ಯಾಗದಿಂದ ಲೋಕಕಲ್ಯಾಣವಾಗಲಿ – ಎಡನೀರು ಶ್ರೀ
ಜೀವನದ ಬದ್ಧತೆಗೆ ಶಕ್ತಿ ಕೊಡುವ ಯಾಗ – ಮಾಣಿಲ ಶ್ರೀ
ಶಿವ ದೇವರನ್ನು ಪ್ರಸನ್ನಮಾಡುವ ಯಾಗ – ಒಡಿಯೂರು ಶ್ರೀ
ಯಜ್ಞ ಯಾಗಾದಿಗಳಿಂದ ಧರ್ಮ ಶ್ರದ್ಧೆಯುಂಟಾಗುತ್ತದೆ – ಸಂಜೀವ ಮಠಂದೂರು
ಪುತ್ತೂರಾಯರ ಮನಸ್ಸಿನಲ್ಲಿ ದೇವರ ಶಕ್ತಿಯಿದೆ – ಹೇಮನಾಥ ಶೆಟ್ಟಿ ಕಾವು
ಆಡಂಭವಿರಲ್ಲದ ಭಕ್ತಿಯ ಕಾರ್ಯಕ್ರಮ – ನವೀನ್ ಕುಮಾರ್ ಭಂಡಾರಿ ಎಚ್
ತಾಯಿಯೇ ಬಯಸಿದ ಸೇವೆ ಇದಾಗಿದೆ – ಮಹೇಶ್ ಕಜೆ
ಈ ಕ್ಷೇತ್ರದ ಮಣ್ಣಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹತ್ತಿರದಲ್ಲಿ ಎಲ್ಲೂ ಆಗದ ಕಾರ್ಯಕ್ರಮ ನಡೆದಿದೆ. ನಾಗಮಂಡಲ, ಸಹಸ್ರನಾಲಿಕೇರ ತ್ರಿಮಧುರ ಹವನ, ರಕ್ತೇಶ್ವರಿ ನಡಾವಳಿ, ಲಕ್ಷ ಗಾಯತ್ರಿ ಯಜ್ಞ, ಇವತ್ತು ಅತಿ ರುದ್ರ ಯಾಗ ನಡೆಯುವ ಮೂಲಕ ಕ್ಷೇತ್ರದ ಸಾನಿಧ್ಯ ವೃದ್ದಿಯಾಗಿದೆ. ಅತಿರುದ್ರ ಯಾಗ ಮಾಡುವ ಮುಂದೆಯೂ ಇಲ್ಲಿ ಮಾ.17 ರಾತ್ರಿ ವಿಷ್ಣುಮೂರ್ತಿ ದೈವ ನರ್ತನ ಸೇವೆ ನಡೆದಿದೆ. ಯಾಕೆಂದರೆ ಎಲ್ಲವನ್ನು ನಡೆಸುವುದು ಇಲ್ಲಿ ದೈವ ಮತ್ತು ದೇವರು ಮಾತ್ರ. ಅತಿ ರುದ್ರ ಯಾಗದಲ್ಲಿ 12 ಮಂದಿ ಋತ್ವಿಜರಂತೆ 11 ಯಜ್ಞ ಕುಂಡದಲ್ಲಿ ಸುಮಾರು 135 ಮಂದಿ ವೈದಿಕರು ಭಾಗವಹಿಸುವುದರೊಂದಿಗೆ ನಡೆಯುವ ಯಾಗ ಇದಾಗಿದೆ.
ಕೆ.ಪ್ರೀತಮ್ ಪುತ್ತೂರಾಯ ಸಂಚಾಲಕರು
ಅತಿರುದ್ರ ಮಹಾಯಾಗ ಸಮಿತಿ
ಪುತ್ತೂರು: ಪುತ್ತೂರಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಪರಮೇಶ್ವರನ ಯಜ್ಞಗಳಲ್ಲಿ ಅತ್ಯಂತ ಶ್ರೇಷ್ಠವಾಗಿ ಪುಣ್ಯ ಫಲಪ್ರದವಾದ ಅತಿರುದ್ರ ಮಹಾಯಾಗವು ಮಾ.19ರಂದು ವಿವಿಧ ವಿದ್ವಾಂಸರ ಸಮಾಗಮದೊಂದಿಗೆ ಸಂಪ್ಯ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನಡೆಯಲಿದ್ದು, ಮಾ.18ರಂದು ಸಂಜೆ ಅಗ್ನಿಜನನ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಎಡನೀರು, ಮಾಣಿಲ, ಒಡಿಯೂರು ಶ್ರೀಗಳಿಂದ ಅಶೀರ್ವಚನ ಕಾರ್ಯಕ್ರಮ ನಡೆಯಿತು.
