ಏ.1ರಿಂದ ಬಾಲವನದ ಈಜುಕೊಳದಲ್ಲಿ ಬೇಸಿಗೆ ಶಿಬಿರ

0

  • ಮಕ್ಕಳಿಗೆ, ಮಹಿಳೆಯರಿಗೆ ಪ್ರತ್ಯೇಕ ಬ್ಯಾಚ್
  • ಸ್ಪರ್ಧೆಯ ಜೊತೆಗೆ ಜೀವರಕ್ಷಕವಾಗಿ ಈಜುಕಲಿಕೆ

ಪುತ್ತೂರು: ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಮಟ್ಟದ ಈಜುಪಟುಗಳನ್ನು ತಯಾರುಗೊಳಿಸಿದ ಪುತ್ತೂರಿನ ಪರ್ಲಡ್ಕ ಬಾಲವನದ ಈಜುಕೊಳದಲ್ಲಿ ಬೇಸಿಗೆ ಶಿಬಿರವು ಏ.1ರಿಂದ ಪ್ರಾರಂಭಗೊಳ್ಳಲಿದೆ. ಈ ಮೂಲಕ ಇನ್ನಷ್ಟು ಈಜುಪಟುಗಳನ್ನು ತಯಾರಿಗೊಳಿಸುವ ಕಾಯಕಕ್ಕೆ ಬಾಲವನದ ಈಜುಕೊಳವು ಮುಂದಾಗಿದೆ.

ಡಾ| ಶಿವರಾಮ ಕಾರಂತರು ಸಾಹಿತ್ಯ ಕೃಷಿ ನಡೆಸಿದ ಬಾಲವನದ ಜಾಗದಲ್ಲಿ ಈಜುಕೊಳವನ್ನು ನಿರ್ಮಾಣ ಮಾಡಿದ ಬಳಿಕ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಈಜು ತರಬೇತಿಗೆಂದು ಎಳೆ ಪ್ರಾಯದಲ್ಲೇ ಸೇರಿಕೊಳ್ಳುವ ಮಕ್ಕಳು ಮುಂದೆ ಈಜು ಸ್ಪರ್ಧೆಗಳಿಗೂ ಸಿದ್ಧಗೊಳ್ಳುತ್ತಿರುವುದು ಇಲ್ಲಿನ ವಿಶೇಷತೆ. ಇದರಿಂದ ಪುತ್ತೂರಿನಲ್ಲಿ ಈಜುಪಟುಗಳು ಹುಟ್ಟಿಕೊಳ್ಳುವುದಲ್ಲದೇ, ಜೀವರಕ್ಷಕ ಈಜಿನ ಬಗೆಗಿನ ಅರಿವು ಕೂಡ ಬೆಳೆಯತೊಡಗಿದೆ.

ಈಜನ್ನು ಜೀವರಕ್ಷಕವಾಗಿ ಕಲಿಸುತ್ತಿರುವುದು ಬಾಲವನ ಈಜುಕೊಳದ ವಿಶೇಷತೆ. ಆತ್ಮರಕ್ಷಣೆಯ ಜೊತೆಗೆ ನೀರಲ್ಲಿ ಮುಳುಗುತ್ತಿರುವ ಅನ್ಯರ ಪ್ರಾಣವನ್ನು ರಕ್ಷಿಸಲು ಇದರಿಂದ ಸಾಧ್ಯ. ಇದರ ಜೊತೆಗೆ ಆರೋಗ್ಯಕ್ಕೂ ನಾನಾ ರೀತಿಯ ಪ್ರಯೋಜನಗಳು ಲಭ್ಯ – ದೇಹ ಸದೃಢ, ಬೊಜ್ಜು ಕರಗುವುದು, ಸುಖವಾದ ನಿದ್ದೆ, ಅಂಗಾಂಗ ಸಡಿಲ, ಮುದಿತನ ದೂರ, ಚಿಕ್ಕಪುಟ್ಟ ಕಾಯಿಲೆಗಳಿಂದ ಮುಕ್ತಿ, ಉಸಿರಾಟದ ಬಾಧೆ- ಅಸ್ತಮಾ ಹತೋಟಿಗೆ ಬರುತ್ತದೆ, ದೇಹದ ಸ್ನಾಯುಗಳು ಗಟ್ಟಿಗೊಳ್ಳುತ್ತವೆ, ರಕ್ತಚಲನೆ ಚುರುಕುಗೊಳ್ಳುತ್ತದೆ, ಮಾನಸಿಕ ಒತ್ತಡ ನಿವಾರಣೆಗೊಳ್ಳುತ್ತದೆ, ನಿತ್ಯ ಲವಲವಿಕೆಯಿಂದಿರಬಹುದು. ಇದಕ್ಕೆ ಕಾರಣ ನೆಲದ ಮೇಲೆ ಮಾಡುವ ವ್ಯಾಯಾಮಕ್ಕಿಂತಲೂ ಈಜುಕೊಳದೊಳಗಿನ ಈಜು 12 ಪಟ್ಟು ಅಧಿಕ ಪರಿಣಾಮಕಾರಿ. ಈ ಹಿನ್ನೆಲೆಯಲ್ಲಿ ಸಣ್ಣ ಪ್ರಾಯದ ಮಕ್ಕಳಿಂದ 70 ವರ್ಷದವರೆಗಿನ ವ್ಯಕ್ತಿಗಳಿಗೂ ಬೇಸಿಗೆ ಶಿಬಿರದಲ್ಲಿ ತರಬೇತಿ ನೀಡಲಾಗುತ್ತಿದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸಬಲ್ಲ ಈಜು, ಹೃದಯ ಮತ್ತು ಹೃದಯ ರಕ್ತನಾಳದ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಮಕ್ಕಳು ಪ್ರತಿದಿನ ಈಜುವುದರಿಂದ ದೇಹ ಮತ್ತು ಮನಸ್ಸು ಉತ್ತಮ ರೀತಿಯಲ್ಲಿ ಬೆಳವಣಿಗೆ ಆಗುತ್ತದೆ. ಮೆದುಳಿನ ಕಾರ್ಯ ಮತ್ತು ಗಮನವನ್ನು ಸುಧಾರಿಸಬಲ್ಲ ಈಜು, ಸ್ನಾಯುಗಳ ನಾರಿನ ಬೆಳವಣಿಗೆಯನ್ನು ಅಭಿವೃದ್ಧಿಪಡಿಸುತ್ತದೆ. ಕೈರಟ್ಟೆ, ಎದೆಗೂಡು, ಕಿಬ್ಬೊಟ್ಟೆ, ಹೃದಯ, ಹೊಟ್ಟೆ, ಕಾಲಿನ ಸ್ನಾಯುಗಳನ್ನು ಗಟ್ಟಿಗೊಳಿಸುತ್ತವೆ. ಈ ಹಿನ್ನೆಲೆಯಲ್ಲಿ ಬಾಲವನದ ಈಜುಕೊಳವು ಬೇಸಿಗೆ ಶಿಬಿರವನ್ನು ಪ್ರತಿವರ್ಷ ಆಯೋಜಿಸುತ್ತದೆ.

