ಫಿಲೋಮಿನಾದಲ್ಲಿ `ಎಸ್‌ಪಿಎಲ್ ಸೀಸನ್-3′ ಲೀಗ್ ಕ್ರಿಕೆಟ್-ಅಗ್ನಿ ಬ್ರದರ್ ತಂಡ ಚಾಂಪಿಯನ್, ಮ್ಯಾಡ್ ಡೆವಿಲ್ಸ್ ರನ್ನರ್ಸ್

0

ಪುತ್ತೂರು: ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಹಾಗೂ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಕಾಲೇಜಿನ ಕ್ರೀಡಾಪಟುಗಳಿಗಾಗಿ `ಫಿಲೋಮಿನಾ ಪ್ರೀಮಿಯರ್ ಲೀಗ್(ಎಸ್‌ಪಿಎಲ್) ಸೀಸನ್-3′ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ಸಮಾರೋಪ ಕಾರ್ಯಕ್ರಮವು ಕಾಲೇಜಿನ ಕ್ರೀಡಾಂಗಣದಲ್ಲಿ ಮೇ 6ರಂದು ಜರಗಿತು.


ಪಂದ್ಯಾಕೂಟದಲ್ಲಿ ಅಗ್ನಿ ಬ್ರದರ್ ತಂಡವು ಸೀಸನ್-3 ಚಾಂಪಿಯನ್ ಆಗಿ ಎನಿಸಿಕೊಂಡಿದೆ. ಮ್ಯಾಡ್ ಡೆವಿಲ್ಸ್ ತಂಡವು ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು. ಮೂರನೇ ಸ್ಥಾನಿಯಾಗಿ ಕ್ಷೇವಿಯನ್ಸ್ ಹಾಗೂ ಚತುರ್ಥ ಸ್ಥಾನಿಯಾಗಿ ಫಿಲೋ ಹಾಕ್ಸ್ ತಂಡಗಳು ಗುರುತಿಸಿಕೊಂಡಿತು. ಚಾಂಪಿಯನ್ ತಂಡಕ್ಕೆ ರೂ.11 ಸಾವಿರ ನಗದು ಹಾಗೂ ಟ್ರೋಫಿ, ರನ್ನರ್ಸ್ ತಂಡಕ್ಕೆ ರೂ.7 ಸಾವಿರ ನಗದು ಹಾಗೂ ಟ್ರೋಫಿ ಮತ್ತು ತೃತೀಯ ಸ್ಥಾನಿ ಹಾಗೂ ಚತುರ್ಥ ಸ್ಥಾನಿ ತಂಡಗಳಿಗೆ ಟ್ರೋಫಿಯನ್ನು ಬಹುಮಾನವಾಗಿ ನೀಡಲಾಯಿತು. ಇನ್ನುಳಿದ ನಾಲ್ಕು ತಂಡಗಳಾದ ಟೀಮ್ ಆಗಸ್ತ್ಯ, ಎಕ್ಸ್69, ಹಾಕ್ಸ್ 14, ಟೀಮ್ ಡಿಬಿಝಡ್ ತಂಡಗಳು ಲೀಗ್ ಹಂತದಲ್ಲಿಯೇ ಹೊರ ಬಿತ್ತು.


ಸಂಜೆ ಅಗ್ನಿ ಬ್ರದರ್ ತಂಡ ಹಾಗೂ ಮ್ಯಾಡ್ ಡೆವಿಲ್ಸ್ ತಂಡಗಳ ನಡುವೆ ನಡೆದ ಪ್ರಶಸ್ತಿ ಸುತ್ತಿನ ಫೈನಲ್ ಹೋರಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಮ್ಯಾಡ್ ಡೆವಿಲ್ಸ್ ತಂಡವು ತಂಡದ ಆರಂಭಿಕ ಆಟಗಾರ ಕಪ್ತಾನ ಆದಿಲ್‌ರವರ ಹೊಡಿಬಡಿಯ 2 ಸಿಕ್ಸರ್ ಒಳಗೊಂಡ 29 ರನ್‌ಗಳ ಬೀಸುವಿಕೆಯಿಂದ ಐದು ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 63 ರನ್‌ಗಳನ್ನು ಪೇರಿಸಿತ್ತು. ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಅಗ್ನಿ ಬ್ರದರ್ ತಂಡದ ಆರಂಭಿಕ ಜೋಡಿ ಹರ್ಷರವರ 17(2 ಸಿಕ್ಸ್) ಹಾಗೂ ಮನೀಶ್‌ರವರ 12 ರನ್‌ಗಳ ಸಮಯೋಚಿತ ಬೀಡು ಬೀಸುಗೆಯಿಂದಾಗಿ 64 ರನ್‌ಗಳನ್ನು ಚಚ್ಚಿ ಚಾಂಪಿಯನ್ ಆಗಿ ಹೊರ ಹೊಮ್ಮಿತು. ವಿಜೇತ ತಂಡದ ಪರವಾಗಿ ನಮನ್ ಹಾಗೂ ಹರ್ಷಿತ್‌ರವರು ತಲಾ ಎರಡು ವಿಕೆಟ್ ಪಡೆದರೆ, ಮ್ಯಾಡ್ ಡೆವಿಲ್ಸ್ ಪರವಾಗಿ ನವಾಜ್‌ರವರು ಎರಡು ವಿಕೆಟ್‌ಗಳನ್ನು ಪಡೆದು ಮಿಂಚಿದರು. ಇದಕ್ಕೂ ಮೊದಲು ನಡೆದ ಪ್ರಥಮ ಸೆಮಿಫೈನಲಿನಲ್ಲಿ ಮ್ಯಾಡ್ ಡೆವಿಲ್ಸ್ ತಂಡ(24/6)ವು ಫಿಲೋ ಹಾಕ್ಸ್(23/6) ತಂಡವನ್ನು ಮತ್ತು ಚಾಂಪಿಯನ್ ತಂಡ ಅಗ್ನಿ ಬ್ರದರ್ ತಂಡ(51/5)ವು ಕ್ಷೇವಿಯನ್ಸ್(50/3) ತಂಡವನ್ನು ಸೋಲಿಸಿ ಫೈನಲ್ ಹಂತಕ್ಕೆ ನೆಗೆದಿತ್ತು.


