ಮತ್ತೊಮ್ಮೆ ಬಿಜೆಪಿ ಗೆಲ್ಲಿಸಲು ಕಾರ್ಯಕರ್ತರ ಶ್ರಮ ಅಗತ್ಯ-ಮಠಂದೂರು
ಪ್ರವೀಣ್ ನೆಟ್ಟಾರು ಹತ್ಯೆಯಾದಾಗ ಕೈಕಟ್ಟಿ ಕುಳಿತಿಲ್ಲ:
ಬಿಜೆಪಿ ಹಿಂದುತ್ವದ ಪರವಾದ ಪಕ್ಷವಾಗಿದೆ. ಪ್ರವೀಣ್ ನೆಟ್ಟಾರು ಹತ್ಯೆಯಾದಾಗ ನಮ್ಮ ಸರಕಾರ ಕೈಕಟ್ಟಿ ಕುಳಿತುಕೊಳ್ಳದೇ ಏನು ಆಗಬೇಕೋ ಅದನ್ನು ಮಾಡಿ ತೋರಿಸಿದೆ. ಎನ್‌ಐಎ ತನಿಖೆ ನಡೆಸಿ ಪಿಎಫ್‌ಐ ನಿಷೇಧ ಮಾಡಿ ಹಲವರನ್ನು ಬಂಧಿಸಿ ಜೈಲಿಗಟ್ಟಿದ್ದೇವೆ. ಇಂದು ಪುತ್ತೂರಿನಲ್ಲಿ ಎಸ್‌ಡಿಪಿಐ ಅಭ್ಯರ್ಥಿಗೆ ಜೈಲಿನಿಂದ ಸ್ಪರ್ಧಿಸಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಿದ್ದು ನಮ್ಮ ಬಿಜೆಪಿ ಸರಕಾರ. ಗೋ ಹತ್ಯೆ ನಿಷೇಧ ಕಾಯ್ದೆ ನಮ್ಮ ಸರಕಾರ ಮಾಡಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಇದ್ದ 4% ಮೀಸಲಾತಿಯನ್ನು ರದ್ದು ಮಾಡಿ ಇತರ ಸಮುದಾಯಕ್ಕೆ ನೀಡುವ ಕಾರ್ಯವನ್ನು ನಮ್ಮ ಸರಕಾರ ಮಾಡಿದೆ. ಹಾಗಾಗಿ ಹಿಂದುತ್ವದ ಪರವಾಗಿರುವ ಬಿಜೆಪಿಯನ್ನು ಗೆಲ್ಲಿಸಿ.
-ಸಂಜೀವ ಮಠಂದೂರು, ಶಾಸಕರು
ಬೆದರಿಕೆಗೆ ಜಗ್ಗಬೇಡಿ…ನಿಮ್ಮೊಂದಿಗೆ ನಾವಿದ್ದೇವೆ…
ಬಿಜೆಪಿ ಕಾರ್ಯಕರ್ತ ಪ್ರಸಾದ್ ಕಣ್ಣಣಿ ಅವರು ಮಾತನಾಡಿದ ವಿಡಿಯೋ ವೈರಲ್ ಆದ ವಿಚಾರದಲ್ಲಿ ಮಾತನಾಡಿದ ಸಾಜ ರಾಧಾಕೃಷ್ಣ ಆಳ್ವ ಅವರು ಬೆದರಿಕೆಗೆ ನೀವು ಜಗ್ಗಬೇಡಿ, ನಿಮ್ಮ ಜೊತೆ ನಾವಿದ್ದೇವೆ, ಬೆದರಿಕೆಗೆ ಉತ್ತರ ಕೊಡಲು ನಮಗೂ ಗೊತ್ತಿದೆ, ನೀವು ಪಕ್ಷಕ್ಕಾಗಿ ಧೈರ್ಯದಲ್ಲಿ ಕೆಲಸ ಮಾಡಿ ಎಂದು ಪ್ರಸಾದ್ ಅವರನ್ನುದೇಶಿಸಿ ಹೇಳಿದರು. ಬಳಿಕ ಸಭೆಯಲ್ಲಿದ್ದ ಬಿಜೆಪಿ ಕೆಮ್ಮಿಂಜೆ ಬೂತ್ ಸಮಿತಿ ಅಧ್ಯಕ್ಷ ಆನಂದ ದಂಡ್ಯನಕುಕ್ಕು ಮಾತನಾಡಿ ಯಾರನ್ನೂ ಏಕವಚನದಲ್ಲಿ ನಿಂದಿಸಿ ಮಾತನಾಡಬಾರದು, ಇದಕ್ಕೆ ಪಕ್ಷ ಅವಕಾಶ ಕೊಡಬಾರದು ಎಂದು ಹೇಳಿದರು. ಆ ವಿಚಾರವನ್ನು ಕುಳಿತು ಮಾತನಾಡುವ, ಈಗ ಚರ್ಚೆ ಬೇಡ ಎಂದು ಮುಖಂಡರು ಹೇಳಿದರು.
