6 ನೇ ಕರ್ನಾಟಕ ಗಡಿನಾಡ ಸಮ್ಮೇಳನ ಉದ್ಘಾಟನೆ – ‘ಗಡಿನಾಡ ಧ್ವನಿ’ ಪ್ರಶಸ್ತಿ ಪ್ರದಾ‌ನ

0

ಬೆಟ್ಟಂಪಾಡಿ: ಕೆದಂಬಾಡಿ ಜತ್ತಪ್ಪ ರೈ ವೇದಿಕೆ/ ಕಾಕೆಕೊಚ್ಚಿ ಈಶ್ವರ ಭಟ್ ಸಭಾಂಗಣ: ಗಡಿನಾಡಿನ ಪ್ರಜೆಗಳ ಶ್ರೇಯೋಭಿವೃದ್ಧಿಗಾಗಿ ಆಡಳಿತ ವ್ಯವಸ್ಥೆಯು ಸದಾ ಚಿತ್ತ ಹರಿಸಲು  ಮತ್ತು ವಿಶ್ವದೆಲ್ಲೆಡೆ ಗಡಿನಾಡ ಸಂಸ್ಕೃತಿಯ ಪ್ರಸಾರಕ್ಕಾಗಿ ಗಡಿನಾಡ ಕನ್ನಡ ಸಮ್ಮೇಳನಗಳು ಮಹತ್ವ ಪಡೆದಿವೆ ಎಂಬ ಸದಾಶಯದ ನುಡಿಗಳು 6 ನೇ ಕರ್ನಾಟಕ ಗಡಿನಾಡ ಸಮ್ಮೇಳನದಲ್ಲಿ ವ್ಯಕ್ತಗೊಂಡವು‌.

ಗಡಿನಾಡ ಧ್ವನಿ ಮಾಸಪತ್ರಿಕೆ, ಗಡಿನಾಡ ಶ್ರೇಯೋಭಿವೃದ್ದಿ ಟ್ರಸ್ಟ್ ಆರ್ಲಪದವು, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಒಡ್ಯ ಇವರ ಸಹಕಾರದೊಂದಿಗೆ ವಿವಿಧ ಅಭಿವೃದ್ಧಿ ಪ್ರಾಧಿಕಾರ ಮತ್ತು ಸಾಹಿತ್ಯ ಅಕಾಡೆಮಿಗಳ ಸಹಯೋಗದಲ್ಲಿ ಪಾಣಾಜೆ ಒಡ್ಯ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆದ ೬ ಕರ್ನಾಟಕ ನೇ ಗಡಿನಾಡ ಸಮ್ಮೇಳನದ ಉದ್ಘಾಟನೆ ಫೆ‌. 25 ರಂದು ಬೆಳಿಗ್ಗೆ ನಡೆಯಿತು.

