ಮಾ.25-31 ಮಜಲುಮಾರು ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ, ಪುಷ್ಪರಥ ಸಮರ್ಪಣೆ, ವರ್ಷಾವಧಿ ಜಾತ್ರೋತ್ಸವದ ಸಂಭ್ರಮ

0

ಮಾ.25 ಹೊರೆಕಾಣಿಕೆ, ಪುಷ್ಪರಥದ ಭವ್ಯ ಮೆರವಣಿಗೆ
ಮಾ.30 ಬ್ರಹ್ಮಕಲಶ, ಪುಷ್ಪರಥ ಸಮರ್ಪಣೆ, ಪುಷ್ಪರಥೋತ್ಸವ
ಮಾ.31 ದೇವರ ಜಾತ್ರೋತ್ಸವ

ಪುತ್ತೂರು: ಮಾಂಗಲ್ಯ ವರಪ್ರದಾಯಕ, ಸಂತಾನಪ್ರದಾಯಕ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದಿರುವ, ಸುಮಾರು 800 ವರ್ಷಗಳ ಇತಿಹಾಸವಿರುವ ನರಿಮೊಗರು ಗ್ರಾಮದ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ, ಪುಷ್ಪರಥ ಸಮರ್ಪಣೆ ಹಾಗೂ ಜಾತ್ರೋತ್ಸವಗಳು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳು ಹಾಗೂ ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ, ತಾಂತ್ರಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರು, ಉಮಾಮಹೇಶ್ವರ ಟ್ರಸ್ಟ್‌ನ ಗೌರವಾಧ್ಯಕ್ಷರಾಗಿರುವ ಜಯರಾಮ ಕೆದಿಲಾಯ ಶಿಬರ ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.25 ರಂದು ದೇವಾಲಯದಲ್ಲಿ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ ಹಾಗೂ ಹಸಿರು ಹೊರೆಕಾಣಿಕೆ ಸಮರ್ಪಣೆಯೊಂದಿಗೆ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ದೊರೆಯಲಿದೆ. ಹೊರೆಕಾಣಿಕೆ ಹಾಗೂ ದೇವರಿಗೆ ಸಮರ್ಪಣೆಯಾಗಲಿರುವ ನೂತನ ಪುಷ್ಪರಥದ ಭವ್ಯ ಮೆರವಣಿಗೆಯು ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಹೊರಡಲಿದೆ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ ನಾಟ್ಯ ರಂಜಿನಿ ಕಲಾಲಯ ಮೊಟ್ಟೆತ್ತಡ್ಕ, ಭಕ್ತಕೋಡಿ ಶ್ರೀರಾಮ ಭಜನಾ ಮಂಡಳಿ, ಪುತ್ತೂರು ಶ್ರೀ ಉಳ್ಳಾಲ್ತಿ ಭಜನಾ ಮಂಡಳಿಯವರಿಂದ ಭಜನೆ, ಕ್ಷೇತ್ರದ ತಂತ್ರಿಗಳಿಗೆ ಹಾಗೂ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ ಬಳಿಕ ವಿವಿಧ ತಾಂತ್ರಿಕ, ವೈದಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಪಾರ್ವತಿ ಗಣೇಶ್ ಭಟ್ ಹೊಸಮೂಲೆ ಇವರ ಶಿಷ್ಯ ಜಾಸ್ಮಿನ್ ಗಣೇಶ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ರಾತ್ರಿ ಬಂಗಾರ್ ಕಲಾವಿದರು ಪುರುಷರಕಟ್ಟೆ ಇವರಿಂದ ನಾಡ್ಂಡಲ ತಿಕ್ಕಂದ್ ಎಂಬ ತುಳು ಹಾಸ್ಯಮಯ ನಾಟಕ ನಡೆಯಲಿದೆ.


