ಕಾರ್ಮಿಕರ ಬದುಕು ಹಸನಾಗಲಿ

0

“ಸೇತುವೆಯೋ,ರಸ್ತೆಯೋ,ಬಹು ಮಹಡಿ ಕಟ್ಟಡವೋ,ಶ್ರಮದ ಕೆಲಸಕ್ಕೆ ಬೇಕು ನೀನೆಮಗೆ ಅನುದಿನ ಗದ್ದೆ ತೋಟದ ದುಡಿಮೆ ನಿನ್ನ ಬೆವರಿನ ಫಲವು ನೀನಿಲ್ಲದೆ ಇಲ್ಲ ನಾಡಿನ ಅಭ್ಯುದಯವು” ಹೌದು ಓದುಗರೆ,ಈ ಸಾಲು ಎಷ್ಟು ಅರ್ಥಪೂರ್ಣವಾಗಿದೆಯಲ್ಲವೇ, ಪ್ರತಿಯೊಬ್ಬ ಶ್ರಮಜೀವಿಯು ಬಿಸಿಲಿರಲಿ ಮಳೆ ಇರಲಿ, ಚುಮು ಚುಮು ಚಳಿ ಇರಲಿ ಎಲ್ಲದಕ್ಕೂ ಎದೆಯೊಡ್ಡಿ ಮೈ ಮುರಿದು ದುಡಿಯುತ್ತಾನೆ ಅವನ ಈ ದುಡಿವಿಕೆಯಿಂದಲೇ ನಾವು ಇಂದು ನಾಡಿನ ಅಭ್ಯುದಯವನ್ನು ಕಾಣುತ್ತಾ ಇದ್ದೇವೆ.ಒಂದು ಕ್ಷಣ ಯೋಚನೆ ಮಾಡಿ ? ಒಬ್ಬ ಶ್ರಮಿಕ ಜೀವಿ ಇಲ್ಲದಿದ್ದರೆ ನಾವು ಎಷ್ಟೆಲ್ಲಾ ಕಷ್ಟಗಳನ್ನು ಅನುಭವಿಸ ಬೇಕಾಗಬಹುದು??…. ಒಂದು ಸಂಸ್ಥೆ ಬೆಳೆಯಬೇಕೆಂದರೆ ಅದು ಬರೀ ಒಬ್ಬನಿಂದ ಮಾತ್ರ ಸಾಧ್ಯವಿಲ್ಲ ಅವರ ಹಿಂದೆ ನೂರಾರು ಶ್ರಮಿಕರ ಬೆವರಿನ ಗುಟ್ಟು ಅಡಗಿರುತ್ತದೆ.

ಹಗಲು ರಾತ್ರಿ ಎಂದು ನೋಡುವುದಿಲ್ಲ, ಬಿಸಿಲು ಮಳೆ ಗಾಳಿಗೂ ಜಗ್ಗುವುದಿಲ್ಲ, ಕಠಿಣ ಪರಿಶ್ರಮ, ಸಮರ್ಪಣಾ ಭಾವಕ್ಕೆ ಇವರು ಇನ್ನೊಂದು ಹೆಸರು….. ಕಷ್ಟವನ್ನು ನುಂಗಿ ಖುಷಿ ಹಂಚುವವರು ಕಾರ್ಮಿಕರು ….ದೇಶ ಕಟ್ಟುವಲ್ಲಿ ಕಾರ್ಮಿಕರ ಪಾತ್ರ ಬಹಳ ಹಿರಿದು ಕಾರ್ಮಿಕರ ಶ್ರಮದಲ್ಲಿ ದೇಶದ ಅಭಿವೃದ್ಧಿ ಅಡಗಿದೆ ….ಈ ಶ್ರಮ ಜೀವಿಗಳೇ ಇಲ್ಲದ ದೇಶವನ್ನು ಊಹಿಸಲು ಸಾಧ್ಯವಿದೆಯೇ ?..ಖಂಡಿತ ಇಲ್ಲ ತಮ್ಮ ದುಡಿಮೆಯಿಂದಲೇ ತಮ್ಮ ಕುಟುಂಬವನ್ನು ಮುನ್ನಡೆಸುವ ಕಾರ್ಮಿಕರು ತಾವು ದುಡಿಯುತ್ತಿರುವ ಸಂಸ್ಥೆಯ ಬೆಳವಣಿಗೆಗೂ ಕಾರಣವಾಗುತ್ತಾರೆ…..

