ಭರವಸೆ ನೀಡಿದ್ದನ್ನು ಈಡೇರಿಸದ ಪುತ್ತೂರು, ಬಂಟ್ವಾಳದ ಶಾಸಕರು !
ದಲಿತ್ ಸೇವಾ ಸಮಿತಿಯಿಂದ ಪುತ್ತೂರಿನಲ್ಲಿ ಉಪವಾಸ ಸತ್ಯಾಗ್ರಹ

0

ಪುತ್ತೂರು:ಪುತ್ತೂರು ವಿಧಾನಸಭಾ ಕ್ಷೇತ್ರದ ಪುತ್ತೂರು ಮತ್ತು ವಿಟ್ಲಕ್ಕೆ ಮಂಜೂರಾಗಿರುವ ಅಂಬೇಡ್ಕರ್ ಭವನಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಶಾಸಕರಲ್ಲಿ ಮನವಿ ಮಾಡಿದ್ದರೂ ಇಲ್ಲಿನ ತನಕ ಸ್ಪಂದಿಸಿಲ್ಲ ಮತ್ತು ಕನ್ಯಾನ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಕುಟುಂಬಕ್ಕೆ ರೂ.10 ಲಕ್ಷ ಪರಿಹಾರ ನೀಡುವ ಕುರಿತು ಪುತ್ತೂರು ಶಾಸಕರು ಹಾಗೂ ಮನೆ ನಿರ್ಮಾಣ ಮಾಡಿಕೊಡುವುದಾಗಿ ಬಂಟ್ವಾಳ ಶಾಸಕರು ಭರವಸೆ ನೀಡಿದ್ದರೂ ಇನ್ನೂ ಅದನ್ನು ಈಡೇರಿಸಿಲ್ಲ ಎಂದು ಆರೋಪಿಸಿರುವ ದಕ್ಷಿಣ ಕನ್ನಡ ದಲಿತ್ ಸೇವಾ ಸಮಿತಿ ಪ್ರಮುಖರು,ತಮಗೆ ನ್ಯಾಯ ನೀಡಬೇಕೆಂದು ಆಗ್ರಹಿಸಿ ಪುತ್ತೂರು ಕಿಲ್ಲೆ ಮೈದಾನದಲ್ಲಿರುವ ಅಮರ್ ಜವಾನ್ ಸ್ಮಾರಕ ಜ್ಯೋತಿಯ ಬಳಿ ಉಪವಾಸ ಸತ್ಯಾಗ್ರಹ ನಡೆಸಿದರು.


ಕನ್ಯಾನದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ವಿದ್ಯಾರ್ಥಿನಿಯ ತಂದೆ ಸಂಜೀವ ಅವರು ಡಾ|ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರದ ಎದುರು ದೀಪ ಪ್ರಜ್ವಲಿಸಿ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು.ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕ ಅಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಅವರು ಮಾತನಾಡಿ, ವಿಟ್ಲದ ಅಂಬೇಡ್ಕರ್ ಭವನಕ್ಕೆ ರೂ.೨ ಕೋಟಿ ಮತ್ತು ಪುತ್ತೂರು ಅಂಬೇಡ್ಕರ್ ಭವನಕ್ಕೆ ರೂ.೧೦ ಕೋಟಿ ಅನುದಾನ ಒದಗಿಸಿ ಶಂಕುಸ್ಥಾಪನೆ ಮಾಡಬೇಕೆಂದು ಮನವಿ ಮಾಡಿದ್ದೆವು.ಆದರೆ ಅದಕ್ಕೆ ಸ್ಪಂದಿಸಿಲ್ಲ ಎಂದು ಆರೋಪಿಸಿದರು.

