ಎ.30 : ಸುಳ್ಯ ವಿಧಾನಸಭಾ ಕ್ಷೇತ್ರ ಬಿಜೆಪಿ ವತಿಯಿಂದ ಮಹಾ ಸಂಪರ್ಕ ಅಭಿಯಾನ-ಬೃಹತ್ ಚುನಾವಣಾ ಪ್ರಚಾರ

0

ಸುಳ್ಯ:ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಬಿರುಸಿನ ಪ್ರಚಾರ ಆರಂಭಗೊಂಡಿದೆ. ಪ್ರಚಾರಕ್ಕೆ ಇನ್ನಷ್ಟು ವೇಗ ದೊರಕಿಸುವ ಹಿನ್ನಲೆಯಲ್ಲಿ ವಿಧಾನಸಭಾ ಕ್ಷೇತ್ರದ ಎಲ್ಲಾ ಬೂತ್‌ಗಳಲ್ಲಿ ಒಂದೇ ದಿನ ಎಲ್ಲಾ ಮನೆಗಳಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳುವ ಮಹಾ ಸಂಪರ್ಕ ಅಭಿಯಾನ ಎ.30ರಂದು ನಡೆಯಲಿದೆ ಎಂದು ಬಿಜೆಪಿ ಸುಳ್ಯ ಮಂಡಲದ ಮಾಧ್ಯಮ ಸಂಚಾಲಕ ವೆಂಕಟ್ ದಂಬೆಕೋಡಿ ಹೇಳಿದರು. ಅವರು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಚುನಾವಣೆ ಹಿನ್ನಲೆಯಲ್ಲಿ ಈಗಾಗಲೇ ಪಕ್ಷದ ವತಿಯಿಂದ 10 ಮಹಾಶಕ್ತಿ ಕೇಂದ್ರಗಳಲ್ಲಿ ಪ್ರಚಾರ ಕಾರ್ಯ ಆರಂಭಗೊಂಡಿದೆ. ಏ.30 ರಂದು ನಡೆಯುವ ಮಹಾ ಸಂಪರ್ಕ ಅಭಿಯಾನದಲ್ಲಿ ಆಯಾ ಬೂತ್ ಮಟ್ಟದ 50 ರಿಂದ 100 ಕಾರ್ಯಕರ್ತರು ಪ್ರತೀ ಮನೆಗಳಿಗೆ ಭೇಟಿ ನೀಡಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ‌. ಇದರ ಪೂರ್ವಭಾವಿಯಾಗಿ ಎ.26ರಂದು ಪಕ್ಷದ ಪ್ರಮುಖರು,ಕಾರ್ಯಕರ್ತರು ಇನ್ನೊಂದು ಬೂತ್‌ಗೆ ತೆರಳಿ ಅಲ್ಲಿ‌ನ ಕಾರ್ಯಕರ್ತರನ್ನು ಚುನಾವಣೆಗೆ ಸಜ್ಜುಗೊಳಿಸುವ ಕಾರ್ಯಕ್ರಮ ನಡೆಸಲಿದ್ದಾರೆ ಎಂದರು. ಸುಳ್ಯ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅಚರು ಸುಳ್ಯ ವಿಧಾನ ಸಭಾ ಕ್ಷೇತ್ರದ 10 ಮಹಾ ಶಕ್ತಿ ಕೇಂದ್ರಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಎ.23 ರಂದು ಸವಣೂರು, ಎ.24ರಂದು ಅಜ್ಜಾವರ, ಎ.25ರಂದು ಸುಬ್ರಹ್ಮಣ್ಯ, ಎ.26ರಂದು ಅರಂತೋಡು, ಎ.27 ರಂದು ಕೊಯಿಲ, ಎ.28 ರಂದು ಗುತ್ತಿಗಾರು, ಎ.28 ರಂದು ಕಡಬ ನಗರದಲ್ಲಿ ಪ್ರವಾಸ ನಡೆಸಲಿದ್ದಾರೆ ಎಂದರು.

ಎ.25 ಅಥವಾ 26 ರಂದು ಸುಳ್ಯಕ್ಕೆ ಬಿಜೆಪಿ ಯುವ ಘಟಕದ ರಾಷ್ಟ್ರೀಯ ಕಾರ್ಯದರ್ಶಿ ಪಂಕಜ್ ಮುಂಡೆ ಸುಳ್ಯಕ್ಕೆ ಬರುವ ಸೂಚನೆ ಇದೆ. ಈ ಬಗ್ಗೆ ಮುಂದೆ ಅಧಿಕೃತ ಮಾಹಿತಿ ನೀಡಲಾಗುವುದು ಎಂದರು. ಚುನಾವಣಾ ಬಹಿಷ್ಕಾರ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಭಿವೃದ್ಧಿ ನಿರಂತರವಾಗಿ ನಡೆಯಲಿದೆ. ಎಸ್.ಅಂಗಾರ ಅವರು ದೂರದೃಷ್ಟಿಯ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಸುಳ್ಯದಲ್ಲಿ ಅಭಿವೃದ್ಧಿ ಕೆಲಸಗಳು ಮುಂದೆಯೂ ಮುಂದುವರಿಯಲಿದೆ ಎಂದರು. ಸುಳ್ಯದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರು 40 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದರು.

ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ, ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್‌ ಕಂದಡ್ಕ, ಬಿಜೆಪಿ ಯುವ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ, ತಾ.ಪಂ.ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಸುಳ್ಯಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಜಿನ್ನಪ್ಪ ಪೂಜಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here