ಬಸ್ಸು ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರು ಬಿಲ್ಲವರ ಶಕ್ತಿಯ ಪ್ರತೀಕ-ಕೃಷ್ಣಪ್ಪ ಪೂಜಾರಿ
ಪುತ್ತೂರು: ಕೋಟಿ-ಚೆನ್ನಯರ ಮೂಲಸ್ಥಾನ ಪಡುಮಲೆ, ಗೆಜ್ಜೆಗಿರಿ ಕ್ಷೇತ್ರಕ್ಕೆ ಬಿಲ್ಲವ ಸಮುದಾಯ ನೀಡಿದಂತಹ ದೇಣಿಗೆ ಹಾಗೂ ಶ್ರಮ ಬಿಲ್ಲವರ ಯೋಗ್ಯತೆಯನ್ನು ಎತ್ತಿ ತೋರಿಸುತ್ತದೆ. ಹಾಗೆಯೇ ಪುತ್ತೂರು ಬಸ್ಸು ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರು ನಾಮಕರಣವಾಗಿರುವುದು ಅದು ಬಿಲ್ಲವರ ಶಕ್ತಿಯ ಪ್ರತೀಕವಾಗಿದೆ ಬೆಳ್ತಂಗಡಿ ವಿಶ್ರಾಂತ ಪ್ರಾಂಶುಪಾಲ ಎ.ಕೃಷ್ಣಪ್ಪ ಪೂಜಾರಿರವರು ಹೇಳಿದರು.
ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ನೇತೃತ್ವದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರದ ಆಶ್ರಯದಲ್ಲಿ ೧೭ನೇ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜೆ ಮತ್ತು ಬಿಲ್ಲವ ಗ್ರಾಮ ಸಮಿತಿ ಬೆಳ್ಳಿ ಮಹೋತ್ಸವದ ಅಂಗವಾಗಿ ಗ್ರಾಮ ಸಮಿತಿ ಅಧ್ಯಕ್ಷರುಗಳಿಗೆ ಗೌರವಾರ್ಪಣೆ ಮಾ.೨೬ರಂದು ಸಂಘದ ಸಭಾಭವನದಲ್ಲಿ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣಗೈಯ್ದು ಮಾತನಾಡಿದರು. ಬಿಲ್ಲವ ಸಮಾಜದಲ್ಲಿ ತಾನು ಬಡವ, ಹಿಂದುಳಿದವ ಎಂಬ ಕೀಳಿರಿಮೆ, ಸಂಕೋಚ ಪ್ರವೃತ್ತಿ ಇರಬಾರದು. ಇತರ ಯಾವುದೇ ಸಮುದಾಯವಾಗಲಿ ಅಲ್ಲಿ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜ್‌ಗಳಿವೆ ಆದರೆ ಬಹು ಸಂಖ್ಯಾತರಾಗಿರುವ ನಮ್ಮ ಬಿಲ್ಲವ ಸಮುದಾಯದಲ್ಲಿ ಯಾಕಿಲ್ಲ. ಇಲ್ಲಿನ ಜಯಂತ್ ನಡುಬೈಲುರವರು ತನ್ನ ಸ್ವಂತ ಶಕ್ತಿಯಿಂದ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿರುವುದು ನಮಗೆ ಹೆಮ್ಮೆ ಎನಿಸಿದೆ. ನಮ್ಮ ಬಿಲ್ಲವ ಸಮುದಾಯದ ಮುಖ್ಯಮಂತ್ರಿ ಆಗಬೇಕು, ಗೆಜ್ಜೆಗಿರಿ-ಪಡುಮಲೆ ಜೀರ್ಣೋದ್ಧಾರವಾಗಬೇಕು ಮತ್ತು ಬಿಲ್ಲವ ಸಮಾಜದಲ್ಲಿ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಾಲೇಜು ಆಗಬೇಕು ಎನ್ನುವುದು ನನ್ನ ಮೂರು ಕನಸುಗಳಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ, ಪುತ್ತೂರಿನಲ್ಲಿ ಬಿಲ್ಲವ ಸಂಘ ಸ್ಥಾಪನೆಯಾಗಿ ಅನೇಕ ಏಳು-ಬೀಳುಗಳನ್ನು ಕಂಡರೂ ಸಮರ್ಥ ಅಧ್ಯಕ್ಷರ ತಂಡದ ಕಾರ್ಯಗಳಿಂದಾಗಿ ಇಂದು ಸಮಾಜದಲ್ಲಿ ಬಿಲ್ಲವ ಸಂಘ ಮಾದರಿಯಾಗಿ ಗೋಚರಿಸುವಂತಾಗಿದೆ. ಬಿಲ್ಲವ ಸಮಾಜದಲ್ಲೂ ಅನೇಕ ಪ್ರತಿಭಾವಂತರಿದ್ದಾರೆ. ಬಿಲ್ಲವರು ಎನಿಸಿಕೊಂಡವರು ಬಿಲ್ಲವ ಸಮಾಜದಲ್ಲಿ ಮುಂಚೂಣಿಯಾಗಿ ನಿಂತು ಬಿಲ್ಲವ ಸಮಾಜವನ್ನು ಎತ್ತಿ ಹಿಡಿದು ಎಲ್ಲಾ ಸಮುದಾಯಕ್ಕೆ ಮಾದರಿ ಸಮುದಾಯ ಎಂದು ತೋರಿಸಿಕೊಡುವಲ್ಲಿ ಶ್ರಮಿಸಬೇಕಾಗಿದೆ ಎಂದರು.