ಕನ್ಯಾನ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ವಿದ್ಯಾರ್ಥಿನಿಯ ಮನೆಗೆ ಬಂದಿದ್ದ ಶಾಸಕ ಸಂಜೀವ ಮಠಂದೂರು ಅವರು ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ರೂ.೧೦ ಲಕ್ಷ ಪರಿಹಾರ ಘೋಷಣೆ ಮಾಡಿದ್ದರು.ಮಾತ್ರವಲ್ಲದೆ, ಮೃತರ ಕುಟುಂಬದವರಿಗೆ ಹೊಸ ಮನೆ ಕಟ್ಟಿಸಿಕೊಡುವುದಾಗಿ ಬಂಟ್ವಾಳ ಶಾಸಕ ರಾಜೇಶ್ ನಾಕ್ ಭರವಸೆ ನೀಡಿದ್ದರು.ಇಬ್ಬರೂ ಶಾಸಕರು ಅವರಾಗಿಯೇ ಭರವಸೆ ನೀಡಿದ್ದರು.ಆದರೆ ಅದನ್ನು ಈಡೇರಿಸವಲ್ಲಿ ಅವರು ಸೋತಿದ್ದಾರೆ.ಅವರ ಭರವಸೆ ಭರವಸೆಯಾಗಿಯೇ ಉಳಿದಿದೆ ಎಂದು ಹೇಳಿದ ಸೇಸಪ್ಪ ಬೆದ್ರಕಾಡು ಅವರು, ಪ್ರವೀಣ್ ನೆಟ್ಟಾರು ಹತ್ಯೆಯಾದಾಗ ಅವರ ಬೆಂಬಲಿಗರು ಸಂಸದರ ಕಾರಿನ ಟಯರ್ ಪಂಕ್ಚರ್ ಮಾಡಿದ್ದರಿಂದ ಪ್ರವೀಣ್ ಕುಟುಂಬಕ್ಕೆ ತಕ್ಷಣ ಪರಿಹಾರ ಕೊಟ್ಟಿದ್ದಾರೆ.ಆದರೆ ನಾವು ಯಾವ ಶಾಸಕರ ಕಾರಿನ ಟಯರನ್ನೂ ಪಂಕ್ಷರ್ ಮಾಡಿಲ್ಲ.ಅವರು ಏನು ಘೋಷಣೆ ಮಾಡಿದ್ದಾರೋ ಅದನ್ನು ಈಡೇರಿಸಬೇಕು ಮತ್ತು ಪುತ್ತೂರು, ವಿಟ್ಲದ ಅಂಬೇಡ್ಕರ್ ಭವನಕ್ಕೆ ಅನುದಾನವನ್ನು ಒದಗಿಸಿ ಕೊಡುವ ಮೂಲಕ ಅವರ ಘನತೆ, ಗೌರವ ಉಳಿಸಿಕೊಳ್ಳಬೇಕು.ಇಲ್ಲದಿದ್ದಲ್ಲಿ ಮುಂದಿನ ಚುನಾವಣೆ ಸಂದರ್ಭದಲ್ಲಿ ಏನು ಮಾಡಬೇಕೆಂದು ನಮಗೂ ಗೊತ್ತಿದೆ ಎಂದರು.ಯಾವ ಪಕ್ಷದವರೇ ಆಗಲಿ ನಮ್ಮ ಬೇಡಿಕೆ ಈಡೇರಿಕೆ ಆಗಬೇಕು.ಇಲ್ಲದಿದ್ದಲ್ಲಿ ಮುಂದೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.


ನೀತಿ ಸಂಹಿತೆ ಜಾರಿ ಮೊದಲು ಅನುದಾನ ಒದಗಿಸಿ:

