ಪರಿಸರ ಉಳಿಸಿ ಬೆಳೆಸುವುದು ಇಂದಿನ ಅನಿವಾರ್ಯ: ಕಿರಣ್ ಬಿ. ಎಂ.
ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಇಕೋ ಕ್ಲಬ್( ಪರಿಸರ ಸಂಘ) ಘಟಕದ ಉದ್ಘಾಟನೆಯು ಮಾ.7ರಂದು ನಡೆಯಿತು. ಮಹಾವಿದ್ಯಾಲಯದ ಆವರಣದಲ್ಲಿ ಹಣ್ಣಿನ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಪುತ್ತೂರಿನ ಅರಣ್ಯ ಇಲಾಖೆ ಅಧಿಕಾರಿ ಶ್ರೀ ಕಿರಣ್ ಬಿ. ಎಂ. ಉದ್ಘಾಟಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಜಗತ್ತಿನಲ್ಲಿ ಮಾನವನು ಅಭಿವೃದ್ಧಿ ಎಂಬ ಹೆಸರಿನಲ್ಲಿ ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಇದರಿಂದ ಪ್ರಾಣಿಗಳ ಜೀವ ರಕ್ಷಣೆಗೆ ಹಾನಿಯುಂಟಾಗುತ್ತಿದೆ. ಜಲಮಾಲಿನ್ಯ, ವಾಯುಮಾಲಿನ್ಯ, ಮಣ್ಣಿನ ಮಾಲಿನ್ಯ, ಅರಣ್ಯನಾಶ ಹೀಗೆ ಹತ್ತು ಹಲವು ಸಮಸ್ಯೆಗಳು ಇಂದು ಪರಿಸರದಲ್ಲಿ ಉಂಟಾಗಿದೆ. ಇದಕ್ಕೆಲ್ಲ ಮೂಲ ಕಾರಣ ಮಾನವನೇ ಆಗಿದ್ದಾನೆ ಎಂದು ಹೇಳಿದ ಅವರು, ಇಕೋ ಕ್ಲಬ್ ನಂತಹ ಘಟಕಗಳು ಕಾಲೇಜಿಗೆ ಮಾತ್ರ ಸೀಮಿತವಾಗದೇ ಪರಿಸರ ರಕ್ಷಣೆಯ ಕುರಿತು ಸಮಾಜವನ್ನು ಎಚ್ಚರಿಸುವ ಕೆಲಸವನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಇಕೋ ಕ್ಲಬ್ ಘಟಕ ಕಾರ್ಯನಿರ್ವಹಿಸಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಅಕ್ಷತಾ ಎ.ಪಿ. ಮಾತನಾಡಿ, ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟ ವಿಸ್ತರಿಸಲು ಪೂರಕ ಕಾರ್ಯಕ್ರಮಗಳು ಕಾರಣವಾಗುತ್ತವೆ. ಅಂತಹ ಕಾರ್ಯಕ್ರಮಗಳಲ್ಲಿ ‘ಇಕೋ ಕ್ಲಬ್’ ಚಟುವಟಿಕೆಯೂ ಒಂದು. ಬರೀ ಪರಿಸರದ ಪ್ರಜ್ಞೆಯನ್ನು, ಜ್ಞಾನವನ್ನು ಗಳಿಸಿಕೊಂಡರೆ ಸಾಲದು, ವಾಸ್ತವವಾಗಿ ನಮ್ಮ ಪರಿಸರದಲ್ಲಿ ಜವಾಬ್ದಾರಿಯಿಂದ ಬದುಕುವುದನ್ನು, ಪರಿಸರವನ್ನು ಉಳಿಸಿ ಬೆಳಸುವಂತಹ ಕೆಲಸಗಳನ್ನು ಮಾಡುವ ಸಾಮರ್ಥ್ಯ ಯಾವಾಗಲೂ ವಿದ್ಯಾರ್ಥಿಗಳಲ್ಲಿ ಬರಬೇಕು. ಪರಿಸರವನ್ನು ಉಳಿಸಿ ಬೆಳೆಸಿ ಸಂರಕ್ಷಿಸುವ ಅಗತ್ಯವನ್ನು ಅದಕ್ಕಾಗಿ ಆಗಬೇಕಾದ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ಇಕೋ ಕ್ಲಬ್‌ಗಳ ಮೂಲಕ ಪಡೆದುಕೊಳ್ಳುತ್ತಾರೆ ಎಂದ ಅವರು, ವಿದ್ಯಾರ್ಥಿಗಳನ್ನು ಪರಿಸರದ ಕಡೆಗೆ ಕೊಂಡೊಯ್ಯುವುದು ಹಾಗೂ ಪರಿಸರವನ್ನು ತರಗತಿಗಳಿಗೆ ತರುವುದು ಇಕೋ ಕ್ಲಬ್ ನ ಮೂಲ ಉದ್ದೇಶವಾಗಿದೆ ಎಂದರು.
ವೇದಿಕೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಸಂಗೀತಾ ಎಸ್. ಎಂ., ಇಕೋ ಕ್ಲಬ್ ಘಟಕದ ಸಂಯೋಜಕ ತಿಲಕ್, ಸಹಸಂಯೋಜಕಿ ದಿಶಾ ಸನಿಲ್ ಉಪಸ್ಥಿತರಿದ್ದರು. ಇಕೋ ಕ್ಲಬ್ ಸಹಸಂಯೋಜಕಿ ದಿಶಾ ಸನಿಲ್ ಸ್ವಾಗತಿಸಿ, ವಿದ್ಯಾರ್ಥಿನಿ ರಶಿಕಾ ವಂದಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಅಕ್ಷತಾ ಎಸ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.