ಕಂಕನಾಡಿ ಗರಡಿ ಸಂಭ್ರಮ -150 ಸಂಪನ್ನ

0

ಪುತ್ತೂರು : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಗರಡಿಗಳಲ್ಲಿ ಒಂದಾಗಿರುವ ಕಂಕನಾಡಿ ಗರಡಿ ಬ್ರಹ್ಮಬೈದರ್ಕಳ ಕ್ಷೇತ್ರದ ೧೫೦ನೇ ವರ್ಷಾಚರಣೆ ಅಂಗವಾಗಿ ಮಾ.೩ರಂದು ಆರಂಭವಾದ “ಗರಡಿ ಸಂಭ್ರಮ-೧೫೦” ಮಾ.೮ರಂದು ಬೆಳಗ್ಗೆ ಸಂಪನ್ನಗೊಂಡಿತು.


ಕಂಕನಾಡಿ ಗರಡಿ ಕ್ಷೇತ್ರವು ಆರಂಭಿಕ ದಿನದಿಂದಲೇ ಧಾರ್ಮಿಕ ನಂಬಿಕೆಯ ಜತೆಜತೆಗೆ ಒಂದಿಲ್ಲೊಂದು ಹೊಸ ಪ್ರಯೋಗವನ್ನು ಮಾಡುತ್ತಲೇ ಬಂದಿದೆ. ಬ್ರಹ್ಮಶ್ರೀ ನಾರಾಯಣಗುರುಗಳು ಮಾಡಿದ ಕ್ರಾಂತಿ, ತತ್ವಾದರ್ಶದ ಅನುಷ್ಠಾನದಂತೆ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿಗಳಿಂದ ೨೦೦೩ರಲ್ಲಿ ಪ್ರಥಮ ಭಾರಿ ಬ್ರಹ್ಮಕಲಶೋತ್ಸವ ಮಾಡಿಸಿ ಇತಿಹಾಸಕ್ಕೆ ಬುನಾದಿ ಹಾಕಲಾಗಿತ್ತು. ಈ ಬಾರಿ ನಾಗಬ್ರಹ್ಮಮಂಡಲೋತ್ಸವದಲ್ಲಿ ಕಾವೂರಿನ ಮನೋಜ್ ಶಾಂತಿ ನಾಗಪಾತ್ರಿ, ಅಭಿಜಿತ್ ಪುಜಾರಿ ಕೆರೆಕಾಡು, ಅಜಿತ್ ಪೂಜಾರಿ ಕೆರೆಕಾಡು (ಹಾಲಿಟ್ಟು ಸೇವೆ)ನಾಗಕನ್ನಿಕೆಯಾಗಿ ಸೇವೆ ಸಲ್ಲಿಸಲು ಕಂಕನಾಡಿ ಗರಡಿ ಕ್ಷೇತ್ರದ ಆಡಳಿತ ಮಂಡಳಿ ಅವಕಾಶ ನೀಡಿ ಯಶಸ್ವಿಯಾಗುವ ಮೂಲಕ ಮತ್ತೊಂದು ಕ್ರಾಂತಿಯನ್ನು ಸೃಷ್ಟಿಸಿದೆ.


ಲಕ್ಷಾಂತರ ಮಂದಿ ಭಾಗಿ:
ಮನೋಜ್ ಶಾಂತಿ ನೇತೃತ್ವದ ತಂಡದ ನಾಗಬ್ರಹ್ಮಮಂಡಲೋತ್ಸವ ತಡರಾತ್ರಿ ೧೨.೩೦ಕ್ಕೆ ಆರಂಭವಾಗಿ ಗುರುವಾರ ಬೆಳಗ್ಗೆ ೫.೩೦ರ ವೇಳೆ ಸಮಾಪನಗೊಂಡಿತು. ಈ ಅಪೂರ್ವ ವೈಭವವನ್ನು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಕಣ್ತುಂಬಿಕೊಂಡರು. ಸುಮಾರು ೫ದಿನಗಳ ಕಾರ್ಯಕ್ರಮದಲ್ಲಿ ಲಕ್ಷಾಂತರ ಭಕ್ತಾದಿಗಳು ಭಾಗವಹಿಸಿ, ದೈವ-ದೇವರ ಪ್ರಸಾದವನ್ನು ಸ್ವೀಕರಿಸಿದರು.