ಮಾ.26ರಂದು ಕ್ಷೇತ್ರದಲ್ಲಿ ವಿವಿಧ ವೈಧಿಕ, ತಾಂತ್ರಿಕ ವಿಧಿ ವಿಧಾನಗಳು ಪ್ರಾರಂಭಗೊಳ್ಳಲಿದೆ. ಬೆಳಿಗ್ಗೆ ಯಕ್ಷಶ್ರೀ ಹವ್ಯಾಸಿ ಬಳಗದವರಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಅಪರಾಹ್ನ ಪುರುಷರಕಟ್ಟೆ ಸರಸ್ವತಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ ಬ್ರಹ್ಮಕಲಶೋತ್ಸವದ ಪ್ರಥಮ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಸಂಪುಟ ನರಸಿಂಹಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಪುರುಷರಕಟ್ಟೆ ಶ್ರೀ ಸರಸ್ವತಿ ವಿದ್ಯಾಸಂಸ್ಥೆ ಸಂಚಾಲಕ ಅವಿನಾಶ್ ಕೊಡಂಕಿರಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮಜಲುಮಾರು ಶ್ರೀ ಉಮಾಮಹೇಶ್ವರ ಟ್ರಸ್ಟ್‌ನ ಅಧ್ಯಕ್ಷ ಲಕ್ಷ್ಮೀಶ ತಂತ್ರಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ, ನರಿಮೊಗರು ಗ್ರಾ.ಪಂ ಅಧ್ಯಕ್ಷೆ ವಿದ್ಯಾ ಎ., ಬೆದ್ರಾಳ ಲಕ್ಷ್ಮೀ ಸ್ವಾಮಿಲ್‌ನ ಮ್ಹಾಲಕ ಶ್ರೀನಿವಾಸ ಪೈ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಂಜೆ ಆರ್ಟ್ ಆಫ್ ಲಿವಿಂಗ್ ಪುತ್ತೂರು ಹಾಗೂ ಶ್ರೀದುರ್ಗಾ ಭಜನಾ ಮಂಡಳಿ ಪುರುಷರಕಟ್ಟೆ ಇವರಿಂದ ಭಜನೆ, ರಾತ್ರಿ ಸಾಯಿಲಕ್ಷ್ಮೀ ಬಳಗದವರಿಂದ ಶಾಸ್ತ್ರೀಯ ಸಂಗೀತ, ಶ್ರೀಶಾರದಾ ಕಲಾ ಕೇಂದ್ರ ಪುತ್ತೂರು ಇವರಿಂದ ಭರತನಾಟ್ಯ ಮತ್ತು ಶ್ರೀನಿವಾಸ ಕಲ್ಯಾಣ ನೃತ್ಯರೂಪಕ ನಡೆಯಲಿದೆ.


ಮಾ.27ರಂದು ಕ್ಷೇತ್ರದಲ್ಲಿ ವಿವಿಧ ವೈದಿಕ, ತಾಂತ್ರಿಕ ವಿಧಿ ವಿಧಾನಗಳು, ಮಹಾಪೂಜೆ ನಡೆಯಲಿದೆ. ಬೆಳಿಗ್ಗೆ ಆಂಜನೇಯ ಹವ್ಯಾಸಿ ಯಕ್ಷಗಾನ ಬಳಗದವರಿಂದ ತಾಳಮದ್ದಲೆ, ಮಧ್ಯಾಹ್ನ ವಜ್ರಮಾತ ಭಜನಾ ಮಂಡಳಿ ಪುತ್ತೂರು, ಸಂಜೆ ಶ್ರೀವಿಷ್ಣುಮೂರ್ತಿ ಭಜನಾ ಮಂಡಳಿ ಉದಯಗಿರಿ ಹಾಗೂ ರಾತ್ರಿ ಸೇರಾಜೆ ಶ್ರೀಶಾರದಾಂಭ ಭಜನಾ ಮಂಡಳಿಯವರಿಂದ ಭಜನೆ, ಸಂಜೆ ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ವಿಠಲ್ ನಾಯಕ್ ಮತ್ತು ಬಳಗದವರಿಂದ ಗೀತಾ-ಸಾಹಿತ್ಯ-ಸಂಭ್ರಮ ನಡೆಯಲಿದೆ.


ಮಾಚ್ 28ರಂದು ಕ್ಷೇತ್ರದಲ್ಲಿ ತ್ರಿಕಾಲ ಪೂಜೆ, ಅನುಜ್ಞಾ ಕಲಶಾಭಿಷೇಕ, ದೀಪಾರಾಧನೆ, ಮಾಹಾಪೂಜೆ ನಡೆಯಲಿದೆ. ಸಂಜೆ ಉಪ್ಪಿನಂಗಡಿ ರಾಮನಗರ ಶಾರದ ವನಿತಾ ಭಜನಾ ಮಂಡಳಿಯವರಿಂದ ಭಜನೆ, ಪುರುಷರಕಟ್ಟೆ ಇಂದಿರಾನಗರ ವನದುರ್ಗಾಂಬಿಕಾ ಭಜನಾ ಮಂಡಳಿಯವರಿಂದ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗುರುಪ್ರಿಂ ನಾಯಕ್ ಬಳಗ ಮತ್ತು ಅರವಿಂದ ಆಚಾರ್ಯ ಮಾಣಿಲ, ಗೀತಾ ಗಂಗಾಧರ ಆಚಾರ್ಯ ಇವರಿಂದ ಭಕ್ತಿ ರಸದಾರೆ ನಡೆಯಲಿದೆ.


