ಉಪ್ಪಿನಂಗಡಿ: ಇಲ್ಲಿನ ಬ್ಯಾಂಕ್ ರಸ್ತೆಯಲ್ಲಿರುವ ಭಾವನಾ ಕಲಾ ಆರ್ಟ್ಸ್ ಎಂಬ ಪ್ರಸಾದನ ವ್ಯವಹಾರದ ಮಳಿಗೆಗೆ ಕಳ್ಳರು ನುಗ್ಗಿ ನಗದು ಹಣವನ್ನು ಕದ್ದೊಯ್ದ ಘಟನೆ ಸೋಮವಾರ ಬೆಳಕಿಗೆ ಬಂದಿದೆ.
ಆದಿತ್ಯವಾರದಂದು 7 ಅಂಗಡಿಗಳಿಗೆ ನುಗ್ಗಿದ್ದ ಕಳ್ಳನೇ ಈ ಅಂಗಡಿಗೂ ನುಗ್ಗಿರುವ ಸಾಧ್ಯತೆ ಇದ್ದು, ಆದಿತ್ಯವಾರದಂದು ಸಂಸ್ಥೆಗೆ ರಜೆ ಇದ್ದ ಕಾರಣ ಕಳವು ಪ್ರಕರಣ ಗಮನಕ್ಕೆ ಬಂದಿರಲಿಲ್ಲ. ಸೋಮವಾರದಂದು ಸಂಸ್ಥೆಯ ಗಣೇಶ್ ಆಚಾರ್ಯರವರು ಸಂಸ್ಥೆಯ ಬಾಗಿಲು ತೆರೆಯಲೆಂದು ಮುಂದಾದಾಗ ಬಾಗಿಲು ತೆರೆಯಲ್ಪಟ್ಟಿದ್ದು, ಅಂಗಡಿಯೊಳಗಿದ್ದ ನಗದು ತುಂಬಿದ್ದ ಡಬ್ಬವನ್ನು ಕಳ್ಳ ಕದ್ದೊಯ್ದಿರುವುದು ಗಮನಕ್ಕೆ ಬಂದಿದೆ.
ಶಾಲೆಯ ಅನ್ನಬ್ರಹ್ಮ ಯೋಜನೆಗೆ ಮೀಸಲಿಟ್ಟ ಹಣ ಎಗರಿಸಲ್ಪಟ್ಟಿತ್ತು:
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಭಾವನಾ ಕಲಾ ಆರ್ಟ್ಸ್ ಸಂಸ್ಥೆಯ ಗಣೇಶ್ ಆಚಾರ್ಯ ರವರು, ಸಂಸ್ಥೆಯೊಳಗೆ ಉಪ್ಪಿನಂಗಡಿಯ ಶ್ರೀ ರಾಮ ಶಾಲೆಯ ಅನ್ನ ಬ್ರಹ್ಮ ಯೋಜನೆಗೆ ದೇಣಿಗೆ ನೀಡುವ ಸಲುವಾಗಿ ಸಂಗ್ರಹಿಸಲಾಗಿರುವ ಸುಮಾರು 8500 ರೂ ಮೊತ್ತವಿದ್ದ ಹಣದ ಡಬ್ಬ ಕಳವುಗೈಯಲ್ಪಟ್ಟಿದೆ. ಶಾಲೆಯ ಮಕ್ಕಳ ಊಟಕ್ಕೆ ಸಿದ್ಧಪಡಿಸಿದ ಹಣವನ್ನು ಕದ್ದಿರುವುದು ಮನಸ್ಸಿಗೆ ಬೇಸರ ಮೂಡಿಸಿದೆ ಎಂದು ತಿಳಿಸಿದ್ದಾರೆ.