ಪುತ್ತೂರು: ಬಿಜೆಪಿ ಸರಕಾರದ ಯೋಜನೆಗಳನ್ನು ಮತ್ತು ನಿಮ್ಮೂರಿನಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮನೆ-ಮನೆಗೆ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡುವ ಮೂಲಕ ಪುತ್ತೂರಿನಲ್ಲಿ ಮತ್ತೊಮ್ಮೆ ಬಿಜೆಪಿ ಗೆಲ್ಲುವಂತೆ ಮಾಡಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಎ.23ರಂದು ಮುಂಡೂರು ಸುರೇಶ್ ಕಣ್ಣಾರಾಯ ಬನೇರಿ ನಿವಾಸದಲ್ಲಿ ಮತ ಯಾಚನೆ ನಡೆಸಿ ಅವರು ಮಾತನಾಡಿದರು.
ಪ್ರಧಾನಿ ಮೋದಿ ಭಾರತವನ್ನು ಸಧೃಢ ದೇಶವನ್ನಾಗಿ ಮಾಡಿದ್ದು ಅದ್ಭುತ ಅಭಿವೃದ್ಧಿ ಮಾಡಿದ್ದಾರೆ, ಅದೆಲ್ಲವೂ ತಳ ಮಟ್ಟದ ಜನರಿಗೆ ತಿಳಿಸುವ ಕಾರ್ಯ ನಮ್ಮಿಂದಾಗಬೇಕು ಎಂದು ಅವರು ಹೇಳಿದರು.
ಆಶಾಕ್ಕ ಅಡುಗೆ ಕೋಣೆಯಿಂದ ನೇರವಾಗಿ ಬಂದವರಲ್ಲ:
ಪುತ್ತೂರಿನ ಬಿಜೆಪಿ ಅಭ್ಯರ್ಥಿ ಆಶಾಕ್ಕ ಅವರು ಅಡುಗೆ ಕೋಣೆಯಿಂದ ನೇರವಾಗಿ ಬಂದವರಲ್ಲ, ಜಿಲ್ಲಾ ಪಂಚಾಯತ್ ಜನಪ್ರತಿನಿಧಿಯಾಗಿ, ಸುಳ್ಯ ಪಟ್ಟಣ ಪಂಚಾಯತ್‌ನಲ್ಲಿ ಜನಪ್ರತಿನಿಧಿಯಾಗಿ, ಬಿಜೆಪಿ ಪದಾಧಿಕಾರಿಯಾಗಿ ಕೆಲಸ ಮಾಡಿರುವ ಅನುಭವ ಇರುವ ಇವರಿಗೆ ಪಕ್ಷ ಅವಕಾಶ ಮಾಡಿ ಕೊಟ್ಟಿದೆ. ಮುಂಡೂರು ಭಾಗದಲ್ಲಿ ಬಿಜೆಪಿ ಹೆಚ್ಚು ಮುನ್ನಡೆಯನ್ನು ಕಾಯ್ದುಕೊಳ್ಳಬೇಕು ಎಂದು ಮಠಂದೂರು ಹೇಳಿದರು.
40 ಸಾವಿರ ಮತಗಳ ಅಂತರದಲ್ಲಿ ಗೆಲ್ಲಬೇಕು-ಆಶಾ ತಿಮ್ಮಪ್ಪ
ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಮಾತನಾಡಿ ಸರಕಾರ ಸಾಕಷ್ಟು ಯೋಜನೆಗಳನ್ನು ನೀಡಿದ್ದು ಆ ಯೋಜನೆಯನ್ನು ಪ್ರತೀ ಮನೆಗೂ ತಿಳಿಸುವ ಕಾರ್ಯವಾಗಬೇಕು. ಸಂಜೀವ ಮಠಂದೂರು ಅವರನ್ನು 19 ಸಾವಿರ ಮತಗಳಿಂದ ಗೆಲ್ಲಿಸಿದ್ದು, ನನ್ನನ್ನು ಎಲ್ಲರೂ ಸೇರಿ 40 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಬೇಕೆಂದು ಅವರು ಮನವಿ ಮಾಡಿದರು.
