ವಿಭಾಗೀಯ ಪೀಠ ಸೂಚಿಸಿದ್ದು
ಮಾ.27ರಿಂದ ಪರೀಕ್ಷೆ
ಪಠ್ಯ ಕ್ರಮ ಬಿಟ್ಟು ಬೇರೆ ಪ್ರಶ್ನೆ ಕೇಳುವಂತಿಲ್ಲ
ಫಲಿತಾಂಶವನ್ನು ಸಾರ್ವಜನಿಕವಾಗಿ ಪ್ರಕಟಿಸುವಂತಿಲ್ಲ
ಪುತ್ತೂರು:5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ (ಪಬ್ಲಿಕ್)ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ ನೀಡಿದೆ. 10 ದಿನಗಳ ಬಳಿಕ ಅಂದರೆ ಮಾ.27ರಿಂದ ಪರೀಕ್ಷೆ ನಡೆಸಲು ಸೂಚನೆ ನೀಡಿರುವ ಹೈಕೋರ್ಟ್, ಪಠ್ಯಕ್ರಮ ಬಿಟ್ಟು ಬೇರೆ ಪ್ರಶ್ನೆ ಕೇಳುವಂತಿಲ್ಲ, ಫಲಿತಾಂಶವನ್ನು ಸಾರ್ವಜನಿಕವಾಗಿ ಪ್ರಕಟಿಸುವಂತಿಲ್ಲ. ಶಾಲೆಗೆ ಮಾತ್ರವೇ ಕಳಿಸಬೇಕು ಎಂದೂ ಸೂಚನೆ ನೀಡಿದೆ.
5 ಮತ್ತು 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಶಿಕ್ಷಣ ಕಾಯ್ದೆಯಡಿ ನಿರ್ಬಂಧವಿಲ್ಲ ಎಂದು, ಪರೀಕ್ಷೆ ರದ್ದುಗೊಳಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ರದ್ದುಗೊಳಿಸಿರುವ ವಿಭಾಗೀಯ ಪೀಠ ಪರೀಕ್ಷೆ ನಡೆಸಬಹುದೆಂದು ಆದೇಶ ನೀಡಿದೆ.
ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ರಾಜ್ಯ ಪಠ್ಯಕ್ರಮದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲುದ್ದೇಶಿಸಿದ್ದ ರಾಜ್ಯ ಸರಕಾರದ ನಿರ್ಧಾರದ ವಿರುದ್ಧ ಅನುದಾನ ರಹಿತ ಶಾಲೆಗಳ ಸಂಘ ಹೈಕೋರ್ಟ್ ಮೆಟ್ಟಿಲೇರಿತ್ತು. ಶಾಸಕಾಂಗದಲ್ಲಿ ಚರ್ಚೆ ಆಗದೇ ಅಧಿಕಾರಿಗಳೇ ನಿರ್ಧಾರ ಮಾಡಿದ್ದರು ಎಂದು ಅನುದಾನರಹಿತ ಶಾಲೆಗಳ ಸಂಘದ ಪರ ವಕೀಲರು ವಾದಿಸಿದ್ದರು. ಈ ವಾದವನ್ನು ಪುರಸ್ಕರಿಸಿದ, ನ್ಯಾ|ಪ್ರದೀಪ್ ಸಿಂಗ್ ಯೆರೂರ್ ಅವರಿದ್ಧ ಏಕಸದಸ್ಯ ಪೀಠ 5 ಮತ್ತು 8ನೇ ತರಗತಿ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ರದ್ದುಗೊಳಿಸಿ ತೀರ್ಪು ನೀಡಿತ್ತು.
ಆಯಾ ಶಾಲೆಗಳು ದಿನಾಂಕ ನಿಗದಿಪಡಿಸಿ ಪರೀಕ್ಷೆ ನಡೆಸಲು ಸೂಚನೆ: ಮಾ.13ರಿಂದ ನಡೆಯಬೇಕಿದ್ದ 5 ಮತ್ತು 5ನೇ ತರಗತಿ ಪಬ್ಲಿಕ್ ಪರೀಕ್ಷೆಯನ್ನು ರದ್ದುಪಡಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಆಯಾಯ ಶಾಲೆಗಳು ಹೊಸದಾಗಿ ಪರೀಕ್ಷೆ ದಿನಾಂಕ ನಿಗದಿಗೆ ಅವಕಾಶ ಮಾಡಿಕೊಟ್ಟಿತ್ತಲ್ಲದೆ ನಿಯಮಗಳಿಗನುಸಾರ ಮುಂದಿನ ಶೈಕ್ಷಣಿಕ ವರ್ಷದಿಂದ ಬೋರ್ಡ್ ಪರೀಕ್ಷೆ ನಡೆಸಬಹುದು ಎಂದು ಶಿಕ್ಷಣ ಇಲಾಖೆಗೆ ಸೂಚನೆ ನೀಡಿತ್ತು.
