ಮಾ.11ಕ್ಕೆ ಕರಾವಳಿ ಪ್ರಜಾಧ್ವನಿ ಕಾರ್ಯಕ್ರಮ
ಬೆಳಿಗ್ಗೆ ಉಪ್ಪಿನಂಗಡಿ, ವಿಟ್ಲ, ಮಧ್ಯಾಹ್ನ ಕುಂಬ್ರ, ಸಂಜೆ ಪುತ್ತೂರಿನಲ್ಲಿ ಸಮಾವೇಶ

0

ಪುತ್ತೂರು: ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿಯಿಂದ ಹಮ್ಮಿಕೊಂಡಿರುವ ಪ್ರಜಾ ಧ್ವನಿ ಯಾತ್ರೆ ಮಾ.11ರಂದು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಲಿದ್ದು, ಬೆಳಿಗ್ಗೆ ಉಪ್ಪಿನಂಗಡಿ, ವಿಟ್ಲ, ಮಧ್ಯಾಹ್ನ ಕುಂಬ್ರ ಜಂಕ್ಷನ್ ಸಂಜೆ ಪುತ್ತೂರು ಕಿಲ್ಲೆ ಮೈದಾನದಲ್ಲಿ ಸಮಾವೇಶಗೊಳ್ಳಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಅವರು ಹೇಳಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ಬೇರೆ ಬೇರೆ ಆಶ್ವಾಸನೆಗಳಿಂದ ಕೋಮು ಭಾವನೆ ಕೆರಳಿಸುವ ಮೂಲಕ ಜನರಲ್ಲಿ ಭಾವನಾತ್ಮಕವಾಗಿ ಜನರನ್ನು ಮರಳು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾವು ಬಿಜೆಪಿಯವರಿಗೆ ಏನು ಉತ್ತರ ಕೊಡಬೇಕು, ಯಾವ ರೀತಿ ಮಾತನಾಡಬೇಕು ಎಂದು ಕಾರ್ಯಕರ್ತರಿಗೆ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ, ಪಕ್ಷದ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಜಿಲ್ಲೆಯ ಅಧ್ಯಕ್ಷ ಹರೀಶ್ ಕುಮಾರ್, ಶಾಸಕ ಮಂಜುನಾಥ್ ಭಂಡಾರಿ ಸಹಿತ ಬೇರೆಬೇರೆ ನಾಯಕರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಬಿಜೆಪಿ ನೇತೃತ್ವದ ಸರಕಾರ ಶೇ.40 ಕಮೀಷನ್, ಜನ ವಿರೋಧಿ ನೀತಿಗಳ ಕುರಿತು ಜನರಿಗೆ ತಿಳುವಳಿಕೆ ಕೊಡುವ ಕೆಲಸ ಅವರು ಮಾಡಲಿದ್ದಾರೆ ಎಂದರು.

ನಮ್ಮ ಪ್ರಣಾಳಿಕೆ:
ಕಾಂಗ್ರಸ್ ಪಕ್ಷದ ಪ್ರಣಾಳಿಕೆಯಲ್ಲಿ ಹಲವು ಉತ್ತಮ ಸಮಾಜಮುಖಿ ಕಾರ್ಯಕ್ರಮ ತರಲಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅತೀ ಮುಖ್ಯವಾಗಿ ಪ್ರತಿ ಮನೆಗೂ 200 ಯುನಿಟ್ ವಿದ್ಯುತ್ ಉಚಿತ, ಮನೆಯ ಮಹಿಳಾ ಯಜಮಾನಿಗೆ ಪ್ರತಿ ತಿಂಗಳು ರೂ. 2ಸಾವಿರ ನೆರವು, ಬಿಪಿಎಲ್ ಪಡಿತರರಿಗೆ 10 ಕೆ.ಜಿ ಅಕ್ಕಿ ನೀಡಲಾಗುವುದು. ಪ್ರತಿ ಮನೆಗೂ ಈ ಯೋಜನೆಯ ಭರವಸೆಯ ಕಾರ್ಡ್ ನೀಡಲಿದ್ದೇವೆ. ಬಿಜೆಪಿಯವರು ಮನೆ ಮನೆಗೆ ಬಿಜೆಪಿ ಸ್ಟಿಕ್ಕರ್ ಕೊಡುತ್ತಿದ್ದಾರೆ. ಆದರೆ ನಾವು ಪ್ರತಿ ಮನೆ ಮನೆಗೆ ನಮ್ಮ ಯೋಜನೆಯ ಭರವಸೆಯ ಕಾರ್ಡ್ ತಲುಪಿಸುವ ಮೂಲಕ ಜನರ ಮನಸ್ಸನ್ನು ಗೆಲ್ಲಲಿದ್ದೇವೆ. ಈ ನಿಟ್ಟಿನಲ್ಲಿ ಕರಾವಳಿ ಪ್ರಜಾಧ್ವನಿ ಅತ್ಯಂತ ಯಶಸ್ವಿಯಾಗಿ ನಡೆಯಲಿದೆ ಎಂದು ಎಂ.ಬಿ. ವಿಶ್ವನಾಥ ರೈ ಹೇಳಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿಯವರು ಮಾತನಾಡಿ ಪ್ರತಿ ಮನೆಯ ಯಜಮಾನಿ ಗ್ರಹಿಣಿಗೆ ಪ್ರತಿ ತಿಂಗಳು ನೀಡುವ ರೂ. 2ಸಾವಿರದಲ್ಲಿ ರೂ. 500 ಗ್ಯಾಸ್ ಸಬ್ಸಿಡಿ, ರೂ. 500 ಜಿ.ಎಸ್.ಟಿಗೆ, ರೂ. 1ಸಾವಿರ ಬೆಲೆ ಏರಿಕೆ ಪರಿಹಾರ ನೀಡುವುದು ಈ ಯೋಜನೆ ಉದ್ದೇಶ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೂರ್ ಹಾಜಿ, ಸಮಾಜ ಕಲ್ಯಾಣ ಇಲಾಖೆ ಮಾಜಿ ಅಧ್ಸಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಎಸ್ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here