ಇಂಗ್ಲೀಷ್ ಮಾಧ್ಯಮ ಇತರ ಭಾಷೆಗಳನ್ನು ಕೆಡಿಸುತ್ತಿದೆ – ಎಸ್.ಜಿ. ಕೃಷ್ಣ

ದೀಪ ಬೆಳಗಿಸಿ ಉದ್ಘಾಟಿಸಿದ ಹಿರಿಯ ಸಾಹಿತಿ ಎಸ್.ಜಿ. ಕೃಷ್ಣರವರು ಮಾತನಾಡಿ ‘ಇಂಗ್ಲೀಷ್ ಮಾಧ್ಯಮ ಇತರ ಭಾಷೆಗಳನ್ನು ಕೆಡಿಸುತ್ತದೆ. ದಾರಿ ಸ್ವಲ್ಪ ತಪ್ಪಿದೆ. ಇಂಗ್ಲೀಷ್ ಭಾಷೆಗೆ ಒಮ್ಮೆ ಒಗ್ಗಿದರೆ ಇತರ ಭಾಷೆಗಳು ನಮಗೆ ತೀರಾ ಕೆಳಮಟ್ಟದ್ದು ಅನ್ನುವ ಭಾವನೆಗೆ ಒಳಗಾಗುತ್ತಾರೆ.  ಇಂಗ್ಲೀಷ್ ಕಲಿತ ಮಕ್ಕಳಲ್ಲಿ ಮನೋಸ್ಥಿತಿ ಬದಲಾಗಿರುತ್ತದೆ.ದೇಶೀಯ ಭಾಷೆಗಳಿಗೆ ಒತ್ತು ಕೊಡಬೇಕಾಗಿದೆ. ಇಂಗ್ಲೀಷ್ ಬೇಡ ಅನ್ನುತ್ತಿಲ್ಲ‌. ಆದರೆ ಎಸ್ ಎಸ್ ಎಲ್ ಸಿಯವರೆಗೆ ಕನ್ನಡವೇ ಇರಲಿ’ ಎಂದರು.

ರಾಮಾಯಣ, ಮಹಾಭಾರತ ಸಾರ್ವಕಾಲಿಕ ಸಾಹಿತ್ಯಗಳು – ಮಾತಾನಂದಮಯೀ

ಆಶೀರ್ವಚ‌ನ ನೀಡಿದ ಒಡಿಯೂರು ಶ್ರೀ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯಿರವರು ಮಾತನಾಡಿ ‘ರಾಮಾಯಣ ಮಹಾಭಾರತ ಸಾರ್ವಕಾಲಿಕ ಸಾಹಿತ್ಯಗಳು. ದೇಹದಲ್ಲಿನ ನಾಡಿಗಳಂತೆ ಸಾಹಿತಿಗಳು ಮುಖ್ಯ. ನಮ್ಮ ಭಾಷೆ, ನಮ್ಮ ನೆಲ, ನಮ್ಮ‌ ಜಲ ರಕ್ಷಿಸುವ ಹೊಣೆ ನಮ್ಮಲ್ಲಿದೆ. ಅದಕ್ಕಾಗಿ ಇಂತಹ ಸಮ್ಮೇಳನ ಅಗತ್ಯ. ದೇಶದ ಬೆನ್ನೆಲುಬು ಹಳ್ಳಿ. ಹಳ್ಳಿ ಅಭಿವೃದ್ಧಿ ಗೊಂಡರೆ ದೇಶ ಅಭಿವೃದ್ಧಿ ಯಾದೀತು. ಗಡಿನಾಡಿನ, ಈ ಹಳ್ಳಿಯ ಬೇಡಿಕೆ, ಸಮಸ್ಯೆ, ಸಂಸ್ಕೃತಿಗಳನ್ನು ದೇಶದ ಇತರ ಕಡೆಗೂ ರವಾನಿಸುವ ಕಾರ್ಯ ಈ ಸಮ್ಮೇಳನದಿಂದ ಆಗಲಿ’ ಎಂದರು

ಪ್ರೀತಿ, ಸೌಹಾರ್ದತೆಯ ಬಾಳಿಗೆ ಭಾಷೆ ಮುಖ್ಯ – ಮಲಾರ್ ಜಯರಾಮ ರೈ

ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿ ‘ಹಿರಿಯ ಸಾಹಿತಿ, ಪತ್ರಕರ್ತ ಮಲಾರ್ ಜಯರಾಮ ರೈಯವರು ಮಾತನಾಡಿ ‘ಮಲಯಾಳಿ, ತುಳು ಭಾಷಿಗರೂ ಕನ್ನಡ ಕುಟುಂಬದ ಸದಸ್ಯರು. ಎಲ್ಲಾ ಭಾಷೆಗಳೂ ಇತರರನ್ನು ಪ್ರೀತಿಸಲು ಇರುವಂತಹುದು. ಯಾವ ಗಡಿಯೂ ನಿಲ್ಲದಂತಹ ಪರಿಸ್ಥಿತಿ ಮತ್ತು ಕಾಲದ ಬದಲಾವಣೆಯಲ್ಲಿ ನಾವಿದ್ದೇವೆ. ಭಾಷೆಯನ್ನು ವಿಶಾಲ ಅರ್ಥದಲ್ಲಿ ಸ್ವೀಕರಿಸೋಣ, ಭಾಷೆಯಲ್ಲಿರುವ ಉತ್ತಮ ಸಂಸ್ಕೃತಿ ಸ್ವೀಕರಿಸಿ ನಾವೆಲ್ಲಾ ಒಳ್ಳೆಯವರಾಗೋಣ