ವ್ಯಕ್ತಿಗಿಂತ ಪಕ್ಷಕ್ಕಾಗಿ ಕೆಲಸ ಮಾಡುವವರು-ಸುಧೀರ್
ಬಿಜೆಪಿ ಜಿಲ್ಲಾ ಪ್ರ.ಕಾರ್ಯದರ್ಶಿ ಸುಧೀರ್ ಕುಮಾರ್ ಕಣ್ಣೂರು ಮಾತನಾಡಿ ಕಾರ್ಯಕರ್ತರೇ ಪಕ್ಷದ ಆಸ್ತಿ, ನಾವೆಲ್ಲಾ ವ್ಯಕ್ತಿಗಿಂತ ಪಕ್ಷಕ್ಕಾಗಿ ಕೆಲಸ ಮಾಡುವವರು. ಈ ಬಾರಿ ಆಶಾ ತಿಮ್ಮಪ್ಪರವರನ್ನು ಬಹುಮತದಿಂದ ಗೆಲ್ಲಿಸಲು ಕಾರ್ಯಕರ್ತರು ಶಕ್ತಿಮೀರಿ ಪ್ರಯತ್ನಿಸಬೇಕೆಂದು ಹೇಳಿದರು.
ಬಿಜೆಪಿ ಹಿಂದುತ್ವದ ಆಧಾರದಲ್ಲಿ ಕೆಲಸ ಮಾಡುತ್ತಿದೆ-ರಾಧಾಕೃಷ್ಣ ಆಳ್ವ
ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ ಬಿಜೆಪಿ ಹಿಂದುತ್ವದ ಆಧಾರದಲ್ಲಿ ಕೆಲಸ ಮಾಡುತ್ತಿದ್ದು, ಪುತ್ತೂರು ಕ್ಷೇತ್ರದಲ್ಲಿ ಸಂಜೀವ ಮಠಂದೂರು ಮಾಡಿರುವ ಅಭಿವೃದ್ಧಿ ಕಾರ್ಯವನ್ನು ಮುಂದುವರಿಸಿಕೊಂಡು ಹೋಗಬೇಕಾದರೆ ಆಡಳಿತಾತ್ಮಕ ಅನುಭವ ಹೊಂದಿರುವ ಆಶಾ ತಿಮ್ಮಪ್ಪರನ್ನು ಗೆಲ್ಲಲೇಬೇಕಾಗಿದೆ ಎಂದು ಹೇಳಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಚುಣಾವಣಾ ನಿರ್ವಹಣಾ ಸಮಿತಿ ಸಂಚಾಲಕ ಅಪ್ಪಯ್ಯ ಮಣಿಯಾಣಿ, ಬಿಜೆಪಿ ಗ್ರಾಮಾಂತರ ಮಂಡಲ ಪ್ರ.ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಮಂಡಲ ಮಾಜಿ ಅಧ್ಯಕ್ಷರಾದ ರಂಗನಾಥ್, ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಚಂದ್ರಶೇಖರ ಬಪ್ಪಳಿಗೆ, ಪುತ್ತೂರು ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡ ಕರೆಮನೆ, ರೈತ ಮೋರ್ಚಾ ಕಾರ್ಯದರ್ಶಿ ಪುನೀತ್, ಒಬಿಸಿ ಮೋರ್ಚಾ ಅಧ್ಯಕ್ಷ ಸುನಿಲ್ ದಡ್ಡು, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಪ್ರ.ಕಾರ್ಯದರ್ಶಿ ತ್ರಿವೇಣಿ ಪೆರ‍್ವೋಡಿ, ಜಿ.ಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಾಜಿ ಸದಸ್ಯೆ ಮೀನಾಕ್ಷಿ ಮಂಜುನಾಥ್ ಉಪಸ್ಥಿತರಿದ್ದರು.
ಬಿಜೆಪಿ ಮುಂಡೂರು ಶಕ್ತಿಕೇಂದ್ರದ ಅಧ್ಯಕ್ಷ ಉಮೇಶ್ ಗೌಡ ಅಂಬಟ ಸ್ವಾಗತಿಸಿದರು. ಬೂತ್ ಸಮಿತಿ ಕಾರ್ಯದರ್ಶಿ ರಮೇಶ್ ಗೌಡ ಪಜಿಮಣ್ಣು ವಂದಿಸಿದರು.