ನೀರು ಜೀವಜಲ. ಎಂದಿಗೂ ನೀರು ಮೃತ್ಯುವಾಗಬಾರದು. ಈ ಆಶಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಪರ್ಲಡ್ಕ ಡಾ| ಶಿವರಾಮ ಕಾರಂತರ ಬಾಲವನದ ಈಜುಕೊಳ, ಆರೋಗ್ಯವಂತ ಸಮಾಜ ರೂಪೀಕರಣಕ್ಕೆ ಶ್ರಮಿಸುತ್ತಿದೆ.

ಬಾಲವನ ಈಜುಕೊಳದ ಗರಿಮೆ: ಈಜು ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆ. 187 ದೇಶಗಳು ಭಾಗವಹಿಸುವ ಈಜು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬಾಲವನದ ಪುತ್ತೂರು ಅಕ್ವಾಟಿಕ್ ಕ್ಲಬ್ ಕೂಡ ಕಳೆದ ಕೆಲ ವರ್ಷಗಳಿಂದ ಭಾಗವಹಿಸುತ್ತಿರುವುದು ಹೆಚ್ಚುಗಾರಿಕೆಯೇ ಸರಿ. 100ಕ್ಕೂ ಅಧಿಕ ಈಜುಪಟುಗಳನ್ನು ತಯಾರುಗೊಳಿಸಿರುವ ಅಕ್ವಾಟಿಕ್ ಕ್ಲಬ್, 3 ಸಾವಿರಕ್ಕೂ ಅಧಿಕ ಪದಕಗಳನ್ನು ಗೆದ್ದುಕೊಂಡಿದೆ. ಇದರಲ್ಲಿ 2 ಅಂತರ್ರಾಷ್ಟ್ರೀಯ ಚಿನ್ನದ ಪದಕ ಎನ್ನುವುದು ಪುತ್ತೂರಿಗೆ ಸಂದ ಗರಿಮೆ.

ವಿವಿಧ ಬ್ಯಾಚ್‌ನಲ್ಲಿ ಶಿಬಿರ

ಬೇಸಿಗೆ ಶಿಬಿರವನ್ನು ವಿವಿಧ ಬ್ಯಾಚ್‌ಗಳಲ್ಲಿ ನಡೆಸಲಾಗುತ್ತಿದ್ದು ಬೆಳಿಗ್ಗೆ ಗಂಟೆ 6.30-7.15, 7.30-8.15, 8.30-9.15, 9.30-10.15, ಸಂಜೆ 3.30-4.15, 4.30-5.15, 5.30-6.15, 6.30-7.15, 7.30-8.15ರ ಸಮಯಗಳಲ್ಲಿ ಶಿಬಿರಗಳ ನಡೆಯಲಿದೆ. ಬೇಸಿಗೆ ಶಿಬಿರದಲ್ಲಿ ಫ್ಯಾಮಿಲಿ ಪ್ಯಾಕೇಜ್‌ಗಳು ಮತ್ತು ಗ್ರೂಪ್ ಡಿಸ್ಕೌಂಟ್‌ಗಳನ್ನು ನೀಡಲಾಗಿದೆ.

LEAVE A REPLY

Please enter your comment!
Please enter your name here