ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರಸ್ತುತ 2,10,792 ಮತದಾರರು; ಎ.11ರ ತನಕ ಮತದಾರರ ಪಟ್ಟಿಗೆ ಸೇರ್ಪಡೆಗೆ ಅವಕಾಶ – ಗಿರೀಶ್‌ನಂದನ್

0

ಪುತ್ತೂರು: ವಿಧಾನಸಭೆಗೆ ಚುನಾವಣಾ ವೇಳಾಪಟ್ಟಿ ಘೋಷಣೆಯಾಗಿದ್ದರೂ ಏಪ್ರಿಲ್ 11ರವರೆಗೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ ನೀಡಲಾಗಿದೆ. ಎ.20ಕ್ಕೆ ಮತದಾರರ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುವುದು. ಪ್ರಸ್ತುತ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 2,10,792 ಮತದಾರರಿದ್ದಾರೆ. ಈ ಬಾರಿ ಚುನಾವಣೆಯನ್ನು ಸೂಸೂತ್ರ ಮತ್ತು ನಿರ್ಭೀತಿಯಿಂದ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಚುನಾವಣಾಧಿಕಾರಿಯಾಗಿರುವ ಸಹಾಯಕ ಕಮೀಷನರ್ ಗಿರೀಶ್‌ನಂದನ್ ಅವರು ಹೇಳಿದರು.

ಭಾರತ ಚುನಾವಣಾ ಆಯೋಗವು ಮುದ್ರಣ ಮಾಧ್ಯಮಗಳಿಗೆ ಸಾರ್ವತ್ರಿಕ ಚುನಾವಣಾ ಸಂದರ್ಭಗಳಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಪೋಸ್ಟರ್, ಬ್ಯಾನರ್, ಪಾಂಪ್ಲೆಟ್ಸ್ ಮತ್ತು ಜಾಹಿರಾತುಗಳನ್ನು ಮುದ್ರಿಸುವಾಗ, ಟಿವಿ ಮತ್ತು ಕೇಬಲ್ ನೆಟ್‌ವರ್ಕ್‌ಗಳಲ್ಲಿ ಚುನಾವಣಾ ಜಾಹಿರಾತುಗಳನ್ನು ಪ್ರಸಾರ ಮಾಡುವಾಗ ಅನುಸರಿಸಬೇಕಾದ ಕ್ರಮಗಳ ಕುರಿತು ಅವರು ಎ.4ರಂದು ತಾಲೂಕು ಆಡಳಿತ ಸೌಧದಲ್ಲಿ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ಈಗಾಗಲೇ ಮಾಲ್, ಜ್ಯುವೆಲ್ಲರಿ ಮಾಲಿಕರು, ಗೃಹೋಪಯೋಗಿ ಉಪಕರಣದ ಮಾರಾಟದ ವ್ಯಾಪಾರಸ್ಥರು, ಪೆಟ್ರೋಲ್ ಪಂಪ್‌ಗಳ ಮಾಲಕರು, ಬಾರ್ ಮಾಲಕರಿಗೆ ನೀತಿ ಸಂಹಿತೆ ಕುರಿತು ಮಾರ್ಗದರ್ಶನ ನೀಡಲಾಗುತ್ತಿದೆ. ನಮ್ಮಲ್ಲಿ 220 ಮತದಾನ ಕೇಂದ್ರಗಳಿವೆ. ಈಗಾಗಲೇ ಇವತ್ತಿನ ದಿನಕ್ಕೆ ಸಂಬಂಧಿಸಿ 2,10,792 ಮತದಾರರಿದ್ದಾರೆ. ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಎ.11ರ ತನಕ ಅವಕಾಶವಿದೆ. ಆ ಬಳಿಕ ಎ.20ಕ್ಕೆ ಅಂತಿಮ ಪಟ್ಟಿ ಬಿಡುಗಡೆಗೊಳಿಸಲಿದ್ದೇವೆ. 80 ವರ್ಷ ಮೇಲ್ಪಟ್ಟ ಮತ್ತು ವಿಕಲಚೇತನರು ಒಟ್ಟು 6,524 ಮಂದಿ ಇದ್ದಾರೆ. ಅವರಿಗೆ ಮನೆಯಲ್ಲೇ ಮತದಾನ ಮಾಡುವ ಅವಕಾಶ ಇರುವ ಹಿನ್ನೆಲೆಯಲ್ಲಿ ಈಗಾಗಲೇ ಅವರ ಒಪ್ಪಿಗೆ ಪತ್ರ ವಿತರಣೆಯು ನಮ್ಮ ಬಿಎಲ್‌ಒಗಳು ಮಾಡುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಕರ್ತವ್ಯದಲ್ಲಿರುವ ಮಾಧ್ಯಮ ಸಹಿತ ವಿವಿಧ ಇಲಾಖೆಗಳ ಸಿಬ್ಬಂದಿಗಳಿಗೆ ಅಂಚೆ ಮತದಾನ ವ್ಯವಸ್ಥೆ ಇದೆ. ಚುನಾವಣೆಯ ಮೂರು ದಿನ ಮುಂದೆ ಈ ಮತದಾನ ನಡೆಯಲಿದೆ. ಅದಕ್ಕೆ ಆಯಾ ಇಲಾಖೆಯಿಂದ ನೊಡೇಲ್ ಅಧಿಕಾರಿಯೊಬ್ಬರು ಅವರ ಇಲಾಖೆಯಿಂದ ಚುನಾವಣಾ ಕರ್ತವ್ಯದಲ್ಲಿರುವ ಪ್ರತಿನಿಧಿಗಳ ಪಟ್ಟಿ ನೀಡುತ್ತಾರೆ. ಈ ಆಧಾರದಲ್ಲಿ ಮತದಾನ ನಡೆಯುತ್ತದೆ ಎಂದರು.

ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ಮಸ್ಟರಿಂಗ್, ಡಿ ಮಸ್ಟರಿಂಗ್:
ಮತದಾನಕ್ಕೆ ಸಂಬಂಧಿಸಿ ಎ.5ಕ್ಕೆ ಜಿಲ್ಲಾಧಿಕಾರಿಯವರು ವಿದ್ಯುನ್ಮಾನ ಮತಯಂತ್ರವನ್ನು ತಾಲೂಕುಗಳಿಗೆ ನೀಡಲಿದ್ದಾರೆ. ಎ.6ಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ವಿದ್ಯುನ್ಮಾನ ಮತಯಂತ್ರ ನೀಡಲಿದ್ದಾರೆ. ಅದನ್ನು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ಭದ್ರತೆಯೊಂದಿಗೆ ಇರಿಸಲಾಗುತ್ತದೆ. ಅಲ್ಲೇ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ತರಬೇತಿ ನಡೆಯಲಿದೆ. ಎ.9ಕ್ಕೆ ಅಲ್ಲಿ ತರಬೇತಿ ಕಾರ್ಯಕ್ರಮ ನಡೆಯಲಿದೆ ಎಂದು ಚುನಾವಣಾಧಿಕಾರಿ ಗಿರೀಶ್ ನಂದನ್ ಹೇಳಿದರು.

