ನೆಲ್ಯಾಡಿ: ಸರಕಾರಿ ಶಾಲೆಗಳಿಂದ ಹಳೆಯ ಬ್ಯಾಟರಿ ಕಳವು ಪ್ರಕರಣ ಮುಂದುವರಿದಿದ್ದು ಇದೀಗ ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಬುಳೇರಿ ಸರಕಾರಿ ಪ್ರೌಢಶಾಲೆಯಿಂದ 12 ಹಳೆಯ ಬ್ಯಾಟರಿ ಕಳವುಗೊಂಡಿರುವ ಘಟನೆ ಫೆ.25ರಂದು ಬೆಳಕಿಗೆ ಬಂದಿದೆ.
ಫೆ.24ರಂದು ಸಂಜೆ 4.30ಕ್ಕೆ ಶಾಲೆಯ ಕೊಠಡಿಗಳ ಬಾಗಿಲು ಮುಚ್ಚಿ ಬೀಗ ಹಾಕಿಕೊಂಡು ಹೋಗಿದ್ದು ಫೆ.25ರಂದು ಬೆಳಿಗ್ಗೆ 8.45ಕ್ಕೆ ಬಂದ ವೇಳೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮುಖ್ಯೋಪಾಧ್ಯಾಯರ ಕೊಠಡಿಯ ಶಟರ್‌ನ ಬೀಗವನ್ನು ತುಂಡರಿಸಿ ಕೊಠಡಿಯಲ್ಲಿದ್ದ 4 ಹಳೆಯ ಬ್ಯಾಟರಿಗಳು ಮತ್ತು ಕ್ರೀಡಾ ಕೊಠಡಿಯ ಬಾಗಿಲಿನ ಬೀಗವನ್ನು ತುಂಡರಿಸಿ ಅಲ್ಲಿದ್ದ 8 ಹಳೆಯ ಬ್ಯಾಟರಿಗಳನ್ನು ಕಳವು ಮಾಡಲಾಗಿದೆ. ಒಟ್ಟು 12 ಬ್ಯಾಟರಿಗಳು ಕಳವು ಆಗಿದ್ದು ಇವುಗಳ ಒಟ್ಟು ಮೌಲ್ಯ 30,೦೦೦ ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯ ಕರುಣಾಕರ ಹೆಚ್.ಎಸ್.ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 454,457, 380 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. ಈ ಹಿಂದೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ಪದ್ಮುಂಜ, ಕರಾಯ, ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ವಳಾಲು ಸರಕಾರಿ ಪ್ರೌಢಶಾಲೆಯಲ್ಲೂ ಹಳೆಯ ಬ್ಯಾಟರಿಗಳ ಕಳ್ಳತನ ನಡೆದಿದೆ.