ಮನೆ ಬಾಗಿಲಿಗೆ ಆರೋಗ್ಯ ಸೇವೆ – ಮಠಂದೂರು
ಪಾಣಾಜೆ: ಅಮೃತಮಹೋತ್ಸವದ ಸವಿನೆನಪಿಗಾಗಿ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಆರೋಗ್ಯ ಕ್ಷೇತ್ರದಲ್ಲಿ ಅನೇಕ ಪರಿವರ್ತನೆಗಳನ್ನು ತಂದು ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆ ನೀಡುವಲ್ಲಿಯವರೆಗೆ ತಲುಪಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಲ್ಪಟ್ಟ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ಹಾಗೂ ಸಭಾಂಗಣ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಅಲ್ಲಲ್ಲಿ ಆರೋಗ್ಯ ಕೇಂದ್ರ ತೆರೆಯುವುದರ ಮೂಲಕ ಶತಮಾನೋತ್ಸವಕ್ಕೆ ಆರೋಗ್ಯ ಕ್ಷೇತ್ರದಲ್ಲಿ ನೂರಕ್ಕೆನೂರು ಯಶಸ್ಸು ಸಾಧಿಸಲು ಸರ್ಕಾರ ಪಣತೊಟ್ಟಿದೆ. ನೂತನ ಸಮುದಾಯ ಕೇಂದ್ರದಲ್ಲಿ ಡಯಾಲಿಸಿಸ್ ಘಟಕ ತೆರೆಯಲೂ ಒತ್ತಡ ತರಲಾಗಿದೆ. ಕಬಕ ಮತ್ತು ಬನ್ನೂರು ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ 3 ಕಡೆ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲು ಪ್ರಸ್ತಾವನೆ ಕಳುಹಿಸಲಾಗಿದೆ’ ಎಂದರು.
ಶಾಸಕನಾಗಿ ನೆಮ್ಮದಿಯಿದೆ:
ವಯಸ್ಸು 50 ದಾಟಿದರೆ ಆರೋಗ್ಯ ಸಂಪತ್ತು ಹೇಗೆ ರಕ್ಷಿಸಿಕೊಳ್ಳಬಹುದೆಂಬ ಯೋಚನೆ ಮಾಡುತ್ತಾರೆ. ಬಹುಶಃ ಅದಕ್ಕೆ ಪೂರಕವಾಗಿ ಕೇಂದ್ರ ಮತ್ತು ರಾಜ್ಯ ಡಬಲ್ ಇಂಜಿನ್ ಸರಕಾರ ಅನ್ನ, ಅಕ್ಷರ, ಆರೋಗ್ಯ ಕ್ಷೇತ್ರದಲ್ಲಿ ಜನರಿಗೆ ಪ್ರಾಮಾಣಿಕ ಸೇವೆ ನೀಡಿದ ನೆಮ್ಮದಿ ಜನಸೇವಕನಾದ ನನಗಿದೆ ಎನ್ನುವ ಸಂತಸ ಇದೆ’ ಎಂದು ಶಾಸಕರು ಹೇಳಿದರು.
ವೈದ್ಯರ ನೇಮಕಾತಿಯಲ್ಲಿ ಸಮಸ್ಯೆಗಳು:
ಸಿಬಂದಿಗಳ ವೇತನವನ್ನು ಹೆಚ್ಚಿಸುವ ಕಾರ್ಯ ನಡೆದಿದೆ. ವೈದ್ಯರ ಕೊರತೆ ಇದೆ. ಬೇರೆ ಬೇರೆ ಕಾರಣಗಳಿಂದಾಗಿ ನೇಮಕಾತಿಯಲ್ಲಿ ಸಮಸ್ಯೆ ಉಂಟಾಗಿದೆ. ತಾಂತ್ರಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳಿಂದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪೂರ್ಣಕಾಲಿಕ ವೈದ್ಯಾಧಿಕಾರಿಗಳ ನೇಮಕಾತಿ ವಿಳಂಬವಾಗುತ್ತಿದೆ. ಆದರೆ ಸಮುದಾಯ ಆರೋಗ್ಯ ಕೇಂದ್ರ ಲೋಕಾರ್ಪಣೆಯಾದ ಬಳಿಕ ಜನರಿಗೆ ಇಲ್ಲಿ ಕನಿಷ್ಠ 3 ಮಂದಿ ವೈದ್ಯರಿಂದ ದಿನದ 24 ಗಂಟೆಗಳ ಸೇವೆ ದೊರೆಯಲಿದೆ’ ಎಂದು ಮಠಂದೂರು ತಿಳಿಸಿದರು.