ವೈವಿಧ್ಯತೆಯ ಮಹೋತ್ಸವ:

ಮಾ.೩ರಿಂದ ಹೊರೆಕಾಣಿಕೆ, ಸಹಸ್ರ ನಾರಿಕೇಳ ಗಣಯಾಗ, ಪರಿವಾರ ದೈವ-ದೇವರುಗಳಿಗೆ ಕಲಶಾಭಿಷೇಕ, ಬ್ರಹ್ಮಬೈದರ್ಕಳರಿಗೆ ಸಹಸ್ರ ಕುಂಭಾಭಿಷೆಕ, ನಾಗಬ್ರಹ್ಮ ಮಂಡಲೋತ್ಸವ ಸೇವೆ ನಡೆಯಿತು. ಸುಮಾರು ೫ ದಿನಗಳ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಿದ್ದರು. ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯ ಮೂಲಕ ಇಡೀ ಕಾರ್ಯಕ್ರಮ ಹೊಸ ಮೆರುಗನ್ನು ಸೃಷ್ಟಿಸಿತು. ಪ್ರತಿನಿತ್ಯ ೧೫೦೦ಮಂದಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದರು. ಅಚ್ಚುಕಟ್ಟಾಗಿ ಬ್ರಹ್ಮಬೈದರ್ಕಳ ದರುಶನ ವ್ಯವಸ್ಥೆ, ಊಟ-ತಿಂಡಿ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ ಮೂಲಕ ಮಾದರಿಯಾಯಿತು. ದಿನಕ್ಕೊಂದು ವೈವಿಧ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮಹೋತ್ಸವಕ್ಕೆ ಕಳೆ ನೀಡಿದವು. ಹತ್ತೂರಿನಿಂದ ಹರಿದು ಬಂದ ಹೊರೆಕಾಣಿಕೆ ಉಗ್ರಾಣದಲ್ಲಿ ತುಂಬಿತುಳುಕುತ್ತಿತ್ತು. ಒಟ್ಟಿನಲ್ಲಿ ಗರಡಿ ಸಂಭ್ರಮ ಆಡಳಿತ ಮಂಡಳಿಯ ನಿರೀಕ್ಷೆ ಅಭೂತಪೂರ್ವ ಯಶಸ್ವಿ ಕಂಡಿದೆ,

ಗರಡಿ ಸಂಭ್ರಮ ಕಾರ್ಯಕ್ರಮ ನಮ್ಮ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ. ಇದಕ್ಕೆ ಕ್ಷೇತ್ರದ ಬ್ರಹ್ಮಬೈದರ್ಕಳ, ಪರಿವಾರ ದೈವ-ದೇವರ ಅನುಗ್ರಹ ಕಾರಣವಾಗಿದೆ. ಆಡಳಿತ ಮಂಡಳಿ, ಸಂಭ್ರಮ ಉತ್ಸವ ಸಮಿತಿ, ಜಿಲ್ಲಾಡಳಿತ, ಜನಪ್ರತಿನಿಧಿಗಳ ಸಹಕಾರ, ಮಾಗಣೆ ಹಾಗೂ ನಾಡಿನ ನಾನಾ ಕಡೆಯ ಆಗಮಿಸಿದ ಸ್ವಯಂಸೇವಕರು, ಭಕ್ತರ ಪರಿಶ್ರಮ ಈ ಯಶಸ್ಸಿಗೆ ಕಾರಣವಾಗಿದೆ.
-ಚಿತ್ರರಂಜನ್ ಕೆ., ಅಧ್ಯಕ್ಷರು, ಶ್ರೀ ಬ್ರಹ್ಮಬೈದರ್ಕಳ ಕ್ಷೇತ್ರ ಕಂಕನಾಡಿ.

LEAVE A REPLY

Please enter your comment!
Please enter your name here