ಭಾಷೆ ಹೃದಯದ ಭಾಷೆಯಾಗಲಿ, ಪ್ರೇಮ ತತ್ವ ಅರಿತು ಬಾಳೋಣ. ಪ್ರೇಮದ, ಹೃದಯದ ಭಾಷೆಗೆ ಮಾತನಾಡುವ ಮಾಧ್ಯಮ ಭಾಷೆಗಳು ಸಹಕಾರಿಯಾಗಲಿ. ತುಳು ಭಾಷೆ, ಸಂಸ್ಕೃತಿಯನ್ನು ಪ್ರೀತಿಸುವ ಭಾವನೆ ನಮ್ಮಲ್ಲಿ ಮೂಡಲಿ’ ಎಂದು ಆಶಿಸಿದರು‌.

ಗಡಿನಾಡ ಹೋರಾಟಕ್ಕೆ ಅರ್ಧ ಜಯ ದೊರೆತಿದೆ – ಜೈಸೆನ್ ಲೋಬೊ

ಗಡಿನಾಡ ಶ್ರೇಯೊಭಿವೃದ್ದಿ ಟ್ರಸ್ಟ್ ನ ಲಾಂಛನವನ್ನು ಅನಾವರಣಗೊಳಿಸಿದ ನಿಡ್ಪಳ್ಳಿ ಹೋಲಿ ರೋಝರಿ ಇಗರ್ಜಿಯ ಧರ್ಮಗುರು ರೆ.ಫಾ. ಜೈಸೆನ್ ಲೋಬೋರವರು ಮಾತನಾಡಿ ‘ಗಡಿನಾಡ ಹೋರಾಟಕ್ಕೆ ಆರಂಭದ ಜಯ ಸಿಕ್ಕಿದೆ. ಇನ್ನು ಅರ್ಧ ಜಯ ಬಾಕಿ ಇರುವುದು. ಮೊದಲು ಮಾನವನಾಗಲು ಕಲಿಯಬೇಕು. ಇಂತಹ ಸಮ್ಮೇಳನ ಗಡಿನಾಡ ಈ ಭಾಗದಲ್ಲಿ ಮಾನವೀಯತೆ, ಮನುಷ್ಯತ್ವದ ಭಾವನೆಯಲ್ಲಿ ನಮ್ಮ ಜೀವನ ಸಾಗುವಂತೆ ಮಾಡುತ್ತದೆ’ ಎಂದರು.

ಸಮ್ಮೇಳನದ ಆಶಯ ಪಸರಿಸಲಿ – ಶಕುಂತಳಾ ಶೆಟ್ಟಿ

ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿಯವರು ಮಾತನಾಡಿ ‘ಗಡಿನಾಡಿನಲ್ಲಾದ ಈ ಸಮ್ಮೇಳನದ ಆಶಯ ಪಸರಿಸಲಿ. ಉದ್ದೇಶ ಈಡೇರಲಿ. ಅಬೂಬಕ್ಕರ್ ರವರ ನಿರಂತರ ಕನ್ನಡದ ಪರ ಹೋರಾಟ ನಮಗೆಲ್ಲಾ ಮಾದರಿ. ಅವರಿಗೆ ಪ್ರೋತ್ಸಾಹ ನೀಡೋಣ’ ಎಂದರು.