ಮಾ.29ರಂದು ಮಹಾಗಣಪತಿಹೋಮ, ತತ್ವಕಲಶಪೂಜೆ, ತತ್ವಕಲಶಾಭಿಷೇಕ, ಮಂಟಪ ನಮಸ್ಕಾರ, ಬ್ರಹ್ಮಕಲಶಪೂಜೆ, ಪರಿಕಲಶಪೂಜೆ, ಸಂಜೆ ದೀಪಾರಾಧನೆ, ಅಧಿವಾಸ ಹೋಮ, ಕಲಶಾಧಿವಾಸ, ಅಧಿವಾಸ ಬಲಿ, ಮಹಾಪೂಜೆ, ಸಂಜೆ ಪುರುಷರಕಟ್ಟೆ ಶ್ರೀದೇವಿ ಭಜನಾ ಮಂಡಳಿ ಹಾಗೂ ಪುರುಷರಕಟ್ಟೆ ದಾಬೋಲಿ ಶ್ರೀಪೂರ್ಣಾನಂದ ಭಜನಾ ಮಂಡಳಿಯವರಿಂದ ಭಜನೆ ನಡೆಯಲಿದೆ. ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಮಜಲುಮಾರು ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳ ಸಂಚಾಲಕ ಭಾಸ್ಕರ ಆಚಾರ್ ಹಿಂದಾರು, ಮಜಲುಮಾರು ಉಮಾಮಹೇಶ್ವರ ಸೇವಾ ಟ್ರಸ್ಟ್ ಮಾಜಿ ಅಧ್ಯಕ್ಷ ತಿರುಮಲೇಶ್ವರ ಭಟ್, ನರಿಮೊಗರು ಗ್ರಾ.ಪಂ ಸದಸ್ಯೆ ಪುಷ್ಪಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಆನಂದ ಕೆ ಅತಿಥಿಗಳಾಗಿ ಆಗಮಿಸಲಿದ್ದಾರೆ. ಬಳಿಕ ಪಂಚಮಿ ಸ್ವರಾಂಜಲಿಯವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.


ಮಾ.30ರಂದು ಪೂರ್ವಾಹ್ನ 108 ಕಾಯಿ ಮಹಾಗಣಪತಿ ಹೋಮ, ಮೀನ ಲಗ್ನ ಶುಭಮುಹೂರ್ತದಲ್ಲಿ ದೇವರಿಗೆ ಅಷ್ಟಬಂಧಕ್ರಿಯೆ ಬ್ರಹ್ಮಕಲಶಾಭಿಷೇಕ, ಪುಷ್ಪ ರಥ ಸಮರ್ಪಣೆ ನಡೆಯಲಿದೆ. ಕಾಸರಗೋಡು ಪದ್ಮಾಂಬಿಕ ಭಜನಾ ಮಂಡಳಿಯವರಿಂದ ಭಜನೆ ಬಳಿಕ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಜಿಯವರು ಆಶೀರ್ವಚನ ನೀಡಲಿದ್ದಾರೆ. ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಸಂಜೀವ ಮಠಂದೂರು, ತೂಗು ಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್, ಅರಣ್ಯ ಇಲಾಖೆ ಪುತ್ತೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಿ.ಪಿ ಕಾರ್ಯಪ್ಪ, ಎಂಆರ್‌ಪಿಎಲ್‌ನ ಸೀತಾರಾಮ ರೈ ಕೈಕಾರ, ಪುತ್ತೂರು ವಲಯದ ವಲಯಾರಣ್ಯಾಧಿಕಾರಿ ಕಿರಣ್ ಬಿ.ಎಂ., ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಲಕ್ಷ್ಮೀಶ ತಂತ್ರಿ,, ನರಿಮೊಗರು ಗ್ರಾ,ಪಂ ಉಪಾಧ್ಯಕ್ಷ ಸುಧಾಕರ ಕುಲಾಲ್ ಉಪಸ್ಥಿತರಿರುವರು. ಮಧ್ಯಾಹ್ನ ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಪಿ.ಕೆ ಗಣೇಶ್ ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಮಹಾಪೂಜೆ, ಶ್ರೀದೇವರ ಬಲಿ ಹೊರಟು ಶ್ರೀಭೂತ ಬಲಿ ಉತ್ಸವ, ದೇವರಿಗೆ ಪ್ರಥಮ ಪುಷ್ಪರಥೋತ್ಸವ ವಸಂತಕಟ್ಟೆ ಪೂಜೆ ನಡೆಯಲಿದೆ.


ಮಾ.31ರಂದು ಬೆಳಿಗ್ಗೆ ಶ್ರೀದೇವರ ಬಲಿ ಹೊರಟು ಉತ್ಸವ, ಪಲ್ಲಕ್ಕಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ದೈವಗಳ ಭಂಡಾರ ತೆಗೆದು ವಾರಹಿ, ರಕ್ತೇಶ್ವರಿ, ಗುಳಿಗ ದೈವಗಳಿಗೆ ನೇಮೋತ್ಸವಗಳೊಂದಿಗೆ ಸಂಪನ್ನಗೊಳ್ಳಲಿದೆ ಎಂದು ಅವರು ತಿಳಿಸಿದರು.
ಮಜಲುಮಾರು ಶ್ರೀ ಉಮಾಮಹೇಶ್ವರ ಟ್ರಸ್ಸ್‌ನ ಅಧ್ಯಕ್ಷ ಲಕ್ಷ್ಮೀಶ ತಂತ್ರಿ, ಕಾರ್ಯದರ್ಶಿ ಕೇಶವ ಮುಕ್ವೆ, ಕೋಶಾಧಿಕಾರಿ ನವೀನ್ ರೈ ಶಿಬರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here