ಇಂತಹ ಶ್ರಮ ಜೀವಿಗಳ ಕೆಲಸವನ್ನು ಗೌರವಿಸುವ,ಕಾರ್ಮಿಕರ ಶ್ರಮವನ್ನು ಗುರುತಿಸುವ, ಇವರೆಲ್ಲ ಕಷ್ಟಗಳನ್ನು ಸ್ಮರಿಸುವ ಸಲುವಾಗಿ ಮೇ 1 ಅನ್ನು ಅಂತರಾಷ್ಟ್ರೀಯ ಕಾರ್ಮಿಕರ ದಿನ ಎಂದು ಆಚರಿಸಲಾಗುತ್ತದೆ. ಕಾರ್ಮಿಕರ ದಿನಾಚರಣೆಯನ್ನು ಮೊದಲ ಬಾರಿಗೆ 1886 ರಲ್ಲಿ ಅಮೆರಿಕದಲ್ಲಿ ಆಚರಿಸಲಾಯಿತು. ಕಾರ್ಮಿಕ ಶಕ್ತಿಗೆ ಎಂಟು ಗಂಟೆಗಳ ಕಾಲ ಕೆಲಸದ ಅವಧಿಯನ್ನು ವಿಸ್ತರಿಸಬೇಕು ಎನ್ನುವ ಉದ್ದೇಶದಿಂದ ಶುರುವಾದ ಚಳುವಳಿಗೆ ಯಶಸ್ಸು ಸಿಕ್ಕಿತು.ಇದೆ ಹೋರಾಟದ ಅಲೆಯಲ್ಲಿ ಉದಯಿಸಿದ್ದೆ ಕಾರ್ಮಿಕರ ದಿನಾಚರಣೆ 1923 ರಲ್ಲಿ ಭಾರತದಲ್ಲಿ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲು ಪ್ರಾರಂಭವಾಯಿತು.

1886 ರಿಂದ ಆರಂಭಗೊಂಡು ಇಲ್ಲಿಯವರೆಗೂ ಅಸಂಖ್ಯಾತ ಕಾರ್ಮಿಕ ಚಳುವಳಿಗಳು ಮತ್ತು ಹೋರಾಟಗಳು ನಡೆದಿದೆ. ಕಾರ್ಮಿಕರಿಗೆ ಇರಬಹುದು,ಸಂಘಟನೆಗಳಿಗೆ ಇರಬಹುದು,ಇವರೆಲ್ಲರಿಗೂ ಹೋರಾಟವೇ ಅವರ ಉಸಿರಾಗಿದೆ.ಒಂದು ವೇಳೆ ಇವರ ಹೋರಾಟದ ಕಿಚ್ಚು ಆರಿತು ಅಂತಾದರೆ,1866ರ ಪೂರ್ವ ಪರಿಸ್ಥಿತಿಗೆ ಮರಳುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ .ಕಾರ್ಮಿಕರ ಪರಿಸ್ಥಿತಿ ಯಾವ ರೀತಿ ಸಾಗುತ್ತಾ ಇದೆ ಎಂದರೆ, ಒಂದೆಡೆಯಲ್ಲಿ ಹೋರಾಟದ ಹಾದಿಯಲ್ಲಿ ಗಳಿಸಿಕೊಂಡಂತಹ ಸೌಲಭ್ಯಗಳನ್ನು ಉಳಿಸಿಕೊಳ್ಳುವುದು,ಇನ್ನೊಂದೆಡೆಯಲ್ಲಿ ಸಿಗಬೇಕಾದ ಸೌಲಭ್ಯಗಳಿಗೆ ನಿರಂತರವಾಗಿ ಹೋರಾಟ ನಡೆಸುವುದು. ಒಟ್ಟಿನಲ್ಲಿ ಹೇಳುವುದಾದರೆ “ಬದುಕಿಗಾಗಿ ಹೋರಾಟ, ಹೋರಾಟಕ್ಕಾಗಿ ಬದುಕು” ಪ್ರತಿಯೊಂದು ವಿಷಯಕ್ಕೂ ಸರಕಾರವನ್ನು ವಿರೋಧಿಸಿ ಕೊಂಡೆ ಹೋರಾಡುವುದು ಸಂಘಟನೆಗಳಿಗೆ ಬಹುದೊಡ್ಡ ಸವಾಲು.ಪ್ರತಿಯೊಂದು ಸೌಲಭ್ಯಗಳಿಗೆ ಹೋರಾಟದ ಮೊರೆ ಹೋಗಬೇಕಾದ ದುರಂತದ ಪರಿಸ್ಥಿತಿ ಎದುರಾಗಿದೆ.ದೇಶದ ಕಲ್ಯಾಣಕ್ಕೆ, ಅಭಿವೃದ್ದಿಗೆ ಕಾರ್ಮಿಕರು ಕಾರಣ ಎಂಬುದನ್ನು ಅರಿತುಕೊಂಡು ಅವರಿಗೆ ನ್ಯಾಯ ಸಮ್ಮತವಾಗಿ ಸಲ್ಲಬೇಕಾದ ಸೌಲಭ್ಯಗಳನ್ನು ನೀಡುವ ಉದಾರತೆ ಸರಕಾರ ನಡೆಸುವವರಿಗೆ ಇರಬೇಕಾದ್ದು ಅತ್ಯಗತ್ಯವಾಗಿದೆ.

