ಕಡಬ ಕೆರೆಯ ಬಳಿ ಗೃಹರಕ್ಷಕದಳದ ಕಛೇರಿ ನಿರ್ಮಾಣಕ್ಕೆ ಕಾದಿರಿಸಿದ ಜಾಗ ಅತಿಕ್ರಮಿಸಿ ಕಟ್ಟಡ ನಿರ್ಮಾಣ ಆರೋಪ-ತಹಸೀಲ್ದಾರ್ ಗೆ ದೂರು

0

ಕಡಬ: ಇಲ್ಲಿನ ಕೆರೆಯ ಸಮಿಪ ಕಡಬ ಗೃಹರಕ್ಷಕ ಕಛೇರಿ ನಿರ್ಮಿಸಲು 5 ಸೆಂಟ್ಸ್ ಜಾಗ ಮೀಸಲು ಇರಿಸಲಾಗಿದ್ದು ಈ ಜಾಗವನ್ನು ಸ್ಥಳೀಯ ಖಾಸಗಿ ವ್ಯಕ್ತಿಯೋರ್ವರು ಅತಿಕ್ರಮಿಸಿ ಎರಡು ಅಂತಸ್ಥಿನ ಮನೆ ಕಟ್ಟಿದ್ದಾರೆ ಎಂಬ ಆರೋಪ ವ್ಯಕ್ತವಾಗಿದ್ದು, ಈ ಬಗ್ಗೆ ಕಡಬ ಗೃಹರಕ್ಷಕದಳದ ಘಟಕಾಧಿಕಾರಿ ಕಡಬ ತಹಸೀಲ್ದಾರ್ ಹಾಗೂ ಕಡಬ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.