ಗಡಿನಾಡ ಸಂಬಂಧ ವೃದ್ಧಿಯಾಗಲಿ – ಹೇಮನಾಥ ಶೆಟ್ಟಿ

ಸಮ್ಮೇಳನದ ಪುಸ್ತಕ ಮಳಿಗೆಯನ್ನು ಉದ್ಘಾಟಿಸಿದ ಪುತ್ತೂರು ಶ್ರೀರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ‘ಸಮಾಜಮುಖಿ ಕೆಲಸ ಕಾರ್ಯಗಳನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸುವ ನಿಟ್ಟಿನಲ್ಲಿ ಈ ಸಮ್ಮೇಳನ ಮಹತ್ವ ಪಡೆದಿದೆ. ಸಾಧಕರಿಗೆ ಸನ್ಮಾನ ಮಾಡುವ ಮೂಲಕ ಇತರರಿಗೂ ಸಾಧನೆ ಮಾಡುವ ಪ್ರೇರಣೆಗೆ ನಾವೆಲ್ಲಾ ಅಬೂಬಕ್ಕರ್ ಜೊತೆಗೆ ಕೈ ಜೋಡಿಸಬೇಕಾಗಿದೆ. ಗಡಿನಾಡ ಸಮಸ್ಯೆ ಕಡಿಮೆಯಾಗಿ, ಗಡಿನಾಡ ಸಂಬಂಧ ಹೆಚ್ಚಾಗುವ ಆಶಯ ಈಡೇರಲಿ’ ಎಂದರು‌.

ಒಳ್ಳೆಯದನ್ನು ಸ್ವೀಕರಿಸಿ ಮುಂದುವರಿಯೋಣ – ನಾರಾಯಣ ರೈ ಕುಕ್ಕುವಳ್ಳಿ

ಮಧುಪ್ರಪಂಚ ಪತ್ರಿಕೆಯ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿಯವರು ಮಾತನಾಡಿ ‘ಒಂದಷ್ಟು ವರ್ಷಗಳ ಹಿಂದೆ ಇದ್ದ ಸಮಸ್ಯೆಗಳು ಈಗಿಲ್ಲ. ಅನೇಕ ಬದಲಾವಣೆಗಳು ಆಗಿವೆ. ಆಗಿರುವ ಅಭಿವೃದ್ಧಿಗಳನ್ನೂ ನಾವು ಸ್ವೀಕರಿಸುವ ಆಶಯವನ್ನು ಹೊಂದಬೇಕಾಗಿದೆ. ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ. ಇರುವುದರ ಮಧ್ಯೆ ಇಲ್ಲದುದನ್ನು ಹೊಂದಿಸಿಕೊಂಡು ನಾವೆಲ್ಲಾ ಒಂದಾಗಿ ಸಮಾಜವನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ’ ಎಂದರು. ಗಡಿನಾಡ ಧ್ವನಿ ದೇಶಕ್ಕೆ ಧ್ವನಿಯಾಗಿ ಹೊರಹೊಮ್ಮಲಿ ಎಂದು ಶುಭಾಶಿಸಿದರು.

ಸಮ್ಮೇಳನಾಧ್ಯಕ್ಷರಿಗೆ ಸನ್ಮಾನ
ಸಮ್ಮೇಳನಾಧ್ಯಕ್ಷ ಮಲಾರ್ ಜಯರಾಮ ರೈ ರವರಿಗೆ ಶ್ರೀಮಾತಾನಂದಮಯಿ ಸನ್ಮಾನಿಸಿ ಗೌರವಿಸಿದರು.