ಯಾಗದಿಂದ ಲೋಕಕಲ್ಯಾಣವಾಗಲಿ
ಎಡನೀರು ಮಠದ ಶ್ರೀ ಸಚ್ಚಿದಾನಂದ ಶ್ರೀಪಾಂಗಳವರು ಆಶೀರ್ವಚ ನೀಡಿ ಮಾತೆಯ ಸನ್ನಿಧಿಯಲ್ಲಿ ನಡೆಯುವ ಈ ಕಾರ್ಯಕ್ರಮದಿಂದ ಲೋಕ ಕಲ್ಯಾಣವಾಗಲಿ ಎಂದರು.
ಜೀವನದ ಬದ್ಧತೆಗೆ ಶಕ್ತಿ ಕೊಡುವ ಯಾಗ:
ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿ ಜೀವನದ ಬದ್ಧತೆಗೆ ಶಕ್ತಿ ಕೊಡುವ ಯಾಗ ಇದಾಗಿದ್ದು, ಆತ್ಮಜಾಗೃತಿಯ ಉನ್ನತಿಯಿಂದ ಪ್ರಭಾವವಾಗಿ ಬೆಳೆಯುವಂತಾಗಲಿ. ವಿಶಿಷ್ಟವಾದ ಶಕ್ತಿ ಸಾಮಾರ್ಥ್ಯ ಈ ಗುರು ನೆಲೆಯಲ್ಲಿ ಇದೆ. ಯಾಗದ ಪ್ರಭಾವ ದೇಶ, ಜಗತ್ತಿಗೆ ಸನ್ಮಂಗಳವನ್ನುಂಟುಮಾಡಲಿ ಎಂದರು.
ಶಿವ ದೇವರನ್ನು ಪ್ರಸನ್ನಮಾಡುವ ಯಾಗ:
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿ ರುದ್ರ ದೇವರಿಗೆ ಅತಿ ಪ್ರಿಯವಾದ ಯಾಗ. ಅದೇ ರೀತಿ ಪ್ರಸನ್ನ ಮತ್ತು ಕೋಪ ಇವೆರಡು ರುದ್ರ ದೇವರಲ್ಲಿದೆ. ಇಲ್ಲಿ ರುದ್ರ ದೇವರನ್ನು ಪ್ರಸನ್ನ ಮಾಡುವುದು ಮುಖ್ಯ ಎಂದ ಅವರು ಅನ್ನದ ಕಣ ವ್ಯರ್ಥವಾಗಬಾರದು, ಆನಂದ ಕ್ಷಣ ತಪ್ಪಾಗದಂತೆ ಸಾರ್ಥಕವಾಗಿ ಈ ಕಾರ್ಯಕ್ರಮ ನಡೆಯಲಿ ಎಂದರು.
ಯಜ್ಞ ಯಾಗಾದಿಗಳಿಂದ ಧರ್ಮ ಶ್ರದ್ಧೆಯುಂಟಾಗುತ್ತದೆ:
ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಯಜ್ಞ ಯಾಗಾದಿಗಳು ಧರ್ಮ ಶ್ರದ್ಧೆಯನ್ನು ಹೆಚ್ಚಿಸುತ್ತದೆ. ಇಂತಹ ಮಹಾನ್ ದೊಡ್ಡ ಯಾಗಾದಿಗಳು ಮಾಡಬೇಕಾದರೆ ಚಿಂತನೆ ಬಹಳಷ್ಟು ಬೇಕಾಗುತ್ತದೆ. ಆದರೆ ಯೋಚನೆ ಮಾಡದೆ ಕಾರ್ಯ ಮಾಡಿ ಮುಗಿಸುವ ಹಠವಾದಿ, ದೈವ ಭಕ್ತರಾಗಿರುವ ಪ್ರೀತಂ ಪುತ್ತೂರಾಯ ಅವರಿಂದ ಮಾತ್ರ ಇಂತಹ ಕಾರ್ಯಕ್ರಮ ಸಾಧ್ಯ ಎಂದರು.