ಕಡಬ ಘಟಕಾಧಿಕಾರಿ ತೀರ್ಥೇಶ್ ಅಮೈ ಅವರು ನೀಡಿದ ದೂರಿನಲ್ಲಿ ತಿಳಿಸಿರುವಂತೆ, 2004ನೇ ಇಸವಿಯಲ್ಲಿ ಆಗಿನ ಪುತ್ತೂರು ಸಹಾಯಕ ಆಯುಕ್ತರು (LND (3) CR 103/04-05) ಸರ್ವೆ ನಂಬ್ರ 209/1ಪಿ3 5 ಸೆಂಟ್ಸ್ ಜಾಗವನ್ನು ಮೀಸಲಿಟ್ಟಿರುತ್ತಾರೆ. ಇದೇ ಜಾಗದ ಹತ್ತಿರದಲ್ಲಿ ವಾಸ್ತವ್ಯ ಇರುವ ಕಡಬ ಗ್ರಾಮದ ದಾಮ್ರೋಡಿ ನಿವಾಸಿ ವೆಂಕಪ್ಪ ರೈ ಯವರ ಮಗನಾದ ಕರುಣಾಕರ ರೈ ಯವರು ಅತಿಕ್ರಮಿಸಿ ನಮ್ಮ ಗೃಹ ರಕ್ಷಕ ಕಛೇರಿಗೆ ಮೀಸಲಿರಿಸಿದ ಜಾಗದಲ್ಲಿ ಅಕ್ರಮವಾಗಿ ಕಟ್ಟಡವನ್ನು ನಿರ್ಮಿಸಿದ್ದಾರೆ. ಈ ಹಿಂದೆ 7 ತಿಂಗಳಿನ ಒಳಗಡೆ ಕಛೇರಿ ನಿರ್ಮಿಸುವ ಜಾಗದ ಕುರಿತಾಗಿ ಜಾಗದ ಅಳತೆ ಮಾಡಿ ವರದಿ ನೀಡುವಂತೆ ಜಿಲ್ಲಾ ಕಮಾಂಡೆಂಟ್ ಅವರು ನನಗೆ ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ನಾನು ಕಡಬ ತಾಲೂಕು ತಹಶೀಲ್ದಾರರಿಗೆ ಇದೇ ಕುರಿತಾಗಿ ಮನವಿಯನ್ನು ಸಲ್ಲಿಸಿರುತ್ತೇನೆ. ಆಗ ಅವರು ಕಡಬ ತಾಲೂಕು ಸರ್ವೆಯರ್ ಗೆ ತಿಳಿಸಿ ನಮಗೆ ಜಾಗದ ಗಡಿಗುರುತು ಮಾಡಿಕೊಟ್ಟಿರುತ್ತಾರೆ. ಈ ಜಾಗವು ಕರುಣಾಕರ ರೈಯವರು ಅಕ್ರಮವಾಗಿ ನಿರ್ಮಿಸಿದ ಕಟ್ಟಡದ ಮೂರು ಫೀಟ್ ಅಂತರದಲ್ಲಿ ನಮಗೆ 0.05 ಸೆಂಟ್ಸ್ ಜಾಗವನ್ನು ಗುರುತಿಸಿರುತ್ತಾರೆ. ಆ ಜಾಗದಲ್ಲಿ 0.03 ಸೆಂಟ್ಸ್ ಜಾಗ ಇದೆ, 0.02ಸೆಂಟ್ಸ್ ಜಾಗ ಮಾರ್ಗದಲ್ಲಿದೆ ಎಂದು ತಿಳಿಸಿರುತ್ತಾರೆ. ಅದೇ ವರದಿಯನ್ನು ಮಾನ್ಯ ಜಿಲ್ಲಾ ಕಮಾಂಡೆಂಟ್ ಅವರಿಗೆ ತಹಶೀಲ್ದಾರರು ಕೊಟ್ಟಿದ್ದಾರೆ. ಈಗ ನೋಡುವಾಗ ನಮ್ಮ ಕಛೇರಿ ನಿರ್ಮಿಸಲು ಬಿಟ್ಟಿರುವ ಜಾಗದಲ್ಲೇ ಕರುಣಾಕರ ರೈ ಯವರು ಅಕ್ರಮವಾಗಿ ಜಾಗವನ್ನು ಕಬಳಿಸಿ ಅಕ್ರಮ ಎರಡು ಅಂತಸ್ತಿನ ಕಟ್ಟಡವನ್ನು ಕಟ್ಟಿರುತ್ತಾರೆ ಎರಡು ದಿನಗಳ ಹಿಂದೆ ಇದೇ ಜಾಗದ ಹತ್ತಿರದಲ್ಲಿರುವ ಸಾರ್ವಜನಿಕ ಸರಕಾರಿ ಕೆರೆಯ ಅಳತೆ ಸಂದರ್ಭದಲ್ಲಿ ಗೃಹ ರಕ್ಷಕ ಕಛೇರಿಗೆ ಮೀಸಲಿಟ್ಟ ಜಾಗವು ಅತಿಕ್ರಮಣವಾಗಿರುವುದು ನನ್ನ ಗಮನಕ್ಕೆ ಬಂದಿರುತ್ತದೆ. ಆದುದರಿಂದ ಕೂಡಲೇ ಅಕ್ರಮ ಕಟ್ಟಡವನ್ನು ತೆರವುಗೊಳಿಸಿ ಗೃಹರಕ್ಷಕ ದಳದ ಕಛೇರಿಗೆ ಮೀಸಲಿಟ್ಟ ಜಾಗವನ್ನು ನೀಡಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಯವರಿಗೆ ದೂರು: ಮುರಳೀ ಮೋಹನ ಚೂಂತಾರು
ಈ ಬಗ್ಗೆ ಮಾಹಿತಿ ನೀಡಿದ ಗೃಹರಕ್ಷಕದಳದ ಜಿಲ್ಲಾ ಕಮಾಂಡೆಂಟ್ ಮುರಳೀ ಮೋಹನ ಚೂಂತಾರು ಅವರು, ಕಡಬ ಗೃಹರಕ್ಷಕದಳದ ಕಛೇರಿಗೆ ಮೀಸಲಿಟ್ಟ ಜಾಗದಲ್ಲಿ ಸ್ಥಳೀಯ ವ್ಯಕ್ತಿ ಮನೆ ನಿರ್ಮಾಣ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ದೂರು ನೀಡಲಾಗುವುದು. ನಮಗೆ 5 ಸೆಂಟ್ಸ್ ಜಾಗ ಮಂಜೂರಾಗಿದ್ದು ದಾಖಲೆಗಳು ಇದೆ. ಈ ಬಗ್ಗೆ ಸಮಾಜಾಹಿಸಿಕೆ ನೀಡಲು ಯಾರು ಬಂದರೂ ನಾವು ಒಪ್ಪುವುದಿಲ್ಲ, ಇದರಲ್ಲಿ ಶಾಮಿಲಾಗಿರುವವರ ಬಗ್ಗೆಯೂ ತನಿಖೆಯಾಗಬೇಕು ಈ ಎಲ್ಲ ವಿಚಾರಗಳನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here