ಗಡಿನಾಡ ಸಮಸ್ಯೆ ಸರಕಾರದ ಮಟ್ಟಕ್ಕೆ ತಲುಪಬೇಕು – ಎಸ್. ಅಬೂಬಕ್ಕರ್

ಪ್ರಾಸ್ತಾವಿಕವಾಗಿ ಮಾತನಾಡಿದ ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷ ಹಾಜಿ ಎಸ್. ಅಬೂಬಕ್ಕರ್ ಆರ್ಲಪದವು ರವರು ‘ಕೇರಳ ಮತ್ತು ಕರ್ನಾಟಕದ ಅಕ್ಷರಶಃ ಗಡಿಭಾಗವಾದ ಗ್ರಾಮೀಣ, ಹಳ್ಳಿಯ ಮೂಲೆಯಲ್ಲಿರುವ ಹಳೆಯ ಶಾಲೆಯನ್ನು  ರಾಜ್ಯಮಟ್ಟದಲ್ಲಿ ಗುರುತಿಸಬೇಕೆಂಬ ಆಶಯ ನಮ್ಮದಾಗಿತ್ತು. ಮಾನವೀಯತೆ ತೋರಿಸುವ  ಕೇರಳ ಮತ್ತು ಕರ್ನಾಟಕ ಗಡಿಭಾಗದಲ್ಲಿ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳಲ್ಲಿ ಕೊರತೆಯುಂಟಾಗುತ್ತಿದೆ. ಸಮಸ್ಯೆಗಳನ್ನು ನಿವಾರಿಸಲು ಜಾತಿ ಮತ, ಪಂಥ ನೋಡದೆ ಒಗ್ಗಟ್ಟಾಗಿ ಕೆಲಸ ಮಾಡುವ. ಗಡಿಭಾಗದ ಶಾಲೆಗಳಲ್ಲಿನ ಅಧ್ಯಾಪಕರ ಕೊರತೆ, ಸಮಸ್ಯೆಗಳಿಗೆ ಕರ್ನಾಟಕ ಮತ್ತು ಕೇರಳ ಸರ್ಕಾರ ಹೆಚ್ಚಿನ ಗಮನ ಕೊಡಬೇಕು ಎಂದು ಹೇಳಿ ಕಳೆದ 5  ಸಮ್ಮೇಳನಗಳು ನಡೆದು ಬಂದ ದಾರಿಯ ಅವಲೋಕನ ಮಾಡಿದರು. 

ಕವನ ಸಂಕಲನ ಬಿಡುಗಡೆ

ಮಹಮ್ಮದ್ ಸಿಂಸಾರ್ ರಚಿಸಿರುವ ಕವನ ಸಂಕಲನ ‘ಪುಟ್ಟನ ಕನಸು’ ಪುಸ್ತಕವನ್ನು ಮಿತ್ರಂಪಾಡಿ ಜಯರಾಮ ರೈ, ಎಎಂಪಿ ಬರೆದಿರುವ ‘ನೆನಪಿರಲಿ’ ಕವನ ಸಂಕಲನವನ್ನು ಮಲಾರ್ ಜಯರಾಮ ರೈ ಬಿಡುಗಡೆಗೊಳಿಸಿದರು. ಒಡ್ಯ ಶಾಲೆಯಲ್ಲಿ ಶಿಕ್ಷಕಿಯರಾಗಿ ಸೇವೆ ಸಲ್ಲಿಸಿದ ಸುಮತಿ ಬಾಯಿ, ಶೋಭಾ, ಶಾಲಿನಿ ಗುರುತಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಆದೂರು ಇಂಬಿಚಿ ಕೋಯ ತಂಙಳ್ ಅಸ್ಸಯ್ಯದ್ ಹಸನ್ ಅಬ್ದುಲ್ಲ, ಪುತ್ತೂರು ಪುರಸಭಾ ಮಾಜಿ ಅಧ್ಯಕ್ಷ ಯು. ಲೋಕೇಶ್ ಹೆಗ್ಡೆ, ಪಾಣಾಜೆ ಗ್ರಾ‌.ಪಂ. ಅಧ್ಯಕ್ಷೆ ಭಾರತೀ ವೆಂಕಟರಮಣ ಭಟ್,  ಜೇನು ವ್ಯವಸಾಯಗಾರ ಕುಮಾರ್ ಪೆರ್ನಾಜೆ, ಕಾಕೆಕೊಚ್ಚಿ ಗೋಪಾಲಕೃಷ್ಣ ಭಟ್, ಸುಂದರ ಪ್ರಕಾಶ್, ಸಮ್ಮೇಳನ ಸ್ವಾಗತ ಸಮಿತಿ ಸಂಚಾಲಕ ಶ್ರೀಕೃಷ್ಣ ಭಟ್ ಬಟ್ಯಮೂಲೆ, ಗಡಿನಾಡ ಶ್ರೇಯೋಭಿವೃದ್ದಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಈಶ್ವರ ಭಟ್ ಕಡಂದೇಲು, ಒಡ್ಯ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ದೇವಪ್ಪ ನಾಯ್ಕ್ ಕೊಂದಲ್ಕಾನ, ಮುಖ್ಯಗುರು ಜನಾರ್ದನ ಅಲ್ಚಾರು ಉಪಸ್ಥಿತರಿದ್ದರು.