ಮಾಧ್ಯಮ ಜಾಹಿರಾತಿಗೆ ಜಿಲ್ಲಾ ವಾರ್ತಾಧಿಕಾರಿ ನೋಡೆಲ್ ಅಧಿಕಾರಿ:
ಟಿವಿ, ಪತ್ರಿಕಾ ಮಾಧ್ಯಮಗಳು ಸಹಿತ ಇತರ ವಿದ್ಯುನ್ಮಾನ ಮಾದ್ಯಗಳಲ್ಲಿ ಚುನಾವಣೆ ಸಂಬಂಧಿಸಿ ಬರುವ ಜಾಹಿರಾತಿಗೆ ಜಿಲ್ಲಾಧಿಕಾರಿ ಅನುಮತಿ ಬೇಕು. ಜಾಹಿರಾತಿಗೆ ಸಂಬಂಧಿಸಿ ಅರ್ಜಿ ನಮೂನೆ ಭರ್ತಿ ಮಾಡಬೇಕು. ಈ ಎಲ್ಲಾ ವಿಚಾರಗಳಿಗೆ ಸಂಬಂಧಿಸಿ ಜಿಲ್ಲಾ ವಾರ್ತಾಧಿಕಾರಿ ನೋಡೆಲ್ ಅಧಿಕಾರಿಯಾಗಿರುತ್ತಾರೆ. ವಿವಿಧ ಟಿವಿ, ಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ದಿಗಳ ಮೇಲೆ ನಿಗಾ ವಹಿಸಲಾಗುತ್ತದೆ. ವಿದ್ಯುನ್ಮಾನ ಮಾಧ್ಯಮ ಹಾಗೂ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ದೃಶ್ಯಗಳ ಕುರಿತು, ಸ್ಕ್ರೋಲಿಂಗ್ ಜಾಹಿರಾತು ಕುರಿತು ನಿಗಾ ವಹಿಸಿ ಪರಿಶೀಲನೆ ನಡೆಸಲಾಗುತ್ತದೆ. ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ವಿದ್ಯುನ್ಮಾನ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ಪ್ರಚುರಪಡಿಸುವ ಮುನ್ನ ಮತ್ತು ಪತ್ರಿಕಾಗೊಷ್ಠಿ ನಡೆಸುವ ಮುಂದೆ ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಜಿಲ್ಲೆಯಲ್ಲೂ ಮತ್ತು ತಾಲೂಕಿನಲ್ಲೂ ಒಂದು ಕಣ್ಗಾವಲು ಟೀಮ್ ಇದೆ ಎಂದು ಚುನಾವಣಾಧಿಕಾರಿ ಗಿರೀಶ್‌ನಂದನ್ ಹೇಳಿದರು

ಚೆಕ್‌ಪೋಸ್ಟಗಳಲ್ಲಿ ಸಿಸಿ ಕ್ಯಾಮರ ಕಣ್ಗಾವಲು:
ಪುತ್ತೂರು ವಿಧಾನಸಭಾ ಕ್ಷೇತ್ರ ಮತ್ತು ಬಂಟ್ವಾಳ ಸೇರಿಸಿ 4 ಕಡೆ ಚೆಕ್ ಪೋಸ್ಟ್‌ಗಳಿವೆ. ಬಂಟ್ವಾಳದ ಸಾರಡ್ಕದಲ್ಲಿ ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ವಿಟ್ಲ ಭಾಗದಲ್ಲಿ ಹಾಗು ಪಾಣಾಜೆ ಮತ್ತು ಮೇನಾಲದಲ್ಲಿ ಚೆಕ್‌ಪೋಸ್ಟ್ ಮಾಡಲಾಗಿದೆ. ಅಲ್ಲಿ ನಮ್ಮ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಾರೆ. ಜೊತೆಗೆ ಸಿಸಿ ಕ್ಯಾಮಾರ ಕಣ್ಗಾವಲು ಮಾಡಲಾಗಿದೆ. ಪ್ರತಿ ದಿನ ವರದಿ ಅಲ್ಲಿಂದ ಬರುತ್ತದೆ. 3 ಪ್ಲೈಯಿಂಗ್ ಸ್ಕಾಡ್ ಮಾಡಲಾಗಿದೆ. ಒಟ್ಟು ವಿಚಾರದಲ್ಲಿ ಇಲ್ಲಿನ ತನಕ ಯಾವುದೇ ದೂರು, ಘಟನೆ ಇದುವರೆಗೆ ನಡೆದಿಲ್ಲ ಎಂದು ಚುನಾವಣಾಧಿಕಾರಿ ಗಿರೀಶ್ ನಂದನ್ ಹೇಳಿದರು. ಸಹಾಯಕ ಚುನಾವಣಾಧಿಕಾರಿ ತಹಸೀಲ್ದಾರ್ ಜಿ.ಶಿವಶಂಕರ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ಡಿವೈಎಸ್ಪಿ ಡಾ| ವೀರಯ್ಯ ಹಿರೇಮಠ್, ಉಪತಹಸೀಲ್ದಾರ್ ಸುಲೋಚನಾ, ಪತ್ರಿಕಾ, ಮಾದ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here