ಉಪ್ಪಿನಂಗಡಿ: ಜಲ ಸಂರಕ್ಷಣೆ ಹಾಗೂ ಅಂತರ್ಜಲ ಅಭಿವೃದ್ಧಿಯ ಬಗ್ಗೆ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಹೆಚ್ಚಿನ ಕಾಳಜಿ ವಹಿಸುತ್ತಿದ್ದು, ದ.ಕ., ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಸೀಮಿತವಾಗುವಂತೆ ಪಶ್ಚಿಮ ವಾಹಿನಿ ಯೋಜನೆಯ ಮೂಲಕ ವಿವಿಧ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಸರಕಾರ ಬಜೆಟ್ನಲ್ಲಿ ಪ್ರತಿ ವರ್ಷ ೫೦೦ ಕೋಟಿ ರೂ.ವನ್ನು ಮೀಸಲಿಡುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದರು.
ಸಣ್ಣ ನೀರಾವರಿ ಇಲಾಖೆಯ ಅನುದಾನದಡಿ ಎರಡು ಕೋಟಿ ರೂ. ವೆಚ್ಚದಲ್ಲಿ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿ ಕುಮಾರಧಾರ ನದಿಗೆ ತಡೆಗೋಡೆ ರಚನೆ ಕಾಮಗಾರಿಗೆ ಹಾಗೂ ಒಂದು ಕೋಟಿ ರೂ. ವೆಚ್ಚದಲ್ಲಿ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಬಳಿಯಲ್ಲಿ ನೇತ್ರಾವತಿ ನದಿಗೆ ತಡೆಗೋಡೆ ರಚನೆ ಕಾಮಗಾರಿಗೆ ಸೋಮವಾರ ಶಂಕು ಸ್ಥಾಪನೆ ನೆರವೇರಿಸಿ ಬಳಿಕ ಸಿಎ ಬ್ಯಾಂಕ್ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಣ್ಣ ನೀರಾವರಿ ಇಲಾಖೆಯಡಿ ಅತೀ ಹೆಚ್ಚಿನ ಅನುದಾನ ಪಡೆದ ತಾಲೂಕುಗಳಲ್ಲಿ ಪುತ್ತೂರು ತಾಲೂಕು ಒಂದಾಗಿದೆ. ದೇವಾಲಯದ ಬಳಿ ಸುಮಾರು ೪೦ ವರ್ಷಗಳ ಹಿಂದೆ ಅಂದು ಶಾಸಕರಾಗಿದ್ದ ರಾಮ ಭಟ್ ಅವರು ಅನುದಾನ ಒದಗಿಸಿಕೊಟ್ಟು ಕಲ್ಲಿನ ತಡೆಗೋಡೆ ನಿರ್ಮಿಸಿದ್ದು, ಈಗ ಇಲ್ಲಿಗೆ ೮೦ ಮೀ.ನಷ್ಟು ಉದ್ದದ ಶಾಶ್ವತ ತಡೆಗೋಡೆ ನಿರ್ಮಿಸಲು ಎರಡು ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಎರಡು ತಿಂಗಳಲ್ಲಿ ಇದರ ಕಾಮಗಾರಿ ಪೂರ್ಣಗೊಳ್ಳಲಿದೆ. ಅಲ್ಲದೇ, ಧಾರ್ಮಿಕ ದತ್ತಿ ಇಲಾಖೆಯ ಮೂಲಕ ದೇವಾಲಯಕ್ಕೆ ಒಂದು ಕೋಟಿ ರೂ. ಅನುದಾನ ತರಲಾಗಿದ್ದು, ಅದರಲ್ಲಿ ಯಾವ ಕಾಮಗಾರಿ ಕೈಗೊಳ್ಳಬೇಕು ಎಂದು ದೇವಾಲಯದವರು ಯೋಚಿಸಿ, ತೀರ್ಮಾನ ತೆಗೆದುಕೊಳ್ಳಬೇಕು ಎಂದರು.
ಉಪ್ಪಿನಂಗಡಿಯ ಸಿಎ ಬ್ಯಾಂಕ್ ಬಳಿ ನೇತ್ರಾವತಿ ನದಿಗೆ ತಡೆಗೋಡೆಗೆ ಒಂದು ಕೋಟಿ ರೂ. ಇಡಲಾಗಿದ್ದು, ೪೦ ಮೀಟರ್ ಉದ್ದ ಹಾಗೂ ೮ ಮೀಟರ್ನ ತಡೆಗೋಡೆ ಇಲ್ಲಿ ನಿರ್ಮಾಣವಾಗಲಿದೆ. ಇದು ನಿರ್ಮಾಣವಾಗುವುದರಿಂದ ಸಿಎ ಬ್ಯಾಂಕ್ನ ಜಾಗದ ಸವಕಳಿ ತಪ್ಪಲಿದೆ. ೪೫ ದಿನಗಳಲ್ಲಿ ಇದರ ಕಾಮಗಾರಿ ಮುಗಿಯಲಿದೆ ಎಂದು ಶಾಸಕರು ಹೇಳಿದರು.