ಪುತ್ತೂರಾಯರ ಮನಸ್ಸಿನಲ್ಲಿ ದೇವರ ಶಕ್ತಿಯಿದೆ:
ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ಈ ಕ್ಷೇತ್ರದಲ್ಲಿ ಬೇರೆ ಬೇರೆ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಇಲ್ಲಿ ಏನೋ ಒಂದು ಶಕ್ತಿ ಇದೆ. ಅದಕ್ಕೆ ಸರಿಯಾಗಿ ಪ್ರೀತಮ್ ಪುತ್ತೂರಾಯ ಅವರು ಆಲೋಚನೆ ಮಾಡಿದ್ದನ್ನು ರೂಪಿಸುತ್ತಾರೆ. ಅವರ ಮನಸ್ಸಿನಲ್ಲಿ ದೇವರ ಶಕ್ತಿಯಿದೆ ಎಂದರು.
ಆಡಂಭವಿರಲ್ಲದ ಭಕ್ತಿಯ ಕಾರ್ಯಕ್ರಮ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್ ಅವರು ಮಾತನಾಡಿ ಕ್ಷೇತ್ರದಲ್ಲಿ ಅನೇಕ ಲೋಕಕಲ್ಯಾಣಾರ್ಥ ನಡೆಯುವ ಸಂದರ್ಭ ಭಕ್ತಿ ಪ್ರಧಾನ ಕಾಣುತ್ತದೆ. ಇಲ್ಲಿ ಆಡಂಭವಿಲ್ಲ. ಇದು ದೇವರಿಗೆ ಪ್ರೀಯವಾಗುತ್ತದೆ ಎಂದರು.
ತಾಯಿಯೇ ಬಯಸಿದ ಸೇವೆ ಇದಾಗಿದೆ:
ಅತಿರುದ್ರ ಮಹಾಯಾಗ ಸಮಿತಿ ಗೌರವಾಧ್ಯಕ್ಷ ನ್ಯಾಯವಾದಿ ಮಹೇಶ್ ಕಜೆ ಅವರು ಸ್ವಾಗತಿಸಿ ಮಾತನಾಡಿ ‘ಅನ್ನಪೂರ್ಣೆ ಸದಾ ಪೂರ್ಣೆ ಶಂಕರ ಪ್ರಾಣವಲ್ಲಭೆ’ ಎಂಬ ಶ್ಲೋಕದಲ್ಲಿ ಶಿವನ ಉಲ್ಲೇಕ ಇರುವಂತೆ ತಾಯಿಯೇ ಬಯಸಿದ ಸೇವೆ ಇದಾಗಿದೆ. ಅದೇ ರೀತಿ ಯಾರು ಮಾಡದ್ದು, ಎಲ್ಲಿಯೂ ಆಗದ ಧಾರ್ಮಿಕ ಕಾರ್ಯ ಇಲ್ಲಿ ಪ್ರೀತಂ ಪುತ್ತೂರಾಯ ಅವರ ನೇತೃತ್ವದಲ್ಲಿ ನಡೆಯುತ್ತಿದೆ ಎಂದರು. ಶ್ರೀ ಕ್ಷೇತ್ರ ಸೌತಡ್ಕದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ ಶುಭ ಹಾರೈಸಿದರು.
ಸಮಿತಿ ಸಂಚಾಲಕ ಕೆ.ಪ್ರೀತಮ್ ಪುತ್ತೂರಾಯ ಪ್ರಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶರಣ್ಯ ಪ್ರಾರ್ಥಿಸಿದರು. ಸಮಿತಿ ಕೋಶಾಧಿಕಾರಿ ಉದಯ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಬನ್ನೂರು ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಮಹಾಪೂಜೆ ನಡೆಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಸಮಿತಿ ಗೌರವಾಧ್ಯಕ್ಷ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಕಾರ್ಯಾಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ, ಸಂಘಟನಾ ಕಾರ್ಯದರ್ಶಿ ರಂಗನಾಥ್ ಬೊಳುವಾರು, ನಯನಾ ರೈ, ಗೌರವ ಸಲಹೆಗಾರ ಅರುಣ್ ಕುಮಾರ್ ಪುತ್ತಿಲ, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಉಮೇಶ್ ಸಂಪ್ಯ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.