ಮುಖ್ಯ ಅತಿಥಿ, ಬೆಂಗಳೂರು ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ವೇದಕುಮಾರ್ ಮಾತನಾಡಿ,ಬಿಲ್ಲವ ಸಮಾಜದಲ್ಲಿ ಸಮಾಜದ ಉನ್ನತ ಸ್ಥಾನವಾದ ಆಡಳಿತಾತ್ಮಕ ಸೇವಾ ಹುದ್ದೆಗಳಾದ ಐಎಎಸ್, ಕೆಎಎಸ್ ಹುದ್ದೆಗಳನ್ನು ಅಲಂಕರಿಸುವವರಾಗಬೇಕು. ನಾರಾಯಣ ಗುರುಗಳ ಶಕ್ತಿ ಹಾಗೂ ಸಾಮರ್ಥ್ಯವನ್ನು ನಾವು ನಮ್ಮ ಯುವಪೀಳಿಗೆಗೆ ತಿಳಿಸುವವರಾಗಬೇಕು. ಬಿಲ್ಲವರ ಚರಿತ್ರೆ, ಆಚಾರ-ವಿಚಾರಗಳನ್ನು ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಮುದ್ರಿಸಿ ಇಂದಿನ ಯುವಸಮೂಹಕ್ಕೆ ತಿಳಿಯಪಡಿಸಿದಾಗ ಮುಂದಿನ ಪೀಳಿಗೆಯಲ್ಲಿ ನಮ್ಮ ಸಮಾಜ ಉಳಿಯಬಲ್ಲುದು. ನಮ್ಮಲ್ಲಿ ಯಾವುದೇ ವಿದ್ಯಾಸಂಸ್ಥೆ, ಇಂಡಸ್ಟ್ರೀಗಳು ಇಲ್ಲದಿರುವುದರಿಂದ ಸರಕಾರ ಕೂಡ ನಮ್ಮ ಮಾತಿಗೆ ಕಿವಿಯನ್ನೇ ಕೊಡುವುದಿಲ್ಲ. ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ಕಲಿಯಬೇಕು ಎನ್ನುವ ಹುಮ್ಮಸ್ಸಿನಿಂದ ಬೆಂಗಳೂರಿಗೆ ಬಂದ್ರೆ ಅಲ್ಲಿ ಉಳಕೊಳ್ಳುವ, ಕಲಿಸುವ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು ಎಂದರು.
ಪುತ್ತೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ವರದರಾಜ್ ಮಾತನಾಡಿ, ಇಪ್ಪತೈದು ವರ್ಷದ ಹಿಂದೆ ಬಿಲ್ಲವ ಸಂಘವಾಗಲಿ, ಗ್ರಾಮ ಸಮಿತಿಯಾಗಲಿ ಇವುಗಳ ಅಭಿವೃದ್ಧಿಗೆ ಬಹಳ ಕಷ್ಟಪಟ್ಟಿದ್ದೇವೆ. ಅಂದಿನ ಕಷ್ಟದ ದಿನಗಳಲ್ಲಿ ನಾರಾಯಣ ಗುರುಗಳು ‘ಹೋಗು ಮುಂದೆ’ ಅಂತ ಹೇಳಿ ದಾರಿ ತೋರಿಸುತ್ತಿದ್ದರು. ಬಿಲ್ಲವ ಸಮಾಜ ಕಷ್ಟದಲ್ಲಿರುವವರ ಕಣ್ಣೀರೊರೆಸುವ ಕೆಲಸವಾಗಬೇಕು. ನಮ್ಮ ಮಕ್ಕಳು ಮುಂದೆ ಬರಬೇಕು, ಯಾವುದೇ ಗಲಾಟೆಗಳಿಗೆ ಹೋಗದೆ ಉತ್ತಮ ವಿದ್ಯಾಭ್ಯಾಸ ಪಡೆದು ಉತ್ತಮ ನಾಗರಿಕರಾಗಿ ಸಮಾಜದಲ್ಲಿ ಬಾಳುವಂತಾಗಲಿ ಎಂದರು.
