯಿಂದ ಬದುಕುವಂತೆ ಮಾಡಬೇಕು ಎಂದು ಜಯಶ್ರೀ ರಾಮಚಂದ್ರ ಗೌಡ ಒತ್ತಾಯಿಸಿದರು.
ಗ್ರಾ.ಪಂ. ಸದಸ್ಯ ಮಧುಸೂದನ ಕೊಂಬಾರು ಮಾತನಾಡಿ ಆನೆ ದಾಳಿಯಿಂದ ಹಾನಿಯಾದ ಕೃಷಿಗೆ ಅಲ್ಪ ಪ್ರಮಾಣದ ಪರಿಹಾರ ನೀಡಲಾಗುತ್ತದೆ. ಹಾನಿಯಾದ ಕೃಷಿಗೆ ಸೂಕ್ತ ಪರಿಹಾರ ನೀಡುವುದರೊಂದಿಗೆ ಮತ್ತೆ ಕೃಷಿ ಮಾಡಲು ಬೇಕಾದ ಆರ್ಥಿಕ ನೆರವು ನೀಡಬೇಕು ಎಂದು ಆಗ್ರಹಿಸಿದರು.
ಗ್ರಾಮಸ್ಥ ಶಿವಪ್ರಸಾದ್ ಕಾಯರ್ತಡ್ಕ ಮಾತನಾಡಿ ಎಲ್ಲಿಂದಲೋ ಆನೆಗಳನ್ನು ತಂದು ಇಲ್ಲಿ ಬಿಡಲಾಗುತ್ತಿದೆ. ಅದರಿಂದ ನಮಗೆ ತೊಂದರೆಯಾಗುತ್ತಿದೆ. ಈ ಎಲ್ಲಾ ಪುಂಡಾನೆಗಳನ್ನು ಕೂಡಲೇ ಜನವಸತಿ ಪ್ರದೇಶದಿಂದ ದೂರಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳದಿದ್ದರೆ ಮುಂದಿನ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಉಮೇಶ್ ಗೌಡ ಕೊಂಬಾರುಗದ್ದೆ, ಕೋಕಿಲನಂದ ಕಮರ್ಕಜೆ, ರಾಮಚಂದ್ರ ಗೌಡ ಕಾಪಾರು ಉಪಸ್ಥಿತರಿದ್ದರು.