ಸಂಘಟನಾತ್ಮಕವಾಗಿ ತೀರ್ಮಾನಗೊಂಡ ಅಭ್ಯರ್ಥಿಯ ಮೂಲಕ ಸಂಘಟನೆಯ ಗೆಲುವಾಗಲಿ

0

ಆಶಾ ತಿಮ್ಮಪ್ಪರಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಕಲ್ಪ – ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯಿಂದ ಪ್ರಾರ್ಥನೆ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಮೂಲಕ ಪಕ್ಷದ ಗೆಲುವಿಗಾಗಿ ಪಕ್ಷದ ಹಿರಿಯರು ಸಂಘಟನೆಯಿಂದ ಅಭ್ಯರ್ಥಿಯ ಜೊತೆ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ.25ರಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬ್ರಹ್ಮಶ್ರೀ ವೇ ಮೂ ಕುಂಟಾರು ರವೀಶ ತಂತ್ರಿಯವರು ವಿಶೇಷ ಪ್ರಾರ್ಥನೆ ಮಾಡಿದರು.


ಸಂಘಟನಾತ್ಮಕವಾಗಿ ತೀರ್ಮಾನಗೊಂಡ ಅಭ್ಯರ್ಥಿಯ ಮೂಲಕ ಸಂಘಟನೆಯ ಗೆಲುವಾಗಲಿ:
ಬ್ರಹ್ಮಶ್ರೀ ವೇ ಮೂ ಕುಂಟಾರು ರವೀಶ ತಂತ್ರಿಯವರು ಪ್ರಾರ್ಥನೆ ಮಾಡಿದರು. ಸಂಘಟನೆ ತೀರ್ಮಾನ ಮಾಡಿದಂತೆ ನಾವೆಲ್ಲ ಒಗ್ಗಟ್ಟಿನಿಂದ ಮುಂದುವರಿಯಬೇಕೆಂಬುದು ನಮ್ಮ ಸಂಕಲ್ಪ. ಒಬ್ಬ ವ್ಯಕ್ತಿಗೆ ಪರ್ಯಾಯ ವ್ಯವಸ್ಥೆ ಮಾಡಲು ಸಂಘಟನೆಗೆ ಸಾಧ್ಯವಿದೆ. ಆದರೆ ಸಂಘಟನೆಗೆ ಪರ್ಯಾಯವಾಗಿ ಯಾವತ್ತೂ ಕೂಡಾ ವ್ಯಕ್ತಿ ಮುಂದುವರಿಯಲು ಆಗುವುದಿಲ್ಲ ಎಂಬ ಸತ್ಯವನ್ನು ಅರಿತು ಕೊಳ್ಳಬೇಕು. ದೊಡ್ಡ ಸಂಘಟನೆಯಾದಾಗ ಅಲ್ಲಿ ಅಭಿಪ್ರಾಯ ವ್ಯತ್ಯಾಸಗಳು ಬರುವುದು ಸಹಜ. ಅದೆಲ್ಲವನ್ನು ಮೀರಿ ಸಂಘಟಣೆಗೆ ಶಕ್ತಿಯನ್ನು ಒದಗಿಸಿಕೊಡುವುದು ಭಗವಂತ. ಮನುಷ್ಯನ ಭಾವನೆಗಳಿಗೆ ತಕ್ಕಂತೆ ನಿರ್ಣಯ ಬರಲೂ ಬಹುದು ಬಾರದಿರಲೂ ಬಹುದು. ಆದರೆ ಸಂಘಟನಾತ್ಮಕವಾಗಿ ನಾವೆಲ್ಲ ನಿರ್ಣಯವನ್ನು ಅನುಸರಿಸಿಕೊಂಡು ಮುಂದುವರಿಯುವ ಕರ್ತವ್ಯ ಭಾರ ನಮ್ಮ ಮೇಲಿದೆ. ಇವತ್ತು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸಂಘಟನೆಯ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ಗೆಲುವಿನ ಮೂಲಕ ಸಂಘಟನೆಯ ಗೆಲುವಾಗಬೇಕು. ಭಗವಂತ ಶ್ರೀ ಕೃಷ್ಣ ಹೇಳಿದಂತೆ ಕುರುಕ್ಷೇತ್ರದಲ್ಲಿ ಎದುರಾಲಿ ತನ್ನ ಹತ್ತಿರದವರೇ ಆಗಿರಲಿ ಧರ್ಮಾಧಾರಿತವಾಗಿ ವಿಶ್ಲೇಷಿಸಬೇಕು. ಇವತ್ತು ನಮಗೂ ಕೂಡಾ ಅತ್ಯಂತ ಸ್ಪರ್ಧಾತ್ಮಕ ಕಣವಿದೆ. ಭಾವನಾ ವ್ಯತ್ಯಾಸಗಳಿಂದ ಯಾವುದೋ ಸನ್ನಿವೇಶಗಳು ಸೃಷ್ಟಿಯಾಗಿದೆ. ಆದರೆ ಅದೆಲ್ಲವನ್ನು ಮೀರಿ ಎಲ್ಲರ ಸಂಕಲ್ಪದಂತೆ ಸಂಘಟನೆ ಗೆಲ್ಲಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತನಿಗೂ ಶಕ್ತಿಯನ್ನು ಭಗವಂತನು ಅನುಗ್ರಹಿಸಲಿ. ಸಂಘಟನೆ ಗೆದ್ದು ಬರಬೇಕೆಂಬ ಪೂರ್ಣವಾದ ಅನುಗ್ರಹವನ್ನು ಮಹಾಲಿಂಗೇಶ್ವರ ದೇವರು, ಸಮಸ್ತ ದೈವೀಕ ಶಕ್ತಿ ಒದಗಿಸಿಕೊಡಲಿ ಎಂದರು. ಆಶಾ ತಿಮ್ಮಪ್ಪ ಅವರು ಫಲವಸ್ತು ತೆಂಗಿನ ಕಾಯಿ, ಪುಷ್ಪಗಳನ್ನು ಶ್ರೀ ದೇವರಿಗೆ ಸಮರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಹಿರಿಯರಾದ ಮೊಗೆರೋಡಿ ಬಾಲಕೃಷ್ಣ ರೈ, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಅಚ್ಚುತ ನಾಯಕ್, ಶಿವಪ್ರಸಾದ್ ಇ, ರವೀಂದ್ರ ಪಿ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಪ್ರಧಾನ ಕಾರ್ಯದರ್ಶಿಗಳಾದ ನಿತೀಶ್ ಕುಮಾರ್ ಶಾಂತಿವನ, ಜಯಶ್ರೀ ಎಸ್ ಶೆಟ್ಟಿ, ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಬಿಜೆಪಿ ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯ ಶೇಖರ್ ನಾರಾವಿ, ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ, ನಗರಸಭ ಸದಸ್ಯೆ ಗೌರಿಬನ್ನೂರು, ವೆಂಕಟ್ರಮಣ ಗೌಡ ಕಳುವಾಜೆ, ಲಕ್ಷ್ಮೀಪ್ರಸಾದ್ ಬೊಟ್ಯಾಡಿ, ಶಿವಕುಮಾರ್ ಕಲ್ಲಿಮಾರ್, ಮಾದವ ಪೂಜಾರಿ ಸಹಿತ ಹಲವಾರು ಮಂದಿ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here