ನೆಲ್ಯಾಡಿ: ಸುಮಾರು 1.52 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶಿರಾಡಿ ಶಾಖಾ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಮಾ.22ರಂದು ಶಿರಾಡಿಯಲ್ಲಿ ಸಂಘದ ನಿವೇಶನದಲ್ಲಿ ನಡೆಯಿತು.
ಅರ್ಚಕ ಅಭಿಲಾಷ್ ಕಲ್ಲಡ್ಕ ಅವರು ಪೂಜಾ ವಿಧಿವಿಧಾನ ನೆರವೇರಿಸಿದರು. ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಅವರು ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿದ ಸಚಿವ ಎಸ್.ಅಂಗಾರ ಅವರು, ಸಹಕಾರಿ ಸಂಘಗಳು ಗ್ರಾಮೀಣ ಪ್ರದೇಶದಲ್ಲಿ ಜನರ ಬೇಡಿಕೆಗೆ ಸ್ಪಂದಿಸುತ್ತಿವೆ. ರೈತರಿಗೆ ಬೆಳವಣಿಗೆಗೆ ಪೂರಕವಾದ ಕೆಲಸ ಮಾಡುತ್ತಿವೆ. ಸಹಕಾರಿ ಸಂಘಗಳು ಕೇವಲ ಸಾಲ ವಿತರಣೆ ಹಾಗೂ ಸಾಲ ವಸೂಲಾತಿಗೆ ಸೀಮಿತಗೊಳ್ಳದೇ ರೈತರಿಗೆ ಅವಶ್ಯಕವಾದ ರಸಗೊಬ್ಬರ, ಕೃಷಿ ಸಲಕರಣೆ ವಿತರಣೆಯ ಕಡೆಗೂ ಹೆಚ್ಚು ಗಮನ ಕೊಡಬೇಕು ಎಂದರು. ಜನಸಂಖ್ಯೆ, ನಿರುದ್ಯೋಗ ದೇಶಕ್ಕೆ ಆಪತ್ತು ತಂದೊಡ್ಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಸ್ವ ಉದ್ಯೋಗಕ್ಕೆ ಹೆಚ್ಚು ಒತ್ತು ಕೊಡುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ರಾಜ್ಯ ಸರಕಾರವೂ ಸ್ಪಂದನೆ ನೀಡಿದೆ. ಉತ್ಪಾದಕರೇ ಮಾರಾಟ ವ್ಯವಸ್ಥೆ ಮಾಡಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕೆಂಬ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಚಿವ ಎಸ್.ಅಂಗಾರ ಹೇಳಿದರು.
ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಪಟ್ಟೆ ಅಧ್ಯಕ್ಷತೆ ವಹಿಸಿದ್ದರು. ಉದನೆ ಸೈಂಟ್ ಆಂಟನೀಸ್ ಪ್ರೌಢಶಾಲೆ ಸಂಚಾಲಕರಾದ ರೆ.ಫಾ.ಹನಿ ಜೇಕಬ್, ಶಿರಾಡಿ ಚರ್ಚ್‌ನ ಧರ್ಮಗುರುಗಳಾದ ರೆ.ಫಾ.ಸನೀಶ್, ಜಿ.ಪಂ.ಮಾಜಿ ಸದಸ್ಯರಾದ ಕೃಷ್ಣ ಶೆಟ್ಟಿ ಕಡಬ, ಹರೀಶ್ ಕಂಜಿಪಿಲಿ, ಇಂಜಿನಿಯರ್ ಚಂದ್ರಹಾಸ ಪನ್ಯಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ನಿರ್ದೇಶಕರಾದ ಜಯಾನಂದ ಬಂಟ್ರಿಯಾಲ್, ಸುದರ್ಶನ ಶಿರಾಡಿ, ಅಣ್ಣು, ಮಾಜಿ ನಿರ್ದೇಶಕ ಶಶಿಧರ ಶಿರಾಡಿ, ನಿವೃತ್ತ ಮುಖ್ಯ ಶಿಕ್ಷಕ ಚಾಕೋ ವರ್ಗೀಸ್, ಶಿರಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಲಕ್ಷ್ಮಣ ಕುದ್ಕೋಳಿ, ರಾಧಾ ತಂಗಪ್ಪನ್, ಮಾಜಿ ಸದಸ್ಯರಾದ ಪ್ರಕಾಶ್ ಗುಂಡ್ಯ, ರಾಜೇಶ್, ಪ್ರಮುಖರಾದ ಡೊಂಬಯ್ಯ ಗೌಡ ಶಿರಾಡಿ, ಸುರೇಂದ್ರನ್, ಕಿಶೋರ್ ಶಿರಾಡಿ, ಜಾನ್ಸನ್ ಶಿರಾಡಿ, ಶಾಜಿ ಕೆ.ಪಿ. ಶಿರಾಡಿ ಮತ್ತಿತರರು ಉಪಸ್ಥಿತರಿದ್ದರು. ಸಂಘದ ನಿರ್ದೇಶಕ ಬಾಲಕೃಷ್ಣ ಬಾಣಜಾಲು ಸ್ವಾಗತಿಸಿ, ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ಕೆ.ಯಂ.ವಂದಿಸಿದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು.
1.52 ಕೋಟಿ ರೂ. ವೆಚ್ಚದ ಕಟ್ಟಡ:
1960ರಲ್ಲಿ ಆರಂಭಗೊಂಡ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ 7 ಗ್ರಾಮಗಳ ವ್ಯಾಪ್ತಿ ಹೊಂದಿದೆ. ನೆಲ್ಯಾಡಿಯಲ್ಲಿ 56 ಸೆಂಟ್ಸ್ ಜಾಗ ಹೊಂದಿದ್ದು ಸುಸಜ್ಜಿತ ಕಟ್ಟಡದಲ್ಲಿ ಕೇಂದ್ರ ಕಚೇರಿ ಇದೆ. ಗೋಳಿತ್ತೊಟ್ಟು ಶಾಖೆಯೂ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಶಿರಾಡಿ ಶಾಖೆಯು ಬಾಡಿಗೆ ಕಟ್ಟಡದಲ್ಲಿದ್ದು ಸ್ವಂತ ಕಟ್ಟಡ ಆಗಬೇಕೆಂಬ ಬೇಡಿಕೆ ಈ ಭಾಗದ ಸಂಘದ ಸದಸ್ಯರಿಂದ ಬಂದಿತ್ತು. ಸ್ವಂತ ಕಟ್ಟಡ ನಿರ್ಮಾಣಗೊಳಿಸುವ ನಿಟ್ಟಿನಲ್ಲಿ ಶಿರಾಡಿ ಪೇಟೆಯಲ್ಲಿ ಅಶೋಕ್ ಎಂಬವರಿಂದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು 12 ಸೆಂಟ್ಸ್ ಜಾಗ ಖರೀದಿ ಮಾಡಲಾಗಿದೆ. 4 ಸೆಂಟ್ಸ್ ಜಾಗ ಉಚಿತವಾಗಿಯೂ ನೀಡಿದ್ದಾರೆ. ಇಲ್ಲಿ 1.52 ಕೋಟಿ ರೂ.ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಲಿದೆ.
-ದಯಾಕರ ರೈ ಕೆ.ಯಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