ಮತದಾರರಲ್ಲಿ ಜಾಗೃತಿಗೆ ಐಕಾನ್‌ಗಳ ಬಳಕೆ; ದ.ಕ.ಜಿಲ್ಲಾ ‘ಸ್ವೀಪ್ ಸಮಿತಿ’ ನಿರ್ಧಾರ

0

ಮಂಗಳೂರು:ರಾಜ್ಯ ವಿಧಾನಸಭೆಗೆ ಮೇ 10ರಂದು ಚುನಾವಣೆ ನಡೆಯಲಿದ್ದು ಈಗಾಗಲೇ ವೇಳಾಪಟ್ಟಿ ಪ್ರಕಟವಾಗಿದೆ. ಗತ ವರ್ಷಗಳಲ್ಲಿ ನಡೆದ ಚುನಾವಣೆಯಲ್ಲಿ ಕೆಲವರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ದೂರ ಉಳಿದಿದ್ದರು. ಈ ರೀತಿ ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿಯುವ ಮತದಾರರನ್ನು ಸೆಳೆಯುವ ಸಲುವಾಗಿ ದ.ಕ.ಜಿಲ್ಲಾ ಸ್ವೀಪ್ ಸಮಿತಿಯು ಜಿಲ್ಲೆಯ ಪ್ರಮುಖ ಆರು ಮಂದಿ ‘ಐಕಾನ್’ (ಜನಪ್ರಿಯರು)ಗಳನ್ನು ಬಳಸಿಕೊಳ್ಳಲು ಮುಂದಾಗಿವೆ.

ಶಿಕ್ಷಣ, ಕಲೆ, ಸಮಾಜ ಸೇವೆ, ಕ್ರೀಡೆ, ಭಿನ್ನ ಸಾಮರ್ಥ್ಯ ಮೊದಲಾದ ಕ್ಷೇತ್ರಗಳಲ್ಲಿ ತಮ್ಮ ಸಾಧನೆ ಮೂಲಕ ಗುರುತಿಸಿಕೊಂಡಿರುವ ಪದ್ಮಶ್ರೀ ಹರೇಕಳ ಹಾಜಬ್ಬ, ಚಲನಚಿತ್ರ ನಟ-ನಿರ್ದೇಶಕ ರಾಜ್ ಬಿ.ಶೆಟ್ಟಿ, ನಟಿ, ನಿರೂಪಕಿ ಅನುಶ್ರೀ ಎಸ್., ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ, ಆಳ್ವಾಸ್ ಕಾಲೇಜಿನ ಮಕ್ಕಳ ಕಲ್ಯಾಣ ಅಧಿಕಾರಿ ಸಬಿತಾ ಮೊನಿಸ್ ಹಾಗೂ ನಟಿ ಸಂಗೀತ ಶೃಂಗೇರಿ ಅವರನ್ನು ಮತದಾನ ಜಾಗೃತಿಯ ಐಕಾನ್‌ಗಳನ್ನಾಗಿ ಆಯ್ಕೆ ಮಾಡಲಾಗಿದೆ. ಈ ಐಕಾನ್‌ಗಳ ಮೂಲಕ ಮತದಾನದ ಮಹತ್ವದ ಜಾಗೃತಿ ಅಭಿಯಾನದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

‘ಮತದಾನಕ್ಕಿಂತ ಇನ್ನೊಂದಿಲ್ಲ-ನಾನು ಖಚಿತವಾಗಿ ಮತದಾನ ಮಾಡುವೆ’ ಎಂಬ ಆಶಯ ವಾಕ್ಯದೊಂದಿಗೆ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಯುವ ಸಮೂಹದ ಸಹಿತ ಮತದಾರರಲ್ಲಿ ಮತದಾನದ ಮಹತ್ವವನ್ನು ಸಾರಲು ಈ ‘ಐಕಾನ್’ಗಳನ್ನು ಬಳಸಲು ಮುಂದಾಗಿವೆ.