ಪಾಣಾಜೆಯವರನ್ನು ನೋಡಿ ಕಲಿಯಿರಿ:
ಪಾಣಾಜೆ ಗ್ರಾಮದ ಭಾಗದವರಿಗೆ ಅಚ್ಚೇದಿನ್ ಬಂದಿದೆ. ಒಂದು ಕಾಲದಲ್ಲಿ ಕುಗ್ರಾಮವೆಂದು ಹೇಳಲ್ಪಡುತ್ತಿದ್ದ ಪಾಣಾಜೆ ಇಂದು ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರಿದು ಮಾದರಿ ಗ್ರಾಮವಾಗಿ ಬೆಳೆಯುತ್ತಿದೆ’ ಎಂದು ಶಾಸಕರು ಹೇಳಿದರು.
ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ಮಾಡಿ, ನಾಮಫಲಕ ಅನಾವರಣಗೊಳಿಸಿ, ದೀಪ ಬೆಳಗಿಸಿ ಶಿಲಾನ್ಯಾಸ ಮಾಡಲಾಯಿತು.
20 ಲಕ್ಷ ರೂ. ವೆಚ್ಚದ ಸಭಾಂಗಣ ಲೋಕಾರ್ಪಣೆ
ಅಮೃತ ಆರೋಗ್ಯ ಅಭಿಯಾನದಡಿ 20 ಲಕ್ಷ ರೂ. ಅನುದಾನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಸಭಾಂಗಣವನ್ನು ರಿಬ್ಬನ್ ಕತ್ತರಿಸಿ ಶಾಸಕರು ಉದ್ಘಾಟಿಸಿದರು.
ಕೋವಿಡ್ ಸವಾಲು ನಿರ್ವಹಣೆ ಅತ್ಯದ್ಭುತ – ಚನಿಲ ತಿಮ್ಮಪ್ಪ ಶೆಟ್ಟಿ
ತೆಂಗಿನಕಾಯಿ ಒಡೆದು ನೂತನ ಕಟ್ಟಡಕ್ಕೆ ಮುಹೂರ್ತ ಮಾಡಿದ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿಯವರು ಮಾತನಾಡಿ ‘ಕೋವಿಡ್ ಸಮಸ್ಯೆಯನ್ನು ಇತರೆಲ್ಲಾ ದೇಶಗಳಿಗಿಂತ ವಿಭಿನ್ನವಾಗಿ ಮೋದಿ ಸರ್ಕಾರ ಎದುರಿಸಿ ಯಶಸ್ವಿಯಾಗಿದೆ. ಅದರ ಬಳಿಕವೂ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿ ಕೋವಿಡ್ ನ್ನು ನಿರ್ವಹಿಸಲಾಗಿದೆ. ವೈದ್ಯರು ಮತ್ತು ಸಿಬಂದಿಗಳೂ ಹೆಚ್ಚಿನ ಸೇವೆ ನೀಡಿರುವುದಕ್ಕೆ ನನ್ನ ಅಭಿನಂದನೆಯಿದೆ. ಈ ಭಾಗದ ಜನರಿಗೆ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.
ಶಾಸಕರಿಗೆ ಅಭಿನಂದನೆ – ಭಾರತೀ ಭಟ್
ಪಾಣಾಜೆ ಗ್ರಾ.ಪಂ. ಅಧ್ಯಕ್ಷೆ ಭಾರತಿ ಭಟ್ ರವರು ಮಾತನಾಡಿ ‘ಗಡಿನಾಡ ಪ್ರದೇಶದ ಹಲವು ವರ್ಷಗಳ ಬೇಡಿಕೆ ಈಡೇರುತ್ತಿದೆ. ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ ಶಾಸಕರಿಗೆ ಗ್ರಾಮದ ಸಮಸ್ತ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಡಯಾಲಿಸಿಸ್ ಘಟಕವೂ ಇದ್ದಲ್ಲಿ ಉತ್ತಮ – ಅಬೂಬಕ್ಕರ್
ಪಾಣಾಜೆ ಗ್ರಾ.ಪಂ. ಉಪಾಧ್ಯಕ್ಷ ಅಬೂಬಕ್ಕರ್ ರವರು ಮಾತನಾಡಿ ‘ಶಾಸಕರಿಗೆ ನಮ್ಮ ಪಾಣಾಜೆ ಗ್ರಾಮದವರಲ್ಲಿ ಬಹಳ ಪ್ರೀತಿ ಇದೆ. ಪಾಣಾಜೆ ಅಭಿವೃದ್ಧಿ ಯ ನಿಟ್ಟಿನಲ್ಲಿ ನಾವು ಕೇಳಿದಕ್ಕಿಂತ ಹೆಚ್ಚು ಅನುದಾನಗಳನ್ನು ಕೊಟ್ಟಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇತರ ಎಲ್ಲಾ ಸೌಲಭ್ಯಗಳ ಜೊತೆ ಡಯಾಲಿಸಿಸ್ ಘಟಕವನ್ನೂ ತೆರೆದಲ್ಲಿ ಉತ್ತಮವಿತ್ತು’ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ರವರು ಮಾತನಾಡಿ ‘1961 ಆರಂಭವಾದ ಪಾಣಾಜೆ ಆರೋಗ್ಯ ಕೇಂದ್ರ 2014 ರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಉದ್ಘಾಟನೆಗೊಂಡಿತ್ತು. ರಾಜ್ಯದ 43 ಕಡೆಗಳಲ್ಲಿ ಆರೋಗ್ಯ ಕೇಂದ್ರಗಳ ಮೇಲ್ದರ್ಜೆಗೇರಿಸಲಾಗಿದೆ. ಅಮೃತ ಆರೋಗ್ಯ ಸಮುದಾಯ ಆರೋಗ್ಯ ಕೇಂದ್ರವಾಗಿ ಕರೆಯಲ್ಪಡಲಿದೆ. ದ.ಕ. ಜಿಲ್ಲೆಯ ಬಂಟ್ವಾಳ ಪುಂಜಾಲಕಟ್ಟೆ, ಬೆಳ್ತಂಗಡಿಯ ವೇಣೂರು ಮತ್ತು ಪಾಣಾಜೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೇರಿಸಲಾಗಿದೆ. 11 ತಿಂಗಳ ಕಾಲಾವಕಾಶದಲ್ಲಿ ನಿರ್ಮಾಣವಾಗಲಿದೆ. ಕಟ್ಟಡ ಮತ್ತು ಎಲ್ಲಾ ವೈದ್ಯಕೀಯ ಉಪಕರಣಗಳು ರೂ. 12.40 ಕೋಟಿ ಅನುದಾನದಲ್ಲಿ ಒಳಗೊಂಡಿದೆ’ ಎಂದರು.