ಬಹುಮಾನ ವಿತರಣೆ:
ಸಂಜೆ ನಡೆದ ಬಹುಮಾನ ವಿತರಣೆ ಸಮಾರಂಭದಲ್ಲಿ ಉದ್ಯಮಿ ಹಾಗೂ ರೋಟರಿ ವಲಯ ಸೇನಾನಿ ಡಾ|ಹರ್ಷಕುಮಾರ್ ರೈಯವರು ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಫಿಲೋಮಿನಾ ಕಾಲೇಜಿನ ಅದೃಷ್ಟದ ಈ ಕ್ರೀಡಾಂಗಣದಲ್ಲಿ ಅದೆಷ್ಟೋ ಕ್ರೀಡಾಪಟುಗಳು ಸಮಾಜದಲ್ಲಿನ ಉನ್ನತ ಹುದ್ದೆಗಳನ್ನು ಅಲಂಕರಿಸಿ ಉತ್ತಮ ಭವಿಷ್ಯವನ್ನು ಕಂಡಿರುತ್ತಾರೆ. ಪ್ರಸ್ತುತ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾಗಿರುವ ಎಲ್ಯಾಸ್ ಪಿಂಟೋರವರ ಗರಡಿಯಲ್ಲಿ ಪಳಗಿದ ಅನೇಕ ಕ್ರೀಡಾಪಟುಗಳು ಇಂದು ವಿವಿಧ ಸರಕಾರಿ ಇಲಾಖೆಗಳಲ್ಲಿ ಗುರುತಿಸಿಕೊಂಡಿರುತ್ತಾರೆ. ಶೈಕ್ಷಣಿಕ ಗುಣಮಟ್ಟದಲ್ಲಿ ಫಿಲೋಮಿನಾ ವಿದ್ಯಾಸಂಸ್ಥೆಯು ಒಳ್ಳೆಯ ಹೆಸರನ್ನು ಹೊಂದಿರುವುದು ಸಂಸ್ಥೆಯ ಹಿರಿಮೆಯಾಗಿದೆ ಎಂದರು.


ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಭಾರತಿ ಎಸ್.ರೈ, ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ದಿವ್ಯ, ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಜೇಶ್ ಮೂಲ್ಯ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೊಹಮದ್ ಆಶಿಕ್, ಜೊತೆ ಕಾರ್ಯದರ್ಶಿ ಶಿವಾನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅನುಶ್ರೀ ಸ್ವಾಗತಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ ವಿಜೇತರ ಪಟ್ಟಿ ವಾಚಿಸಿದರು. ಅಂಪೈರ್‍ಸ್‌ಗಳಾಗಿ ಅನಿಕೇತನ್ ಡಿ’ಸೋಜ, ಸಾಜಿ, ಯಶೋಧರ, ಯಜ್ಞೇಶ್, ಸ್ಕೋರರ್ ಆಗಿ ಆಕಾಶ್, ಇಸ್ಲ, ವೀಕ್ಷಕ ವಿವರಣೆಗಾರರಾಗಿ ವಿಲಿಯಂ, ಸಿದ್ಧೀಕ್‌ರವರು ಸಹಕರಿಸಿದರು. ವಿದ್ಯಾರ್ಥಿನಿ ರಕ್ಷಾ ಅಂಚನ್ ಕಾರ್ಯಕ್ರಮ ನಿರೂಪಿಸಿದರು.


*ಉತ್ತಮ ಬ್ಯಾಟರ್-ಬಿಲಾಲ್(ಕ್ಷೇವಿಯನ್ಸ್ ತಂಡ)
*ಉತ್ತಮ ಬೌಲರ್-ಹರ್ಷಿತ್(ಅಗ್ನಿ ಬ್ರದರ್ ತಂಡ)
*ಸರಣಿಶ್ರೇಷ್ಟ ಆಟಗಾರ-ನವಾಜ್(ಮ್ಯಾಡ್ ಡೆವಿಲ್ಸ್ ತಂಡ)

LEAVE A REPLY

Please enter your comment!
Please enter your name here