ಏಕಸದಸ್ಯ ಪೀಠದ ಆದೇಶದ ವಿರುದ್ಧ ಸರಕಾರದಿಂದ ಮೇಲ್ಮನವಿ: 5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ ರದ್ದುಗೊಳಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರಕಾರ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಏಕಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದ್ದ ವೀಭಾಗೀಯ ಪೀಠ ವಿಚಾರಣೆಯನ್ನು ಮಾ.14ಕ್ಕೆ ಮುಂದೂಡಿತ್ತು. ಮಾ.14ರಂದು ಯಾವುದೇ ಆದೇಶ ಮಾಡದೆ ವಿಚಾರಣೆ ಮಾ.15ಕ್ಕೆ ಮುಂದೂಡಿಕೆಯಾಗಿತ್ತು. ಇದೀಗ ವಿಚಾರಣೆ ಪೂರ್ಣಗೊಳಿಸಿರುವ ವಿಭಾಗೀಯ ಪೀಠ 5 ಮತ್ತು 8ನೇ ತರಗತಿ ಪಬ್ಲಿಕ್ ಪರೀಕ್ಷೆ ನಡೆಸಲು ಅನುಮತಿ ನೀಡಿದೆ.
ನಿರ್ಧಾರ-ತಡೆ-ಮೇಲ್ಮನವಿ-ಅನುಮತಿ
ಮಕ್ಕಳ ಕಲಿಕೆಯನ್ನು ಉತ್ತಮಗೊಳಿಸಲು 2022-23ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಬೋರ್ಡ್(ಮೌಲ್ಯಾಂಕನ) ಪರೀಕ್ಷೆ ನಡೆಸಲು ನಿರ್ಧರಿಸಿ ವೇಳಾಪಟ್ಟಿ ಪ್ರಕಟಿಸಿತ್ತು.ಮಾ.13ರಿಂದ 18ರವರೆಗೆ ಮೌಲ್ಯಾಂಕನ ಪರೀಕ್ಷೆಗೆ ದಿನ ನಿಗದಿ ಮಾಡಿತ್ತು. ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ ಪರೀಕ್ಷಾ ಕೇಂದ್ರಗಳನ್ನು ರಚಿಸುವಂತೆ ಸೂಚಿಸಲಾಗಿತ್ತು. ಯಾವುದೇ ಶಾಲೆಯಲ್ಲಿ ನಿಗದಿತ ಸಂಖ್ಯೆಗಿಂತ ಕಡಿಮೆ ಮಕ್ಕಳಿದ್ದರೆ ಅವರಿಗೆ ಸಮೀಪದ ಮತ್ತೊಂದು ಶಾಲೆಯನ್ನು ಪರೀಕ್ಷಾ ಕೇಂದ್ರವಾಗಿಸಲು ಸೂಚಿಸಲಾಗಿತ್ತು. ಇದಕ್ಕೆ ಪೋಷಕರಿಂದಲೂ ಆಕ್ಷೇಪಗಳು ವ್ಯಕ್ತವಾಗಿದ್ದರಿಂದ ಆಯಾ ಶಾಲೆಗಳನ್ನೇ ಕೇಂದ್ರವಾಗಿಸಿ ಪರೀಕ್ಷೆ ನಡೆಸಲು ಇಲಾಖೆ ಸೂಚಿಸಿತ್ತು. ರಾಜ್ಯ ಸರಕಾರದ ನಿರ್ಧಾರದ ವಿರುದ್ಧ ಅನುದಾನ ರಹಿತ ಶಾಲೆಗಳ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ 5, 8ನೇ ತರಗತಿ ಪಬ್ಲಿಕ್ ಪರೀಕ್ಷೆಗೆ ತಡೆ ನೀಡಿತ್ತು. ಈ ಆದೇಶದ ವಿರುದ್ಧ ಸರಕಾರ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಪಬ್ಲಿಕ್ ಪರೀಕ್ಷೆ ನಡೆಸಲು ವಿಭಾಗೀಯ ಪೀಠ ಅನುಮತಿ ನೀಡಿದೆ.