ಅತಿಥಿಗಳಿಗೆ ಕನ್ನಡದ ಶಾಲು, ಪುಸ್ತಕ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಒಡ್ಯ ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಅಧ್ಯಕ್ಷ, ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಸ್ವಾಗತಿಸಿ, ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್ ವಂದಿಸಿ, ನಿರೂಪಿಸಿದರು. 

ಉದ್ಘಾಟನಾ ಸಮಾರಂಭದ ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿದವು. ಮಧ್ಯಾಹ್ನ ಸಹಭೋಜನ ನಡೆಯಿತು.

ಗಡಿನಾಡಿಗರಿಗೆ ತ್ರಿಶಂಕು ಸ್ಥಿತಿಯಿಂದ ಮುಕ್ತಿ ಯಾವಾಗ ?
ಕೇರಳ ಮತ್ತು ಕರ್ನಾಟಕದ ಗಡಿಭಾಗದಲ್ಲಿರುವ ಜನರು ಪ್ರತಿಯೊಂದರಲ್ಲೂ ತ್ರಿಶಂಕು ಸ್ಥಿತಿ ಅನುಭವಿಸುತ್ತಿದ್ದಾರೆ. ಅಭಿವೃದ್ಧಿಗಳು ಆಮೆಗತಿಯಲ್ಲಿ ಸಾಗುತ್ತಿದೆ. ಗಡಿನಾಡಿನವರು ಶಾಪಗ್ರಸ್ತರಲ್ಲ‌. ಅವರಿಗೂ ಉತ್ತಮ ಬದುಕು ಕಟ್ಟಿಕೊಳ್ಳುವ, ಪರಿವರ್ತಿತ ಸಮಾಜದಲ್ಲಿ ಜೀವಿಸುವ ಅವಕಾಶವನ್ನು ಕೊಡುವಲ್ಲಿ ಕೇರಳ ಮತ್ತು ಕರ್ನಾಟಕದ ಸರಕಾರಗಳು ಹೆಚ್ಚಿನ ಗಮನ ಹರಿಸಬೇಕೆಂಬ ಸಮ್ಮೇಳನಾಶಯ ಒಟ್ಟು ಸಮಾರಂಭದಲ್ಲಿ ವ್ಯಕ್ತವಾಯಿತು.

ಶಾಸಕರಿಂದ ಮೆರವಣಿಗೆ, ಸ್ಮಾರ್ಟ್ ಕ್ಲಾಸ್ ಉದ್ಘಾಟನೆ
ಬೆಳಿಗ್ಗೆ ಶಾಸಕ ಸಂಜೀ ಮಠಂದೂರುರವರು ಸಮ್ಮೇಳನ ಜಾಥಾವನ್ನು ಉದ್ಘಾಟಿಸಿ ಬಳಿಕ ಒಡ್ಯ ಶಾಲೆಯ ಶುದ್ದ ಕುಡಿಯುವ ನೀರು, ಸ್ಮಾರ್ಟ್ ಕ್ಲಾಸ್ ರೂಂ ಮತ್ತು ಬೆಂಚ್ ಡೆಸ್ಕ್ ಗಳನ್ನು ಉದ್ಘಾಟಿಸಿದರು‌. 