ತಾಲೂಕು ನೋಡಲ್ ಅಧಿಕಾರಿ ಡಾ. ಬದ್ರುದ್ದೀನ್, ಆರೋಗ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜೇಶ್ ರೈ ಉಪಸ್ಥಿತರಿದ್ದರು.
ಕು. ಅರ್ಚನಾ ಪ್ರಾರ್ಥಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಸ್ವಾಗತಿಸಿ, ಜಯಶ್ರೀ ವಂದಿಸಿದರು. ಪದ್ಮಾವತಿ ಕಾರ್ಯಕ್ರಮ ನಿರೂಪಿಸಿದರು.
ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನಿಖಿಲ್, ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಮಿತ್, ಸರೋಜಿನಿ, ನಿತ್ಯಾನಂದ, ಯಶೋಧರ, ಕುಸುಮಾವತಿ, ಪ್ರೇಮ ರವರು ಅತಿಥಿಗಳನ್ನು ಗೌರವಿಸಿದರು.
ಕಾರ್ಯಕ್ರಮದಲ್ಲಿ ತಾ.ಪಂ. ಮಾಜಿ ಅಧ್ಯಕ್ಷರುಗಳಾದ ಸಾಜ ರಾಧಾಕೃಷ್ಣ ಆಳ್ವ, ರಾಧಾಕೃಷ್ಣ ಬೋರ್ಕರ್, ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್ ಸಿ ನಾರಾಯಣ್, ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್, ಉಪಾಧ್ಯಕ್ಷ ಡಾ. ಅಖಿಲೇಶ್ ಪಾಣಾಜೆ, ನಿರ್ದೇಶಕರುಗಳು, ಪಾಣಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ, ಮಾಜಿ ಹಾಗೂ ಹಾಲಿ ಸದಸ್ಯರುಗಳು, ಪ್ರಮುಖರಾದ ಸದಾಶಿವ ರೈ ಸೂರಂಬೈಲು, ಅಬೂಬಕ್ಕರ್ ಆರ್ಲಪದವು ಸೇರಿದಂತೆ ಸ್ಥಳೀಯ ಸಂಘ ಸಂಸ್ಥೆಗಳ ಪ್ರಮುಖರು, ಆರೋಗ್ಯ ಕೇಂದ್ರದ ಸಿಬಂದಿಗಳು, ಸಾರ್ವಜನಿಕರು ಪಾಲ್ಗೊಂಡರು.
ಪುತ್ತೂರಿನಲ್ಲಿ ಆರೋಗ್ಯ ಕ್ರಾಂತಿಯಾಗಲಿದೆ – ಮಠಂದೂರು
ಪುತ್ತೂರಿನಲ್ಲಿ 6 ಎಕರೆ ಜಾಗದಲ್ಲಿ 300 ಬೆಡ್ ಗಳ ಸುಸಜ್ಜಿತ ತಾಲೂಕು ಆರೋಗ್ಯ ಕೇಂದ್ರ ಸ್ಥಾಪನೆಗೆ 240 ಕೋಟಿ ರೂ. ಯೋಜನೆ ರೂಪಿಸಲಾಗಿದೆ. ವಿನ್ಯಾಸ ನಕ್ಷೆ ತಯಾರಿಸಿ ಆರೋಗ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಆದಲ್ಲಿ ಪುತ್ತೂರಿನಲ್ಲಿ ಆರೋಗ್ಯ ಕ್ಷೇತ್ರದ ಕ್ರಾಂತಿಯಾಗಲಿದೆ’ ಎಂದು ಮಠಂದೂರು ಹೇಳಿದರು.