ದಲಿತ್ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಬಿ.ಕೆ.ಅಣ್ಣಪ್ಪ ಕಾರೆಕ್ಕಾಡು ಮಾತನಾಡಿ ಹಿಂದಿನ ಸರಕಾರ ಅಂಬೇಡ್ಕರ್ ಭವನಕ್ಕೆ ಯಾವುದೇ ಜಮೀನು ಕಾದಿರಿಸಿಲ್ಲ.ಆದರೆ ಈಗಿನ ಸರಕಾರ ಅಂಬೇಡ್ಕರ್ ಭವನಕ್ಕೆ ಜಮೀನು ಕಾದಿರಿಸಿದೆ.ಹೆಚ್ಚಿಗೆ ಅನುದಾನಕ್ಕೆ ಹಲವು ಬಾರಿ ಮನವಿ ನೀಡಿದಾಗ ಅದಕ್ಕೆ ಸ್ಪಂದನೆ ಸಿಕ್ಕಿಲ್ಲ.ಇನ್ನು ವಿಧಾನಸಭೆ ಚುನಾವಣೆ ಸಂದರ್ಭ ಮಾರ್ಚ್‌ನಲ್ಲಿ ನೀತಿ ಸಂಹಿತೆ ಬರಲಿದೆ.ಅದರ ಒಳಗೆ ನಮಗೆ ಅನುದಾನ ಒದಗಿಸಬೇಕು ಎಂದು ಮನವಿ ಮಾಡಿದರು.ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಅಧ್ಯಕ್ಷ ಚಂದ್ರಶೇಖರ್ ವಿಟ್ಲ, ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಶಿ ಸುಂದರ ನರಿಮೊಗರು, ಮಹಿಳಾ ಜಿಲ್ಲಾಧ್ಯಕ್ಷೆ ಮೀನಾಕ್ಷಿ ನೆಲ್ಲಿಗುಡ್ಡೆ, ತುಳುವಪ್ಪೆ ಜೋಕ್ಲು ತಂಡದ ವಸಂತ ಪಟ್ಟೆ, ಸಂಘಟನಾ ಕಾರ್ಯಕರ್ತ ರಾಮಣ್ಣ ಪಿಲಿಂಜ, ದಾಮು ಮುರ, ಕಾಂಗ್ರೆಸ್ ಮುಖಂಡ ಕೇಶವ ಪಡೀಲು, ಅಂಬೇಡ್ಕರ್ ರಕ್ಷಣಾ ಘಟಕದ ಅಧ್ಯಕ್ಷ ಸುಂದರ ಪಾಟಾಜೆ ಸಹಿತ ಹಲವಾರು ಮಂದಿ ಪ್ರಮುಖರು ಉಪಸ್ಥಿತರಿದ್ದರು.

ಶಾಸಕರ ಕಚೇರಿಗೆ ಮುತ್ತಿಗೆ ನಿರ್ಧಾರ

ನಮ್ಮ ಬೇಡಿಕೆ ಮತ್ತು ಶಾಸಕರುಗಳಿಬ್ಬರು ನೀಡಿದ್ದ ಭರವಸೆಯನ್ನು ಈಡೇರಿಸದ ಹಿನ್ನೆಲೆಯಲ್ಲಿ ನಾವು ಒಂದು ದಿನದ ಉಪವಾಸ ಸತ್ಯಾಗ್ರಹ ಮಾಡಿzವೆ.ಈ ಕುರಿತು ೧೫ ದಿನ ಮುಂಚಿತವಾಗಿಯೇ ಶಾಸಕರ ಗಮನಕ್ಕೆ ತಂದಿzವೆ.ಪತ್ರಿಕಾಗೋಷ್ಟಿ ಮಾಡಿದ್ದೆವೆ.ಆದರೆ ಯಾವುದೇ ಸ್ಪಂದನೆ ಶಾಸಕರ ಕಡೆಯಿಂದ ಬಂದಿಲ್ಲ.ಹಾಗಾಗಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದೆವು. ನಮ್ಮ ಉಪವಾಸ ಸತ್ಯಾಗ್ರಹದ ಸ್ಥಳಕ್ಕೆ ಶಾಸಕರು ಬಂದು ನಮ್ಮ ಅಹವಾಲು ಸ್ವೀಕರಿಸಬಹುದಿತ್ತು.ಆದರೆ ಅವರು ಇಲ್ಲಿಗೂ ಬಾರದ ಹಿನ್ನೆಲೆಯಲ್ಲಿ ಮಾ.೧೩ಕ್ಕೆ ಪುತ್ತೂರು ಶಾಸಕರ ಕಚೇರಿ ಮತ್ತು ಮಾ.೨೭ಕ್ಕೆ ಬಂಟ್ವಾಳ ಶಾಸಕರ ಕಚೇರಿಗೆ ಮುತ್ತಿಗೆ ಹಾಕುವುದಾಗಿ ನಿರ್ಣಯ ಕೈಗೊಂಡಿzವೆ.
ಸೇಸಪ್ಪ ಬೆದ್ರಕಾಡು, ಸ್ಥಾಪಕ ಅಧ್ಯಕ್ಷರು ದಕ್ಷಿಣ ಕನ್ನಡ ದಲಿತ್ ಸೇವಾ ಸಮಿತಿ

