ವಿಟ್ಲ: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ಶಾಲಾ ಸಂಚಾಲಕರಾದ ಪ್ರಹ್ಲಾದ್ ಜೆ.ಶೆಟ್ಟಿರವರು ಮಾತನಾಡಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವ್ಯಕ್ತಿಯ ಜೀವನದಲ್ಲಿ ಅಡಿಪಾಯ ಇದ್ದಂತೆ. ಈ ಶಿಕ್ಷಣವನ್ನು ಪೂರೈಸಿದ ಬಳಿಕ ನಮ್ಮಲ್ಲಿ ಜವಬ್ದಾರಿಯೂ ಹೆಚ್ಚಾಗುತ್ತದೆ. ಉತ್ತಮ ಅಂಕ ಗಳಿಸಿ, ಹೆತ್ತವರು, ಶಿಕ್ಷಕರು, ಶಾಲೆ ಹಾಗೂ ಊರಿಗೆ ಹೆಸರು ತರುವ ಕೆಲಸ ನಿಮ್ಮಿಂದ ಆಗಬೇಕು ಎಂದರು.
ಶಾಲಾ ಆಡಳಿತಾಧಿಕಾರಿ ರವೀಂದ್ರ ಡಿ.ರವರು ಮಾತನಾಡಿ ನಮ್ಮ ಸಂಸ್ಥೆಯು ವಿದ್ಯಾರ್ಥಿಗಳು ನೈತಿಕವಾಗಿ ಹಾಗೂ ಬೌದ್ಧಿಕವಾಗಿ ಬೆಳೆಯಲು ಸಹಕರಿಸಿದೆ. ವಿದ್ಯಾರ್ಥಿಗಳು ಹೆತ್ತವರನ್ನು ಗೌರವಿಸಿ, ರಚನಾತ್ಮಕ ಆಲೋಚನೆಗಳನ್ನು ಬೆಳೆಸಿ, ಉತ್ತಮ ಭವಿಷ್ಯವನ್ನು ನಿಮ್ಮದಾಗಿಸಿ ಎಂದರು.
ಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ವಿ ಶೆಟ್ಟಿರವರು ಮಾತನಾಡಿ ವಿದ್ಯಾರ್ಥಿಗಳು ಜೀವನ ಕೌಶಲಗಳನ್ನು ಅಳವಡಿಸಿ, ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬೆಳೆಯಿರಿ ಎಂದರು.
ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಕಸ್ತೂರಿ.ಪಿ.ಶೆಟ್ಟಿ, ವಿದ್ಯಾರ್ಥಿಗಳ ಹೆತ್ತವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಾನ್ವಿ ಆರ್ . ಸ್ವಾಗತಿಸಿ, ಶ್ರವಣ್ ಎಸ್.ಜಿ ವಂದಿಸಿದರು. ವೃದ್ಧಿ. ಎ.ಕೊಂಡೆ ಹಾಗೂ ಸ್ಪರ್ಶ ಎನ್.ಜಿ ಕಾರ್ಯಕ್ರಮ ನಿರೂಪಿಸಿದರು.