ಬಿಲ್ಲವ ಸಂಘದ ಬಿಲ್ಲವ ಗ್ರಾಮ ಸಂಘಟನಾ ಸಮಿತಿ ಸ್ಥಾಪಕ ಪ್ರಧಾನ ಸಂಚಾಲಕ ನವೀನ್ ಶಿಬರಾಡಿ ಮಾತನಾಡಿ, ಇತರ ಸಮುದಾಯದವರು ನಮ್ಮಲ್ಲಿನ ಶಕ್ತಿ, ಸಾಮರ್ಥ್ಯ, ಮುಗ್ಧತೆಯನ್ನು ಬಳಸಿಕೊಂಡು ಮುಂದೆ, ಮುಂದೆ ಹೋಗುತ್ತಿದ್ದಾರೆ. ನಮ್ಮಲ್ಲಿ ಯಾಕೆ ಆ ಮೈಂಡ್ ಸೆಟ್ ಇಲ್ಲ ಅನ್ನೋದೆ ಪ್ರಶ್ನೆ. ನಮಗೂ ದೇವಸ್ಥಾನಕ್ಕೆ ಪ್ರವೇಶ ಸಿಗಬೇಕು ಎನ್ನುವ ದೃಷ್ಟಿಯಿಂದ ಬಿಲ್ಲವ ಸಮಾಜದ ಅರ್ಚಕರನ್ನು ನೇಮಿಸಿಕೊಂಡು ದೇವಸ್ಥಾನವನ್ನು ಕಟ್ಟಿಸಿದ ಹಿರಿಮೆ ನಾರಾಯಣ ಗುರುಗಳದ್ದು. ಹಿಂದಿನ ಹಾಗೂ ಇಂದಿನ ಯುವಸಮೂಹಕ್ಕೆ ಬಹಳಷ್ಟು ವ್ಯತ್ಯಾಸವಿದೆ. ಇಂದಿನ ಯುವಸಮೂಹಕ್ಕೆ ಜಾತಿ ನಿಂದನೆ ಮಾಡಿದರೆ ಸಿಡಿದೇಳುವ ಪ್ರವೃತ್ತಿ ಇದೆ. ಹಿರಿ-ಕಿರಿಯರು ಒಟ್ಟಾಗಿ ನಮ್ಮ ಸಮುದಾಯವನ್ನು ಅಭಿವೃದ್ಧಿಪಡಿಸಕಿಕೊಂಡು ಇತರ ಸಮುದಾಯಕ್ಕೆ ಮಾದರಿಯಾಗಬೇಕು ಎಂದರು.
ಮೌನ ಪ್ರಾರ್ಥನೆ:
ಪುತ್ತೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷರಾಗಿದ್ದು, ಸಂಘದ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿ ಇದೀಗ ಅಗಲಿದ ಮದನ ಪೂಜಾರಿ ಕುದ್ಮಾರುರವರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ತ್ರಿಶಾ ಪಡ್ಡಾಯೂರು ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಡಾ.ಸದಾನಂದ ಕುಂದರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಮಹಿಳಾ ಉಪಾಧ್ಯಕ್ಷೆ ಚಂದ್ರಕಲಾ ಮುಕ್ವೆ, ಕಾರ್ಯದರ್ಶಿ ಚಿದಾನಂದ ಸುವರ್ಣ, ಕೋಶಾಧಿಕಾರಿ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೊನ್ನಪ್ಪ ಪೂಜಾರಿ ಕೈಂದಾಡಿ, ಸದಸ್ಯರಾದ ಅಣ್ಣಿ ಪೂಜಾರಿ, ಮಾಧವ ಸಾಲ್ಯಾನ್, ಯುವವಾಹಿನಿ ಘಟಕದ ಅಧ್ಯಕ್ಷ ಉಮೇಶ್ ಬಾಯಾರ್ ರವರು ಸಹಕರಿಸಿದರು. ಸಂಘದ ಕಾರ್ಯದರ್ಶಿ ಚಿದಾನಂದ ಸುವರ್ಣ ವಂದಿಸಿದರು. ಚಂದ್ರಶೇಖರ ಆಲಂಗಾರು ಕಾರ್ಯಕ್ರಮ ನಿರ್ವಹಿಸಿದರು.