ಸರಕಾರದ ಗಮನಕ್ಕೆ ತಂದಿದ್ದೆನೆ


ಹಿಂದಿನ ಸರಕಾರ ಇರುವಾಗ ಅಂಬೇಡ್ಕರ್ ಭವನಕ್ಕೆ ಜಾಗವೇ ಮಂಜೂರಾಗಿರಲಿಲ್ಲ.ನಮ್ಮ ಸರಕಾರ ಬಂದ ಬಳಿಕ ಆರಂಭದಲ್ಲಿ ಹಳೆ ತಾಲೂಕು ಕಚೇರಿಯ ಬಳಿ ೧೫ ಸೆಂಟ್ಸ್ ಜಾಗ ಅಂಬೇಡ್ಕರ್ ಭವನಕ್ಕೆಂದು ಮಂಜೂರಾಗಿದ್ದರೂ ಅಷ್ಟು ಕಡಿಮೆ ಜಾಗದಲ್ಲಿ ಭವನ ನಿರ್ಮಾಣ ಕಷ್ಟ ಸಾಧ್ಯ, ಮತ್ತೊಂದೆಡೆ ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಜಾಗದ ಅಗತ್ಯತೆ ಹಿನ್ನೆಲೆಯಲ್ಲಿ ತಾಲೂಕು ಕಚೇರಿ ಬದಲು ಹಾರಾಡಿಯಲ್ಲಿ ಅರ್ಧ ಎಕ್ರೆ ಜಾಗ ಅಂಬೇಡ್ಕರ್ ಭವನಕ್ಕಾಗಿ ಮಂಜೂರು ಮಾಡಿ ಆರ್‌ಟಿಸಿಯೂ ಆಗಿದೆ.ಕ್ಷೇತ್ರದ ನಾಲ್ಕು ಗ್ರಾಮಗಳಲ್ಲಿ ಅಂಬೇಡ್ಕರ್ ಭವನಕ್ಕೆ ತಲಾ ರೂ.೨೦ ಲಕ್ಷ ಅನುದಾನ ನೀಡಲಾಗಿದೆ.ಹೋಬಳಿ ಮಟ್ಟಕ್ಕೆ ರೂ.೧ ಕೋಟಿ, ತಾಲೂಕು ಅಂಬೇಡ್ಕರ್ ಭವನಕ್ಕೆ ರೂ.೨ ಕೋಟಿ ಅನುದಾನ ಹಾಗೂ ಜಿಲ್ಲೆಗೆ ರೂ. ೧೨ ಕೋಟಿ ಅನುದಾನ ಇದೆ.ರಾಜ್ಯದೆಲ್ಲೆಡೆ ಅಂಬೇಡ್ಕರ್ ಭವನಕ್ಕೆ ಅನುದಾನಕ್ಕೆ ಒಂದೇ ಮಾನದಂಡವಾಗಿದೆ.ಇಂತಹ ಸಂದರ್ಭದಲ್ಲಿ ದಲಿತ್ ಸೇವಾ ಸಮಿತಿಯವರು ತಾಲೂಕು ಅಂಬೇಡ್ಕರ್ ಭವನಕ್ಕೆ ರೂ.೧೦ ಕೋಟಿ ಅನುದಾನ ನೀಡುವಂತೆ ಮನವಿ ನೀಡಿರುವುದನ್ನು ಸರಕಾರದ ಗಮನಕ್ಕೆ ತಂದಿದ್ದೆನೆ.ಇನ್ನೊಂದೆಡೆ ನನ್ನ ವಿಧಾನಸಭಾ ಕ್ಷೇತ್ರವಲ್ಲವಾದರೂ, ಕನ್ಯಾನದ ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ಸಂತಾಪ ಸೂಚಿಸುವಾಗ ಮೃತಳ ಕುಟುಂಬಕ್ಕೆ ರೂ.೧೦ ಲಕ್ಷ ಪರಿಹಾರ ನೀಡುವಂತೆ ಸರಕಾರಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದ್ದೆ.ನಾನು ಮತ್ತು ಆ ಕ್ಷೇತ್ರದ ಶಾಸಕರು ಸರಕಾರಕ್ಕೆ ಮನವಿಯೂ ಮಾಡಿದ್ದೆವೆ.


ಸಂಜೀವ ಮಠಂದೂರು, ಶಾಸಕರು ಪುತ್ತೂರು.

LEAVE A REPLY

Please enter your comment!
Please enter your name here