ಪುತ್ತೂರು:ಪ್ರತಿ ವರ್ಷ ಮೀನ ಸಂಕ್ರಮಣದಂದು ವಿಶೇಷವಾಗಿ ಸೂರ್ಯನ ರಶ್ಮಿಯು ದೇವಿಯ ಬಿಂಬಕ್ಕೆ ಸ್ಪರ್ಶಿಸಲಿರುವ ರಾಜ್ಯದ ಎರಡನೇ ದೇವಸ್ಥಾನ ಎಂದು ಖ್ಯಾತಿ ಪಡೆದಿರುವ ರೈಲು ನಿಲ್ದಾಣದ ಬಳಿಯ ಕಾರಣಿಕ ಕ್ಷೇತ್ರ ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ದೇವಿಗೆ ಮಾ.14 ರ ಮೀನ ಸಂಕ್ರಮಣದಂದು ಮುಂಜಾನೆ ಸೂರ್ಯ ರಶ್ಮಿಯ ಸ್ಪರ್ಶವಾಗಲಿದೆ. ಈ ಸಂದರ್ಭದಲ್ಲಿ ಮಹಾಲಕ್ಷ್ಮೀ ದೇವಿಗೆ ವಿಶೇಷ ಪೂಜೆ ನೆರವೇರಲಿದೆ.
ಬೆಳಿಗ್ಗೆ 6.30 ರಿಂದ ಮಹಾಲಿಂಗೇಶ್ವರ ಭಜಕ ವೃಂದದವರಿಂದ ಭಜನೆ, ನಂತರ ಶ್ರೀ ಕೃಷ್ಣ ಉಪಾಧ್ಯಾಯರಿಂದ ವೇದಘೋಷ ನಡೆಯಲಿದೆ. 7.30 ರ ಸಮಯದಲ್ಲಿ ಸೂರ್ಯನ ಕಿರಣಗಳು ಕ್ಷೇತ್ರದ ಮೂರು ಬಾಗಿಲುಗಳನ್ನು ದಾಟಿ ಗರ್ಭಗುಡಿಯಲ್ಲಿ ನೆಲೆಯಾಗಿರುವ ಮಹಾಲಕ್ಷ್ಮೀ ಬಿಂಬದ ಮೇಲೆ ಸ್ಪರ್ಶಿಸಲಿದೆ. ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮದರ್ಶಿ ಐತ್ತಪ್ಪ ಸಪಲ್ಯರವರು ದೇವಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ವರ್ಷದ ಕೊನೆಯ ಮಾಸವಾಗಿರುವ ಮೀನ ಸಂಕ್ರಮಣದಂದು ಸೂರ್ಯ ತನ್ನ ಪಥ ಬದಲಿಸುವ ಮಹತ್ವದ ಘಟ್ಟ. ಮೀನ ಸಂಕ್ರಮಣದಂದು ಸೂರ್ಯನ ರಶ್ಮಿ ದೇವಳದ ಗರ್ಭಗುಡಿಗೆ ಸ್ಪರ್ಶಿಸುವ ಪುಣ್ಯದಿನ. ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನ ಹೊರತು ಪಡಿಸಿದರೆ ಸೂರ್ಯನ ರಶ್ಮಿಯು ಬಿಂಬವನ್ನು ಸ್ಪರ್ಶಿಸುವ ರಾಜ್ಯದ ಎರಡನೇ ದೇವಸ್ಥಾನ ಪುತ್ತೂರಿನ ಲಕ್ಷ್ಮೀದೇವಿ ಬೆಟ್ಟದ ಮಹಾಲಕ್ಷ್ಮೀ ಕ್ಷೇತ್ರವಾಗಿದೆ. ಲಕ್ಷ್ಮೀದೇವಿ ಬೆಟ್ಟದಲ್ಲಿ ಬೆಳಗ್ಗಿನ ಜಾವ ಸೂರ್ಯನ ಕಿರಣಗಳು ದೇವಿಯ ಬಿಂಬವನ್ನು ಸ್ಪರ್ಶಿಸಿದರೆ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಸಂಜೆ ವೇಳೆ ಸ್ಪರ್ಶಿಸುತ್ತದೆ.