‘ಒಂದು ಮೊಟ್ಟೆಯ ಕಥೆ’ಯ ಚಿತ್ರ ಖ್ಯಾತಿಯ ರಾಜ್ ಬಿ.ಶೆಟ್ಟಿ, ಶೈಕ್ಷಣಿಕ ಕ್ರಾಂತಿ ನಡೆಸಿರುವ ಶಿಕ್ಷಣ ಸಂತ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಯಕ್ಷಗಾನದಲ್ಲಿ ಮೇರುಸ್ತರದ ಭಾಗವತರಾಗಿ ಗುರುತಿಸಿಕೊಂಡಿರುವ ಸತೀಶ್ ಶೆಟ್ಟಿ ಪಟ್ಲ, ತನ್ನೆರಡು ಕೈಗಳಿಲ್ಲದಿದ್ದರೂ ಕಾಲುಗಳಲ್ಲೇ ಪರೀಕ್ಷೆ ಬರೆದು ಸ್ನಾತಕೋತ್ತರ ಪದವಿ ಪಡೆದಿರುವ ಬೆಳ್ತಂಗಡಿ ಗರ್ಡಾಡಿಯ ಸಬಿತಾ ಮೊನಿಸ್, ನಟನೆಯ ಜೊತೆ ದೃಶ್ಯ ಮಾಧ್ಯಮದಲ್ಲಿ ಗುರುತಿಸಿಕೊಂಡಿರುವ ಅನುಶ್ರೀ, ಸೌಂದರ್ಯ ಸ್ಪರ್ಧೆ, ನಟನೆ, ಕ್ರೀಡೆಯಲ್ಲಿ ಸಕ್ರಿಯರಾಗಿರುವ ಚಾರ್ಲಿ 777 ಖ್ಯಾತಿಯ ನಟಿ ಸಂಗೀತಾ ಶೃಂಗೇರಿ ಅವರ ಮೂಲಕ ಮತದಾನದ ಮಹತ್ವ ಸಾರುವುದು ಸ್ವೀಪ್‌ನ ತಂತ್ರವಾಗಿದೆ.

ಮತದಾನದ ಮಹತ್ವವನ್ನು ಒಳಗೊಂಡ ಇವರ ಮಾತುಗಳು ವೀಡಿಯೋ, ಆಡಿಯೋ ಸಂದೇಶಗಳ ಮೂಲಕ ಸಾಮಾಜಿಕ ಜಾಲತಾಣಗಳು ಹಾಗೂ ಜನನಿಭಿಡ ಪ್ರದೇಶಗಳಲ್ಲಿ ಪ್ರಸಾರ ಮಾಡುವುದು ಸೇರಿದಂತೆ ಐಕಾನ್‌ಗಳ ಮೂಲಕ ಮತದಾನದ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆಯುತ್ತಿದೆ.

ಕಲರ್‌ಫುಲ್ ಮತಗಟ್ಟೆಗಳು: ಕಳೆದ ಬಾರಿ ಮತದಾನದ ಪ್ರಮಾಣ ಕಡಿಮೆಯಾಗಿದ್ದ ಮತಗಟ್ಟೆಗಳಲ್ಲಿ ಈ ಬಾರಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪುತ್ತೂರು ಕ್ಷೇತ್ರದ 12 ಸೇರಿದಂತೆ ಜಿಲ್ಲೆಯಲ್ಲಿ 100 ಮತಗಟ್ಟೆಗಳನ್ನು ವಿಶೇಷ ಮತಗಟ್ಟೆಗಳೆಂದು ಗುರುತಿಸಿ ಈಗಾಗಲೇ ಬಣ್ಣ ಬಳಿದು ಅಲಂಕರಿಸುವ ಕೆಲಸ ನಡೆಯುತ್ತಿದೆ.ಇದೀಗ ಮತದಾರರಲ್ಲಿ ಜಾಗೃತಿ ಮೂಡಿಸಲು ಐಕಾನ್‌ಗಳನ್ನು ಬಳಸಿಕೊಳ್ಳುವ ಹೊಸ ಪ್ರಯತ್ನವೊಂದಕ್ಕೆ ಜಿಲ್ಲಾ ಸ್ವೀಪ್ ಸಮಿತಿ ಮುಂದಾಗಿದೆ.

ಐಕಾನ್‌ಗಳ ಮೂಲಕ ಮತದಾರರಲ್ಲಿ ಜಾಗೃತಿ: ‘ಜಿಲ್ಲೆಯ ಪ್ರಮುಖ ಐಕಾನ್‌ಗಳ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಸಿದ್ಧತೆ ನಡೆಯುತ್ತಿದೆ. ಗ್ರಾಮಾಂತರ ಪ್ರದೇಶವಲ್ಲದೆ ಮತದಾನದಿಂದ ದೂರ ಉಳಿಯುವ ಯುವ ಹಾಗೂ ನಗರದ ಮತದಾರರನ್ನು ಮತಗಟ್ಟೆಗಳಿಗೆ ಸೆಳೆಯಲು ‘ಐಕಾನ್’ಗಳನ್ನು ಪರಿಣಾಮಕಾರಿಯಾಗಿ ಬಳಸಲಾಗುತ್ತದೆ ಎಂದು ದ.ಕ. ಜಿಲ್ಲಾ ಸ್ವೀಪ್ ಮುಖ್ಯಸ್ಥ ಹಾಗೂ ಜಿಪಂ ಸಿಇಒ ಡಾ.ಕುಮಾರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here