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯರಾದ ಜಯಂತ ಪೊರೋಳಿ, ಪ್ರೇಮಲತಾ ಕಾಂಚನ, ಹರೀಶ್ ಉಪಾಧ್ಯಾಯ, ವ್ಯವಸ್ಥಾಪಕ ವೆಂಕಟೇಶ ರಾವ್, ಸಿಬ್ಬಂದಿ ಪದ್ಮನಾಭ ಕುಲಾಲ್, ಮಾಜಿ ಸದಸ್ಯ ವಿಶ್ವನಾಥ ಶೆಟ್ಟಿ ಕಂಗ್ವೆ, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾಚಂದ್ರ ಮುಳಿಯ, ಸದಸ್ಯರಾದ ಸುರೇಶ್ ಅತ್ರೆಮಜಲು, ಧನಂಜಯ ನಟ್ಟಿಬೈಲ್, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾದ ಪ್ರಸಾದ್ ಕೆ.ವಿ., ಉಪಾಧ್ಯಕ್ಷ ಸುನಿಲ್ ಕುಮಾರ್ ದಡ್ಡು, ನಿರ್ದೇಶಕರಾದ ಯಶವಂತ ಗೌಡ, ಜಗದೀಶ ರಾವ್ ಮಣಿಕ್ಕಳ, ಯತೀಶ್ ಶೆಟ್ಟಿ, ರಾಮ ನಾಯ್ಕ, ಕುಂಞ, ಸಚಿನ್ ಮುದ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಲೇರಿ ವೇಗಸ್, ಸಿಬ್ಬಂದಿಗಳಾದ ಪ್ರವೀಣ್ ಆಳ್ವ, ಪುಷ್ಪರಾಜ ಶೆಟ್ಟಿ, ರವೀಶ್ ಎಚ್.ಟಿ., ಮಾಜಿ ಅಧ್ಯಕ್ಷ ಪ್ರಕಾಶ್ ರೈ ಬೆಳ್ಳಿಪ್ಪಾಡಿ, ಮಾಜಿ ನಿರ್ದೇಶಕರಾದ ರಾಮಚಂದ್ರ ಮಣಿಯಾಣಿ, ಅಝೀಝ್ ಬಸ್ತಿಕ್ಕಾರ್, ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಗೋಪಾಲ ಹೆಗ್ಡೆ, ತಾ.ಪಂ. ಮಾಜಿ ಸದಸ್ಯರಾದ ಉಮೇಶ್ ಶೆಣೈ, ಮುಕುಂದ ಬಜತ್ತೂರು, ಸುಜಾತಕೃಷ್ಣ ಆಚಾರ್ಯ, ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಎನ್., ಇಳಂತಿಲ ಗ್ರಾ.ಪಂ. ಅಧ್ಯಕ್ಷೆ ಚಂದ್ರಿಕಾ ಭಟ್, ಹಿರೇಬಂಡಾಡಿ ಗ್ರಾ.ಪಂ. ಸದಸ್ಯರಾದ ಹಮ್ಮಬ್ಬ ಶೌಕತ್ ಅಲಿ, ಸದಾನಂದ ಶೆಟ್ಟಿ, ಬಜತ್ತೂರು ಗ್ರಾ.ಪಂ. ಸದಸ್ಯ ಸಂತೋಷ್ ಕುಮಾರ್ ಪಂರ್ದಾಜೆ, ಪ್ರಮುಖರಾದ ಚಂದಪ್ಪ ಮೂಲ್ಯ, ಸುಂದರ ಗೌಡ, ಹರೀಶ್ ನಾಯಕ್ ನಟ್ಟಿಬೈಲ್, ಡಾ. ಕೈಲಾರ್ ರಾಜಗೋಪಾಲ ಭಟ್, ಚಂದ್ರಶೇಖರ ಮಡಿವಾಳ, ರಾಘವೇಂದ್ರ ನಾಯಕ್ ನಟ್ಟಿಬೈಲ್, ಪ್ರಸಾದ್ ಬಂಡಾರಿ, ಸದಾನಂದ ನೆಕ್ಕಿಲಾಡಿ, ಗುತ್ತಿಗೆದಾರರಾದ ಪ್ರಭಾಕರ ಶೆಟ್ಟಿ, ಫೈಝಲ್, ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ವಿಷ್ಣು ಕಾಮತ್, ಎಂಜಿನಿಯರ್ಗಳಾದ ರಾಕೇಶ್ ಕುಂದರ್, ಶಿವ ಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.
`ಕೂಡಲ ಸಂಗಮ ರೀತಿಯಲ್ಲಿ ಅಭಿವೃದ್ಧಿಗೆ ಪ್ರಸ್ತಾವನೆ’
ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸನ್ನಿಧಿಯುಳ್ಳ ಉಪ್ಪಿನಂಗಡಿಯು ಸಂಗಮ ಕ್ಷೇತ್ರವಾಗಿದ್ದು, ಮೋಕ್ಷಧಾಮವೂ ಹೌದು. ಆದ್ದರಿಂದ ಇಲ್ಲಿ ಕೂಡಲ ಸಂಗಮ ದಲ್ಲಿರುವಂತೆ ಕಿಂಡಿ ಅಣೆಕಟ್ಟು, ವಾಕ್ವೇ ನಿರ್ಮಾಣಕ್ಕೆ ೯೦ ಕೋಟಿ ರೂ.ನ ಪ್ರಸ್ತಾವನೆ ಈಗಾಗಲೇ ಸಲ್ಲಿಸಲಾಗಿದ್ದು, ಇದು ಆರ್ಥಿಕ ಇಲಾಖೆಗೆ ಹೋಗಿದೆ. ಶೀಘ್ರದಲ್ಲೇ ಇದಕ್ಕೆ ಮಂಜೂರಾತಿ ದೊರೆಯಬಹುದೆನ್ನುವ ವಿಶ್ವಾಸವಿದೆ. ಇದಾದಲ್ಲಿ ಸಂಗಮ ಕ್ಷೇತ್ರವು ಪ್ರವಾಸೋದ್ಯಮ ಕೇಂದ್ರವಾಗಿಯೂ ಗುರುತಿಸಿಕೊಳ್ಳಲಿದೆ ಎಂದು ಶಾಸಕ ಮಠಂದೂರು ಹೇಳಿದರು.