ಈ ಎಲ್ಲಾ ಸಮಸ್ಯೆ, ಸವಾಲುಗಳ ನಡುವೆಯೂ ಇನ್ನೊಂದು ಮೇ ಡೇ ಬಂದಿದೆ. ಪ್ರತಿಯೊಬ್ಬ ಶ್ರಮಿಕನು ಕಾರ್ಮಿಕ ವರ್ಗದ ಪ್ರಸ್ತುತ ಸನ್ನಿವೇಶ ಮುಂದಿರುವ ಸಮಸ್ಯೆಗಳು, ಸವಾಲುಗಳು ಅದಕ್ಕೆ ತಕ್ಕನಾಗಿ ಚಿಂತನೆ ನಡೆಸಿ ಪ್ರಬಲ ಕಾರ್ಮಿಕ ಮುಖಂಡನಾಗಿ ಹೊರಹೊಮ್ಮಿ ಕಾರ್ಮಿಕ ವರ್ಗವನ್ನು ಸುಗಮ ದಾರಿಗೆ ಮುನ್ನಡೆಸುವ ಪ್ರತಿಜ್ಞೆಯನ್ನು ಮಾಡುವ ಮೂಲಕ ಕಾರ್ಮಿಕ ದಿನವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಬೇಕಾಗದ ಅಗತ್ಯತೆ ವಿದೆ.

ಸಾವಿರಾರು ಸಮಸ್ಯೆಗಳು ಇದೆ ಅಂದ ಮಾತ್ರಕ್ಕೆ ಕಾರ್ಮಿಕರು ಕುಗ್ಗಬಾರದು.ತಮ್ಮ ಬದುಕನ್ನು ಕಟ್ಟಿಕೊಳ್ಳುವುದನ್ನು ನಿಲ್ಲಿಸಬಾರದು, ಕಷ್ಟ ಮತ್ತು ಸುಖ ಎಂಬುದು “ಬದುಕೆಂಬ ನಾಣ್ಯದ ಎರಡು ಮುಖಗಳು” ಹೋರಾಟಗಳು ಸಂಘಟನೆಗಳು ಚಳುವಳಿಗಳು ಎಲ್ಲವೂ ಬದುಕಿನ ಜೊತೆ ಜೊತೆಗೆ ಸಾಗಬೇಕು ಹಾಗಾಗಿ ಜೀವನವೆಂಬ ನೌಕೆ, ಏನೇ ಬಂದರೂ ಮುಂದೆ ಸಾಗುತಿರಬೇಕು.ಸೇವಕರನ್ನು ಗುಲಾಮರಂತೆ ಪರಿಗಣಿಸುವ ಅವರ ಹಕ್ಕುಗಳನ್ನು ಕೊಲ್ಲುವುದರ ಜೊತೆಗೆ ಅವರನ್ನು ಶೋಷಿಸುವ ಎಲ್ಲಾ ಪ್ರವೃತ್ತಿಗಳು ಇಲ್ಲಿಗೆ ನಿಲ್ಲಬೇಕು.ಅವರಿಗೂ ಒಂದು ಬದುಕು ಇದೆ ಎಂಬುದನ್ನು ಇಂದಿನ ಸಮಾಜಕ್ಕೆ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಮಿಕರ ದಿನ ಆಚರಣೆಯಾಗಬೇಕಾಗಿದೆ ಎಂಬ ಆಶಯದೊಂದಿಗೆ ” ಕಾರ್ಮಿಕ ದಿನಾಚರಣೆಗೆ ಜಯವಾಗಲಿ”.

ಮೋಕ್ಷ ಆಲ್ಕಬೆ
ವಿವೇಕಾನಂದ ಮಹಾವಿದ್ಯಾಲಯ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಪುತ್ತೂರು

LEAVE A REPLY

Please enter your comment!
Please enter your name here