ವೈದಿಕ ವಿಧಿವಿಧಾನಗಳು..
ಅರ್ಚಕರಾದ ಜಗದೀಶ್ ಶಾಂತಿರವರ ನೇತೃತ್ವದಲ್ಲಿ ಬೆಳಿಗ್ಗೆ ಗಣಹೋಮ, ನವಕ ಕಲಶಾಭಿಷೇಕ, ಬ್ರಹ್ಮಶ್ರೀ ನಾರಾಯಣಗುರು ಸಹಸ್ರನಾಮಾವಳಿ, ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಿತು.
ಶಾಸಕರ ಶುಭ ಹಾರೈಕೆ..
ಬೆಳಿಗ್ಗೆ ಬ್ರಹ್ಮಶ್ರೀ ಗುರುಸ್ವಾಮಿ ಮಂದಿರದಲ್ಲಿ ನಡೆದ ಪೂಜಾವಿಧಿಯಲ್ಲಿ ಶಾಸಕ ಸಂಜೀವ ಮಠಂದೂರುರವರು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರುರವರಿಗೆ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಗುರುಮಂದಿರದ ಕಾರ್ಯನಿರ್ವಹಣಾಧಿಕಾರಿ ಹೊನ್ನಪ್ಪ ಪೂಜಾರಿ ಕೈಂದಾಡಿರವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ಗೌರವಾರ್ಪಣಾ ಸನ್ಮಾನ:
ಪುತ್ತೂರು ಬಿಲ್ಲವ ಸಂಘದ ವ್ಯಾಪ್ತಿಯಲ್ಲಿ ೫೧ ಗ್ರಾಮ ಸಮಿತಿಗಳು ಕಾರ್ಯಾಚರಿಸುತ್ತಿದ್ದು, ಅಂದು ಬಿಲ್ಲವ ಗ್ರಾಮ ಸಮಿತಿಗಳು ಆರಂಭಗೊಂಡು ೨೫ನೇ ವರ್ಷದ ಬೆಳ್ಳಿ ಮಹೋತ್ಸವದ ಅಂಗವಾಗಿ ಗ್ರಾಮ ಸಮಿತಿಗಳ ಅಭಿವೃದ್ಧಿಗೆ ಶ್ರಮಿಸಿದ ಹಿರಿಯರಾದ ಪುತ್ತೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ವರದರಾಜ್, ಬಿಲ್ಲವ ಗ್ರಾಮ ಸಂಘಟನಾ ಸಮಿತಿ ಬಿಲ್ಲವ ಸಂಘದ ಸ್ಥಾಪಕ ಪ್ರಧಾನ ಸಂಚಾಲಕ ನವೀನ್ ಶಿಬರಾಡಿ, ನಿವೃತ್ತ ಪ್ರಾಂಶುಪಾಲ ಎ. ಕೃಷ್ಣಪ್ಪ ಪೂಜಾರಿರವರನ್ನು ಹಾಗೂ ಬೆಂಗಳೂರು ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ವೇದಕುಮಾರ್ ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಕುಸುಮಾಧರ್ ಎಣ್ಕಾಜೆ ಸನ್ಮಾನಿತರ ಪರಿಚಯ ಮಾಡಿದರು.
275ಕ್ಕೂ ಮಿಕ್ಕಿ ಅಭಿನಂದನೆ..
ಪುತ್ತೂರು ಬಿಲ್ಲವ ಸಂಘದ ವ್ಯಾಪ್ತಿಯಲ್ಲಿ ಬರುವ 51 ಗ್ರಾಮ ಸಮಿತಿಯ ಪೂರ್ವಾಧ್ಯಕ್ಷರುಗಳು ಹಾಗೂ ಸಂಚಾಲಕರು ಹೀಗೆ ಸುಮಾರು 275ಕ್ಕೂ ಮಿಕ್ಕಿ ಮಹನೀಯರನ್ನು ಗುರುತಿಸಿ ಅಭಿನಂದಿಸಲಾಯಿತು. ಶ ಚಂದ್ರಕಲಾ ಮುಕ್ವೆ ಹಾಗೂ ವೇದಾವತಿರವರು ಅಭಿನಂದಿತರ ಪರಿಚಯ ಮಾಡಿದರು.