ಸುಂದರಗಿರಿಯಿಂದ ಆರಂಭಗೊಂಡ ಮೆರವಣಿಗೆಯು ಶ್ರೀ ದೇವಿ ಭಜನಾ ಮಂಡಳಿ ಸುಂದರಗಿರಿ ಭಜನಾ ತಂಡದ ಕುಣಿತ ಭಜನೆಯೊಂದಿಗೆ  ಮಣ್ಣಂಗಳ ಶ್ಯಾಮ ಭಟ್ ಮಹಾದ್ವಾರದ ಮೂಲಕ ಮುಖ್ಯ ವೇದಿಕೆಯಲ್ಲಿ ಸಮಾಪನಗೊಂಡಿತು.

‘ಗಡಿನಾಡ ಧ್ವನಿ’ ಪ್ರಶಸ್ತಿ ಪ್ರದಾನ

ವಿದೇಶದಲ್ಲಿಯೂ ಕನ್ನಡದ ಕಂಪು ಪಸರಿಸಿರುವ ಮಿತ್ರಂಪಾಡಿ ಜಯರಾಮ ರೈ ಅಬುದಾಬಿಯವರಿಗೆ ‘ಗಡಿನಾಡ ಧ್ವನಿ ಸದ್ಭಾವನಾ ಭೂಷಣ’ ರಾಷ್ಟ್ರೀಯ ಪ್ರಶಸ್ತಿ, ಕಾವು ಹೇಮನಾಥ ಶೆಟ್ಟಿಯವರಿಗೆ ‘ಗಡಿನಾಡ ಧ್ವನಿ ಸದ್ಭಾವನಾ ರತ್ನ’ ರಾಷ್ಟ್ರೀಯ ಪ್ರಶಸ್ತಿ , ಡಾ. ಉಮ್ಮರ್ ಬೀಜದಕಟ್ಟೆಯವರಿಗೆ ‘ಗಡಿನಾಡ ಧ್ವನಿ ಜ್ಞಾನ ಭೂಷಣಾ’ ರಾಷ್ಟ್ರೀಯ ಪ್ರಶಸ್ತಿ, ಹಿರಿಯ ಸಾಹಿತಿ ರಘುನಾಥ ರೈ ನುಳಿಯಾಲುರವರಿಗೆ ‘ಗಡಿನಾಡ ಧ್ವನಿ ಸಾಹಿತ್ಯ ಭೂಷಣ’ ರಾಷ್ಟ್ರೀಯ ಪ್ರಶಸ್ತಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ ರವರಿಗೆ ‘ಗಡಿನಾಡ ಧ್ವನಿ ಕ್ರೀಡಾ ರತ್ನ’ ರಾಷ್ಟ್ರೀಯ ಪ್ರಶಸ್ತಿ,  ಈಶ್ವರ ಭಟ್ ಕಡಂದೇಲು ರವರಿಗೆ ‘ಗಡಿನಾಡ ಧ್ವನಿ ಸದ್ಭಾವನಾ ಶ್ರೀ’ ಪ್ರಶಸ್ತಿ, ಡಾ. ಆಂಟನಿ ಪಿ.ಜೆ. ಮಂಗಳೂರುರವರಿಗೆ ‘ಗಡಿನಾಡ ಧ್ವನಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ’ ರಾಷ್ಟ್ರೀಯ ಪ್ರಶಸ್ತಿ, ಸಾಹಿತಿ ಕೋಟಿಯಪ್ಪ ಪೂಜಾರಿ ಸೇರರವರಿಗೆ ‘ಗಡಿನಾಡ ಧ್ವನಿ ಜ್ಞಾನ ಸಿಂಧು’ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here